ನವದೆಹಲಿ: ದೀರ್ಘಕಾಲದ ಮೈತ್ರಿ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಆರ್.ಜೆ.ಡಿ ನಡುವೆ ಸದ್ಯ ತಲೆದೋರಿರುವ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಂಗಳವಾರ ದೂರುವಾಣಿ ಕರೆಯ ಮೂಲಕ ಮಾತುಕತೆ ನಡೆಸಿದರು.
ಮೂರು ವರ್ಷಗಳ ಜೈಲುವಾಸದ ಬಳಿಕ ಬಿಡುಗಡೆಗೊಂಡ ಲಾಲು ಅವರು ಬಿಹಾರದ ರಾಜಕೀಯದತ್ತ ಮುಖಮಾಡಿದ್ದು, ಸೋಮವಾರ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ ಕಾಂಗ್ರೆಸ್ ದೇಶಕ್ಕಾಗಿ ನೀಡಿದ ಕೊಡುಗೆಯಾದರೂ ಏನು ? ಎಂದು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಮಿತ್ರ ಪಕ್ಷಕ್ಕೆ ಇರಿಸುಮುರಿಸು ತಂದಿದ್ದರು.
ಸದ್ಯ ಬಿಹಾರದ ತಾರಾಪುರ ಮತ್ತು ಕುಶೇಶ್ವರ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಆರ್.ಜೆ.ಡಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಇದು ದೀರ್ಘಕಾಲದ ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಮಾತ್ರವಲ್ಲ ಉಪಚುನಾವಣೆಯ ಅಂಗವಾಗಿ ನಡೆದ ಪ್ರಚಾರದ ವೇಳೆ ಕಾಂಗ್ರೆಸ್ ನ ಬಿಹಾರದ ಉಸ್ತುವಾರಿ ಭಕ್ತ ಚರಣ್ ದಾಸ್ ಅವರು ಅರ್.ಜೆ.ಡಿ ಯ ನಿಲುವನ್ನು ಖಂಡಿಸಿದ್ದರು. ಕಾಂಗ್ರೆಸ್ ನಡೆಗೆ ತಿರುಗೇಟು ನೀಡಿದ ಲಾಲು ಪ್ರಸಾದ್ “ ಭಕ್ತ ಚರಣ್ ದಾಸ್ ಓರ್ವ ಮೂರ್ಖ, ಠೇವಣಿ ಕಳೆದುಕೊಳ್ಳುವ ಹಂತದಲ್ಲಿರುವ ಕಾಂಗ್ರೆಸ್ ಗೆ ಸ್ಥಾನವನ್ನು ಬಿಟ್ಟುಕೊಡಬೇಕೆ?” ಎಂದು ಪ್ರಶ್ನಿಸಿದ್ದರು.
ಈ ಮಧ್ಯೆ ಕಾಂಗ್ರೆಸ್, ಆರ್.ಜೆ.ಡಿ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಹಿರಿಯ ಮುಖಂಡರೊಬ್ಬರ ಮೂಲಕ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಲಾಲು ಪ್ರಸಾದ್ ಗೆ ಕರೆ ಮಾಡಿದ ಸೋನಿಯಾ ಗಾಂಧಿ, ಪ್ರಸಕ್ತ ತಲೆದೋರಿರುವ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸೋಣ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.