ಜನ ಸಾಮಾನ್ಯರ ಕಾಳಜಿಯ ಪ್ರಣಾಳಿಕೆಗೆ ಗೆಲುವಾಗಲಿ

0
590

17ನೇ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎಪ್ರಿಲ್ 11ರಿಂದ ಮೇ 19ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವದ ಸರದಾರರಾಗಿರುವ ಪ್ರಜೆಗಳು ನೀಡುವ ತೀರ್ಪು ಮೇ 23ರಂದು ಹೊರ ಬೀಳಲಿದೆ. ಈ ಬಾರಿಯ ಬೇಸಿಗೆಯ ಸುಡು ತಾಪದೊಂದಿಗೆ ಚುನಾವಣಾ ಕಾವು ಕೂಡ ಏರಲಿದೆ. ಐದು ವರ್ಷಗಳ ಹಿಂದೆ ಜನ ಸೇವಕರ ವೇಷತೊಟ್ಟು ಬಂದಿದ್ದ ರಾಜಕಾರಣಿಗಳು ಜನರ ಮುಂದೆ ಮತ್ತೆ ಪ್ರತ್ಯಕ್ಷರಾಗಲಿದ್ದಾರೆ. ಹಳಸಿದ ಭರವಸೆಗಳಿಗೆ ಲೇಪಹಚ್ಚಿಕೊಂಡು ಮತ್ತೆ ವರ್ಣಮಯವಾಗಿ ತೋರಿಸಲಿದ್ದಾರೆ.

ಯುಪಿಎ ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಅಭಿವದ್ಧಿಯ ಘೋಷಣೆಗಳೊಂದಿಗೆ ಅಧಿಕಾರಕ್ಕೇರಿದ ಮೋದಿ ಸರಕಾರದ ಬತ್ತಳಿಕೆಯಲ್ಲಿ ಈ ಬಾರಿ ಚುನಾವಣೆಯನ್ನು ಎದುರಿಸಲು ಯಾವುದೇ ಅಸ್ತ್ರಗಳಿಲ್ಲ. ಮೇಕ್ ಇಂಡಿಯಾ, ಡಿಜಿಟಲೀಕರಣ, ಗಂಗೆಯ ಶುದ್ಧೀಕರಣ ಮೊದಲಾದ ಯೋಜನೆಗಳು ವಾಸ್ತವಕ್ಕೆ ದೂರವಾಗಿವೆ. ದೇಶದ ಪ್ರಧಾನ ಸೇವಕ ಜಿಯೋ ಜಾಹೀರಾತಿನಲ್ಲಿ ತಾರಾ ಪ್ರಚಾಕರಾಗಿ ವಿಜ್ರಂಭಿಸಿದರು. ದರೋಡೆಕೋರರು ದೇಶವನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಪಲಾಯನಗೈಯ್ಯುತ್ತಿರುವಾಗಲೂ ಚೌಕಿದಾರ್ ನಿದ್ದೆಗೆ ಶರಣಾಗಿದ್ದರು. ದುಬಾರಿ ಪ್ರತಿಮೆ ನಿರ್ಮಾಣ ದೇಶದ ಬೊಕ್ಕಸವನ್ನು ಬರಿದಾಗಿಸಿತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಅಸಹಮತಿಯ ಧ್ವನಿಗಳನ್ನು ನಿಗ್ರಹಿಸಲು ಅಧಿಕಾರ ದುರುಪಯೋಗ ಪಡಿಸಿಕೊಂಡದ್ದೇ ಮೋದಿ ಸರಕಾರದ ಮಹಾನ್ ಸಾಧನೆ. ಜನವಿರೋಧಿ ಆಡಳಿತದ ವಿರುದ್ಧ ಧ್ವನಿ ಎತ್ತಿದರೆ ರಾಜದ್ರೋಹದ ಪ್ರಕರಣಗಳ ಹೇರಿಕೆ ಮಾಮೂಲಾಗಿಬಿಟ್ಟಿದೆ. ಅರಾಜಕತೆ ತಾಂಡವವಾಡುತ್ತಿರುವ ಈ ದೇಶದಲ್ಲಿ ನಿರುದ್ಯೋಗ, ದೇಶದ ಆರ್ಥಿಕ ಸಮಸ್ಯೆಗಳು ಗಗನಮುಖಿಯಾಗಿವೆ. ಫ್ಯಾಶಿಸ್ಟ್ ಸರ್ವಾಧಿಕಾರದ ಹೇರಿಕೆಯೊಂದಿಗೆ ಖಾಸಗೀಕರಣದ ಹೆಸರಿನಲ್ಲಿ ದೇಶದ ಸಂಪತ್ತನ್ನು ಅಂಬಾನಿ-ಅದಾನಿಗಳ ಕಾಲಬುಡಕ್ಕೆ ಸಮರ್ಪಿಸುತ್ತಿರುವ ಮೋದಿ ಪಟಾಲಂಗೆ ಯಾವುದೇ ಹಿಂಜರಿಕೆಯಿಲ್ಲ. ಅಭಿವದ್ಧಿಗೆ ಬದಲಾಗಿ ಬಿಜೆಪಿ ಇಂದು ಇದೇ ಕಾರಣಕ್ಕಾಗಿ ರಾಮ ಮಂದಿರ, ಯೋಧರ ಶವ ರಾಜಕೀಯ, ಸರ್ಜಿಕಲ್ ಸ್ಟ್ರೆೃಕ್ನ ಮೊರೆ ಹೋಗಿರುವುದು.

ಈ ದೇಶದಲ್ಲಿ ನೋಟ್ ಬ್ಯಾನ್, ಜಿಎಸ್ಟಿಯಂತಹ ಘೋರ ದುರಂತಗಳು ನಡೆದಾಗ, ದನದ ಹೆಸರಿನಲ್ಲಿ ದಲಿತರ ವಿಷೇಶವಾಗಿ ಅಲ್ಪಸಂಖ್ಯಾತ ಮುಸ್ಲಿಮರ ಗುಂಪು ಹತ್ಯೆ ನಡೆಯುವಾಗ ವಿಪಕ್ಷಗಳ ಧ್ವನಿ ಬಹುತೇಕ ಗೌಣವಾಗಿತ್ತು. ಕೆಲವೊಂದು ರಾಜಕೀಯ ಧ್ವನಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದುದು ಒಂದಷ್ಟು ಸಮಾಧಾನದ ಸಂಗತಿ. ಚುನಾವಣೆ ಸಮೀಪಿಸುವಾಗ ಕಾಂಗ್ರೆಸ್ನಂತಹ ಪ್ರಮುಖ ವಿಪಕ್ಷವು ವಿಳಂಬವಾಗಿಯಾದರೂ ವೌನ ಮುರಿದು ಸರಕಾರದ ಆಡಳಿತ ಭ್ರಷ್ಟತೆಯನ್ನು ಬಹಿರಂಗಪಡಿಸುತ್ತಿದೆ. ಅಂಧಭಕ್ತರು ಮೋದಿಗೆ ಯಾರೂ ಸರಿಸಾಟಿಯಿಲ್ಲ ಎಂಬ ಭ್ರಮಾಲೋಕವನ್ನು ಸಷ್ಟಿಸುತ್ತಿರುವಾಗ ಕಳೆದ ಚುನಾವಣೆಗಳಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳ ಗೆಲುವು ಹಿಂದುತ್ವ ಫ್ಯಾಶಿಸ್ಟ್ ಆಡಳಿತದ ವಿರುದ್ಧ ನೀಡಿದ ಜನಾಭಿಪ್ರಾಯವಾಗಿ ಕಂಡು ಬಂದಿದೆ. ಹಗರಣದ ಧೂಳು ಮೆತ್ತಿಕೊಂಡಿರುವ ರಫೇಲ್ನ ವೇಗದಲ್ಲಿಯೇ ಮೋದಿ ಅಲೆಯು ಬಹುತೇಕ ಮಂಕಾಗಿರುವುದು ಸುಸ್ಪಷ್ಟ. ಈ ಮಧ್ಯೆ ದೇಶದ ಹಿತದಷ್ಟಿಯಿಂದ ಎಲ್ಲಾ ಬಿಕ್ಕಟ್ಟುಗಳನ್ನು ಬದಿಗಿಟ್ಟು ಬಿಜೆಪಿಯೇತರ ಪ್ರಬಲ ಪ್ರಾದೇಶಿಕ ಪಕ್ಷಗಳ ‘ಮಹಾ ಘಟ್ಬಂಧನ್’ನ್ನು ಬಲಿಷ್ಠಪಡಿಸಿದರೆ ಹಿಂದುತ್ವ ಸರಕಾರ ಧೂಳೀಪಟವಾಗುವುದು ನಿಚ್ಚಳ.

ಈ ಬಾರಿಯ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲೇ ಅತಿಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಅಮೂಲ್ಯ ಸಂಪತ್ತಾಗಿರುವ ಯುವಜನರಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ನಿರಾಶೆಯ ದಟ್ಟ ಕಾರ್ಮೋಡವು ಆವರಿಸಿಬಿಟ್ಟಿದೆ. ದೇಶದ ಬೆನ್ನೆಲುಬಾಗಿರುವ ರೈತರು ಕಷಿ ಬಿಕ್ಕಟ್ಟಿನ ಘೋರ ಸಂಕಟವನ್ನು ಅನುಭವಿಸುತ್ತಿದ್ದಾರೆ. ಆರ್ಥಿಕ ಹಳಿ ತಪ್ಪಿರುವ ಕಾರಣ ವ್ಯಾಪಾರೋದ್ಯಮಿಗಳು ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಇಲ್ಲಿನ ಅಲ್ಪಸಂಖ್ಯಾತರ ಬದುಕು ಅಭದ್ರತೆಯೆಡೆಗೆ ಸಾಗುತ್ತಿದೆ. ಈ ಬಾರಿಯ ಚುನಾವಣೆಯನ್ನು ಪ್ರಜೆಗಳು ಮತದಾನಕ್ಕಷ್ಟೇ ಸೀಮಿತಗೊಳಿಸಬಾರದು. ಮತವನ್ನು ಸರಕಾರದ ವಿರುದ್ಧದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬಳಸಿಕೊಳ್ಳಬೇಕು. ಹಣ ಹೆಂಡದ ಪ್ರವಾಹವೇ ಹರಿಯುವ ಮತ್ತು ಸುಳ್ಳು ಘೋಷಣೆಗಳೇ ಮೇಳೈಸುವ ಲೋಕ ಚುನಾವಣೆಯ ಈ ಸನ್ನಿವೇಶದಲ್ಲಿ ಮತದಾರರು ತಮ್ಮದೇ ಪ್ರಣಾಳಿಕೆಗೆ ಒತ್ತು ನೀಡಬೇಕಾಗಿದೆ ಮತ್ತು ಅದನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಬೇಕಾಗಿದೆ. ಅದೇ ರೀತಿ ರಾಜಕೀಯ ಪಕ್ಷಗಳು ಮಂಡಿಸುವ ಜನ ಸಾಮಾನ್ಯರ ಪರವಾದ ನೈಜ ಕಾಳಜಿಯ ಪ್ರಣಾಳಿಕೆಗೆ ಗೆಲುವಾಗಲಿ ಎಂದು ಆಶಿಸೋಣ.