ಬಳ್ಳಾರಿ: ಕೊರೋನಾ ಮೂರನೇ ಅಲೆಯ ಭೀತಿಯ ನಡುವೆಯೇ ರಾಜ್ಯದ ಗಣಿನಾಡು ಬಳ್ಳಾರಿಯಲ್ಲಿ ನವಜಾತ ಶಿಶುಗಳು ಮೇಲಿಂದ ಮೇಲೆ ಕಣ್ಮುಚ್ಚುತ್ತಿರುವ ಆತಂಕಕಾರಿ ವಿದ್ಯಮಾನ ನಡೆಯುತ್ತಿದೆ.
ಮಹಾಮಾರಿ ಕೊರೊನಾ ವೈರಸ್ ಒಮಿಕ್ರಾನ್ ರೂಪದಲ್ಲಿ ಮತ್ತೆ ದೇಶಕ್ಕೆ ಎಂಟ್ರಿ ನೀಡಿದ ದಿನದಿಂದ ದಿನಕ್ಕೆ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ಈ ಮರಣ ಮೃದಂಗಕ್ಕೂ ಅದೇ ಕಾರಣವಾಗಿದೆಯಾ ಎಂದು ದೃಢಪಟ್ಟಿಲ್ಲ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೇವಲ 8 ತಿಂಗಳಲ್ಲಿ 350ಕ್ಕೂ ಅಧಿಕ ಹಸುಳೆಗಳು ಉಸಿರು ನಿಲ್ಲಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ 293 ಹಾಗೂ ವಿಜಯನಗರ ಜಿಲ್ಲೆಯಲ್ಲಿ 65 ಶಿಶುಗಳ ಸಾವಾಗಿದೆ.
ಬಳ್ಳಾರಿಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯಲ್ಲಿ 290ಕ್ಕೂ ಅಧಿಕ ಕಂದಮ್ಮಗಳು ಮೃತಪಟ್ಟಿವೆ. ಮರಣದ ಸರಾಸರಿ ದಿನಕ್ಕೆ 3 ಹಸುಗೂಸುಗಳು. ಆದರೆ ಹಸುಗೂಸುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಸರ್ಕಾರ ಹಸುಗೂಸುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಯೋಜನೆಗಳನ್ನು ತಂದರೂ ಪ್ರಯೋಜನವಾಗುತ್ತಿಲ್ಲ ಎಂಬುದು ವೇದನೀಯ. ಶಿಶುಗಳು ಮೃತಪಡುತ್ತಿರುವುದನ್ನು ಬಳ್ಳಾರಿಯ ವಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಅನಿಲ್ ಕುಮಾರ್ ಖಚಿತಪಡಿಸಿದ್ದಾರೆ.