ಶತಕದ ಗಡಿಯತ್ತ ಪೆಟ್ರೋಲ್ ಬೆಲೆ | ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

Prasthutha|

ಬೆಂಗಳೂರು: ಕೋವಿಡ್ ಸಂಕಷ್ಟದಿಂದಾಗಿ ಉದ್ಯೋಗ, ಆದಾಯ ಕಳೆದುಕೊಂಡು ತೀವ್ರ ತೊಂದರೆಯಲ್ಲಿರುವಾಗ ನಿರಂತರವಾಗಿ  ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಸಾಮಾನ್ಯ ಜನತೆಯ ಮೇಲೆ ಭಾರೀ ಹೊರೆ ಹೇರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಪೆಟ್ರೋಲ್ ದರ ನಗರದಲ್ಲಿ ನೂರು ರೂಪಾಯಿ  ಗಡಿ ಸಮೀಪಿಸುತ್ತಿದ್ದು, ಡೀಸೆಲ್  ದರ 90  ರೂ ದಾಟಿದೆ. ಇದರಿಂದ ಎಲ್ಲಾ ಅಗತ್ಯ ವಸ್ತುಗಳ ದರ ಹೆಚ್ಚಾಗುತ್ತಿದ್ದು, ಇದಕ್ಕೆ ಕೇಂದ್ರದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳೇ ಕಾರಣ ಎಂದು ಪ್ರತಿಭಟನಕಾರರು ಟೀಕಿಸಿದರು.

ನಗರದ ಬಾಣಸವಾಡಿ ಪೆಟ್ರೋಲ್ ಬಂಕ್ ಬಳಿ ಕೆಪಿವೈಸಿಸಿ ಅಧ್ಯಕ್ಷ ಎಂ. ಎಸ್ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.

- Advertisement -

ರಕ್ಷಾ ರಾಮಯ್ಯ ಮಾತನಾಡಿ, ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ಜತೆಗೆ ಕೋವಿಡ್ ಸೋಂಕಿನ ಸಂಕಷ್ಟದಲ್ಲೂ ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ಅಡುಗೆ ಅನಿಲ ದರ 220 ರೂ ನಷ್ಟು ಹೆಚ್ಚಳ ಮಾಡಿದೆ. ಅಡುಗೆ ಎಣ್ಣೆ್ 200 ರ ಸಮೀಪದಲ್ಲಿದೆ. ತೈಲದ ದರ ಏರಿಕೆಯಿಂದ ಅಕ್ಕಿ, ಬೇಳೆ, ದೈನಂದಿನ ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಜನ ಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಆರೋಪಿಸಿದರು. 

ಕೊರೋನಾದಿಂದ ಕುಸಿತಗೊಂಡಿರುವ ಸಂಪನ್ಮೂಲ ಸಂಗ್ರಹಣೆಗೆ ಸರ್ಕಾರಕ್ಕೆ ಪರ್ಯಾಯ ಮಾರ್ಗಗಳಿವೆ. ಎಲ್ಲವನ್ನೂ ಬಿಟ್ಟು ಜನ ಸಾಮಾನ್ಯರು ಬಳಸುವ ಪೆಟ್ರೋಲ್, ಡೀಸೆಲ್ ಮೇಲೆ ಹೊರೆ ಹೇರುತ್ತಿರುವುದು ಸರಿಯಲ್ಲ. ಕೇಂದ್ರದ ಬೆಲೆ ಏರಿಕೆ ನೀತಿ ವಿರುದ್ಧ ಲಾಕ್ ಡೌನ್ ಮುಗಿದ ನಂತರ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ್, ವಿಜಯಾನಂದ, ಸಂದೀಪ್, ಬೆಂಗಳೂರು ಕೇಂದ್ರ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಮಾನಸ್ ಸಾಗರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

Join Whatsapp