ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಂಘಪರಿವಾರದ ಗೂಂಡಾಗಳು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳನ್ನು ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ನಿಲ್ಲಿಸಬೇಕು. ಈ ಘಟನೆಗಳನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ಸಂಘಪರಿವಾರವು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ನಾಯಕರ ಪ್ರಚೋದನಾಕಾರಿ ಭಾಷಣಗಳಿಂದ ಮತ್ತು ತ್ರಿಶೂಲ ವಿತರಣೆಯಂತಹ ಅಪಾಯಕಾರಿ ಕಾರ್ಯಕ್ರಮಗಳಿಂದ ಪ್ರಚೋದಿತರಾದ ಕಿಡಿಗೇಡಿಗಳು ನಡೆಸುತ್ತಿರುವ ದಾಳಿಗಳಿಂದ ಜಿಲ್ಲೆಯ ಜನತೆ ಭಯ ಭೀತರಾಗಿದ್ದಾರೆ. ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿರುವ ಸಂಧರ್ಭದಲ್ಲಿ ಮಾಧ್ಯಮದವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ “ಅದು ಕ್ರಿಯೆಗೆ ಪ್ರತಿಕ್ರಿಯೆ” ಎಂಬ ಸಂಘಪರಿವಾರದ ಶೈಲಿಯಲ್ಲಿ ಉತ್ತರಿಸುವ ಮೂಲಕ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಜಿಲ್ಲೆಯ ಕಿಡಿಕೇಡಿಗಳಿಗೆ ಗಲಭೆ ನಡೆಸಲು ಪ್ರೋತ್ಸಾಹ ನೀಡಿರುತ್ತಾರೆ. ಇದರಿಂದ ಪ್ರಚೋದಿತರಾದ ಸಮಾಜ ವಿರೋಧಿ ಶಕ್ತಿಗಳು ತ್ರಿಶೂಲ ದೀಕ್ಷೆಯಂತಹ ಕಾನೂನು ವಿರೋಧಿ, ಅಪಾಯಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದನ್ನು ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ಎಸ್ಡಿಪಿಐ ಪಕ್ಷದ ನಾಯಕರು ತಂದರೂ ಇಂದಿನ ವರೆಗೆ ಯಾವುದೇ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಚೈತ್ರ ಕುಂದಾಪುರ, ಜಗದೀಶ್ ಕಾರಂತ್, ರಾಧಾಕೃಷ್ಣ ಅಡ್ಯಂತಾಯ ಎಂಬ ನಾಲಗೆಯ ಮೇಲೆ ಹಿಡಿತವಿಲ್ಲದ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳು ಕೋಮು ಸೂಕ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಇವರ ಮಾತುಗಳು ಎಷ್ಟು ಪ್ರಚೋದನಾಕಾರಿ ಎಂದರೆ ಜಿಲ್ಲೆಯ ಉನ್ನತ ಸ್ಥಾನದಲ್ಲಿರುವ ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯಲು, ಮಹಿಳಾ ಪೊಲೀಸ್ ಉಪ ನಿರೀಕ್ಷಕರ ಕಾಲು ಕಡಿಯಲು ತನ್ನ ಅನುಯಾಯಿಗಳಿಗೆ ಕರೆ ಕೊಡುತ್ತಿದ್ದಾರೆ. ಇದರ ವಿರುದ್ಧ ಜಿಲ್ಲಾಧಿಕಾರಿಯೇ ದೂರು ಕೊಟ್ಟರೂ ಇಂದಿನವರೆಗೆ ಪೊಲೀಸ್ ಇಲಾಖೆ ಅರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನ ಪಾಲಿಸುತ್ತಿರುವುದು ಸಂಶಯ ಉಂಟುಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಗುರಿಪಡಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಸಂಘಪರಿವಾರದ ಗೂಂಡಾಗಳು ಹಲ್ಲೆ, ಚೂರಿ ಇರಿತ, ಬೆದರಿಕೆ ಒಡ್ಡುವಂತಹ ಘಟನೆಗಳು ನಡೆಯುತ್ತಿವೆ. ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲು ಎಂಬ ಪ್ರದೇಶದಲ್ಲಿ ಸಹೋದರರಿಬ್ಬರ ಮೇಲೆ ಬಿಜೆಪಿ ಮುಖಂಡ ಹಾಗೂ ಆತನ ಚೇಲಾಗಳು ನಡೆಸಿದ ಮಾರಣಾಂತಿಕ ಹಲ್ಲೆ, ಪುತ್ತೂರಿನ ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ಹಾಗೂ ಸಂಘಪರಿವಾರದ ಗೂಂಡಾಗಳು ನಡೆಸಿದ ವ್ಯವಸ್ಥಿತ ಹಲ್ಲೆ, ಉಪ್ಪಿನಂಗಡಿ ಸಮೀಪದ ಇಳಂತಿಲದಲ್ಲಿ 50ಕ್ಕೂ ಹೆಚ್ಚಿನ ಸಂಘಪರಿವಾರದ ಕಿಡಿಗೇಡಿಗಳು ಇಬ್ಬರು ಯುವಕರ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಸುತ್ತಿರುವ ಹಲ್ಲೆಗಳಿಂದ ಜಿಲ್ಲೆಯ ಶಾಂತಿ ಪ್ರಿಯ ನಾಗರಿಕರು ಭಯ ಭೀತರಾಗಿದ್ದಾರೆ. ಈ ಎಲ್ಲಾ ದಾಳಿಗಳ ಸಂದರ್ಭದಲ್ಲಿ ಆರೋಪಿಗಳು ಬಳಸಿದ್ದು ಹರಿತವಾದ ತ್ರಿಶೂಲವಾಗಿದೆ.
ಶಾಂತಿಯಿಂದಿದ್ದ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟು ಕಿಡಿಗೇಡಿಗಳ ಮೂಲಕ ವಿಧ್ವಂಸಕ ಕೃತ್ಯ ನಡೆಸಿ ಜನರನ್ನು ಭಾವನಾತ್ಮಕವಾಗಿ ವಿಭಜಿಸಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ವಿಧ್ವಂಸಕ ಕೃತ್ಯವೆಸಗುವ ಕಿಡಿಗೇಡಿಗಳಿಗೆ ಬಿಜೆಪಿ ಸರಕಾರದಲ್ಲಿ ಕಾನೂನಿನ ಮೇಲೆ ಭಯವಿಲ್ಲದಿರುವುದು ಕಾಣುತ್ತಿದೆ. ಘಟನೆ ನಡೆದ ನಂತರ ಅರೋಪಿಗಳ ಮೇಲೆ ದುರ್ಬಲ ಸೆಕ್ಷನ್ ಗಳನ್ನು ವಿಧಿಸಿ ಅವರಿಗೆ ಠಾಣೆಯಲ್ಲಿ ಜಾಮೀನು ಸಿಗುವಂತಹ ವ್ಯವಸ್ಥೆ ಇಲ್ಲಿ ನಡೆಯುತ್ತಿದೆ. ಅದರೊಂದಿಗೆ ಆರೋಪಿಗಳನ್ನು ಬಿಜೆಪಿ ಶಾಸಕರು ಠಾಣೆಗೆ ಹೋಗಿ ಅಲ್ಲಿ ಅಧಿಕಾರಿಗಳ ಮೇಲೆ ಒತ್ತಡ ತಂದು ಬಿಡಿಸಿಕೊಂಡು ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಇಂತಹ ಶಾಸಕರ ವಿರುದ್ದ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಇತ್ತೀಚಿಗೆ ಮಂಗಳೂರಿನ ಹೊರವಲಯದ ನಾಗಭನವೊಂದನ್ನು ಅಪವಿತ್ರ ಗೊಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿತ್ತು ಇದನ್ನು ನಾವು ಸೇರಿದಂತೆ ಬಹುತೇಕ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಆದರೆ ಒತ್ತಡಕ್ಕೆ ಮಣಿದ ಪೊಲೀಸರು ಕೆಲವರನ್ನು ಬಂಧಿಸಿ ಇದು ಕಳ್ಳತನದ ಕೃತ್ಯವಾಗಿದೆ ಎಂದು ಕೇಸು ದಾಖಲಿಸಿದ್ದಾರೆ. ಆದರೆ ಈ ಬಂಧನದ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಸಂಶಯವಿದ್ದು ಇದನ್ನು ಸರಿಯಾಗಿ ತನಿಖೆ ನಡೆಸಿ ಇದರ ಸತ್ಯಾಸತ್ಯತೆ ಯನ್ನು ಬಹಿರಂಗ ಪಡಿಸಬೇಕೆಂದು ಅವರು ಪೊಲೀಸ್ ಆಯುಕ್ತರನ್ನು ಆಗ್ರಹಿದರು.
ಹೊರ ರಾಜ್ಯದ ವಿಧ್ಯಾರ್ಥಿಗಳ ಮೇಲೆ ಕಿಡಿಗೇಡಿಗಳ ಅನೈತಿಕ ಪೊಲೀಸ್ ಗಿರಿ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಇಂತಹ ಪುಂಡಾಟಿಕೆ ಮುಂದುವರಿದಲ್ಲಿ ಜಿಲ್ಲೆಯ ಆರ್ಥಿಕತೆಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ಈಗಾಗಲೇ ಅವೈಜ್ಞಾನಿಕ ನೋಟ್ ಬ್ಯಾನ್, ಕೊರೋನಾ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯದಿಂದ ತತ್ತರಿಸಿರುವ ಜಿಲ್ಲೆಯ ಆರ್ಥಿಕತೆಯ ಮೇಲೆ ಸಂಘಪರಿವಾರ ಕೃತಕವಾಗಿ ಸೃಷ್ಟಿಸಿರುವ ಕೋಮು ವೈಷಮ್ಯದ ಕರಿನೆರಳು ಬಾಧಿಸುತ್ತಿದೆ.
ದೇಶ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ನಾಯಕರು ತನ್ನ ಜವಾಬ್ದಾರಿಯನ್ನು ಅರಿತು ಆಡಳಿತ ನಡೆಸುದನ್ನು ಬಿಟ್ಟು ಸಂಘಪರಿವಾರದ ಒಡೆದಾಳುವ ಹಿಡೆನ್ ಅಜೆಂಡಾವನ್ನೇನಾದರು ಜಿಲ್ಲೆಯಲ್ಲಿ ಜಾರಿಮಾಡಲು ಹೊರಟರೆ SDPI ಅದನ್ನು ಮೂಕಪ್ರೇಕ್ಷಕವಾಗಿ ವೀಕ್ಷಿಸುವುದಿಲ್ಲ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇವೆ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವ ವ್ಯಕ್ತಿಗಳೊಂದಿಗೆ ಅದರ ಹಿಂದಿರುವ ಪ್ರಮುಖ ಪಾತ್ರಧಾರಿಗಳನ್ನು ಪೊಲೀಸ್ ಇಲಾಖೆ ಕೂಡಲೇ ಬಂಧಿಸಿ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಇಲಾಖೆ ಹಾಗೂ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅಬೂಬಕ್ಕರ್ ಕುಳಾಯಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯಸಮಿತಿ ಸದಸ್ಯ ಜಲೀಲ್ ಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News