ಹರಿದ್ವಾರ: ‘ಧರ್ಮ್ ಸಂಸದ್’ ಹೆಸರಿನಲ್ಲಿ ಡಿಸೆಂಬರ್ 17 ರಿಂದ 20ರವರೆಗೆ ಹರಿದ್ವಾರದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮುಸ್ಲಿಮರ ಹತ್ಯಾಕಾಂಡ ಮತ್ತು ಅವರ ವಿರುದ್ಧ ಆಯುಧಗಳ ಬಳಕೆಗೆ ಬಹಿರಂಗವಾಗಿ ಕರೆ ನೀಡುವ ದ್ವೇಷಪೂರಿತ ಭಾಷಣ ಮಾಡಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಂ ರಿಝ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿ ವಿರುದ್ಧ FIR ದಾಖಲಾಗಿದೆ.
ಧರ್ಮಸಂಸತ್ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದಲ್ಲಿ ‘ಹಿಂದೂ ಧರ್ಮವನ್ನು ರಕ್ಷಿಸಲು ಹಾಗೂ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹಿಂದೂ ಯುವಜನರು ಶಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕು’ ಎಂದು ನಾರಾಯಣ ತ್ಯಾಗಿ ಕರೆ ನೀಡಿದ್ದರು. ತ್ಯಾಗಿ ಅವರ ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
‘ತ್ಯಾಗಿ ಮತ್ತು ಇತರರ ವಿರುದ್ಧ ಸೆಕ್ಷನ್ 153 (ಎ) ಅಡಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಗುಲ್’ಬಹಾರ್ ಖಾನ್ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 17ರಿಂದ 19ರವರೆಗೆ ಹರಿದ್ವಾರದ ವೇದನಿಕೇತನ ಆಶ್ರಮದಲ್ಲಿ ಸ್ಥಳೀಯ ಯತಿ ನರಸಿಂಹಾನಂದ ಆಯೋಜಿಸಿದ್ದ ಧರ್ಮಸಂಸತ್ ಕಾರ್ಯಕ್ರಮದಲ್ಲಿ ಸಂತರು ಹಾಗೂ ಬಿಜೆಪಿಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ವೀಡಿಯೋವೊಂದರಲ್ಲಿ ಹಿಂದೂ ಮಹಾಸಭಾದ ಪದಾಧಿಕಾರಿ ಮಾ ಅನ್ನಪೂರ್ಣ, ‘ಹಿಂದೂ ಧರ್ಮವನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’. ‘‘ನನ್ನನ್ನು ನಾಥೂರಾಂ ಗೋಡ್ಸೆಯ ಬೆಂಬಲಿಗಳು ಎಂದು ಬ್ರ್ಯಾಂಡ್ ಮಾಡಿದರೂ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ನನಗೆ ಅನಿಸಿದರೆ ನಾನು ಒಂದು ನಿಮಿಷವೂ ಯೋಚಿಸುವುದಿಲ್ಲ ಮತ್ತು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಹೇಳಿದ್ದರು.
ಮತ್ತೊಂದು ವೀಡಿಯೋವೊಂದರಲ್ಲಿ, ಧರ್ಮದಾಸ್ ಮಹಾರಾಜಿ ಎನ್ನುವವರೊಬ್ಬರು, ‘ತಾವು ಗೋಡ್ಸೆಯ ಹಿಂಬಾಲಕರಾಗಿದ್ದು, ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳುವ ವೇಳೆ ಸಂಸತ್’ನಲ್ಲಿ ಇದ್ದಿದ್ದರೆ ಅವರ ಎದೆಗೆ ಆರು ಗುಂಡುಗಳನ್ನು ಹಾರಿಸುತ್ತಿದ್ದೆ’ ಎಂದಿದ್ದರು.