ಬಿಜೆಪಿಯ ಮೀಸಲಾತಿ ಜುಮ್ಲಾ

0
579

ಇನ್ನೇನು ಕೆಲವೇ ವಾರಗಳಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ. ಈಗಾಗಲೇ ಸತತ ಆಡಳಿತ ವೈಫಲ್ಯಗಳಿಂದ ತತ್ತರಿಸಿರುವ ಬಿಜೆಪಿಯು ಸೋಲುವ ಭೀತಿಯನ್ನು ಎದುರಿಸುತ್ತಿದೆ. ಇತ್ತೀಚಿನ ಪಂಚರಾಜ್ಯಗಳ ಚುನಾವಣಾ ಫಲಿತಾಂಶವು ಕೋಮುವಾದಿ ಸರಕಾರಕ್ಕೆ ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿದೆ. ಆಡಳಿತ ವಿರೋಧಿ ಅಲೆಯನ್ನು ಮಂದಗೊಳಿಸಲು ಮತ್ತು ಮೇಲ್ವರ್ಗದ ಜನರನ್ನು ಸಂತುಷ್ಟಪಡಿಸಲು ಬಿಜೆಪಿ ಇದೀಗ ಶೇ.10 ಮೀಸಲಾತಿಯ ಗಿಮಿಕ್‌ಗೆ ಮುಂದಾಗಿದೆ. ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಸರಕಾರ ಘೋಷಿಸಿದೆ. ಇದು ಜಾರಿಗೆ ಬಂದರೆ ಬ್ರಾಹ್ಮಣ, ಠಾಕೂರ್, ಜಾಟ್, ಮರಾಠಾ ಮತ್ತು ಬನಿಯಾ ವರ್ಗಗಳು ಮೀಸಲಾತಿ ಫಲಾನುಭವಿಗಳಾಗಲಿವೆ. ಅಂದಹಾಗೆ, ಸಂವಿಧಾನವು ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯ ಆಧಾರದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸುತ್ತದೆ ಎಂಬುದು ಮಹತ್ವದ ವಿಚಾರವಾಗಿದೆ. ಆದ್ದರಿಂದ ಈ ರೀತಿಯ ಹೆಚ್ಚುವರಿ ಕೋಟಾಗೆ ಸಂವಿಧಾನ ತಿದ್ದುಪಡಿ ಸೇರಿದಂತೆ ಶಾಸಕಾಂಗ ಪ್ರಕ್ರಿಯೆ ಅವಶ್ಯತೆಯೂ ಇರುತ್ತದೆ. ಮೇಲ್ಜಾತಿಗಳ ಸ್ಥಿತಿಗತಿಯ ಅಧ್ಯಯನಕ್ಕೆ ಯಾವುದೇ ಆಯೋಗ, ಸಮೀಕ್ಷೆ ನಡೆಸದೆಯೇ ಇಂತಹ ಒಂದು ಮೀಸಲಾತಿಯ ಅವಕಾಶವನ್ನು ಬಿಜೆಪಿ ಸರಕಾರವು ಕಲ್ಪಿಸಿರುವುದು ಬಹಳಷ್ಟು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ಬಿಜೆಪಿ ಸರಕಾರದ ಈ ನಿರ್ಧಾರವು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಬೇಟೆಯಾಡುವ ಗುರಿಯನ್ನೂ ಹೊಂದಿದೆ. ಒಂದನೇಯದು ಮೀಸಲಾತಿಯನ್ನು ಕೊನೆಗೊಳಿಸವುದು, ಎರಡನೇಯದಾಗಿ ಈ ವಿಚಾರವನ್ನು ಚುನಾವಣಾ ಜುಮ್ಲಾ ಆಗಿ ಬಳಸಿಕೊಳ್ಳುವುದು. ಮೋದಿ ಸರಕಾರವು ಈ ಹೊಸ ಕೋಟಾ ಘೋಷಣೆ ಮಾಡಿ ತಮ್ಮ ಹಕ್ಕುಗಳನ್ನು ಸಂರಕ್ಷಿಸುವ ಎಲ್ಲಾ ಯೋಜನೆಗಳನ್ನು ತೊರೆಯುತ್ತಿದೆ ಎಂಬ ಸಂದೇಹವು ದಲಿತರು, ಆದಿವಾಸಿಗಳು ಮತ್ತು ಓಬಿಸಿ ವರ್ಗಗಳಲ್ಲಿ ಮೂಡಿದೆ. ಮೋದಿಯು ತನ್ನ ಆಡಳಿತದ ನಾಲ್ಕುವರೆ ವರ್ಷಗಳಲ್ಲಿ ಎಸ್ಸಿ, ಎಸ್ಟಿಗಳ ಮೀಸಲಾತಿಯ ಸಾಂವಿಧಾನಿಕ ಖಾತರಿಯನ್ನು ಜಾರಿಗೊಳಿಸಿಲ್ಲ. ಈ ನಡುವೆ ಬಹಳ ಸಮಯಗಳಿಂದ ಮೋದಿ ಸರಕಾರವು ಕೇಂದ್ರ ಸರಕಾರದ ಮೀಸಲಾತಿ ಹುದ್ದೆಗಳ ಸ್ಥಿತಿಗತಿಯನ್ನು ಸೂಕ್ತವಾಗಿ ಬಹಿರಂಗಪಡಿಸಿಲ್ಲ. ಇನ್ನು ಆರೆಸ್ಸೆಸ್ ಎಸ್ಸಿ, ಎಸ್ಟಿ, ಓಬಿಸಿ ಮೀಸಲಾತಿ ವಿರೋಧಿಯ ಪ್ರಬಲ ಪ್ರತಿಪಾದಕ ಅನ್ನುವುದು ಬಹಿರಂಗ ವಾಸ್ತವ. 1979ರಲ್ಲಿ ಬಿಡುಗಡೆಯಾಗಿ ಮುಂದಿನ 10 ವರ್ಷಗಳ ಕಾಲ ಧೂಳು ತಿನ್ನುತ್ತಿದ್ದ ಮಂಡಲ್ ಆಯೋಗದ ವರದಿಯನ್ನು 1989ರಲ್ಲಿ ಆಗಿನ ಪ್ರಧಾನಿ ಪಿ.ಪಿ.ಸಿಂಗ್ ಅನುಷ್ಠಾನಕ್ಕೆ ತರಲು ನಿರ್ಧರಿಸಿತ್ತು. ಅವರ ಈ ದಿಟ್ಟ ನಿರ್ಧಾರವು ಭಾರತೀಯ ರಾಜಕೀಯದ ದಿಕ್ಕುದೆಸೆಯನ್ನು ಬದಲಿಸುವ ಸೂಚನೆ ನೀಡಿತು. ಶತಕಗಳಿಂದ ಮೇಲ್ವರ್ಗಗಳ ವಿರುದ್ಧ ಹಿಂದುಳಿದ ವರ್ಗದ ಸೋಲು ಮತ್ತು ಅವುಗಳು ಅನುಭವಿಸುತ್ತಿದ್ದ ಶೋಷಣೆಗಳಿಗೆ ಮಂಡಲ್ ವರದಿಯು ಪರಿಹಾರವಾಗಿದ್ದ ಕಾರಣ ಅದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು. ಶೇ.52ರಷ್ಟು ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಶೇ.27ರಷ್ಟು ಕೋಟ ಮೀಸಲಾತಿಯನ್ನು ನೀಡುವ ಶಿಫಾರಸು ಆ ವರದಿಯಲ್ಲಿತ್ತು. ಜಾತಿ ಆಧಾರಿತವಾಗಿದ್ದ ಹಿಂದೂ ಸಮಾಜವನ್ನು ಇದು ಚೂರು ಮಾಡಿತು. ಇದು ಸಂಘಪರಿವಾರದ ಹಿಂದೂ ಏಕತೆಗೆ ಕೊಡಲಿ ಏಟನ್ನು ನೀಡಿತ್ತು. ಸಂಘಪರಿವಾರವು ಮಂಡಲ್ ನಿರ್ಧಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿತಾದರೂ, ಅದು ಮೇಲ್ಜಾತಿ-ಕೆಳಜಾತಿಗಳ ನಡುವಿನ ಭಿನ್ನಮತವನ್ನು ಶಮನಗೊಳಿಸಲು ವಿಫಲವಾಯಿತು. ಹಿಂದುಳಿದ ವರ್ಗಗಳ ಹಿಂದುಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಅದು ಬಾಬರಿ ಮಸ್ಜಿದ್-ರಾಮ ಮಂದಿರದ ವಿವಾದವನ್ನು ಜೀವಂತವಾಗಿರಿಸಿತು.

ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿಗೆ ಬದಲಾಗಿ, ಆರ್ಥಿಕ ಆಧಾರದಲ್ಲಿ ಅಸಾಂವಿಧಾನಿಕ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಲು ಮತ್ತು ಈ ಮೂಲಕ ಜಾತಿ ವ್ಯವಸ್ಥೆ, ಮೇಲ್ವರ್ಗ ಮತ್ತು ಬ್ರಾಹ್ಮಣ್ಯ ವರ್ಚಸ್ಸನ್ನು ಕಾಯ್ದಿಟ್ಟುಕೊಳ್ಳಲು ಆರೆಸ್ಸೆಸ್ ಎಂದಿಗೂ ಬಯಸುತ್ತದೆ. ಜಾತಿ ಆಧಾರಿತ ಮೀಸಲಾತಿಯನ್ನು ತಪ್ಪು ಮತ್ತು ಆರ್ಥಿಕ ಆಧಾರಿತ ಮೀಸಲಾತಿಯನ್ನು ಸರಿ ಎಂದು ಬಿಂಬಿಸಿ ಸಂವಿಧಾನಬದ್ಧ ಮೀಸಲಾತಿಯನ್ನು ಕೊನೆಗೊಳಿಸುವುದು ಈ ಪ್ರಕ್ರಿಯೆಯ ಭಾಗವಾಗಿದೆ. ಈ ಕಾರಣಕ್ಕಾಗಿ ಶೇ.10 ಆರ್ಥಿಕ ಆಧಾರದಲ್ಲಿ ಪಯಾರ್ಯ ಮೀಸಲಾತಿಯನ್ನು ಹುಟ್ಟು ಹಾಕಿ ಈಗಿರುವ ಮೀಸಲಾತಿಗೆ ಅಪಾಯದ ಸಂದೇಶವನ್ನು ನೀಡಿದೆ.

ಕೇಂದ್ರದ ಈ ಮೀಸಲಾತಿ ಕಲ್ಪಿಸುವ ನಡೆಯು ಸಾಮಾಜಿಕ ನ್ಯಾಯಕ್ಕಾಗಿ ನಡೆಸುವ ಪ್ರಯತ್ನಗಳಿಗೆ ಮಾರಕವಾಗಿದೆ. ಮಾತ್ರವಲ್ಲ, ಆರ್ಥಿಕ ಮಾನದಂಡ ಮೂಲಕ ಮೀಸಲಾತಿ ಕಲ್ಪಿಸುವುದು ಸಂವಿಧಾನದ ಮೀಸಲಾತಿಯ ಆಶಯಕ್ಕೆ ವಿರುದ್ಧವಾಗಿದೆ. ಎಲ್ಲಾ ಜಾತಿ ಸಮುದಾಯಗಳ ಅಭಿವದ್ಧಿಯು ಆ ದೇಶದ ಸರಕಾರವೊಂದರ ಆದ್ಯ ಕರ್ತವ್ಯವಾಗಿರುತ್ತದೆ. ಇದಕ್ಕೆ ಹಿಂದುಳಿದ ವರ್ಗಗಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ಸರಕಾರವು ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಆದರೆ ಪ್ರಸಕ್ತ ಮೋದಿ ಆಡಳಿತಾವಧಿಯಲ್ಲಿ ಕಾರ್ಪೊರೇಟ್ ಪರವಾರ ನೀತಿಗಳೇ ಪಾರಮ್ಯ ಮೆರೆಯುತ್ತಿದೆ. ಇಂಥದ್ದರಲ್ಲಿ ಪ್ರಜೆಗಳ ಕಲ್ಯಾಣ ಕಾರ್ಯಕ್ರಮಗಳನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.

ಹಿಂದುಳಿದವರ ಹಾಗೂ ಬಡವರ ವಿರೋಧಿ ಮತ್ತು ಮೇಲ್ವರ್ಗ ಹಾಗೂ ಕಾರ್ಪೊರೇಟ್ ಪರವಾಗಿರುವ ಸರಕಾರದ ನೀತಿನಿರೂಪಣೆಗಳು ದೇಶದಲ್ಲಿ ಸಮಸ್ಯೆಗಳನ್ನು ನೂರ್ಮಡಿಗೊಳಿಸಿವೆೆ. ಆಡಳಿತ ವೈಫಲ್ಯದಿಂದಾಗಿ ದೇಶದಲ್ಲಿ ಈಗಾಗಲೇ ನಿರುದ್ಯೋಗದ ಸಮಸ್ಯೆಯು ವ್ಯಾಪಕವಾಗಿದೆ. ಇಂಥದ್ದರಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕ್ರಮಕೈಗೊಳ್ಳುವ ಬದಲಿಗೆ, ಶೇ.10 ಮೀಸಲಾತಿ ಜಾರಿಯು ಜನರ ದಾರಿ ತಪ್ಪಿಸುವ ಪ್ರಯತ್ನವೂ ಆಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ನಡೆಯನ್ನು ಮತ್ತು ಚುನಾವಣಾ ಗಿಮಿಕ್ ಅನ್ನು ಎಲ್ಲಾ ಹಿಂದುಳಿದ ವರ್ಗಗಳು ಒಂದಾಗಿ ವಿಫಲಗೊಳಿಸಬೇಕಾಗಿರುವುದು ಅತ್ಯಗತ್ಯವಾಗಿದೆ.