SBI ಮಾಜಿ ಅಧ್ಯಕ್ಷರ ಬಂಧನ: ಬ್ಯಾಂಕಿಂಗ್ ಕ್ಷೇತ್ರ ದಿಗ್ಭ್ರಮೆ

Prasthutha|

ನವದೆಹಲಿ : ಹಿರಿಯ ನಿವೃತ್ತ ಉನ್ನತ ಬ್ಯಾಂಕ್ ಅಧಿಕಾರಿಯ ಬಂಧನವು ಬ್ಯಾಂಕಿಂಗ್ ಕ್ಷೇತ್ರವನ್ನು ದಿಗ್ಭ್ರಮೆಗೊಳಿಸಿದೆ. ಹಿರಿಯ ಬ್ಯಾಂಕ್ ಅಧಿಕಾರಿಗಳ ಮೇಲೆ ಉದ್ಯಮ ನಿರ್ಣಯ ಸಂಬಂಧವಾಗಿ ಕ್ರಿಮಿನಲ್ ನೋಟ ನೆಟ್ಟಿರುವುದು ಯಾವ ಅನಾಹುತಕ್ಕೆ ಬೇಕಾದರೂ ಕಾರಣವಾಗಬಹುದು.

- Advertisement -


ಹಿಂದಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೇರ್ ಮನ್ ಪ್ರತೀಪ್ ಚೌಧರಿ ಅವರನ್ನು ದಶಕದ ಹಿಂದಿನ ಸಾಲ ಪ್ರಕರಣದ ಸಂಬಂಧವಾಗಿ ದೆಹಲಿಯ ಅವರ ಮನೆಯಿಂದ ಬಂಧಿಸಲಾಗಿದೆ. ಅವರನ್ನು ಪ್ರಕರಣ ಸಂಬಂಧ ಜೈಸಲ್ಮೇರ್ ಗೆ ಒಯ್ಯಲಾಯಿತು; ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಸಂಬಂಧ ವಿವರಗಳು ಹೊರಬಿದ್ದಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ, ಸಮನ್ಸ್ ಇಲ್ಲದೆ ಚೌಧರಿ ಅವರನ್ನು ದಿಢೀರನೆ ಬಂಧಿಸಿರುವುದು ಹಿರಿಯ ಬ್ಯಾಂಕ್ ಅಧಿಕಾರಿಗಳ ಟೀಕೆಗೆ ಒಳಗಾಗಿದೆ. ಹಿಂದಿನ ಎಸ್ ಬಿಐ ಚೇರ್ ಮನ್ ರಜ್ ನೀಶ್ ಕುಮಾರ್ ಕೂಡ ಇದನ್ನು ಖಂಡಿಸಿದ್ದಾರೆ.


ಸಾರ್ವಜನಿಕ ವಲಯದ ಬ್ಯಾಂಕುಗಳ ರಕ್ಷಣೆಗೆ ಹೊಸ ನಿಯಮಾವಳಿ
ನಂಬಿದ ಉದ್ಯಮದ ಲೆಕ್ಕಾಚಾರವು ತಪ್ಪಾದಾಗ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸುಸ್ಥಿತಿಯಲ್ಲಿ ಇಡಲು ಹಣಕಾಸು ಸಚಿವಾಲಯವು ಹೊಸ ನಿಯಮಾವಳಿಗಳನ್ನು ರೂಪಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಉದ್ಯಮಕ್ಕೆ ನೀಡಿದ ಸಾಲವು ಹುಳಿ ಆದಾಗ ಉದ್ಯೋಗಿಗಳಿಗೆ ರಕ್ಷಣೆ ಇದೆ.
50 ಕೋಟಿ ರೂಪಾಯಿಗಳ ಎನ್ ಪಿಎ ವರೆಗೆ ಬ್ಯಾಂಕ್ ನೌಕರರು ಜವಾಬ್ದಾರರು ಎಂಬ ಹೊಸ ನಿಯಮಾವಳಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಈ ಮಾರ್ಗದರ್ಶಿ ಸೂತ್ರಗಳು ಮುಂದಿನ ಆರ್ಥಿಕ ವರ್ಷದಿಂದ ಎಂದರೆ 2022ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

- Advertisement -


ಸರಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ನೌಕರ ಮತ್ತು ತರಬೇತಿ ಇಲಾಖೆಯು ಪ್ರಮಾಣಿತ ನಡಾವಳಿ ನಿಯಮಾವಳಿಗಳನ್ನು ತಿಂಗಳ ಹಿಂದೆಯೇ ಸುತ್ತೋಲೆ ಹೊರಡಿಸಿ ತಿಳಿಸಿದೆ. 2018ರ ಭ್ರಷ್ಟಾಚಾರ ತಡೆ ಕಾಯ್ದೆಯ ಹೊಸ ನಿಯಮ 17ಎ ವಿಧಿಯ ಪ್ರಕಾರ ಪೋಲೀಸರು ಕ್ರಮಕ್ಕೆ ವಿಶೇಷ ಅನುಮತಿಯನ್ನು ಪಡೆದಿರಬೇಕು.


ಈ ನಿಯಮದಂತೆ ಸಾರ್ವಜನಿಕ ನೌಕರರು ಮಾಡುವ ತಪ್ಪುಗಳ ದೂರಿನ ಬಗೆಗೆ ಯಾವುದೇ ಪೊಲೀಸ್ ಅಧಿಕಾರಿಯು ತಾವೇ ತನಿಖೆ ನಡೆಸುವಂತಿಲ್ಲ. ಆತನ ತಪ್ಪು ಆತನ ಯಾವ ಕರ್ತವ್ಯಕ್ಕೆ ಸಂಬಂಧಿಸಿದೆಯೋ ಅದರ ಮೇಲೆ ಚರ್ಚಿಸಿ ಅದಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಅನುಮತಿ ಪಡೆಯಬೇಕಾಗುತ್ತದೆ.


ಒಂದು ಕಚೇರಿಯಲ್ಲಿ ಒಂದು ತಪ್ಪು ನಡೆದಾಗ ಸಂಬಂಧಿತ ವ್ಯಕ್ತಿ ಅಲ್ಲಿ ಇದ್ದರೆ, ಅವರು ಅದಕ್ಕೆ ಹೊಣೆಗಾರರೆ ಎಂಬುದರ ಮೇಲೆ, ಮಾಡಿದ ತಪ್ಪು ಎಷ್ಟು ಮಟ್ಟಿನದು ಎಂಬುದನ್ನೆಲ್ಲ ಪರಿಗಣಿಸಿ ಇಲಾಖಾ ಅನುಮತಿ ನೀಡಲಾಗುತ್ತದೆ. ಅಂದರೆ ಇಲಾಖೆ, ಸಂಬಂಧಿಸಿದ ಸಚಿವಾಲಯ ಕೋರಿದ ಬಳಿಕವೇ ಸಂಬಂಧಿತ ತಪ್ಪಿತಸ್ಥ (ನಿವೃತ್ತ) ಅಧಿಕಾರಿಯ ಮೇಲೆ ಕ್ರಮಕ್ಕೆ ಮುಂದಾಗಬಹುದು.
ಈಗ ಬ್ಯಾಂಕರುಗಳೆಲ್ಲ ಪ್ರತೀಪ್ ಚೌಧರಿ ಮೇಲೆ ಕ್ರಮ ಕೈಗೊಂಡಿರುವುದು ನಿಯಮ ಬಾಹಿರ ಎಂದಿವೆ. ಸಮನ್ಸ್ ಕೂಡ ಇಲ್ಲದೆ ಬಂಧನ ಎಂದರೇನು ಎನ್ನುತ್ತಾರೆ ಎಸ್ ಬಿಐ ಉಪ ನಿರ್ವಹಣಾ ನಿರ್ದೇಶಕ ಸುನೀಲ್ ಶ್ರೀವಾಸ್ತವ.ಇಂಡಿಯನ್ ಬ್ಯಾಂಕ್ಸ್ ಎಸೋಸಿಯೇಶನ್ ಸಿಇ ಸುನೀಲ್ ಮೆಹ್ತಾ ಹೇಳುತ್ತಾರೆ ನಮ್ಮ ಒಕ್ಕೂಟವು ಇದನ್ನು ರಾಜಸ್ತಾನ ಸರಕಾರ ಮತ್ತು ಹಣಕಾಸು ಸೇವೆಗಳ ಇಲಾಖೆ ಎರಡೂ ಮಟ್ಟಗಳಲ್ಲಿ ಪ್ರಶ್ನಿಸುತ್ತೇವೆ ಎಂದರು.


ಎಸ್ ಬಿಐ ಹಿಂದಿನ ಚೇರ್ ಮನ್ ಅರುಂಧತಿ ಭಟ್ಟಾಚಾರ್ಯ ಅವರು ಚೌಧರಿ ಅವರ ಬಂಧನವು ದುರದೃಷ್ಟಕರ ಎನ್ನುತ್ತಾರೆ.2018ರ ಭ್ರಷ್ಟಾಚಾರ ತಡೆ ಕಾಯ್ದೆಯ ನಿಯಮಾವಳಿ ಅನುಸರಿಸಿಲ್ಲ. ಚೌಧರಿಯವರ ಬಂಧನವು ಕಾನೂನು ರೀತ್ಯಾ ನಡೆದಿಲ್ಲ. ಸಾಲ ನೀಡುವ ನಿಯಮಾವಳಿಗಳನ್ನೆಲ್ಲ ಬದಲಿಸಬೇಕು, ಇಲ್ಲವೇ ನೀಗಬೇಕು. ಸಾಲ ನೀಡದೆ ಬ್ಯಾಂಕು ಅಭಿವೃದ್ಧಿ ಸಾಧ್ಯವಿಲ್ಲವಾದ್ದರಿಂದ ಇವನ್ನೆಲ್ಲ ಬೇರೆಯೇ ವಿಧಾನದಲ್ಲಿ ಪರಿಹರಿಸಬೇಕಾಗಿದೆ ಎನ್ನುತ್ತಾರೆ ಹೆಚ್ಚಿನ ಉನ್ನತ ಬ್ಯಾಂಕುಗಳ ಅಧಿಕಾರಿಗಳು.



Join Whatsapp