ನವದೆಹಲಿ: ‘ನಿರ್ದಿಷ್ಟ ಸಂದರ್ಭಗಳಲ್ಲಿ ಪತಿಯು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸುವುದನ್ನು ಸಮರ್ಥಿಸಿಕೊಳ್ಳುತ್ತೀರಾ’ ಎಂಬ ಪ್ರಶ್ನೆಗೆ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ ನಡೆಸಲಾದ ಸರ್ವೇಯ ‘ಫಲಿತಾಂಶ’ ಇದೀಗ ಹೊರಬಿದ್ದಿದೆ. ಕರ್ನಾಟಕದ 81.9 ಪ್ರತಿಷತ ಪುರುಷರು, ಪತಿಯು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸುವುದರಲ್ಲಿ ತಪ್ಪೇನು ಇಲ್ಲ ಎಂಬ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದಲ್ಲಿ ಪುರುಷರಿಗಿಂತ ಸ್ತ್ರೀಯರೇ ಅಧಿಕವಾಗಿದ್ದಾರೆ ಎಂಬ ಸಮೀಕ್ಷೆ ವರದಿ ಬಂದ ಬೆನ್ನಲ್ಲೇ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯಲ್ಲಿ ಪುರುಷರು ಹಾಗೂ ಮಹಿಳೆಯರ ಬಳಿ ಪ್ರತ್ಯೇಕವಾಗಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.
ಈ ಕೆಳಗಿನ ಏಳು ಸಂದರ್ಭಗಳಲ್ಲಿ ಪತಿಯು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸುವುದನ್ನು ಒಪ್ಪಿಕೊಳ್ಳುತ್ತೀರಾ ? ಅಥವಾ ಸಮರ್ಥಿಸಿಕೊಳ್ಳುತ್ತೀರಾ ?
1. ಪತಿಯ ಅನುಮತಿ ಪಡೆಯದೆ ಮನೆಯಿಂದ ತೆರಳಿದ ಕಾರಣಕ್ಕಾಗಿ
2. ಮನೆ ಮತ್ತು ಮಕ್ಕಳ ಬಗ್ಗೆ ನಿರ್ಲ್ಯಕ್ಷ ತೋರಿದ ಕಾರಣಕ್ಕಾಗಿ
3. ಪತಿಯ ಜೊತೆ ವಾಗ್ವಾದ ನಡೆಸಿದ ಕಾರಣಕ್ಕಾಗಿ
4. ಪತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದ ಕಾರಣಕ್ಕಾಗಿ
5. ರುಚಿಕರವಾದ ಅಡುಗೆ ಮಾಡಲು ಬಾರದ ಕಾರಣಕ್ಕಾಗಿ
6. ಪತಿಗೆ ನಿಷ್ಠೆ ತೋರಿಸುತ್ತಿಲ್ಲ ಎಂಬ ಕಾರಣಕ್ಕಾಗಿ
7. ಪತಿಯ ಮನೆಯವರಿಗೆ ಗೌರವ ಕೊಡುತ್ತಿಲ್ಲ ಎಂಬ ಕಾರಣಕ್ಕಾಗಿ
ಈ ಪ್ರಶ್ನೆಗೆ ತೆಲಂಗಾಣದ 83.08 ಹಾಗೂ ಆಂಧ್ರ ಪ್ರದೇಶದ 83.6 ಪ್ರತಿಶತ ಮಹಿಳೆಯರು ಪತಿಯು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸುವುದರಲ್ಲಿ ತಪ್ಪೇನು ಇಲ್ಲ ಎಂದು ಉತ್ತರಿಸಿದ್ದಾರೆ !. ಹಿಮಾಚಲ ಪ್ರದೇಶದ ಪುರುಷರು ಹಾಗೂ ಮಹಿಳೆಯರು ಹಲ್ಲೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಪುರಷರಲ್ಲಿ 14.2 ಹಾಗೂ 14.8 ಪ್ರತಿಶತ ಮಹಿಳೆಯರು ಮಾತ್ರ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕುತೂಹಲಕಾರಿಯಾದ ಮತ್ತೊಂದು ಅಂಶವೇನೆಂದರೆ, ಹಲ್ಲೆಗೆ ಕಾರಣವಾಗಬಹುದಾದ 7 ಸಂದರ್ಭಗಳಲ್ಲಿ ಹೆಚ್ಚಿನವರು ಕೊನೇಯ ಕಾರಣವನ್ನೇ ಕೊಟ್ಟಿದ್ದಾರೆ. ಅಂದರೆ ಪತಿಯ ಮನೆಯವರಿಗೆ ಗೌರವ ಕೊಡುತ್ತಿಲ್ಲ ಎಂಬ ಕಾರಣಕ್ಕಾಗಿ ಪತ್ನಿಯ ಮೇಲೆ ಹಲ್ಲೆ ನಡೆಸುವುದರಲ್ಲಿ ತಪ್ಪೇನು ಇಲ್ಲ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ವ್ಯಕ್ತಪಡಿಸಿದ್ದಾರೆ.
2019ರಿಂದ 2021ರವರೆಗೆ ನಡೆಸಲಾದ ಸರ್ವೆಯ ಅಂಕಿಅಂಶಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಅಸ್ಸಾಮ್, ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಹರಾಷ್ಟ್ರ, ಮಣಿಪುರ್, ಮೇಘಾಲಯ, ಮಿಝೋರಾಂ, ಸಿಕ್ಕಿಂ, ತೆಲಂಗಾಣ, ತ್ರಿಪುರಾ, ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸರ್ವೆ ನಡೆಸಲಾಗಿತ್ತು.