‘‘ಬೇಟಿ ಬಚಾವೋ, ಬೇಟಿ ಪಡಾವೋ’’ ಯೋಜನೆ: ಬಹುಪಾಲು ನಿಧಿಯನ್ನು ಜಾಹೀರಾತಿಗೆ ವೆಚ್ಚ!

0
20

ಹೊಸದಿಲ್ಲಿ: ‘‘ಬೇಟಿ ಬಚಾವೋ, ಬೇಟಿ ಪಡಾವೊ’’ ಯೋಜನೆ ನಿಧಿಯ ಬಹುಪಾಲನ್ನು ಜಾಹೀರಾತಿಗೆ ವೆಚ್ಚ ಮಾಡಲಾಗಿದೆ ಎಂದು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ಒಪ್ಪಿಕೊಂಡಿದೆ.
ಈ ಯೋಜನೆಗೆ ಕಳೆದ ಮೂರು ವರ್ಷಗಳಲ್ಲಿ ಬಜೆಟ್ ಮಂಜೂರು ಹಾಗೂ ವೆಚ್ಚದ ಕುರಿತ ವಿವರ, 2020ರಲ್ಲಿ ಹಣ ಮಂಜೂರು ಮಾಡುವಲ್ಲಿ ಇಳಿಕೆಯಾಗಿದೆಯೇ? ಹಾಗೂ ಈ ಯೋಜನೆಯ ಪ್ರಚಾರಕ್ಕೆ ಖರ್ಚು ಮಾಡಲಾದ ನಿಧಿಯ ಪ್ರಮಾಣದ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಮುಹಮ್ಮದ್ ನದೀಮುಲ್ ಹಕ್ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ‘‘ಬೇಟಿ ಬಚಾವೋ, ಬೇಟಿ ಪಡಾವೋ’’ ಯೋಜನೆ ಬಗ್ಗೆ ಚಕಿತಗೊಳಿಸುವ ಅಂಕಿಅಂಶಗಳನ್ನು ನೀಡಿದೆ.

ಈ ಅಂಕಿಅಂಶದ ಪ್ರಕಾರ, 2016-17ರಲ್ಲಿ 43 ಕೋಟಿ ರೂ. ಅನುದಾನ ಮಂಜೂರಾಗಿದ್ದು, 32.7 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ 29.79 ಕೋಟಿ ರೂ.ವನ್ನು ಮಾಧ್ಯಮ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿತ್ತು. 2017-18ರಲ್ಲಿ 200 ಕೋಟಿ ರೂ. ಮಂಜೂರಾಗಿದ್ದು, 169 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ35 ಕೋಟಿ ರೂ. ವನ್ನು ಮಾಧ್ಯಮ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿತ್ತು. 2019-20ರಲ್ಲಿ 280 ಕೋಟಿ ರೂ. ಮಂಜೂರಾಗಿದ್ದು, 244.92 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ 160.13 ಕೋಟಿ ರೂ. ಮಾಧ್ಯಮ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿತ್ತು.