ಆಡಳಿತ ವೈಫಲ್ಯವನ್ನು ಮೀರಿಸಿದ ಭದ್ರತಾ ವೈಫಲ್ಯ

0
531

ಕಳೆದ ನಾಲ್ಕೂವರೆ ವರ್ಷಗಳ ಬರ್ಬರ ಆಡಳಿತ ವೈಫಲ್ಯ ಮತ್ತು 40ಕ್ಕೂ ಅಧಿಕ ಮಂದಿ ಭಾರತೀಯ ಯೋಧರ ಬಲಿ ಪಡೆದ ಭದ್ರತಾ ವೈಫಲ್ಯವು ಏಕಕಾಲಕ್ಕೆ ನಡೆದಿರುವುದು ಕಾಕತಾಳೀಯವಲ್ಲ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರಿದ ಅದೇ ಹೊತ್ತಿಗೆ ಮೊನ್ನೆ ಹುತಾತ್ಮರಾದ ಸಿಆರ್ಪಿಎಫ್ ಯೋಧರು ಕೂಡ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಇನ್ನೇನು ಮೋದಿ ಅಧಿಕಾರ ಕೊನೆಗೊಳ್ಳುವ ಹೊತ್ತಿಗೆ ಯೋಧರ ಬದುಕೂ ಬರ್ಬರ ಆತ್ಮಹತ್ಯಾ ದಾಳಿಗೆ ಕೊನೆಗೊಂಡಿದೆ. ಇಡೀ ದೇಶ ತಲ್ಲಣಗೊಂಡಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತವು ತಲ್ಲಣಿಸಿದ್ದಕ್ಕಿಂತಲೂ ಹೆಚ್ಚು ಪರಿಣಾಮ ಬೀರಿದ್ದು ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕತ್ಯವಾಗಿತ್ತು. ಆದಾಗ್ಯೂ ಇಡೀ ದೇಶವು ಒಂದಾಗಿ ನಿಂತು ಆಡಳಿತ ವ್ಯವಸ್ಥೆಯನ್ನು ಜನತಾ ನ್ಯಾಯಾಲಯದ ಮುಂದೆ ನಿಲ್ಲಿಸಿ ಭದ್ರತಾ ವೈಫಲ್ಯವನ್ನು ಪ್ರಶ್ನಿಸುವ ಬದಲು ಕೋಮು ಉದ್ವಿಗ್ನತೆಗೆ ಬಳಸಿಕೊಂಡಿರುವುದು ಆಂತರಿಕ ಭದ್ರತೆಗೆ ಒಡ್ಡಿರುವ ಅತಿ ದೊಡ್ಡ ಬೆದರಿಕೆ. ಈ ಹಿನ್ನೆಲೆಯಲ್ಲಿ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕತ್ಯವನ್ನು ಭಾರತೀಯ ಪ್ರಜ್ಞೆಯಿಂದ ಪರಾಮರ್ಶಿಸಬೇಕೇ ವಿನಹ ಕೋಮು ಧ್ರುವೀಕರಣದ ರಾಜಕೀಯ ದಷ್ಟಿಯಿಂದಲ್ಲ.

ಪುಲ್ವಾಮ ಘಟನೆಯ ಬಳಿಕ ದೇಶದೊಳಗೆ ವ್ಯಕ್ತವಾದ ಪ್ರತಿಕ್ರಿಯೆಯು ಹೊರಗಿನ ಭಯೋತ್ಪಾದಕರ ಇಂಗಿತಕ್ಕಿಂತಲೂ ದೇಶದೊಳಗಿನ ಆಂತರಿಕ ಭಯೋತ್ಪಾದಕರ ಇಂಗಿತವನ್ನು ಪೂರೈಸುವ ದಿಕ್ಕಿನಲ್ಲಿ ಸಾಗುತ್ತಿದೆ. ಪಾಕಿಸ್ತಾನದಲ್ಲಿರುವ ಹೊಟೇಲ್ಗೆ ತೆರಳಿ ನರೇಂದ್ರ ಮೋದಿ ಬಿರಿಯಾನಿ ತಿಂದುಂಡು ಅದರ ಬಿಲ್ ಪಾವತಿಸಿ ಬಂದಾಗ ಜಾಗತಗೊಳ್ಳದ ದೇಶಪ್ರೇಮ, ದೇಶದ ಭದ್ರತಾ ವಿಭಾಗದ ಮುಖ್ಯಸ್ಥ ಅಜಿತ್ ದೋವಲ್ ಪುತ್ರ ಪಾಕಿಸ್ತಾನದೊಂದಿಗೆ ವ್ಯವಹಾರ ಪಾಲುದಾರಿಕೆಯಲ್ಲಿ ಪಾಲ್ಗೊಂಡಿರುವಾಗ ಜಾಗತವಾಗದ ದೇಶಪ್ರೇಮ, ಐಎಸ್ಐಗೆ ಭಾರತದ ರಹಸ್ಯವನ್ನು ಹಂಚುತ್ತಿದ್ದ ಬಿಜೆಪಿ ಪರಿವಾರದ ಕಾರ್ಯಕರ್ತರು ಬಂಧಿತರಾದಾಗ ಜಾಗತವಾಗದ ದೇಶಪ್ರೇಮ 2019ರ ಚುನಾವಣೆಯ ಸಮೀಪದಲ್ಲಿ ಬಾಂಬು ಸ್ಫೋಟಗೊಳ್ಳುತ್ತಲೇ ಏಕಪಕ್ಷೀಯವಾದ ದೇಶಪ್ರೇಮದ ಅಲೆ ಎದ್ದಿರುವುದನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸಿಆರ್ಪಿಎಫ್ ಸೈನಿಕರು ಸಂಚರಿಸಿದ್ದ ಆ ರಸ್ತೆಯು ಅತ್ಯಂತ ಭದ್ರತಾ ನಿಗಾದಲ್ಲಿದ್ದ ಮಾರ್ಗವಾಗಿದ್ದು, ಮೂರು ದಿನಗಳ ಮುಂಚೆಯೇ ಜನಸಾಮಾನ್ಯರ ಸಂಚಾರವನ್ನು ನಿಷೇಧಿಸಲಾಗಿತ್ತು. ಭದ್ರತಾ ತಪಾಸಣೆಯ ಕಣ್ಣು ತಪ್ಪಿಸಿ 300 ಕಿ.ಲೋ. ತೂಕದ ಆರ್ಡಿಎಕ್ಸ್ ಸಹಿತ ಸ್ಕಾರ್ಪಿಯೋ ವಾಹನ ಹೇಗೆ ನುಸುಳಿಕೊಂಡಿತು ಎಂಬ ಪ್ರಶ್ನೆ ಉದ್ಭವಿಸುತ್ತಿರುವ ಹೊತ್ತಿಗೆ ಅಂತಹ ಪ್ರಜ್ಞಾವಂತಿಕೆಯ ಆಲೋಚನೆಯ ದಿಕ್ಕನ್ನೇ ಬದಲಾಯಿಸುವ ನಾಟಕೀಯ ವಿದ್ಯಮಾನಗಳು ಘಟಿಸಿದವು. ಕಾಶ್ಮೀರದಲ್ಲಿರುವ ಜನರನ್ನೂ, ಭಾರತದ ಇತರ ಕಡೆಗಳಲ್ಲಿ ನೌಕರಿ, ಉದ್ಯಮ ಅಥವಾ ಕಲಿಯುತ್ತಿರುವ ಕಾಶ್ಮೀರಿಗಳು ಸಂಘಪರಿವಾರದ ಆಕ್ರಮಣಕ್ಕೊಳಗಾದರು. ಯೋಧರ ಸಾವಿಗೆ ಸಂಭ್ರಮಿಸಿದರು ಎಂಬ ವದಂತಿ ಹಬ್ಬಿಸಿ ಹಲವೆಡೆ ಹಲ್ಲೆ, ಗಲಭೆಗಳನ್ನು ಸಷ್ಟಿಸಲಾಯಿತು. ಹುಬ್ಬಳ್ಳಿಯ ಮಾಸ್ಕಿ ಎಂಬಲ್ಲಿ ವದಂತಿಯ ಆಧಾರದಲ್ಲಿ ಆರು ಮಂದಿ ಮುಸ್ಲಿಮರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಯಿತು. ಮಸೀದಿಯ ಮೇಲೆ ದಾಳಿ ನಡೆಸಿದ, ಸೊತ್ತುಗಳಿಗೆ ಹಾನಿ ಎಸಗಿದ ಮತ್ತು ಪವಿತ್ರ ಗ್ರಂಥಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ದೇಶಪ್ರೇಮಿಗಳೆಂಬ ಸರ್ಟಿಫಿಕೇಟಿಗೆ ಪಾತ್ರರಾದರು. ಇಂತಹ ಸಂಘಪರಿವಾರ ಪ್ರೇರಿತ ದೇಶಪ್ರೇಮ ದೇಶದೆಲ್ಲೆಡೆ ವ್ಯಾಪಿಸಿತು. ಇವೆಲ್ಲವೂ ಆಕಸ್ಮಿಕ ಪ್ರತಿಕ್ರಿಯೆ ಆಗಿರಲು ಸಾಧ್ಯವಿಲ್ಲ. ಸದ್ಯ ಮುಳುಗುತ್ತಿರುವ ಬಿಜೆಪಿಗೆ ಆಸರೆಯಾಗಲು ಹುಳುಕಡ್ಡಿಯೇನೂ ಸಾಲದು ಎಂಬ ಅರಿವು ಸಂಘಪರಿವಾರಕ್ಕೆ ಚೆನ್ನಾಗಿಯೇ ತಿಳಿದಿದೆ. ಪುಲ್ವಾಮ ಆತ್ಮಹತ್ಯಾ ದಾಳಿಯು ಭಾರತದ ಮೇಲೆ ನಡೆದಿರುವ ಬರ್ಬರ ಆಕ್ರಮಣವಾಗಿದ್ದರೂ, ಅದನ್ನು ದೇಶದ ಭದ್ರತೆಯ ದಷ್ಟಿಯಿಂದ ನೋಡದೆ ರಾಜಕೀಯ ಲಾಭ ಗಳಿಸಲು ಅಖಾಡಕ್ಕಿಳಿದಿರುವ ಬಿಜೆಪಿಯ ಚುನಾವಣಾ ರಣತಂತ್ರವು ಭಯೋತ್ಪಾದನೆಯಷ್ಟೇ ಅಪಾಯಕಾರಿಯಾದದ್ದು.