ಕಲ್ಲಕುರಿಚಿ(ತಮಿಳುನಾಡು) : ಜಿಲ್ಲೆಯ ಶಂಕರಾಪುರಂ ಎಂಬಲ್ಲಿ ಕಳೆದ ರಾತ್ರಿ ದೀಪಾವಳಿ ಸಂಭ್ರಮಕ್ಕೆ ಪಟಾಕಿಗಳನ್ನು ಶೇಖರಿಸಿ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೃತಪಟ್ಟವರ ಸಂಖ್ಯೆ 6ಕ್ಕೇರಿದ್ದು,10 ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ದುರ್ಘಟನೆಯಲ್ಲಿ ಕಲೀದ್, ಶಾ ಅಲಮ್, ಶೇಕ್ ಬಶೀರ್ ಮತ್ತು ಅಯ್ಯಸಮಿ ಎಂದು ಗುರುತಿಸಲಾಗಿದ್ದು ಮತ್ತಿಬ್ಬರ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರರನ್ನು ಕಲ್ಲಕುರಿಚಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ.ಎಲೆಕ್ಟ್ರಿಕ್ ಲೈನ್ ನಲ್ಲಿ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಕಟ್ಟಡದಲ್ಲಿ ಇನ್ನೂ ಕೆಲವರು ಸಿಲುಕಿ ಹಾಕಿಕೊಂಡಿರುವವರನ್ನು ರಕ್ಷಿಸಲಾಗಿದೆ.
ಶಂಕರಾಪುರಂನಲ್ಲಿ ದಿನಸಿ ಅಂಗಡಿಯಲ್ಲಿ ದೀಪಾವಳಿ ಸಮಯವಾಗಿರುವುದರಿಂದ ಕೆಲ ದಿನಗಳ ಹಿಂದೆ ಪಟಾಕಿ ಅಂಗಡಿಯನ್ನು ತೆರೆಯಲಾಗಿತ್ತು. ಕಟ್ಟಡದ ಮೊದಲ ಮಹಡಿಯಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು.ನಿನ್ನೆ ರಾತ್ರಿ ಪಟಾಕಿಗಳು ತುಂಬಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಪಟಾಕಿಗಳು ಒಂದರ ನಂತರ ಒಂದರಂತೆ ಅವ್ಯಾಹತವಾಗಿ ಸ್ಫೋಟಗೊಳ್ಳಲು ಆರಂಭಿಸಿದವು.
ಕೂಡಲೇ ಬೃಹತ್ ಪ್ರಮಾಣದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಬಂದಿದ್ದರಿಂದ ಅಗ್ನಿ ಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿಯನ್ನು ಆರಿಸಲು ಸುಮಾರು ಎರಡು ಗಂಟೆ ಹಿಡಿಯಿತು. ಪ್ರಾಥಮಿಕ ವರದಿಗಳ ಪ್ರಕಾರ, ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಪಟಾಕಿ ದಾಸ್ತಾನು ಮಾಡಿ, ಮಾರಾಟ ಮಾಡಲಾಗುತ್ತಿತು. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಪಕ್ಕದ ಬೇಕರಿ ಅಂಗಡಿಯಲ್ಲಿದ್ದ ನಾಲ್ಕು ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿದ್ದು, ಬೆಂಕಿ ಮತ್ತಷ್ಟು ದೂರ ವ್ಯಾಪಿಸಿದೆ.
ಘಟನೆಯಲ್ಲಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡ್ತಿದ್ದ ವ್ಯಕ್ತಿ ಸೇರಿದಂತೆ ಆರು ಸಾವನ್ನಪ್ಪಿದ್ದಾರೆ. ಪಟಾಕಿ ಅಂಗಡಿಯಲ್ಲಿ ಸಿಲುಕಿಕೊಂಡಿರುವ ಕೆಲವರ ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಅಗ್ನಿಶಾಮಕ ದಳ ಕಾರ್ಯನಿರ್ವಹಿಸಿ, ಬೆಂಕಿ ನಂದಿಸಿವೆ. ಘಟನೆಯಲ್ಲಿ ಪಟಾಕಿ ಅಂಗಡಿ, ಬೇಕರಿ ಹಾಗೂ ಮೊಬೈಲ್ ಶಾಪ್ನ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಉದ್ಯೋಗಿಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಗೊಂಡಿರುವವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ.