ಬೆಂಗಳೂರು: ಸೈಬರ್ ದಾಳಿ ದೇಶದ ರಕ್ಷಣಾ ವ್ಯವಸ್ಥೆಗೆ ದೊಡ್ಡ ತಲೆನೋವಾಗಿದೆ. ರಕ್ಷಣಾ ವ್ಯವಸ್ಥೆಯನ್ನು ಸೈಬರ್ ದಾಳಿಯಿಂದ ರಕ್ಷಿಸುವುದೇ ದೇಶದ ಮುಂದಿರುವ ದೊಡ್ಡ ಸವಾಲು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದರು.
1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆಯ ಗೆಲುವಿನ ಸುವರ್ಣ ಮಹೋತ್ಸವದ ಪ್ರಯುಕ್ತ ಇಂದು(ಶುಕ್ರವಾರ) ಆರಂಭವಾದ ಮೂರು ದಿನಗಳ ಸಂಭ್ರಮಾಚರಣೆಯ ಉದ್ಘಾಟನಾ ಸಮಾರಂಭ ನಂತರ ಯಲಹಂಕದ ಜಕ್ಕೂರು ವಾಯುನೆಲೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾವುದೇ ಒಂದು ಕ್ಷೇತ್ರದ ಮೇಲೆ ಸೈಬರ್ ದಾಳಿ ನಡೆದರೂ ನಮ್ಮ ಯುದ್ಧ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ. ರಕ್ಷಣಾ ವ್ಯವಸ್ಥೆ ಸೈಬರ್ ದಾಳಿಗೆ ಸಿಲುಕದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಪೂರಕವಾಗಿ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ದಳಗಳು ಜಂಟಿಯಾಗಿ ಪ್ರಯತ್ನ ಆರಂಭಿಸಿವೆ’ ಎಂದರು.
ಬ್ಯಾಂಕಿಂಗ್, ಸಾರಿಗೆ, ಇಂಧನ ಸೇರಿದಂತೆ ಯಾವುದೇ ಕ್ಷೇತ್ರವೂ ಸೈಬರ್ ದಾಳಿಯಿಂದ ತೊಂದರೆಗೆ ಸಿಲುಕಬಾರದು. ಎಲ್ಲ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಮುಖ ಕ್ಷೇತ್ರಗಳ ಮೇಲೆ ನಡೆಯುವ ದಾಳಿಯು ಸೇನಾ ಪಡೆಗಳಿಗೂ ತೊಂದರೆಯನ್ನುಂಟುಮಾಡುತ್ತದೆ ಎಂದು ಹೇಳಿದರು.