70ನೇ ಗಣರಾಜ್ಯೋತ್ಸವದ ಅಂಚಿನಲ್ಲಿ…

0
542

ನಮ್ಮ ದೇಶವು ಸ್ವತಂತ್ರ ಗಣರಾಜ್ಯವಾದುದರ ಆನಂದ ಮತ್ತು ಹರುಷವನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳುವಾಗಲಷ್ಟೆ, ಯಾವುದೇ ದೇಶವು ನಾಗರಿಕ ಜಗತ್ತಿನಲ್ಲಿ ತನ್ನ ಅಸ್ಮಿತೆಯನ್ನು ಪರಿಚಯಿಸಿಕೊಳ್ಳಬಹುದು. ಗಣರಾಜ್ಯಗೊಂಡ 70ನೇ ವರ್ಷಕ್ಕೆ ದೇಶವು ಪ್ರವೇಶಿಸುತ್ತಿದೆ. ವಿವಿಧ ಜನ, ಮತ, ಧರ್ಮ, ಸಂಸ್ಕೃತಿಯ ವೈವಿಧ್ಯತೆಯನ್ನು ಯಾವ ರೀತಿಯಲ್ಲಿ ಸಮನ್ವಯಗೊಳಿಸಿ ಪರಮಾವಧಿ ನ್ಯಾಯವನ್ನು ಒದಗಿಸಿ ಪಾರದರ್ಶಕವಾದ ಬಹತ್ ಸಂವಿಧಾನವನ್ನು ನೀಡಬಹುದು ಎಂಬ ಮಾದರಿಯನ್ನು ಜಗತ್ತಿನ ದೇಶಗಳಿಗೆ ತೋರಿಸಿಕೊಟ್ಟವರು ನಾವು. ಭಾರತದ ಸಾಮಾಜಿಕ ಸಂರಚನೆಯಲ್ಲೂ, ಬ್ರಾಹ್ಮಣ್ಯದಲ್ಲಿ ರೂಪುಗೊಂಡ ಹೇರಿಕೆಯ ಧರ್ಮ ಪ್ರಜ್ಞೆಯಲ್ಲೂ, ರಾಜಕೀಯ ಸಾಮಾಜಿಕ ದಷ್ಟಿಕೋನದಲ್ಲೂ, ಶೈಕ್ಷಣಿಕ ಅರಿವಿನಲ್ಲೂ ಅನುಪಮವಾದ ಗ್ರಹಿಕೆಯಿದ್ದ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಸಂವಿಧಾನ ಶಿಲ್ಪಿಯಾಗಿದ್ದರು. ಈ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಖರ ಜ್ಞಾನವು ಸಂವಿಧಾನದ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಿತು.

ಆದರೆ ಸಂವಿಧಾನದ ಅಂತಃಸತ್ವದೊಂದಿಗೆ ನ್ಯಾಯಯುತವಾಗಿ ದೇಶವನ್ನಾಳುವ ದಿಟ್ಟತನ ಮತ್ತು ದೂರದಷ್ಟಿಯುಳ್ಳ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕೊರತೆಯು ಪ್ರತಿವರ್ಷ ವರ್ಧಿಸುತ್ತಿರುವುದು ದೇಶವನ್ನು ಕಂಗೆಡಿಸುತ್ತಿದೆ. ನಾಗರಿಕ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರದಿಂದ ಜನರನ್ನು ಹೊರದೂಡುವ ದುರವಸ್ಥೆ ಉಲ್ಬಣಿಸುತ್ತಿದೆ. ಆಡಳಿತವೆಂದರೆ ದೇಶದ ಪ್ರಜೆಗಳನ್ನು ಲೂಟಿಗೈಯ್ಯುವುದು, ಅಧಿಕಾರವೆಂದರೆ ಕರಾಳ ಕಾನೂನುಗಳನ್ನು ಹೇರಿ ಪ್ರಜೆಗಳ ಹಕ್ಕು ಸ್ವಾತಂತ್ರ್ಯಗಳನ್ನು ಹರಣಗೊಳಿಸುವುದು, ಮೂಲಭೂತ ಹಕ್ಕುಗಳನ್ನು ಕೇಳುವ ಪ್ರಜೆಗಳ ಮುಂದೆ ವಂಶ, ವರ್ಗ, ಜಾತಿ ಧರ್ಮಗಳನ್ನು ತೋರಿಸಿ ಧ್ರುವೀಕರಣ ರಾಜಕಾರಣವನ್ನು ಮಾಡುವುದು. ಜನಸಾಮಾನ್ಯರ ಮನದಲ್ಲಿ ಇದೀಗ ಬಾಕಿವುಳಿದ ನೆನಪು ಎಂದರೆ, ಅದು ರಕ್ತವರ್ಣದ ರಾಜಕೀಯದಾಟ ಮಾತ್ರ.

ಮೇಲ್ಜಾತಿಯ ಸವರ್ಣೀಯ ಹಿತಾಸಕ್ತಿಗಳನ್ನು ಸಂತುಷ್ಟಗೊಳಿಸಲು ಸಂವಿಧಾನವನ್ನೇ ತಿದ್ದುಪಡಿಗೊಳಿಸಲು ಧೈರ್ಯ ತೋರುವ ಜನಪ್ರತಿನಿಧಿಗಳಾಗಿ ರಾಜಕಾರಣಿಗಳು ಬದಲಾಗಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ವೇಳೆ ದೇಶದ ಸಂವಿಧಾನ ಮತ್ತು ಪ್ರಜಾತಂತ್ರದ ಕುರಿತಾದ ಆತಂಕ ಹೆಚ್ಚುತ್ತಿದೆ. ಒಂದೆಡೆ ಕಾರ್ಪೊರೇಟ್‌ಕರಣ, ಮತ್ತೊಂದೆಡೆ ಕೋಮುವಾದ ಮತ್ತು ವಂಶೀಯತೆಯ ಹರ್ಷೋದ್ಗಾರಗಳನ್ನು ಕಾಣುತ್ತಿದ್ದೇವೆ. ಅಧಿಕಾರ, ಸಂಪತ್ತು, ಯಜಮಾನಿಕೆ ಇವೆಲ್ಲವೂ ಭಯದ ವಾಹಕರಾದ ಹಿಂದುತ್ವ ಶಕ್ತಿಗಳ ಕರಗಳಲ್ಲಿ ಭದ್ರವಾಗಿರುವಾಗ ಇತಿಹಾಸ ಕಂಡರಿಯದ ಭಯದಲ್ಲಿ ಭಾರತೀಯ ಜನತೆ ಅಮರಿ ಹೋಗುತ್ತಿದ್ದಾರೆ. ಅದೇ ವೇಳೆ ಪ್ರಜಾಸತ್ತೆಯ ಪ್ರಮುಖ ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಕಾವಲುನಾಯಿ ಎಂಬ ಹೆಸರಿನ ಮಾಧ್ಯಮ ರಂಗದ ಭೀಕರ ಮೌನವು ಈ ದೇಶವನ್ನು ಪ್ರೀತಿಸುವ ಶ್ರೀಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. 70 ವರ್ಷವು ಒಂದು ರಾಷ್ಟ್ರಕ್ಕೆ ಸಂಬಂಧಿಸಿದಂತೆ ತನ್ನ ಜನತೆಯ ಸರ್ವತೋಮುಖ ಅಭಿವದ್ಧಿಯ ಅಳತೆಗೋಲು ಆಗಬೇಕು. ಆದರೆ ನಾವು ಸವೆಸಿದ ಹಾದಿಯು ಇಂಡಿಯಾದ ಅಭಿಮಾನದ ಸಂಕೇತವಾದ ಸಂವಿಧಾನವನ್ನು ಮುಂದಿರಿಸಿಕೊಂಡು ಆಗಿತ್ತೇ ಅಥವಾ ನಿರ್ಲಕ್ಷಿಸಿ ತೆರೆಗೆ ಸರಿಸಿ ಆಗಿತ್ತೇ ಎಂಬುದು ನಮ್ಮೆಲ್ಲರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.