ಜೈಲಿನ ಅವ್ಯವಸ್ಥೆಯ ಕುರಿತು ಪತ್ರ ಬರೆದ ಡಾ.ಕಫೀಲ್ ಖಾನ್

Prasthutha|

“ನನಗೆ ಯಾಕೆ ಶಿಕ್ಷೆಯಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ನನ್ನ ಮಕ್ಕಳು, ನನ್ನ ಪತ್ನಿ, ನನ್ನ ತಾಯಿ ಮತ್ತು ನನ್ನ ಸಹೋದರ-ಸಹೋದರಿಯನ್ನು ಯಾವಾಗ ನೋಡಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿಲ್ಲ” ಎಂದು ಉತ್ತರ ಪ್ರದೇಶದ ಮಥುರಾ ಜೈಲಿನಲ್ಲಿರುವ ಗೋರಖ್ ಪುರದ ವೈದ್ಯ ಕಫೀಲ್ ಖಾನ್ ಪತ್ರ ಬರೆದಿದ್ದಾರೆ.

- Advertisement -

ಅಲಿಘಢದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಮಾಡಿದ ಭಾಷಣ ಮಾಡಿರುವ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರು ಬಂಧನದಲ್ಲಿದ್ದಾರೆ.

ಪತ್ರದಲ್ಲಿ ಅವರು ಜೈಲಿನೊಳಗಿನ ಸ್ಥಿತಿಯನ್ನು ‘ನರಕಯಾತನೆ’ ಎಂದು ವಿವರಿಸಿದ್ದಾರೆ. ಕಳೆದ 5 ತಿಂಗಳಿನಿಂದ ಜೈಲಿನಲ್ಲಿದ್ದ ಖಾನ್ ರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಯೋಗಿ ಆದಿತ್ಯನಾಥ್ ಸರಕಾರವು ಅವರ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಅವರ ಬಿಡುಗಡೆಯನ್ನು ತಡೆಯಿತು. ಮುಕ್ತ ಪತ್ರದಲ್ಲಿ ಖಾನ್ ರವರು ಕಿಕ್ಕಿರಿದ ಜೈಲಿನಲ್ಲಿ ಇರುವ ಅನಾರೋಗ್ಯಕರ ಮತ್ತು ಉಸಿರುಗಟ್ಡಿಸುವ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. 500 ಕೈದಿಗಳು ವಾಸಿಸಲು ಸಾಮರ್ಥ್ಯ ಹೊಂದಿರುವ ಜೈಲಿನಲ್ಲಿ 1,600 ಕೈದಿಗಳನ್ನು ಇರಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

“ಕೇವಲ ಒಂದು ಶೌಚಾಲಯವನ್ನು 125-150 ಕೈದಿಗಳು ಬಳಸುತ್ತಿದ್ದು, ವಿದ್ಯುತ್ ಕಡಿತದಿಂದಾಗಿ ಅಸಹನೀಯ ಶಾಖದೊಂದಿಗೆ ಬೆವರು ಮತ್ತು ಮೂತ್ರದ ವಾಸನೆಯು ಇಲ್ಲಿನ ಜೀವನವನ್ನು ನರಕವನ್ನಾಗಿಸುತ್ತಿದೆ. ನಿಜಕ್ಕೂ ಇದು ಜೀವಂತ ನರಕ” ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಶೌಚಾಲಯಗಳು ಎಷ್ಟು ಕೆಟ್ಟದಾಗಿದೆಯೆಂದರೆ ಶೌಚಾಲಯದ ಬಳಿಗೆ ತಲುಪಿದಾಗ ನೊಣಗಳು ಮತ್ತು ಸೊಳ್ಳೆಗಳ ಹಿಂಡುಗಳು ನಮ್ಮ ಬಳಿ ಬರುತ್ತದೆ. ಈ ಸ್ಥಿತಿಯು ಅಸಹನೀಯವಾಗಿದ್ದು, ವಾಂತಿ ಬಂದಂತಾಗುತ್ತದೆ. ಮಾತ್ರವಲ್ಲದೆ, ಜೈಲಿನಲ್ಲಿ ಒದಗಿಸುವ ಆಹಾರವನ್ನು ಕೂಡಾ ತಿನ್ನಲು ಸಾಧ್ಯವಿಲ್ಲ.

ಮೂತ್ರ ವಿಸರ್ಜನೆ, ಬೆವರು ಸೇರಿದಂತೆ ಎಲ್ಲಾ ರೀತಿಯ ವಾಸನೆಗಳಿಂದ ತುಂಬಿದ ಮೀನು ಮಾರುಕಟ್ಟೆಯಂತೆ ಇದೆ ಈ ಜೈಲು. “ನಾನು ಓದಲು ಪ್ರಯತ್ನಿಸುತ್ತೇನೆ. ಆದರೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಆ ಉಸಿರುಗಟ್ಟುವಿಕೆಯಿಂದ ಉಂಟಾಗುವ ತಲೆತಿರುಗುವಿಕೆಯಿಂದಾಗಿ ನಾನು ಕೆಳಗೆ ಬೀಳಬಹುದು ಎಂದು ಕೆಲವೊಮ್ಮೆ ಅನಿಸುತ್ತದೆ” ಎಂದು ಹೇಳಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ಸಿದ್ಧರಾಗಿರುವ ವೈದ್ಯರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಖಾನ್ ರವರ ಪತ್ರವು ಟ್ವಿಟ್ಟರ್ ಅಭಿಯಾನವನ್ನು ಹುಟ್ಟುಹಾಕಿದೆ. ಜನರಿಗಾಗಿ ಮಿಡಿಯುವ ವೈದ್ಯರನ್ನು ಸರಕಾರ ಜೈಲಿನಲ್ಲಿರಿಸಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.



Join Whatsapp