ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಲೆಯತ್ನ: ಐವರು ಸೆರೆ

Prasthutha|

ಬೆಂಗಳೂರು: ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ – ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರ ಕೊಲೆ ಯತ್ನ ಮಾಡಿದ್ದ ಐವರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು  ಪಡೆಯಬೇಕೆಂಬ ಹಾಗೂ ಖಾಸಗಿ ಶಾಲೆಗಳ ಮಾಲೀಕರುಗಳಿಂದ ಹಫ್ತ ವಸೂಲಿ ಮಾಡಲು ಕಳೆದ 6 ತಿಂಗಳಿಂದ ಸಂಚು ರೂಪಿಸಿ ಈ ಕೃತ್ಯ ನಡೆಸಿರುವುದು ಪತ್ತೆಯಾಗಿದೆ.

ಕಳೆದ ಜು. 29 ರಂದು ರಾತ್ರಿ 11-30ರ ವೇಳೆ  ಶಶಿಕುಮಾರ್ (51) ಅವರ ಮೇಲೆ  ಎಂ.ಇ.ಎಸ್.ರಸ್ತೆಯ ಮುತ್ಯಾಲನಗರದ ಮನೆಯ ಬಳಿಯೇ ಹಲ್ಲೆ ನಡೆಸಿ ಕೊಲೆಯತ್ನ ನಡೆಸಲಾಗಿತ್ತು.

- Advertisement -

ಈ ಸಂಬಂಧ ಬಂಧಿತ ಆರೋಪಿಗಳು ಶಿವಕುಮಾರ್ ಅವರ ಮನೆಯ ಸಮೀಪದಲ್ಲಿಯೇ 6 ತಿಂಗಳ ಹಿಂದೆಯೇ ಬಾಡಿಗೆ ಮನೆ ಮಾಡಿಕೊಂಡು ಕೊಲೆಗೆ ಸಂಚು ರೂಪಿಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಬಂಧಿತ ಆರೋಪಿಗಳ  ಮನೆಯಲ್ಲಿ  ಕೃತ್ಯಕ್ಕೆ ಸ್ಟಾರ್ ಮಾಡೆಲ್ 81, ಎಂದು ಬರೆದಿರುವ  ಪಿಸ್ತೂಲ್, 3ಜೀವಂತ ಗುಂಡುಗಳು,ಲಾಂಗ್,  ಮಚ್ಚುಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.

ಆರೋಪಿಗಳು ವಿಚಾರಣೆಯಲ್ಲಿ ಎರಡನೇ ಆರೋಪಿಯು ಹೆಣ್ಣೂರು ಠಾಣೆಯ 2018ರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಒಂದು ತಿಂಗಳ ಹಿಂದೆ  ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವುದು ಪತ್ತೆಯಾಗಿದೆ.

ಮೂರನೇ ಆರೋಪಿಯು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಜಾಮೀನ ಮೇಲೆ ಬಂದಿದ್ದರೆ ಐದನೇ ಆರೋಪಿ ಕೂಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದನು.

ತಲೆ ಮರೆಸಿಕೊಂಡಿರುವ ಮೊದಲ ಆರೋಪಿಯು ಪೋಷಕರ ಸಂಘದ ಜೊತೆಯಲ್ಲಿ ಗುರುತಿಸಿಕೊಂಡಿದ್ದು ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ತಾನು ಪಡೆಯಬೇಕೇಂಬ ಆಸೆ ಹೊಂದಿದ್ದ. ಈತ, ಖಾಸಗಿ ಶಾಲೆಗಳ ಮಾಲೀಕರುಗಳಿಂದ ಹಫ್ತ ವಸೂಲಿ ಮಾಡಲು ಜೈಲಿನಲ್ಲಿ ಪರಿಚಯವಾಗಿದ್ದ ಎರಡನೇ ಆರೋಪಿಯನ್ನು ಸಂಪರ್ಕಿಸಿ ಆತನಿಗೆ ಮತ್ತು ಆತನ ಸಹಚರರುಗಳಿಗೆ ಶಶಿಕುಮಾರ್ ಅವರ ಮನೆಯ ಸಮೀಪದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟು ಅವರ ಚಲನ-ವಲನಗಳನ್ನು ಗಮನಿಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದಲ್ಲಿನ ಪ್ರಮುಖ ಆರೋಪಿಯು ಸೇರಿದಂತೆ 6 ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ಜಾಲಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್  ಗುರುಪ್ರಸಾದ್ ಮತ್ತವರ ಸಿಬ್ಬಂದಿ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.



Join Whatsapp