ನವದೆಹಲಿ: ಗಡಿ ಭದ್ರತಾ ಪಡೆ – ಬಿಎಸ್ ಎಫ್ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದ ಕೇಂದ್ರದ ಕ್ರಮವನ್ನು ದೆಹಲಿ ಸಿಎಂ ಅರವಿಂದ ಕೇಜಿವಾಲ್ ನೇತೃತ್ವದ ಎಎಪಿ ತೀವ್ರವಾಗಿ ವಿರೋಧಿಸಿದ್ದು , ಇದೊಂದು ಸರ್ವಾಧಿಕಾರದ ಧೋರಣೆ ಎಂದು ಟೀಕಿಸಿದೆ.
ಕೇಂದ್ರ ಸರ್ಕಾರ ಬಿ ಎಸ್ ಎಫ್ ಪಡೆಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ರಾಜ್ಯ ಪೊಲೀಸರ ಅಧಿಕಾರ ವ್ಯಾಪ್ತಿಯನ್ನು ಕಡಿಮೆಗೊಳಿಸಿದೆ. ಇದೊಂದು ರೀತಿಯ ದಾದಾಗಿರಿ ಮತ್ತು ಸರ್ವಾಧಿಕಾರ ಧೋರಣೆಯಾಗಿದೆ. ಇದನ್ನು ಯಾವುದೇ ಪಕ್ಷ ಅಥವಾ ಯಾವುದೇ ರಾಜ್ಯ ಸರ್ಕಾರ ಮತ್ತು ರಾಜ್ಯದ ಜನತೆ ಇಷ್ಟಪಡುವುದಿಲ್ಲ ಎಂದು ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಗಡಿ ಭದ್ರತಾ ಪಡೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದೆ. ಇಂದಿನಿಂದ, ಸೇನೆಗೆ ಗಡಿಯಿಂದ 50 ಕಿಮೀ ಒಳಗೆ ಬಂದು ತಪಾಸಣೆ ನಡೆಸಬಹುದು.
ಮೊದಲು ಈ ರಾಜ್ಯಗಳ ಗಡಿಯಲ್ಲಿ BSF 15 ಕಿಮೀ ವ್ಯಾಪ್ತಿಯನ್ನು ಹೊಂದಿತ್ತು. ಜನರನ್ನು ಬಂಧಿಸುವ ಅಧಿಕಾರವನ್ನು BSF ಹೊಂದಿದೆ.
ರಾಜ್ಯಗಳ ನಡುವಿನ ಗಡಿ ವಿವಾದ ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
BSFಗೆ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಫೆಡರಲಿಸಂ ಮೇಲೆ ನೇರ ದಾಳಿಯಾಗಿದ್ದು, ಈ ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.