ದಲಿತರ ಬಗ್ಗೆ ಕೀಳರಿಮೆಯ ಹೇಳಿಕೆ : ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ವಿರುದ್ಧ ದೂರು ಸಲ್ಲಿಕೆ

Prasthutha|

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಜನರನ್ನು ಅತ್ಯಂತ ನಿಕೃಷ್ಟರಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ.

- Advertisement -

ಸಾಮಾಜಿಕ ಕಾರ್ಯಕರ್ತ ಆರ್.ಮಾನಯ್ಯ ಅವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸ್ ಠಾಣೆಗೆ ಈ ಸಂಬಂಧ ಸೋಮವಾರ ದೂರು ನೀಡಿದ್ದಾರೆ.

ತಮ್ಮ ದೂರಿನಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

- Advertisement -

ಮತಾಂತರ ವಿರೋಧಿ ಮಸೂದೆಯು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯಗಳ ಜನರನ್ನು ಅಲೆಮಾರಿಗಳು, ಭಿಕ್ಷುಕರು ಎಂದು ತೋರಿಸಿದೆ. ಹಣ, ಬಟ್ಟೆ, ಆಮಿಷಗಳು ಮತ್ತು ದೇಣಿಗೆಯ ಆಮಿಷದಿಂದ ಇತರ ಧರ್ಮಗಳಿಗೆ ಮತಾಂತರಗೊಳ್ಳುವವರನ್ನು ಬಿಂಬಿಸಿದೆ ಎಂದು ದೂರುದಾರರು ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಸೂದೆಯನ್ನು ಮಂಡಿಸಿದಾಗ, ಸದನದಲ್ಲಿ ಮಸೂದೆಯನ್ನು ಸ್ವಾಗತಿಸಲು ಎಲ್ಲಾ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ತಮ್ಮ ಮೇಜಿನ ಮೇಲೆ ಬಡಿದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ದೂರಿನಲ್ಲಿ ಕೋರಿದ್ದಾರೆ.

ಇವರೆಲ್ಲರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರುದಾರರು ಕೋರಿದ್ದಾರೆ.



Join Whatsapp