ತಬ್ಲೀಘಿ ಜಮಾತ್ ಪ್ರಕರಣ : ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್, ಮುಟ್ಟುಗೋಲು ಮನೆ ಕೀಲಿಕೈ ಮರಳಿಸಲು ಸೂಚನೆ

Prasthutha|

ನವದೆಹಲಿ: ದೆಹಲಿ ಸರ್ಕಾರವು ಮನಸೋಇಚ್ಛೆಯಿಂದ ತಮ್ಮ ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆರೋಪಿಸಿ ನಿಜಾಮುದ್ದೀನ್ ಮರ್ಕಝ್ ಮುಖ್ಯಸ್ಥ ಮೌಲಾನಾ ಸಾದ್ ಅವರ ತಾಯಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಲ್ಲದೆ ಮನೆಯ ಕೀಲಿಕೈಯನ್ನು ಹಿಂದಿರುಗಿಸುವಂತೆ ನ್ಯಾ. ಯೋಗೇಶ್ ಖನ್ನಾ ಅವರಿದ್ದ ಪೀಠ ಪೊಲೀಸರಿಗೆ ಸೂಚಿಸಿದೆ.

- Advertisement -


ಏಪ್ರಿಲ್ 4, 2020ರಿಂದಲೂ ತಮ್ಮ ಕಕ್ಷಿದಾರರ ಮನೆಯನ್ನು ಮೊಹರು ಮಾಡಿ ಇಡಲಾಗಿದ್ದು, ಪೊಲೀಸರಿಗೆ ಕೀಲಿಗಳನ್ನು ನೀಡಲಾಗಿದೆ ಎಂದು ಹಿರಿಯ ನ್ಯಾಯವಾದಿ ರೆಬೆಕಾ ಜಾನ್ ಮತ್ತು ವಕೀಲ ಫಜೈಲ್ ಅಹ್ಮದ್ ಅಯ್ಯುಬಿ ವಾದಿಸಿದ್ದರು. 73 ವರ್ಷದ ಅರ್ಜಿದಾರರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಸಾಂಕ್ರಾಮಿಕ ರೋಗಗಳ ಕಾಯಿದೆ- 1897 ಮತ್ತು ವಿಪತ್ತು ನಿರ್ವಹಣಾ ಕಾಯಿದೆ- 2005ನ್ನು ಉಲ್ಲಂಘಿಸಿ ಮಾರ್ಚ್ 2020 ರಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ಸಂಬಂಧಿಸಿದಂತೆ ಸಾದ್ ಅವರ ತನಿಖೆ ನಡೆಯುತ್ತಿತ್ತು. ಜಮಾತ್ ಆಯೋಜನೆ ಹಿನ್ನೆಲೆಯಲ್ಲಿ ಕೋವಿಡ್ -19 ಹರಡಲು ಕಾರಣವಾಗಿದೆ ಎಂದು ಆರೋಪಿಸಿ ಅವರ ಮನೆಗೆ ಕೂಡ ಬೀಗ ಮುದ್ರೆ ಹಾಕಲಾಗಿತ್ತು. ರಾಜ್ಯ ಸರ್ಕಾರದ ಪರ ಹಾಜರಾದ ಅಮಿತ್ ಅಹ್ಲಾವತ್ ನೋಟಿಸ್ ಸ್ವೀಕರಿಸಿದರು. ಡಿಸೆಂಬರ್ 9ಕ್ಕೆ ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಲಾಗಿದೆ.



Join Whatsapp