ದಿಲ್ಲಿ : ಮರುಕಳಿಸಿದ ಗುಜರಾತ್ ಹತ್ಯಾಕಾಂಡ

0
121

-ಶಿಹಾಬ್ ಬಿ. ಎಂ

ಫೆಬ್ರವರಿ 24ರ ಸೋಮವಾರದ ಮಧ್ಯಾಹ್ನದ ವೇಳೆ ಗೆಳೆಯರನ್ನು ಭೇಟಿಯಾಗಲು ಮನೆಯಿಂದ ಹೊರಟೆ. ಅಲ್ಲಿಗೆ ತಲುಪಿದ ತಾಸುಗಳ ನಂತರ ಗೆಳೆಯ ಹೇಳಿದ: ‘‘ನಿನ್ನೆ ಜಫ್ರಾಬಾದ್‌ನಲ್ಲಿ ನಡೆದ ಸಿಎಎ ಬೆಂಬಲಿಗರ ಕಲ್ಲೇಟು, ಆಕ್ರೋಶಗಳು ಚಾಂದ್ ಬಾಗ್, ಭಜನ್‌ಪುರ್, ಆಗರ್‌ವಾಲ್ ಸ್ಟ್ರೀಟ್ ಮೊದಲಾದ ಪ್ರದೇಶಗಳಲ್ಲೂ ಮುಂದುವರಿದಿವೆ. ಆದ್ದರಿಂದ ನೀವು ಇಂದು ಇಲ್ಲಿಂದ ಹೋಗದೇ ಇರುವುದು ಉತ್ತಮ…’’

‘‘ಮನೆಯಲ್ಲಿ ಮಕ್ಕಳು ಯಾರೂ ಇಲ್ಲ. ನನಗೆ ಅಲ್ಲಿಗೆ ತಲುಪಲೇ ಬೇಕು’’ ಎಂದು ಹೇಳಿ ಮನೆಯ ಕಡೆಗೆ ತೆರಳಲು ದಾರಿ ಹಿಡಿದೆ.
ಕರಾವಲ್ ನಗರ್ ಮುಖ್ಯರಸ್ತೆ ದಾಟಿ ಅಗರ್‌ವಾಲ್ ಸ್ಟ್ರೀಟ್‌ಗೆ ಹೆಜ್ಜೆ ಇಟ್ಟಾಗ ಕಲ್ಲುಗಳು, ಕಬ್ಬಿಣದ ರಾಡುಗಳು, ಪೆಟ್ರೋಲ್ ಕ್ಯಾನ್‌ಗಳೊಂದಿಗೆ ಹಿಂದುತ್ವ ಗುಂಪೊಂದು ಆ ಗಲ್ಲಿಯ ಒಳಗೆ ಗುಂಪಾಗಿ ನಿಂತಿರುವುದನ್ನು ಕಂಡೆನು. ಅವರ ಮಧ್ಯೆ ನಿರ್ಭೀತನಾಗಿ ನಾನು ಮುಂದಕ್ಕೆ ಸಾಗಿದೆ. ‘ಆಗ್ ಲಗಾದೋ ಮುಲ್ಲಾಕೋ…’ (ಮುಲ್ಲಾನಿಗೆ ಬೆಂಕಿ ಹಚ್ಚಿರಿ) ಎಂಬಿತ್ಯಾದಿ ಆಕ್ರೋಶಗಳು ಕೇಳಿ ಬರುತ್ತಿದ್ದವು. ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಹೋಮಿಯೋಪತಿ ಡಾಕ್ಟರ್ ಮುಹಮ್ಮದ್ ಶಮೂನ್ ಸಾಹೇಬ್ ಈಶಾನ್ಯ ಗಲಭೆಯ ಕುರಿತು ಮಾತನಾಡುವಾಗ ಹಂಚಿಕೊಂಡ ಅನುಭವಗಳು ಈ ರೀತಿ ಇದ್ದವು.

ಫೆಬ್ರವರಿ 23ರಂದು ಸಂಜೆ ಜಾಫ್ರಾಬಾದ್‌ನಿಂದ ಸಿಎಎ, ಎನ್‌ಆರ್‌ಸಿ ಬೆಂಬಲಿಗರು ಮೆರವಣಿಗೆಯೊಂದಿಗೆ ಬಂದು ಪೊಲೀಸರ ಮುಂದೆಯೇ ಹಿಂಸಾಚಾರದಲ್ಲಿ ತೊಡಗಿದರು. ನಂತರ ಮೌಜುಪುರ್, ಭಜನ್‌ಪುರ್, ಕಜುರಿಖಾಸ್, ಚಾಂದ್ ಬಾಗ್, ಕಜೂರಿಚೌಕ್, ಶಿವ್ ವಿಹಾರ್, ಮುಸ್ತಫಾ ಬಾದ್, ಯಮುನಾ ವಿಹಾರ್ ಸೇರಿದಂತೆ ಒಟ್ಟು ಈಶಾನ್ಯ ದಿಲ್ಲಿಯನ್ನು ಹಿಂಸಾಕೂಪವಾಗಿ ಮಾರ್ಪಡಿಸಿದರು. ಕೇಂದ್ರ ಸಹಾಯಕ ಹಣಕಾಸು ಸಚಿವ ಅನುರಾಗ್ ಠಾಕೂರ್, ಆಮ್ ಆದ್ಮಿ ಪಾರ್ಟಿಯ ಮಾಜಿ ಶಾಸಕ ಹಾಗೂ ಸದ್ಯ ಬಿಜೆಪಿಯ ನಾಯಕನಾದ ಕಪಿಲ್ ಮಿಶ್ರಾ, ಪರ್ವೇಶ್ ಶರ್ಮಾ ಮೊದಲಾದವರು ಸೇರಿದ ನಾಯಕರ ನಿರಂತರ ದ್ವೇಷ ಭಾಷಣಗಳು ಮತ್ತು ಗಲಭೆಗೆ ನೀಡಿದ ಪ್ರಚೋದನೆಯು ದಿಲ್ಲಿಯನ್ನು ಗಲಭೆಯ ಭೂಮಿಯನ್ನಾಗಿ ಮಾರ್ಪಡಿಸಿತು.
‘ದೇಶ್ ಕೆ ಗದ್ದಾರೋಂಕೋ… ಗೋಲಿಮಾರೋ… ಸಾಲೋಂಕೋ…, ಜೈ ಶ್ರೀರಾಮ್…, ವಂದೇ ಮಾತರಂ…’ ಮೊದಲಾದ ಘೋಷಣೆಗಳನ್ನು ಕೂಗುತ್ತಾ ಸಂಘಪರಿವಾರದ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್, ಕೋವಿ, ಮಚ್ಚು, ರಾಡ್‌ಗಳೊಂದಿಗೆ ದಿಲ್ಲಿಯ ಮುಸ್ಲಿಮ್ ಗಲ್ಲಿಗಳಿಗೆ ನುಗ್ಗಿದರು. ಹಲವೆಡೆ ಸಹಜವಾಗಿ ಪ್ರತಿಕ್ರಿಯೆಗಳು ಎದುರಾದಾಗ, ಪೊಲೀಸರು ದುಷ್ಕರ್ಮಿಗಳಿಗೆ ಬೆಂಗಾವಲಾಗಿ ನಿಂತರು.

ಮುಸ್ತಫಾ ಬಾದ್, ಚಾಂದ್ ಬಾಗ್‌ನಲ್ಲಿ ಪೊಲೀಸರು ಮುಸ್ಲಿಮರಿಗೆ ನೇರವಾಗಿ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಹೆಚ್ಚಿನ ಜನರು ಗುಂಡೇಟಿನಿಂದ ಪ್ರಾಣ ಕಳೆದುಕೊಂಡರು ಎಂದು ಜಿಟಿಪಿ ಆಸ್ಪತ್ರೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕೆಲವು ರಾಷ್ಟ್ರೀಯ ಮಾಧ್ಯಮಗಳು ಮಾಡಿದ ವರದಿಗಳು ಈ ವಿಚಾರವನ್ನು ಪುಷ್ಟೀಕರಿಸುತ್ತವೆ.
ಈ ಮಧ್ಯೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಸ್.ಮುರಳೀಧರ್‌ರವರು ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ, ಅಭಯ್ ವರ್ಮಾ ಮೊದಲಾದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ತಕ್ಷಣ ಕ್ರಮಕೈಗೊಳ್ಳಲು ದಿಲ್ಲಿಗೆ ಪೊಲೀಸರಿಗೆ ಆದೇಶಿಸಿದರು. ಆದರೆ ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ಅವರನ್ನು ರಾತ್ರೋರಾತ್ರಿ ಹರ್ಯಾಣ-ಪಂಜಾಬ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತು.

ಟ್ಯಾಕ್ಸಿ ಚಾಲಕನ ಹೇಳಿಕೆ:
ಫೆಬ್ರವರಿ 26ರ ಬುಧವಾರದಂದು ನೋಯ್ಡ ಕಡೆಗೆ ಹೋಗುವುದರ ಮಧ್ಯೆ ಜಾಫ್ರಾಬಾದ್‌ನ ನಿವಾಸಿಯಾದ 30ರ ಹರೆಯದ ಟ್ಯಾಕ್ಸಿ ಚಾಲಕ ಹೇಳಿದ್ದು ಈ ರೀತಿ ಇದೆ:
‘‘ರಾತ್ರಿಯ ವೇಳೆಯಲ್ಲೂ ನಾನು ನಿದ್ರಿಸದೇ ಕಾವಲು ನಿಂತಿದ್ದೆ. ಅವರು ಎರಡೆರಡು ಬಾರಿ ನಮ್ಮ ಗಲ್ಲಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ನಾವು ಕಾವಲು ನಿಂತಿದ್ದನ್ನು ಕಂಡಾಗ ಮರಳಿ ಹೋದರು. ಹೆಚ್ಚು ಕಡಿಮೆ ಮುಸ್ಲಿಮರು ಕಡಿಮೆ ಜನಸಂಖ್ಯೆಯಿರುವ ಗಲ್ಲಿಗಳಲ್ಲಿ ಪೊಲೀಸರ ನೆರವಿನೊಂದಿಗೆ ಸಂಘಪರಿವಾರದ ಭಯೋತ್ಪಾದಕರು ಅಟ್ಟಹಾಸ ಮೆರೆದರು. ಆದಾಗ್ಯೂ, ಮುಸ್ತಫಾಬಾದ್‌ನ ಕೆಲವೆಡೆಗಳಲ್ಲಿ ಸ್ಥಳೀಯರು ಆಕ್ರಮಣಕಾರರ ವಿರುದ್ಧ ಸೆಟೆದು ನಿಂತಿದ್ದರು. ಕೆಲವೆಡೆಗಳನ್ನು ಹೊರತುಪಡಿಸಿದರೆ ಎಲ್ಲೂ ದಾಳಿ ಏಕಪಕ್ಷೀಯವಾಗಿರಲಿಲ್ಲ. ಆದರೆ ಅವರು ಅಂಗಡಿ, ಮನೆಗಳನ್ನು ಬೆಂಕಿ ಇಟ್ಟು ನಾಶಪಡಿಸಿದರು. ನೋಡಿ… ತಲೆ, ಎದೆ, ಕೈ, ಹೊಟ್ಟೆ, ಕಾಲುಗಳಿಗೆ ಗುಂಡೇಟು ಬಿದ್ದಿದೆ. ಇನ್ಶಾ ಅಲ್ಲಾಹ್, ನನಗೆ ಭಯವಿಲ್ಲ. ಎಂದಾದರೂ ಒಂದು ದಿನ ನಾವು ಮರಣ ಹೊಂದುತ್ತೇವೆ. ಆದ್ದರಿಂದ ನಾವಂತೂ ಪ್ರತಿರೋಧಿಸಿಯೇ ತೀರುತ್ತೇವೆ ಎಂಬ ದೃಢ ನಿರ್ಧಾರದಲ್ಲಿದ್ದೇವೆ.’

‘ಸ್ಥಳೀಯ ಹಿಂದೂಗಳ ಮನೆಗಳಲ್ಲಿ ಭಯಭೀತರಾಗಿರುವ ನನ್ನ ಗೆಳೆಯರ ಸಹಿತ ಇರುವ ಅವರ ಮನೆಗಳಿಗೆ ತೆರಳಿ ತಾಯಂದಿರನ್ನು, ಸಹೋದರಿಯರನ್ನು ಕಂಡು ಭಯಪಡಬೇಡಿ. ಇಲ್ಲಿ ಯಾರೂ ನಿಮ್ಮ ಮೇಲೆ ದಾಳಿ ನಡೆಸಲಾರರು ಎಂದು ಅವರಿಗೆ ಆತ್ಮವಿಶ್ವಾಸವನ್ನು ನೀಡಲು ನಮಗೆ ಸಾಧ್ಯವಾಗಿದೆ. ಮಾತ್ರವಲ್ಲ, ಕೇವಲ ನನ್ನ ಗಲ್ಲಿಯೊಂದರಲ್ಲೇ ನಾಲ್ಕು ದೇವಸ್ಥಾನಗಳಿವೆ. ಯಾವುದೇ ದೇವಸ್ಥಾನವೂ ದಾಳಿಗೊಳಗಾಗಲಿಲ್ಲ. ಮುಸ್ತಫಾಬಾದ್‌ನಲ್ಲಿ ಅವರು ಮಾಡಿದ ಆಕ್ರಮಣಗಳು ಪೊಲೀಸರ ನೆರವಿನೊಂದಿಗೆ ಆಗಿತ್ತು. ಮುಸ್ತಫಾಬಾದ್‌ನಲ್ಲಿ ಅವರು ಪೊಲೀಸರ ಸಹಾಯದೊಂದಿಗೆ ದಾಳಿಯನ್ನು ನಡೆಸಿದರು. ಪೊಲೀಸ್ ಬೆಂಬಲ ಇಲ್ಲದೇ ಇರುತ್ತಿದ್ದರೆ, ಆಕ್ರೋಶಿತ ಗುಂಪು ಅರ್ಧ ಗಂಟೆಯ ಕಾಲವೂ ಆ ರಸ್ತೆಯಲ್ಲಿ ಇರುತ್ತಿರಲಿಲ್ಲ. ಎರಡು ದಿನಗಳ ವರೆಗೂ ವಾಹನವನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಇಂದಷ್ಟೇ ನಾನು ವಾಹನವನ್ನು ಹೊರತೆಗೆದೆ…’

ಗಲಭೆಪೀಡಿತ ಪ್ರದೇಶಗಳ ಸುತ್ತಾಟದ ಮಧ್ಯೆ ಕಾಶ್ಮೀರಿ ಗೇಟ್‌ನಿಂದ ಕಜೂರಿ ಚೌಕ್‌ಗೆ ರಿಕ್ಷಾ ಹಿಡಿದು ತೆರಳುವಾಗ, ಮಾತಿನ ಮಧ್ಯೆ ಕರಾಳ ದಿನಗಳ ಭೀತಿಯು ಆ ಚಾಲಕನ ಮುಖದ ಮೇಲೆ ವ್ಯಕ್ತವಾಗುತ್ತಿತ್ತು. ಅಲ್ಲಿಂದ ಜುಮಾ ನಮಾಝ್ ನಿರ್ವಹಿಸುವ ವೇಳೆ ಇಮಾಮರ ಭಾಷಣದಲ್ಲಿ ಈ ಹಿಂದೆಯೇ ಆಟೋ ಚಾಲಕನ ಬಾಯಿಯಿಂದ ಕೇಳಿದ ‘ಶಹೀದ್ ಬಬ್ಬು ಭಾಯ್’ ಕುರಿತು ತಿಳಿಯುವ ಕುತೂಹಲ ಮೂಡಿತು. ಮಸ್ಜಿದ್‌ನಿಂದ ಹೊರ ಬಂದು ಗಲ್ಲಿಯಲ್ಲಿ ಸುತ್ತಾಡುವ ವೇಳೆ ಸ್ಥಳೀಯ ರಿಕ್ಷಾ ಚಾಲಕ ಹಾಗೂ ಬಬ್ಬು ಭಾಯ್‌ನ ಗೆಳೆಯ ಇಸ್ರಾರ್ ಅಹ್ಮದ್‌ನನ್ನು ಭೇಟಿಯಾದೆವು.

ಶ್ರೀರಾಮ್ ಕಾಲೊನಿಯಲ್ಲಿ ನಡೆದ ಘಟನೆಯ ಕುರಿತು ಇಸ್ರಾರ್ ಅಹ್ಮದ್‌ನ ಬಾಯಿಯಿಂದಲೇ ಕೇಳೋಣ;
‘‘ಅವರು ದಾಳಿ ನಡೆಸಲು ‘ಜೈ ಶ್ರೀರಾಮ್…, ಜೈ ಶ್ರೀರಾಮ್…’ ಎಂದು ಘೋಷಣೆ ಕೂಗುತ್ತಾ ಕಬ್ಬಿಣದ ರಾಡುಗಳಿಂದ ಮತ್ತು ಕಲ್ಲುಗಳೊಂದಿಗೆ ಈ ಗಲ್ಲಿಯನ್ನು ಗುರಿಯಾಗಿಸಿ ಓಡಿ ಬರುತ್ತಿರುವುದನ್ನು ನಾವು ಕಂಡೆವು. ಆ ವೇಳೆಯೂ ಅವರಲ್ಲಿ ಕೆಲವರು ಕಲ್ಲೆಸೆಯುತ್ತಿದ್ದರು. ಹೆಚ್ಚೇನೂ ಯೋಚಿಸದೆ ನಾವೆಲ್ಲರೂ ಗಲ್ಲಿಯನ್ನು ಸಂರಕ್ಷಿಸಲು ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿ ರಸ್ತೆಗಿಳಿದೆವು.
ಈ ಮಧ್ಯೆ ಅಗರ್‌ವಾಲ್ ಸ್ಟ್ರೀಟ್‌ನಿಂದ ಬರುತ್ತಿರುವ ಸಂಘಪರಿವಾರ-ಬಜರಂಗದಳದ ಕಾರ್ಯಕರ್ತರು ಕರೆತಂದ ಬಹಳಷ್ಟು ಮಂದಿ ಅಲ್ಲಿ ಇಳಿಯುತ್ತಿದ್ದರು. ಆ ಹಿಂಸಾಕೋರ ಗುಂಪುಗಳನ್ನು ಕಜೂರಿ ಚೌಕ್ ಯಾನೆ ಜೈ ಶ್ರೀರಾಮ್ ಕಾಲೊನಿ, ಅಗರ್‌ವಾಲ್ ಸ್ಟ್ರೀಟ್ ಎಂಬ ಎರಡು ಗಲ್ಲಿಗಳನ್ನು ಬೇರ್ಪಡಿಸುವ ಕರಾವಲ್ ನಗರ್ ಮುಖ್ಯರಸ್ತೆಯಲ್ಲಿ ಇಳಿಸಿ ಬಿಡುತ್ತಿದ್ದರು.

ನಾವು ಹಿಂಜರಿಯಲಿಲ್ಲ. ಕಾರಣ, ಹಿಂಜರಿದರೆ ನಮ್ಮ ಗಲ್ಲಿಗಳಲ್ಲಿ ಅವರು ನುಗ್ಗಿ ದಾಳಿ ನಡೆಸಿ ರಕ್ತಪಾತ ನಡೆಸುತ್ತಿದ್ದರು ಖಂಡಿತ. ದಶಕಗಳಿಂದ ಹಿಂದೂ-ಮುಸ್ಲಿಮರು ಒಟ್ಟಾಗಿ ಜೀವಿಸುತ್ತಿರುವ ನಮ್ಮ ಗಲ್ಲಿಗಳನ್ನು ಅವರು ಸುಟ್ಟು ನಾಶ ಮಾಡುತ್ತಾರೆ ಎಂಬುದು ನಮಗೆ ತಿಳಿದಿತ್ತು. ಬೇರೇನೂ ಯೋಚಿಸದೆ ನಾವು ಮುಖ್ಯರಸ್ತೆಗಿಳಿದೆವು. ಕೊನೆಗೆ ಅವರು ಹಿಂದಿರುಗಿ ಹೋಗಬೇಕಾಯಿತು. ಅವರ ದಾಳಿಯಲ್ಲಿ ಬಬ್ಬು ಭಾಯ್ ತಲೆ ಏಟು ಬಿದ್ದು ಹುತಾತ್ಮರಾದರು.
ಇಷ್ಟೊಂದು ಕಾಲದ ವರೆಗೆ ಶಾಂತಿಯಿಂದ ಜೀವಿಸಿದ ನಮ್ಮ ಮಧ್ಯೆ ಒಡಕನ್ನು ಉಂಟು ಮಾಡಲು ಅವರು ಪ್ರತ್ನಿಸಿದರು. ಆದರೆ ನವೀನ್, ಸೂರಜ್ ಮತ್ತು ದೀಪಕ್ ಅವರ ಕುಟುಂಬಸ್ಥರು ಇಲ್ಲಿಂದ ಬೇರೆಡೆಗೆ ತೆರಳಬೇಕೆಂದು ಹೇಳಿದಾಗ ‘ನಾವು ಇಲ್ಲಿಯ ವರೆಗೆ ಯಾವುದೇ ತೊಂದರೆಯಿಲ್ಲದೆ ಜೀವಿಸಿಲ್ಲವೇ? ಮಾತ್ರವಲ್ಲ, ನಾವಿಲ್ಲೇ ತುಂಬಾ ಸುರಕ್ಷಿತರು’ ಎಂದು ಅವರು ತಿದ್ದಿದರು. ಅವರನ್ನು ಸಾಕ್ಷಿಯಾಗಿಸಿ ಈ ಮಾತನ್ನು ಹೇಳುವ ವೇಳೆ ಅವರ ಮಧ್ಯೆಯಿರುವ ಸಹೋದರತೆ ಅವರ ಮುಖಗಳಲ್ಲಿ ಪ್ರಕಟಗೊಂಡಿತ್ತು.
‘ಇಲ್ಲಿ ಹಿಂದು-ಮುಸ್ಲಿಮರು ಎಂಬ ಭೇದಭಾವವಿಲ್ಲದೆ ದಶಕಗಳಿಂದ ಜೀವಿಸುತ್ತಿದ್ದೇವೆ. ಈ ಆಕ್ರಮಣದ ವೇಳೆಯಲ್ಲೂ ನಾವು ಒಗ್ಗಟ್ಟಿನಿಂದ ಜಾಗೃತಿಯಿಂದ ಇದ್ದೇವೆ. ಇಲ್ಲಿ ಶೇ.25-30ರಷ್ಟು ಹಿಂದುಗಳಿದ್ದಾರೆ. 10ಕ್ಕಿಂತಲೂ ಅಧಿಕ ದೇವಸ್ಥಾನಗಳಿವೆ. ಅವುಗಳಿಗೆ ಒಂದು ಗೆರೆಯೂ ಬಿದ್ದಿಲ್ಲ ಎಂದು ಅವರು ಒತ್ತಿ ಹೇಳುತ್ತಿದ್ದಾರೆ.’

‘‘ಪೊಲೀಸರು ದಾಳಿಕೋರರಿಗೆ ಕಲ್ಲುಗಳನ್ನು ಹೆಕ್ಕಿ ಕೊಟ್ಟು ನಮ್ಮ ಮೇಲೆ ಎಸೆಯಲು ಹೇಳುತ್ತಿದ್ದರು’’ – ಅವರು ಹೇಳಿದರು. ವಿಡಿಯೋಗಳನ್ನು ನಮಗೆ ಅವರು ತೋರಿಸಿದರು. ಸೂರಜ್‌ನ ಮನೆಯ ಮೇಲೂ ಪೊಲೀಸರು ಅಶ್ರುವಾಯುವನ್ನು ಸಿಡಿಸಿದರು. ಸುಮಾರು 14 ಸುತ್ತು ಅಶ್ರುವಾಯು ಸಿಡಿಸಿದರು ಎಂದು ಅವರು ಹೇಳುತ್ತಾರೆ. ಇಲ್ಲಿ ಹಿಂದುಗಳೂ ಜೀವಿಸುತ್ತಿದ್ದಾರೆ ಎಂದು ಅರಿತುಕೊಂಡೇ ಅವರು ದಾಳಿಯನ್ನು ನಡೆಸಲು ಹೊರಟಿದ್ದಾರೆಯೇ…? ಪೊಲೀಸರಾದರೂ ಅವರ ಚಹಾ, ಬಿಸ್ಕಿಟ್ ಅನ್ನು ತಿಂದು ಅವರೊಂದಿಗೆ ಸೇರಿ ನಮ್ಮ ಮೇಲೆ ಆಕ್ರಮಣವನ್ನು ನಡೆಸುತ್ತಿದ್ದಾರೆ. ಶ್ರೀ ರಾಮ್ ಕಾಲೊನಿಯ ಆ ಸಣ್ಣ ಹಿಂದೂ ಗಲ್ಲಿಯಲ್ಲಿ ನಾವು ಅಲ್ಲಿ ನಡೆದ ಘಟನೆಯ ಗುರಿತು ಮಾತನಾಡುವಾಗ ಸಮೀಪದ ಕರಾವಲ್ ನಗರ್ ರಸ್ತೆಯಲ್ಲಿ ಅರೆ ಸೇನಾ ಪಡೆ ಗಸ್ತು ತಿರುಗುತ್ತಿತ್ತು.

ಮುಸ್ತಫಾಬಾದ್
ಶ್ರೀ ರಾಮ್ ಕಾಲೊನಿಯಿಂದ ಮುಸ್ತಫಾಬಾದ್‌ಗೆ ತೆರಳುವ ಪ್ರಯಾಣದ ಮಧ್ಯೆ ರಸ್ತೆ ಬದಿಯ ದರ್ಗಾವೊಂದು ಸುಟ್ಟುಹೋದ ಸ್ಥಿತಿಯಲ್ಲಿ ಕಂಡಾಗ ಆಟೋ ಚಾಲಕನೊಂದಿಗೆ ನಿಲ್ಲಿಸಲು ಸೂಚಿಸಿದೆ. ದರ್ಗಾ ಮಾತ್ರವಲ್ಲ ಅಂಗಡಿ, ವಾಹನಗಳು ಸುಟ್ಟು ಕರಲಾಗಿ ಹೋಗಿದ್ದವು. ಕೆಲವು ಅಂಗಡಿಗಳಷ್ಟೇ ಅವರ ದಾಳಿ ಮತ್ತು ಬೆಂಕಿಗೆ ಆಹುತಿಯಾಗಿದ್ದವು.
‘‘ಮೂರೂ ಕಡೆಗಳಲ್ಲಿ ಶಟರ್‌ಗಳಿರುವ, ರಸ್ತೆಗೆ ತಾಗಿ ನಿಂತ ಟೈಲ್ಸ್ ಅಳವಡಿಸಿದ್ದ ಆ ದರ್ಗಾವನ್ನು ಸಂಪೂರ್ಣವಾಗಿ ಒಡೆದು ಹಾಕಲು ದುಷ್ಕರ್ಮಿಗಳಿಗೆ ಸಾಧ್ಯವಾಗಿಲ್ಲದಿದ್ದರೂ, ಒಳ ಭಾಗದಲ್ಲಿ ಸಂಪೂರ್ಣವಾಗಿ ಕರಟಿದ ಸ್ಥಿತಿಯಲ್ಲಿ ಕಂಡು ಬಂತು. ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ ಎಂಬುದು ಸ್ಪಷ್ಟ.

ದರ್ಗಾಗೆ ಸೇರಿ ನಿಂತ ಸುಟ್ಟು ಕರಕಲಾದ ಕಬ್ಬಿಣ ಮಾತ್ರ ಬಾಕಿಯಾಗಿ ಇರುವ ಎರಡು ಬೈಕುಗಳು ಇದ್ದವು. ಅದರ ಸಮೀಪವೇ ಕಜೂರಿ ಖಾಸ್ ಪೊಲೀಸ್ ಠಾಣೆ ಇದೆ. ಅದರೊಳಗಿರುವ ಮಂಚಗಳು ಅರ್ಧಕ್ಕಿಂತ ಹೆಚ್ಚು ಸುಟ್ಟು ಹೋಗಿವೆ. ಏರ್ ಕೂಲರ್, ಮೇಜು ಎಲ್ಲವನ್ನೂ ಒಡೆದು ಹಾಕಿ ನಾಶಪಡಿಸಲಾಗಿದೆ.’’ ಪೆಟ್ರೋಲ್ ಬಾಂಬ್ ಎಸೆದ ಅವಶೇಷಗಳು ಅಲ್ಲಿ ಚದುರಿ ಬಿದ್ದಿದ್ದವು.

ಚಾಂದ್ ಬಾಗ್
ಚಾಂದ್ ಬಾಗ್‌ನ ಕಡೆಗೆ ರಸ್ತೆಯ ಇಕ್ಕೆಲಗಳಲ್ಲಿ ಅರೆ ಸೇನಾ ಪಡೆ ಸುತ್ತುವರಿದಿದ್ದವು. ಕಲ್ಲುಗಳು ತುಂಬಿದ್ದ ಆ ರಸ್ತೆಯಲ್ಲಿ ನಾವು ಮುಂದುವರಿದಾಗ ಅನತಿ ದೂರದಲ್ಲಿ ಫಾರೆನ್ಸಿಕ್ ಗುಂಪು ಮತ್ತು ತನಿಖಾ ಏಜೆನ್ಸಿ ಸೇರಿಕೊಂಡು ಮಾಹಿತಿ ಕಲೆಹಾಕುತ್ತಿದ್ದರು. ಅಲ್ಲಿಗೆ ತೆರಳಿ ವಿಚಾರಿಸಿದಾಗ ಐಬಿ ಅಧಿಕಾರಿ ಅಂಕಿತ್ ಶರ್ಮಾರ ಮೃತದೇಹವನ್ನು ಅಲ್ಲಿ ಪತ್ತೆ ಹಚ್ಚಲಾಗಿತ್ತು ಎಂದು ತಿಳಿಯಿತು. ಚಾಂದ್ ಬಾಗ್‌ನಲ್ಲಿ ನಡೆದ ದಾಳಿಯ ತೀವ್ರತೆ ಮತ್ತು ನಾಶ-ನಷ್ಟಗಳನ್ನು ಒಂದೇ ನೋಟದಲ್ಲಿ ತಿಳಿಯಲು ಸಾಧ್ಯವಾಯಿತು.

ಶಿವ್‌ವಿಹಾರ್
ಸಂಜೆ 5ರ ವೇಳೆ ಮುಸ್ತಫಾಬಾದ್‌ನಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ತಲುಪಿದೆವು. ಆ ವೇಳೆ ರಸ್ತೆಯ ಮುಂಭಾಗದಲ್ಲಿರುವ ಶಿವ್ ವಿಹಾರದ ಮುಸ್ಲಿಮರು ಅಲ್ಲಿದ್ದಾರೆ ಎಂದು ತಿಳಿಯಿತು. ಶಿವ್ ವಿಹಾರ್ ನಿವಾಸಿ ಇಲ್ಯಾಸ್‌ನೊಂದಿಗೆ ಮಾತನಾಡಿದಾಗ, ಶಿವ್ ವಿಹಾರ್‌ನಲ್ಲಿರುವ ಸಂತ್ರಸ್ತರನ್ನು ಭೇಟಿಯಾಗುವ ಆಲೋಚನೆಯನ್ನು ಕೈಬಿಟ್ಟೆವು. ಯಾಕೆಂದರೆ, ಭದ್ರತಾ ಪಡೆಯ ಸಹಾಯವಿಲ್ಲದೆ ಶಿವ್ ವಿಹಾರ್‌ಗೆ ಭೇಟಿ ನೀಡುವುದು ಅಪಾಯಕಾರಿ ಎಂದು ಆತ ಹೇಳಿದರು. ‘ಯಾವುದೇ ಮಾಧ್ಯಮದ ಮಂದಿ ಇಲ್ಲಿಯ ವರೆಗೆ ಆ ಕಡೆ ತೆರಳಿಲ್ಲ. ಆ ಕ್ಷಣದಲ್ಲೂ ಆಕ್ರಮಣಕಾರರು ಅಲ್ಲಿ ಬೀಡುಬಿಟ್ಟಿದ್ದಾರೆಂಬ ಅಳಲನ್ನು ತೋಡಿಕೊಂಡನು. ನಂತರ ನಾವು ಮುಸ್ತಫಾಬಾದ್‌ನ ಶಿಬಿರಕ್ಕೆ ವಾಪಸಾದೆವು.
ಅಲ್ಲಿ ಇಮಾಮ್ಸ್ ಕೌನ್ಸಿಲ್‌ನ ನಾಯಕತ್ವದಲ್ಲಿ ಒಂದು ಗುಂಪು ಶಿವ್ ವಿಹಾರ್‌ನ ಘಟನಾವಳಿಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದರು. ಶಿವ್ ವಿಹಾರ್‌ನ ಮುಸ್ಲಿಮ್ ಗಲ್ಲಿಗಳಿಗೆ ‘ಜೈ ಶ್ರೀರಾಮ್…’ ಘೋಷಣೆ ಕೂಗುವ ದುಷ್ಕರ್ಮಿಗಳು ಬರುವುದನ್ನು ಕಂಡ ತಕ್ಷಣ ಅಲ್ಲಿನ ಮನೆಮಂದಿ ಪೊಲೀಸರೊಂದಿಗೆ ಸಹಾಯಕ್ಕಾಗಿ ಕಾಡಿಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಅವರು ಅಲ್ಲಿಂದ ಪಾರಾದರು ಎಂದು ಹೇಳಿದರು.

‘‘ನಮ್ಮೆಲ್ಲರ ಮನೆಗಳನ್ನು ನಿನ್ನೆಯೂ ಇಂದೂ ಅವರು ಧ್ವಂಸಗೊಳಿಸಿದ ನಂತರ ಸುಟ್ಟು ಹಾಕಿರಬಹುದು. ಆದರೆ ಅದರ ಕುರಿತು ನಮಗೆ ಯಾವುದೇ ದುಃಖವಿಲ್ಲ. ಆದರೆ ನಮ್ಮ ಎರಡು ಮಸ್ಜಿದ್‌ಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಸುಟ್ಟು ಹಾಕಿದರು. ಇದೀಗ ಪೊಲೀಸರ ರಕ್ಷಣೆಯೊಂದಿಗೆ ಅವರು ಮಸ್ಜಿದ್‌ನೊಳಗೆ ಕುಳಿತು ಮದ್ಯಪಾನ ನಡೆಸುತ್ತಿದ್ದಾರೆ!’’ ಎಂದು ಹೇಳಿ ವೃದ್ಧರೋರ್ವರು ಬಿಕ್ಕಳಿಸಿದರು.

ಗಲಭೆಯ ಪರಿಣಾಮ
ಈಶಾನ್ಯ ದಿಲ್ಲಿಯಲ್ಲಿ ನಾಲ್ಕು ದಿನಗಳ ಕಾಲ ಮುಂದುವರಿದ ಮುಸ್ಲಿಮ್ ವಂಶ ಹತ್ಯೆಯ ಭಯಾನಕ ದೃಶ್ಯಗಳು ವಾಸ್ತವದಲ್ಲಿ ಹಿಂದುತ್ವವಾದಿಗಳು ಪೂರ್ವನಿಯೋಜಿತವಾಗಿ ನಡೆಸಿದ್ದರು ಎಂಬುದಕ್ಕೆ ಬಾಕಿಯುಳಿದ ಕುರುಹುಗಳೆಲ್ಲವೂ ಸಾಕ್ಷಿ ಹೇಳುತ್ತಿವೆ. ಮಾತ್ರವಲ್ಲ, ದಿಲ್ಲಿ ಪೊಲೀಸರ ಮುಸ್ಲಿಮ್ ವಿರೋಧಿ ನಿಲುವನ್ನೂ ಅದು ಬಹಿರಂಗಪಡಿಸುತ್ತದೆ.
ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಪರ್ವೇಶ್ ಶರ್ಮಾ ಸಹಿತ ಇರುವ ಆರೋಪಿಗಳು ಆರಾಮವಾಗಿದ್ದಾರೆ. ಐಬಿ ಆಧಿಕಾರಿ ಅಂಕಿತ್ ಶರ್ಮಾರ ಕೊಲೆಪಾತಕವನ್ನು ಎತ್ತಿ ತೋರಿಸಿ, ಆಮ್ ಆದ್ಮಿ ಪಾರ್ಟಿಯ ಕೌನ್ಸಿಲರ್ ಆಗಿದ್ದ ತಾಹಿರ್ ಹುಸೈನ್‌ರನ್ನು ಆರೋಪಿಯನ್ನಾಗಿಸುವ ಪ್ರಯತ್ನ ಮತ್ತೊಂದೆಡೆ ನಡೆಯುತ್ತಿದೆ. ಮೊದಲ ಹಂತದಲ್ಲೇ ತಾಹಿರ್ ಹುಸೈನ್‌ರನ್ನು ಅಮಾನತುಗೊಳಿಸಿ ಆಮ್ ಆದ್ಮಿಯು ಸಂಘಪರಿವಾರದೊಂದಿಗಿರುವ ತನ್ನ ಸಂಬಂಧವನ್ನು ಸಾಬೀತುಪಡಿಸಿದೆ. ಮುಂದುವರಿದು ಆತನ ಮನೆ, ಫ್ಯಾಕ್ಟರಿಗೆ ಮೊಹರು ಒತ್ತಲಾಗಿದೆ. ದಿಲ್ಲಿ ಸರಕಾರದ ಫಾರೆನ್ಸಿಕ್ ಅಧಿಕಾರಿಗಳು, ಕೇಂದ್ರ ತನಿಖಾ ತಂಡ ಮತ್ತು ರಾಷ್ಟ್ರೀಯ ಹಿಂದುತ್ವ ಚಾನೆಲ್‌ಗಳು ಸೇರಿ ತಾಹಿರ್ ಹುಸೈನ್‌ರನ್ನು ಗಲಭೆಯ ‘ಮಾಸ್ಟರ್‌ಮೈಂಡ್’ ಆಗಿ ಚಿತ್ರೀಕರಿಸುತ್ತಿವೆ.

ದಿಲ್ಲಿ ಹಿಂದಿನ ಸ್ಥಿತಿಗೆ ಮರಳುತ್ತಿದೆ ಎಂದು ಮಾಧ್ಯಮಗಳು ಹೇಳುತ್ತಿರುವ ವೇಳೆಯೂ 13, 14ರ ಹರೆಯದ ಹೆಣ್ಮಕ್ಕಳು ಸಹಿತ ಕಾಣೆಯಾದ ನೂರಾರು ಮಂದಿ ಜನರ ಕುರಿತು ಇಲ್ಲಿಯ ವರೆಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಕಾಣೆಯಾದವರಲ್ಲಿ ಕೆಲವರ ಮೃತದೇಹಗಳು ಗಟಾರಗಳಿಂದ ಇದೀಗಲೂ ದೊರಕುತ್ತಿವೆ. ಶಿವ್ ವಿಹಾರ್‌ಗೆ ಇಂದಿಗೂ ಬಲಿಪಶುಗಳಿಗೆ ಪ್ರವೇಶಿಸಲು ಸಾಧ್ಯವಾಗದ ರೀತಿಯಲ್ಲಿ ಪೊಲೀಸರು ಮತ್ತು ಹಿಂದುತ್ವವಾದಿಗಳು ಸುತ್ತುವರಿದಿದ್ದಾರೆ.
ಮೃತದೇಹಗಳನ್ನು ಸಂಬಂಧಿಕರಿಗೆ ಕಾಣಲು ಮತ್ತು ಮರಣೋತ್ತರ ಪರೀಕ್ಷೆ ನಡೆಸಿ ದಫನಗೈಯ್ಯಲು ಅನುಮತಿ ದೊರಕಿಲ್ಲ. ಸಾವಿರಾರು ಮನೆ, ಅಂಗಡಿಗಳು ದಾಳಿಗೊಳಗಾಗಿಯೂ ಪ್ರತಿರೋಧಿಸಿದವರ ಹೆಸರು ವಿವರಗಳನ್ನು, ಫಾರೆನ್ಸಿಕ್ ವರದಿಗಳನ್ನು ಕಲೆ ಹಾಕಲು ದಿಲ್ಲಿ ಪೊಲೀಸ್ ಮತ್ತು ಕೇಜ್ರೀವಾಲ್ ಸರಕಾರವಿದೆ. ದಾಳಿಗೊಳಗಾದವರಿಗೆ ಮುಸ್ತಫಾಬಾದ್‌ನ ಅಲ್ ಹಿಂದ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಈ ದಾಳಿಗೊಳಗಾದ ಸಂತ್ರಸ್ತರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ನಿರಾಶ್ರಿತರ ಶಿಬಿರಗಳಿಂದ ಯಾರೂ ತಮ್ಮ ಮನೆಗಳಿಗೆ ಹಿಂದಿರುಗಿಲ್ಲ. ಸಂಬಂಧಿಕರ ಮನೆಗೆ ಆಶ್ರಯವನ್ನು ಅರಸಿ ಹೋದವರು ಇನ್ನೂ ವಾಪಸ್ ಬಂದಿಲ್ಲ.