ವೈಯಕ್ತಿಕ ಮಾಹಿತಿಗಳಿಗೆ ಕನ್ನ – ಖಾಸಗಿ ಸ್ವಾತಂತ್ರದ ಹನನ

0
515

ನಮ್ಮ ಸ್ವಾತಂತ್ರಗಳನ್ನು ಕಸಿದುಕೊಂಡು ‘ಅಭಿವದ್ಧಿ’ ಮತ್ತು ‘ಭದ್ರತೆ’ಯ ಸೋಗಿನಲ್ಲಿ ಸರಕಾರಗಳು ಯಾವುದೇ ಕಾನೂನು ಅಥವಾ ನಿಯಮಗಳನ್ನು ತರುವಂತಹ ಕ್ರಮಗಳು ಭಾರತದ ಸಂವಿಧಾನದ ಆಶಯ-ಆದರ್ಶಗಳಿಗೆ ತದ್ವಿರುದ್ಧವಾದುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಸಂದೇಶಗಳ ಕುರಿತಾದ ಎಲ್ಲಾ ಮಾಹಿತಿಯನ್ನೂ ಸರಕಾರಕ್ಕೆ ಒದಗಿಸಬೇಕೆಂಬ ಕೇಂದ್ರ ಸರಕಾರದ ಪ್ರಸ್ತಾವನೆ ಅತ್ಯಂತ ಕುಟಿಲತನದ್ದು. ಮಾಹಿತಿ ತಂತ್ರಜ್ಞಾನ(ಮಾಧ್ಯಮಗಳ ಮಾರ್ಗದರ್ಶಿ ತಿದ್ದುಪಡಿ) ಕಾಯ್ದೆ 2018ರ ಗುಪ್ತ ಕರಡು ಪ್ರತಿಯನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಿದ್ಧಪಡಿಸಿದೆ. ಈ ನಡುವೆ ಯಾವುದೇ ಕಂಪ್ಯೂಟರ್ ವ್ಯವಸ್ಥೆಯ ಮಾಹಿತಿ ಸಂಗ್ರಹ, ನಿಗಾ ಹಾಗೂ ಗೂಢಲಿಪಿ ಭೇದಿಸಲು ಹತ್ತು ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿ ಕೇಂದ್ರ ಸರಕಾರ ಆದೇಶವನ್ನು ಜಾರಿಗೊಳಿಸಿದೆ.

‘ಗುಂಪು ಥಳಿತ’, ‘ಕೋಮು ವಿದ್ವೇಷಗಳ ಪ್ರಚಾರ’, ‘ಸುಳ್ಳು ಮಾಹಿತಿಗಳ ರವಾನೆ’, ‘ವ್ಯಕ್ತಿಚಾರಿತ್ರ ಹನನ’ ಮುಂತಾದ ಕಾರಣಗಳ ಜೊತೆಗೆ, ‘ರಾಷ್ಟ್ರೀಯ ಭದ್ರತೆ’ಯನ್ನು ಈ ಅತಿರೇಕದ ಕ್ರಮಗಳ ಕಾರಣಗಳೆಂದು ಕೇಂದ್ರ ಸರಕಾರ ನೀಡಿದೆ. ಇದೊಂದು ಕುಚೋದ್ಯ ಮಾತ್ರವಲ್ಲದೆ, ಜನರ ಕಣ್ಣಿಗೆ ಮಣ್ಣೆರಚಿ ಇನ್ನಷ್ಟು ಅಭದ್ರತೆ ಮತ್ತು ಅಸುರಕ್ಷತೆಯನ್ನು ಸಷ್ಟಿಸುವ ದಾರಿಯಾಗಿದೆ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಮೇಲೆ ನೀಡಿದ ಎಲ್ಲಾ ಅಪರಾಧಗಳ ಮೂಲ ಕಾರಣ ಯಾವುದು ಎನ್ನುವುದನ್ನು ತಿಳಿದು ಅದನ್ನು ಮಟ್ಟಹಾಕುವ ಬದಲಿಗೆ ನೇರವಾಗಿ ಜನಸಾಮಾನ್ಯರ ಖಾಸಗಿತನ ಮತ್ತು ಸ್ವಾತಂತ್ರಕ್ಕೆ ಕನ್ನ ಹಾಕುವ ಕ್ರಮದ ಹಿಂದೆ ಕೇಂದ್ರ ಸರಕಾರದ ಕುತ್ಸಿತ ಅಜೆಂಡಾಗಳಿವೆ. ಗುಂಪು ಥಳಿತ, ಕೋಮು ದ್ವೇಷಗಳ ಪ್ರಚಾರ ಇತ್ಯಾದಿಗಳ ಮನುವಾದಿ ಚಟುವಟಿಕೆಗಳೇ ಭಾರತದ ಎಲ್ಲಾ ತರಹದ ಅಶಾಂತಿ, ಹಿಂಸೆ, ಉದ್ವಿಗ್ನತೆಗೆ ಕಾರಣಗಳು. ಇಂತಹ ಕತ್ಯಗಳಿಗೆ ಹೇತುವಾಗುವ ಸಿದ್ಧಾಂತಗಳನ್ನು ಮತ್ತು ಸಂದೇಶಗಳನ್ನು ಜನರ ಮನಸ್ಸಿನಲ್ಲಿ ಅಚ್ಚೊತ್ತುವ ಹಾಗೂ ಅವುಗಳ ಅನುಷ್ಠಾನಕ್ಕಾಗಿ ನಾನಾ ರೀತಿಯಲ್ಲಿ ನೀಡುವ ಶಸ್ತ್ರ, ಬೌದ್ಧಿಕ ಮತ್ತು ದೈಹಿಕ ತರಬೇತಿಗಳ ಮೂಲಕ ಗುಂಪುಹತ್ಯೆ, ಹತ್ಯಾಕಾಂಡ, ಗಲಭೆ ನಡೆಸುವ ‘ಸಂಘ’ಗಳನ್ನು ಮಟ್ಟಹಾಕದೆ ಸೋಷಿಯಲ್ ಮೀಡಿಯಾವನ್ನೇ ಕಟ್ಟಿಹಾಕುವ ಕ್ರಮದ ಹಿಂದೆ ಮಾಹಿತಿಗಳನ್ನು ಕದಿಯುವ, ವೈಯಕ್ತಿಕವಾಗಿ ಹಿಂಬಾಲಿಸುವ ಮತ್ತು ವ್ಯಕ್ತಿ ಸ್ವಾತಂತ್ರವನ್ನು ಹರಣಗೊಳಿಸುವ ವ್ಯವಸ್ಥಿತ ಸಂಚು ಅಡಗಿದೆ.

ಇನ್ನು ಮುಂದೆ ಸರಕಾರ ಸೋಷಿಯಲ್ ಮೀಡಿಯಾಗಳ ಸಂದೇಶಗಳು, ಇ-ಮೇಲ್, ಗೂಗಲ್ ಆ್ಯಪ್‌ಗಳೊಳಗೆ ನೇರವಾಗಿ ಕನ್ನಹಾಕಿ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಪಡೆಯಬಹುದು. ಮನೆ, ಕಛೇರಿಗಳಲ್ಲಿರುವ ಲ್ಯಾಪ್‌ಟಾಪ್, ಕಂಪ್ಯೂಟರ್, ಇನ್ನಿತರ ಮಾಹಿತಿ ಉಪಕರಣಗಳ ಆಂತರಿಕ ಮಾಹಿತಿಗಳನ್ನು ಅಡೆತಡೆಗಳಿಲ್ಲದೆ ಕಸಿದುಕೊಳ್ಳಬಹುದು. ಇದು ಜನರ ಖಾಸಗಿತನದ ಮೇಲೆ ನಡೆಸುವ ಯಜಮಾನಿಕೆಯಲ್ಲದೆ ಇನ್ನೇನು? ಕುಟುಂಬದ ಸದಸ್ಯರ ನಡುವೆ, ಸ್ನೇಹಿತರು, ಗಂಡ-ಹೆಂಡತಿ, ವ್ಯಾಪಾರ ವಹಿವಾಟುಗಳ ನಡುವೆ ಎಲ್ಲ ಸಂದೇಶ, ಮಾಹಿತಿ, ಖಾಸಗಿ ವಿಚಾರಗಳನ್ನು ಸರಕಾರಿ ಏಜೆನ್ಸಿಗಳು ಕಿವಿಗೊಟ್ಟು ಕೇಳಬಹುದು.

ಮೋದಿಯ ಬಿಜೆಪಿ ಸರಕಾರಕ್ಕೆ ಎಲ್ಲಿಲ್ಲದ ದಿಗಿಲು, ಭಯ, ಆತಂಕಗಳಿವೆಯೆನ್ನುವುದು ಇಂತಹ ಕ್ರಮಗಳಿಂದ ಸ್ಪಷ್ಟವಾಗಿದೆ. ದೇಶದ ಜನರಿಗೆ ಸೇರಬೇಕಾದ ಬಿಲಿಯಾಂತರ ಮೊತ್ತದ ಕಪ್ಪು ಹಣದ ಒಡೆಯರ ಮಾಹಿತಿಗಳನ್ನು ಸರಕಾರ ಪಡೆಯಲು ಪ್ರಯತ್ನಿಸುವುದನ್ನು ಬಿಟ್ಟು ಜನಸಾಮಾನ್ಯರ ಹಿಂದೆ ಬಿದ್ದಿರುವುದು ಯಾಕೆ? ಈ ನಿಯಮವನ್ನು ಮುಂದಿಟ್ಟುಕೊಂಡು ಸರಕಾರವನ್ನು ಟೀಕಿಸುವ, ವಿಮರ್ಶಿಸುವ ಜನರನ್ನು ಸರಕಾರಗಳು ಗುರಿಪಡಿಸಬಹುದು. ಮುಸ್ಲಿಮ್ ಮತ್ತು ಕ್ರೈಸ್ತ ಸಮಾಜದ ಜನರನ್ನು ಪೀಡನೆಗೊಳಪಡಿಸಬಹುದು. ಭಾರತದ ಸಂವಿಧಾನದಲ್ಲಿ ಒದಗಿಸಿದ ನಮ್ಮ ಮೂಲಭೂತ ಹಕ್ಕುಗಳ ಮೇಲೆ ಸವಾರಿ ನಡೆಸಲು ಸರಕಾರಕ್ಕೆ ಅಧಿಕಾರವಿಲ್ಲ. ಇಂತಹ ಕ್ರಮಗಳನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ವಿರೋಧಿಸಬೇಕಾಗಿದೆ. ಜನತೆಯಲ್ಲಿ ಅಭದ್ರತೆಯನ್ನು ಸಷ್ಟಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ದೇಶಾದ್ಯಂತ ಅರಾಜಕತೆ ಹಾಗೂ ಅಭದ್ರತೆಯ ಸಷ್ಟಿಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆಯನ್ನು ಸರಕಾರಕ್ಕೆ ನಾಗರಿಕರೆಲ್ಲರೂ ಸೇರಿ ನೀಡಬೇಕಾಗಿದೆ.