ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ನಿರಂತರ ಅಧಿಕಾರ ದುರ್ಬಳಕೆಯಾಗುತ್ತಲೇ ಇದೆ. ರಾಜ್ಯ ಸರ್ಕಾರ ಹಗರಣಗಳಿಗೆ ಮಾತ್ರ ಸೀಮಿತವಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.
ಎಸ್ ಡಿಪಿಐ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಫ್ಸರ್ ಕೊಡ್ಲಿಪೇಟೆ ಇದೇ ಪ್ರಥಮ ಬಾರಿಗೆ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಅಂಗವಾಗಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟರು.
ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಯಲ್ಲಿ ಶೇಕಡ 40ರಷ್ಟು ಲಂಚ ನೀಡಬೇಕಾಗಿದೆ ಎಂಬ ವಿಷಯ ಈಗ ಚರ್ಚೆಯಲ್ಲಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ,ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಹೈಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಕಾಲಮಿತಿಯೊಳಗೆ ಈ ತನಿಖೆ ಪೂರ್ಣಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸರಕಾರ ಹಿಂದುಳಿದ ವರ್ಗಗಳ ಮಕ್ಕಳ ಪೌಷ್ಟಿಕಾಂಶ ಆಹಾರಕ್ಕೆ ತಡೆಯೊಡ್ಡಬಾರದು. ಕರ್ನಾಟಕದಲ್ಲಿ ಸರಕಾರಿ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸ ಬೇಕೆಂಬ ಉದ್ದೇಶದಿಂದ ಕೊಡಲಾಗುತ್ತಿದ್ದ ಮೊಟ್ಟೆಯನ್ನು ಕೊಡ ಬಾರದೆಂದು ಮೇಲ್ವರ್ಗದ ಸಂಘಟನೆಗಳು ಮತ್ತು ಸಂಘಪರಿವಾರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ರಾಜ್ಯದಲ್ಲಿ ಅತಿಯಾದ ಮಳೆಯಿಂದ ಅಪಾರ ಹಾನಿಯಾಗಿದ್ದು, ಬೆಳೆ ಪರಿಹಾರಕ್ಕೆ ಸರಕಾರ 5000 ಕೋಟಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ ಅವರು, ಭೂ ರಹಿತರಿಗೆ ಕೂಡಲೇ ಭೂಮಿ ನೀಡಲು ಸರಕಾರ ಕ್ರಮಕೈಗೊಳ್ಳಬೇಕು. ಆರೋಗ್ಯ ಕ್ಷೇತ್ರದಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳು ನನೆಗುದಿಗೆ, ಜಿಲ್ಲೆಯಲ್ಲಿ ಮೂಲೆ ಸೌಕರ್ಯದ ಕೊರತೆ ಸರಿಪಡಿಸ ಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಪ್ರೊಫೆಸರ್ ಗಿಯಾಝುದ್ದೀನ್, ಅಕ್ಬರ್ ಅಲಿ, ಜಿಲ್ಲಾಧ್ಯಕ್ಷ ಶ್ರೀನಿವಾಸ ಬಾಳೆಕಾಯಿ, ಜಿಲ್ಲಾ ಉಪಾಧ್ಯಕ್ಷ ಕಮ್ರಾನ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಾದಾತ್ ಉಪಸ್ಥಿತರಿದ್ದರು.