ದೆಹಲಿ ಹಿಂಸಾಚಾರ: ಅಪ್ರಾಪ್ತ ವಯಸ್ಕನನ್ನು ಜೈಲಿಗೆ ತಳ್ಳಿದ ಪೊಲೀಸರು

0
116

ಹೊಸದಿಲ್ಲಿ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹಿಂಸಾಚಾರದ ನಂತರ, ಪ್ರತಿನಿತ್ಯ ಈಶಾನ್ಯ ದೆಹಲಿಯಿಂದ ಒಂದೊಂದು ಹೃದಯ ಕದಡುವ ಕಥೆ ವರದಿಯಾಗುತ್ತಿದೆ. ಈ ಪೈಕಿ ಮುಸ್ತಫಾಬಾದ್ ಬಳಿಯ ಚಾಂದ್‌ಬಾಗ್‌ನಲ್ಲಿ, ಪೊಲೀಸರು 14 ವರ್ಷದ ಅಪ್ರಾಪ್ತ ಬಾಲಕನನ್ನು ಜೈಲಿಗೆ ತಳ್ಳಿರುವ ಘಟನೆ ವರದಿಯಾಗಿದೆ. ಈತ 18 ವರ್ಷಕ್ಕಿಂತ ಮೇಲ್ಪಟ್ಟವನು ಎಂದು ಪೊಲೀಸರು ಸುಳ್ಳು ಹೇಳಿದ್ದಾರೆ.
ಅಪ್ರಾಪ್ತ ವಯಸ್ಕನ ವಿರುದ್ಧ ಪೊಲೀಸರು 11 ಗಂಭೀರ ಆರೋಪಗಳನ್ನು ದಾಖಲಿಸಿದ್ದಾರೆ. ಫೆಬ್ರವರಿ 25ರಂದು ಚಾಂದ್‌ಬಾಗ್‌ನಲ್ಲಿ ನಡೆದ ಗಲಭೆಯಲ್ಲಿ 14 ವರ್ಷದ ಅಮಾನ್ ಅಲಿ ನಾಪತ್ತೆಯಾಗಿದ್ದ. ಕೆಲ ದಿನಗಳ ಹುಡುಕಾಟದ ನಂತರ, ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಅಮಾನ್‌ನನ್ನು ಪೊಲೀಸರು ಈಶಾನ್ಯ ದೆಹಲಿಯ ಜೈಲಿನಲ್ಲಿ ಬಂಧಿಸಲಾಗಿದೆ ಎಂದು ಅವರ ಕುಟುಂಬಕ್ಕೆ ತಿಳಿದುಬಂದಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಒಟ್ಟು 11 ಆರೋಪಗಳನ್ನು ದಾಖಲಿಸಲಾಗಿದ್ದು, ಈ ಪೈಕಿ ಆಸ್ತಿಪಾಸ್ತಿಗೆ ಹಾನಿ, ಪರವಾನಗಿ ರಹಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮತ್ತು ಹಿಂಸಾಚಾರದಲ್ಲಿ ಪಾಲ್ಗೊಂಡಿರುವ ಆರೋಪಗಳನ್ನು ಹೊರಿಸಲಾಗಿದೆ.
ಫೆಬ್ರವರಿ 25ರಂದು ತನ್ನ 10 ವರ್ಷದ ಮಗನನ್ನು ಹುಡುಕಿಕೊಂಡು ಬರಲು ಅಮಾನ್‌ನನ್ನು ಕಳುಹಿಸಿರುವುದಾಗಿ ತಾಯಿ ರಬಿಯಾ ಖಾತೂನ್ ಹೇಳಿದ್ದಾರೆ.

ಚಾಂದ್‌ಬಾಗ್‌ನಲ್ಲಿ ಹಿಂಸಾಚಾರ ಆರಂಭವಾದಾಗ ಆಕೆಯ ಕಿರಿಯ ಮಗ ಆಟವಾಡಲು ಹೋಗಿದ್ದ. ಆತ ಕೆಲವು ಗಂಟೆಗಳ ನಂತರ ಮರಳಿದ್ದಾನೆ. ಆದರೆ ಅಮಾನ್ ನಾಪತ್ತೆಯಾಗಿದ್ದ. ಐದು ದಿನಗಳ ಕಾಲ ಕುಟುಂಬಸ್ಥರು ಅಮಾನ್‌ನನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ. ಅಂತಿಮವಾಗಿ ಅವನನ್ನು ಕ್ರಿಮಿನಲ್ ಆರೋಪದಲ್ಲಿ ಜೈಲಿನಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ಅಮಾನ್‌ನನ್ನು ಫೆಬ್ರವರಿ 28ರಂದು ಕಾರ್‌ಕಾರ್ಡೂಮಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಲ್ಲಿಂದ ಅವನನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ಎಫ್‌ಐಆರ್ ವಿವರಗಳ ಪ್ರಕಾರ, ಅಮಾನ್‌ನ ವಯಸ್ಸು ಡಾಕ್ಯುಮೆಂಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ. ಆಘಾತಕಾರಿ ಸಂಗತಿಯೆಂದರೆ, ಚಾರ್ಜ್‌ಶೀಟ್ ನೋಡಿದಾಗ ಅಪ್ರಾಪ್ತ ವಯಸ್ಕನ ವಯಸ್ಸನ್ನು ದೃಢೀಕರಿಸಲು ಕೋರ್ಟ್ ಮ್ಯಾಜಿಸ್ಟ್ರೇಟ್ ತಲೆಕೆಡಿಸಿಕೊಂಡಿಲ್ಲ. ಬಾಲಾಪರಾಧಿ ನ್ಯಾಯ ಕಾಯ್ದೆಯ ಪ್ರಕಾರ, ಯಾವುದೇ ಅಪ್ರಾಪ್ತ ವಯಸ್ಕನನ್ನು ವಯಸ್ಸಿನ ಪುರಾವೆಯಿಲ್ಲದೆ ಜೈಲಿಗೆ ಕಳುಹಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಅನ್ಯಾಯದಲ್ಲಿ ಪೊಲೀಸರನ್ನು ಬೆಂಬಲಿಸುವ ಮೂಲಕ ನ್ಯಾಯಾಲಯ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ.

ಕುಟುಂಬಸ್ಥರ ಪ್ರಕಾರ, ಅಮಾನ್‌ಗೆ 14 ವರ್ಷ ತುಂಬಿಲ್ಲ. ಆಧಾರ್ ಕಾರ್ಡ್ ವಿವರಗಳು ಆತನ ಜನ್ಮ ದಿನಾಂಕವನ್ನು 2006 ನವೆಂಬರ್ 21 ಎಂದು ತೋರಿಸುತ್ತದೆ. ಆತನ ತಾಯಿ ರಬಿಯಾ ಹತ್ತಿರದ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ತಂದೆ ಸರ್ವಾರ್ ಅಲಿ ಚಾಲಕರಾಗಿ ದುಡಿಯುತ್ತಿದ್ದಾರೆ. ಬಡತನದಿಂದಾಗಿ, 5ನೇ ತರಗತಿಯವರೆಗೆ ಓದಿದ ನಂತರ ಅಮಾನ್ ಶಾಲೆಯನ್ನು ತೊರೆದಿದ್ದಾನೆ.
ಬಂಧನದ ಬಗ್ಗೆ ಆರೋಪಿಗಳ ಕುಟುಂಬಕ್ಕೆ ಮಾಹಿತಿ ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಆದರೆ ಇಲ್ಲಿ ಅಮಾನ್‌ನನ್ನು ವಿಚಾರಣೆಗೆ ಕಳುಹಿಸಿದಾಗಲೂ ಮಾಹಿತಿ ನೀಡಿಲ್ಲ. ಇದು ಪೊಲೀಸರ ಕಡೆಯಿಂದ ಮತ್ತೊಂದು ಕಾನೂನು ಉಲ್ಲಂಘನೆಯಾಗಿದೆ. ತನ್ನನ್ನು ವಕೀಲ ಎಂದು ಗುರುತಿಸಿಕೊಂಡಿರುವ ಅಪರಿಚಿತ ವ್ಯಕ್ತಿಯೊಬ್ಬರು ಅಮಾನ್ ಬಂಧನವಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ. ಅದಕ್ಕೂ ಮೊದಲು ಪೊಲೀಸರಿಂದ ಯಾವುದೇ ಸಂವಹನ ನಡೆದಿಲ್ಲ ಎಂದು ರಬಿಯಾ ಹೇಳಿದ್ದಾರೆ.
ವಕೀಲ ಅಬ್ದುಲ್ ಗಫ್ಫಾರ್‌ರವರು ರಬಿಯಾರಿಗೆ ಕಾನೂನು ನೆರವನ್ನು ನೀಡುತ್ತಿದ್ದಾರೆ. ಪ್ರಸ್ತುತ ಅವರು ದೆಹಲಿ ಗಲಭೆ ಸಂತ್ರಸ್ತರಿಗೆ ಕಾನೂನು ನೆರವು ನೀಡುತ್ತಿದ್ದಾರೆ.

ಮೊದಲ ವಿಚಾರಣೆಗೆ ಹಾಜರಾದ ದಿನ ಅಬ್ದುಲ್ ಗಫ್ಫಾರ್‌ರವರು ಕಾರ್‌ಕಾರ್ಡೂಮಾ ನ್ಯಾಯಾಲಯದಲ್ಲಿ ಅಮಾನ್‌ನನ್ನು ಭೇಟಿ ಮಾಡಿದ್ದಾರೆ. ಅಮಾನ್ ವಿರುದ್ಧದ ಎಫ್‌ಐಆರ್ ವಿವರಗಳನ್ನು ವಕೀಲ ಅಬ್ದುಲ್‌ರವರು ಕೋರಿದಾಗ, ಪ್ರಕರಣದ ಉಸ್ತುವಾರಿ ಅಧಿಕಾರಿ ವಿಪಿನ್ ಕುಮಾರ್ ತೆವ್ತಿಯಾ, ‘‘ಅಮಾನ್ ಉತ್ತರಿಸಿದ ಅದೇ ಹೆಸರು, ವಿಳಾಸ, ವಯಸ್ಸು ಮತ್ತು ಇತರ ವಿವರಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ’’ ಎಂದು ಹೇಳಿದ್ದಾರೆ.
ಈ ಆರೋಪವನ್ನು ನಿರಾಕರಿಸಿರುವ ಅಮಾನ್ ತಾಯಿ ರಬಿಯಾ, ‘‘ತನ್ನ ವಯಸ್ಸನ್ನು ತಪ್ಪಾಗಿ ದಾಖಲಿಸುವಂತೆ ಪೊಲೀಸರು ಆತನನ್ನು ಬೆದರಿಸಿರಬಹುದು’’ ಎಂದು ಆರೋಪಿಸಿದ್ದಾರೆ.
ಅಂತೂ ಅಪ್ರಾಪ್ತ ವಯಸ್ಕ ಅಮಾನ್ ಈಗ ಜೈಲಿನಲ್ಲಿದ್ದಾನೆ. ಸಂತ್ರಸ್ತರನ್ನು ಉದ್ದೇಶಿಸಿ ಸಾಮಾಜಿಕ ಸಂಸ್ಥೆಗಳ ಭಾಗವಾಗಿ ಕೆಲಸ ಮಾಡುವ ವಕೀಲರು, ಅಮಾನ್ ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತಾನೆ ಎಂದು ರಬಿಯಾರಿಗೆ ಭರವಸೆ ನೀಡಿದ್ದಾರೆ. ಗಲಭೆಯ ಸಂದರ್ಭದಲ್ಲಿ ಗಲಭೆಕೋರರಿಗೆ ನಿರ್ಭಯವಾಗಿ ಕಾರ್ಯನಿರ್ವಹಿಸಲು ದೆಹಲಿ ಪೊಲೀಸರು ಸಂತ್ರಸ್ತರ ವಿರುದ್ಧ ಏಕಪಕ್ಷೀಯವಾಗಿ ನಿಂತಿದ್ದಾರೆ ಎಂಬುದು ಅಮಾನ್‌ನ ಪ್ರಕರಣದಿಂದ ಬಹಿರಂಗಗೊಳ್ಳುತ್ತದೆ.