ಸಂವಿಧಾನ ಚರ್ಚೆ: ನಡೆ-ನುಡಿಯ ಆತ್ಮವಂಚನೆ!

0
213

-ಎನ್.ಆರ್.ಕೆ.

‘‘ನಾನು ಕೊಟ್ಟ ಸಂವಿಧಾನ ಎಷ್ಟೇ ಉತ್ಕೃಷ್ಟವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಅಯೋಗ್ಯರಾ ಗಿದ್ದರೆ ಅಂತಹ ಸಂವಿಧಾನ ನಿರರ್ಥಕ.’’ ಸಂವಿಧಾನ ಬರೆದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ಮಾತು ವರ್ತಮಾನಕ್ಕೆ ಎಷ್ಟೊಂದು ಅನ್ವಯಿಸುತ್ತಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ ಎನಿಸುತ್ತದೆ. ಕಾರಣ ಸಂವಿಧಾನ ವಿರೋಧಿ ನಡೆಗಳು, ಆಡಳಿತ ಧೋರಣೆಗಳು, ಪರ್ಯಾಯ ಸಂವಿಧಾನದ ಪ್ರತಿಪಾದನೆ ನಡೆ-ನುಡಿಗಳು ಪ್ರತಿದಿನವೂ ಘಾಸಿಗೊಳಿ ಸುತ್ತಿರುವ ಹೊತ್ತಿನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆಯೊಂದು ನಡೆದಿರುವುದೇ ಒಂದು ವೈರುಧ್ಯ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ವಯಂ ಪ್ರೇರಿತರಾಗಿ ವಿಧಾನಸಭೆ ಅಧಿವೇಶನದಲ್ಲಿ ಸಂವಿಧಾನ ಕುರಿತ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಮಹತ್ವದ ಸಂಗತಿಯಾಗಿದ್ದರೂ ಇದರ ಹಿಂದಿನ ಉದ್ದೇಶದ ಬಗ್ಗೆ ಗುಮಾನಿಗಳಿಂದ ದೂರ ಸರಿಯಲು ಸಾಧ್ಯವಾಗುವುದಿಲ್ಲ. ಆಡಳಿತರೂಢ ಬಿಜೆಪಿಯ ಬಹಳಷ್ಟು ಶಾಸಕರು, ಸಂಸದರುಗಳು ಸಂವಿಧಾನದ ವಿರುದ್ಧ ಜನ್ಮಾಂತರ ದ್ವೇಷವನ್ನು ಕಾರಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದೇ ಪಕ್ಷದಿಂದ ಸ್ಪೀಕರ್ ಹುದ್ದೆಯಲ್ಲಿ ಕುಳಿತಿರುವ ಕಾಗೇರಿ ಅವರು ಸಂವಿಧಾನದ ಬಗ್ಗೆ ಚರ್ಚೆಗೆ ಒಳಪಡಿಸಿರುವುದನ್ನು ಅಷ್ಟು ಸುಲಭವಾಗಿ ಒಪ್ಪಲಾಗದು. ಅಷ್ಟಕ್ಕೂ ಸಂವಿಧಾನದ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸುವ ಅಗತ್ಯವಾದರೂ ಏನಿದೆ? ಎಲ್ಲವೂ ಅಂಗೈನ ಅಂಗಳದಂತೆ ನಿಖರ ಮತ್ತು ಸ್ಪಷ್ಟವಾಗಿದೆ.

ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುತ್ತಲೇ ಗಾಂಧಿಯನ್ನು ಮುಂದಿಟ್ಟುಕೊಂಡು ಹೊರಟಿರುವುದು. ಸಂವಿಧಾನವನ್ನು ನಿರಾಕರಿಸುತ್ತಲೆ ಸಂವಿಧಾನಶಿಲ್ಪಿಬಾಬಾ ಸಾಹೇಬ್ ಅಂಬೇಡ್ಕರ್ ಹೊತ್ತು ಮೆರವಣಿಗೆ ಹೊರಡುವುದು ಎರಡೂ ಈ ಹೊತ್ತಿನ ರಾಜಕೀಯ ಮಾರ್ಜಾಲ ಸಂಚು. ವಿಧಾನಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆಯಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ‘ಸಂವಿಧಾನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದೆ, ಇದನ್ನು ತಡೆಯದೇ ಹೋದರೆ ಸಂವಿಧಾನ ಉಳಿಯುವುದಿಲ್ಲ’ ಎಂದು ಎಚ್ಚರಿಕೆಯ ಮಾತುಗಳನ್ನೆ ಆಡಿದ್ದಾರೆ. ಇದು ಅತ್ಯಂತ ಜಾಣ್ಮೆಯ ಮಾತುಗಳು. ಸಂವಿಧಾನಕ್ಕೆ ಟೈಂ ಬಾಂಬ್ ಇಟ್ಟು ಕಾಲು ಶತಮಾನವೇ ಕಳೆದಿದೆ. ಯಾವಾಗ ಈ ದೇಶದಲ್ಲಿ ಧರ್ಮ, ದೇವರು ಹೆಸರಿನಲ್ಲಿ ಯಾತ್ರೆ, ಜಾತ್ರೆಗಳು ನಡೆದು ಸಾವಿರಾರು ಜನರ ಹೆಣದ ಮೇಲೆ ಅಧಿಕಾರದ ಗದ್ದುಗೆಗೆ ಹತ್ತಿರವಾದರೋ ಅಂದೇ ಸಂವಿಧಾನದ ಬೇರುಗಳಿಗೆ ಕೊಡಲಿ ಹಾಕುವ, ಟೈಂ ಬಾಂಬ್ ಇಡುವ ಕೆಲಸ ಆರಂಭವಾಗಿದೆ. ಅದು ಮುಂದುವರೆದುಕೊಂಡು ಬಂದಿದೆ. ಬಿಜೆಪಿ ಶಾಸಕರುಗಳಾದ ರಾಜೀವ್ ಕುಡಚಿ, ಬಸನಗೌಡ ಪಾಟೀಲ್ ಯತ್ನಾಳ್‌ರಂತವರು ನಿರರ್ಗಳವಾಗಿ ಸಂವಿಧಾನ ಕುರಿತು ಮಾತಾಡಿದ್ದಾರೆ. ಎಂತಹ ವಿಪರ್ಯಾಸವೆಂದರೆ ಸಂವಿಧಾನದ ಉಲ್ಲಂಘನೆ ಆಗಿರುವ, ಮಾಡಿರುವ ಕಣ್ಣೆದುರಿಗಿನ ಯಾವುದನ್ನ್ನೂ ಮುಂದಿಟ್ಟುಕೊಂಡು ಮಾತನಾಡಲಿಲ್ಲ. ಸಂವಿಧಾನಕ್ಕೆ ಧಕ್ಕೆ ಯಾರಿಂದ ಆಗುತ್ತಿದೆ ಎಂಬುದರ ಬಗ್ಗೆ ಅವಲೋಕನದ ಉಸಾಬರಿಗೆ ಹೋಗದೆ, ಭಾಷಣ ಕುಟ್ಟಿ ಕೆಡೆವಿದ್ದಾರೆ. ಅಸಲಿ ಸಂಚುಗಾರರು ಯಾರೆಂಬುದನ್ನು ತೋರಿಸುವ ಸಣ್ಣ ಯತ್ನವೂ ಆಗಲಿಲ್ಲ. ಸಂವಿಧಾನ ಕುರಿತ ಚರ್ಚೆಗಿಂತ ಈ ಹೊತ್ತಿನಲ್ಲಿ ಸಂವಿಧಾನವನ್ನು ಬದ್ಧತೆಯಿಂದ ಅನುಷ್ಠಾನಗೊಳಿಸುವ ಅದರಂತೆ ನಡೆದುಕೊಳ್ಳುವ ಕ್ರಿಯೆ ಮುಖ್ಯವಾಗಿದೆ ಎಂಬ ಕರ್ತವ್ಯ ಪ್ರಜ್ಞೆ ಸತ್ತು ನಾರುತ್ತಿತ್ತು.

ಸಂವಿಧಾನ ಕುರಿತು ನಡೆಯುತ್ತಿರುವ ಚರ್ಚೆ ಗುಣಾತ್ಮಕ ನಿಲುವಿನೊಂದಿಗೆ ತಾರ್ಕಿಕ ಅಂತ್ಯ ಕಾಣಬೇಕಾದರೆ, ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಧರ್ಮದ ಆಧಾರದ ಮೇಲೆ ಸಂವಿಧಾನದ ಮೂಲ ನಿರ್ದೇಶಕ ತತ್ವಗಳಿಗೆ ವಿರುದ್ಧವಾಗಿ ರೂಪಿಸಲ್ಪಟ್ಟಿರುವ ಸಿಎಎ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ನಿರಾಕರಿಸುವ ನಿರ್ಣಯದೊಂದಿಗೆ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕು. ಇಲ್ಲವಾದರೆ ವಿಧಾನಸಭೆಯಲ್ಲಿ ನಡೆದ ಸಂವಿಧಾನ ಕುರಿತ ಚರ್ಚೆ ವ್ಯರ್ಥ ಮತ್ತು ತೋರ್ಗಾಣಿಕೆಯ ನಾಟಕ ಮಾತ್ರವಾಗಿ ಉಳಿಯಲಿದೆ. ಇಂಗ್ಲೆಂಡ್ ನ ಸಂವಿಧಾನ ಮ್ಯಾಗ್ನಕಾರ್ಟ ಎಲ್ಲಾ ಕಾಲದ ಶ್ರೇಷ್ಠ ಸಂವಿಧಾನಿಕ ದಾಖಲೆ ಎಂದು ಕರೆಯಲ್ಪಟ್ಟಿತ್ತು. ಇದನ್ನು ನಿರಂಕುಶ ಸ್ವೇಚ್ಛಾಚಾರದ ಎದುರು ವ್ಯಕ್ತಿ ಸ್ವಾತಂತ್ರದ ಅಡಿಪಾಯ ಎಂದೇ ಬಣ್ಣಿಸಲಾಗುತ್ತದೆ. ಇದಕ್ಕಿಂತಲೂ ಶ್ರೇಷ್ಠ ಸಂವಿಧಾನವೆಂದರೆ ಅದು ಭಾರತದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ. ಈಗಾಗಿರುವ 104 ತಿದ್ದುಪಡಿಗಳನ್ನು ಒಪ್ಪಿಕೊಳ್ಳುತ್ತಲೇ ಅದರ ಮೂಲ ನಿರ್ದೇಶಕ ತತ್ವಗಳ ತಳ ಕುಸಿಯದಂತೆ ನೋಡಿಕೊಂಡು ಬರಲಾಗುತ್ತಿದೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರಕ್ಕಾಗಿ, ವಿಭಜನಾ ಸಿದ್ಧಾಂತಗಳೇ ರಾಜಕೀಯ ಮೌಲ್ಯ ಮತ್ತು ಅಸ್ತ್ರ ಎಂಬಂತೆ ಹೊರಟಿರುವವರು ಈ ಮೂಲ ನಿರ್ದೇಶಕ ತತ್ವಗಳ ಬುಡಕ್ಕೆ ಟೈಂ ಬಾಂಬ್ ಇಟ್ಟು ನುಚ್ಚು ನೂರು ಮಾಡುವ ಷಡ್ಯಂತ್ರವನ್ನು ಹೂಡಿದ್ದಾರೆ. ಸಂವಿಧಾನದ ಉಳಿವೇ ದೇಶದ ಉಳಿವು. ದೇಶವೆಂದರೆ ವ್ಯಕ್ತಿಯಲ್ಲ. ಮಣ್ಣಲ್ಲ. ಅದು ಜನಸಮುದಾಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಚಳವಳಿಯ ಮೂಲಕವಾದರೂ ಸಂವಿಧಾನ ಭಂಜಕರಿಗೆ ಅರ್ಥ ಮಾಡಿಸಬೇಕಾಗಿದೆ.

ಭಾರತದ ಸಾಮಾಜಿಕ ಸಂರಚನೆಯನ್ನು ಅರ್ಥಮಾಡಿಕೊಳ್ಳದೆ ಸಂವಿಧಾನ ಅರ್ಥವಾಗದು, ಭಾರತವನ್ನೇ ಅರಿಯದ ಮಂದಿಗಳೇ ಈಗ ಅಧಿಕಾರದಲ್ಲಿದ್ದು, ಸಂವಿಧಾನದ ಬಗ್ಗೆ ತಪ್ಪುವ್ಯಾಖ್ಯಾನಕ್ಕಿಳಿದಿರುವುದು ಅಪಾಯಕಾರಿಯಾಗಿದೆ. ಸಮಾನತೆ, ಸ್ವಾತಂತ್ರ, ಸಹೋದರತೆಯ ಮಹಾಶಯ ಗಳನ್ನು ಧರಿಸದೆ ನಡೆ ಮತ್ತು ನುಡಿಗೆ ನಂಟೇ ಇಲ್ಲದೆ ಆಡುವ ಮಾತುಗಳು ತನ್ನ ಜನರ ಎದೆಯಲ್ಲಿ ವಿಷವನ್ನಷ್ಟೆ ಬಿತ್ತಬಲ್ಲವು.

ವಿಜಯೇಂದ್ರನೇ ಉತ್ತರಾಧಿಕಾರಿ!?
ರಾಜ್ಯ ಬಿಜೆಪಿಯಲ್ಲಿ ಯಾವುದೇ ಕ್ಷಣದಲ್ಲಾದರೂ ಮುಖ್ಯಮಂತ್ರಿ ಯಡಿಯೂರಪ್ಪಅವರ ಪದಚ್ಯುತಿಗೆ ಕೂಗು ಭುಗಿಲೇಳಬಹುದು. ಯಡಿಯೂರಪ್ಪಅವರಿಲ್ಲದೆ ಬಿಜೆಪಿಗೆ ಬಲವಿಲ್ಲ ಎಂಬ ಮಾತುಗಳೂ ದಿಟವೆನ್ನುವಾಗಲೂ ಅವರನ್ನು ಪದಚ್ಯುತಿಗೊಳಿಸಿ ಪಟ್ಟಾಭಿಷೇಕಗೊಳ್ಳಲು ಬಿಜೆಪಿ ತಲೆಗಳು ಕಾದು ಕುಳಿತಿವೆ. ಪವಿತ್ರಗೊಂಡ ಶಾಸಕರನ್ನೆಲ್ಲಾ ಸಂಪುಟಕ್ಕೆ ಸೇರಿಸಿಕೊಂಡ ಬೆನ್ನಲ್ಲೆ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿರುವ ಸಚಿವ ಸ್ಥಾನ ವಂಚಿತರ ದನಿ ಸಮಯ ನೋಡಿ ಭುಗಿಲೇಳಲು ಕಾಯುತ್ತಿವೆ. ಯಡಿಯೂರಪ್ಪರವರ ಪರವಾಗಿ ಅವರ ಪುತ್ರ ವಿಜಯೇಂದ್ರ ಅವರೆ ಛಾಯಾ ಮುಖ್ಯಮಂತ್ರಿಯಂತೆ ಆಡಳಿತ ನಡೆಸುತ್ತಿರುವುದು ಬಿಜೆಪಿಯ ಎಲ್ಲಾ ಸಚಿವರು, ಶಾಸಕರ ಅಸಮಾಧಾನಕ್ಕೆ ನೆಪವಾಗಿದ್ದರೂ ಅದನ್ನು ಸದ್ಯಕ್ಕೆ ಸಹಿಸಿಕೊಳ್ಳದೆ ಬೇರೆ ದಾರಿಯಿಲ್ಲ.

ಮುಖ್ಯಮಂತ್ರಿ ಯಡಿಯೂ ರಪ್ಪಅವರನ್ನು ಅಧಿಕಾರದಿಂದ ನೇಪಥ್ಯಕ್ಕೆ ಸರಿಸುವ ವಿಫಲ ಯತ್ನಗಳು ನಡೆಯುತ್ತಿರುವುದು ಹೊಸತೇನಲ್ಲ. ಯಡಿಯೂರಪ್ಪ ಅವರಿಗೆ ಆರೋಗ್ಯದ ಸಮಸ್ಯೆಯಿದೆ, ಆಡಳಿತ ನಿರ್ವಹಣೆಯಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂಬುದನ್ನು ಮೂಕರ್ಜಿ ಮೂಲಕ ಪ್ರಚುರಪಡಿಸುವ, ಆ ಮೂಲಕ ಹೈಕಮಾಂಡ್‌ಗೆ ತಿಳಿಸುವ ಯಡಿಯೂರಪ್ಪವಿರೋಧಿ ಪಾಳೆಯದ ಯತ್ನ ಸದ್ಯಕ್ಕೆ ಫಲ ಕೊಟ್ಟಿಲ್ಲ. ಯಡಿಯೂರಪ್ಪಅವರು ಎಲ್ಲವನ್ನೂ ತಾಳ್ಮೆಯಿಂದಲೆ ಗಮನಿಸುತ್ತಾ ರಾಜಕೀಯ ಜಾಣ್ಮೆಯಲ್ಲಿ ಮುಂದುವರಿಯುತ್ತಿದ್ದಾರೆ. ಉಮೇಶ್ ಕತ್ತಿ, ಮಹೇಶ್ ಕುಮಟಳ್ಳಿ ಸೇರಿದಂತೆ ಅನೇಕರ ಅಸಮಾಧಾನವನ್ನು ಸದ್ಯಕ್ಕೆ ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿರುವ ಯಡಿಯೂರಪ್ಪ, ಒಂದು ಹಂತದಲ್ಲಿ ಪಕ್ಷದ ಹೈಕಮಾಂಡ್ ಮತ್ತು ಶಾಸಕರನ್ನು ಸಮತೋಲನವಾಗಿ ನಿಭಾಯಿಸುವಲ್ಲಿ ಎಚ್ಚರಿಕೆಯ ಹೆಜ್ಜೆ ಇಡತೊಡಗಿದ್ದಾರೆ. ಯಡಿಯೂರಪ್ಪಅವರಿಗೆ ವಯೋ ಸಹಜ ಆರೋಗ್ಯದ ವ್ಯತ್ಯಾಸಗಳು ಇದ್ದರೂ ಅವುಗಳನ್ನು ನಿಭಾಯಿಸಿಕೊಂಡು ಹೋಗುವಲ್ಲಿ ತಮ್ಮ ಪುತ್ರನನ್ನು ಪಕ್ಕದಲ್ಲಿರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಹೈಕಮಾಂಡ್‌ಗೂ ಮನವರಿಕೆ ಮಾಡಿಕೊಟ್ಟಿದ್ದು, ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.

ರಾಜ್ಯ ಬಿಜೆಪಿಯ ಪದಾಧಿಕಾರ ಸ್ಥಾನಕ್ಕೂ ಪುತ್ರ ವಿಜೇಯೇಂದ್ರನನ್ನು ಪ್ರತಿಷ್ಠಾಪಿಸುವ ಮೂಲಕ ತಮ್ಮ ಉತ್ತರಾಧಿಕಾರಿಯನ್ನಾಗಿಸುವ ವೇದಿಕೆಯನ್ನೇ ಸಿದ್ಧಪಡಿಸಿರುವ ಯಡಿಯೂರಪ್ಪಅವರು ತಮಗಿರುವ ಲಿಂಗಾಯಿತ ಸಮುದಾಯದ ಬಲವನ್ನು ಮುಂದಿನ ದಿನಗಳಲ್ಲಿ ತಮ್ಮ ಮಗನ ಮೂಲಕ ಕಾಯ್ದಿಟ್ಟುಕೊಳ್ಳಲು ಎಲ್ಲಾ ಸಿದ್ಧತೆಯನ್ನು ಮಾಡಿ ಮುಗಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಅವರನ್ನು ಉಚ್ಛಾಟಿಸಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಈ ಬಾರಿ ಯಡಿಯೂರಪ್ಪಅವರನ್ನು ಸಹಿಸಿಕೊಳ್ಳದೆ ಬೇರೆ ದಾರಿಯಿಲ್ಲ. ಇನ್ನೊಂದು ವರ್ಷ ಮಾತ್ರವೇ ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸುವುದು ಆ ನಂತರ ಅಗ್ರೇಸ್ಸೀವ್ ನಾಯಕನೋರ್ವನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂಬ ಮಾತುಗಳ ನಡುವೆಯೂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಅವಧಿ ಪೂರ್ಣಗೊಳಿಸದೆ ಕುರ್ಚಿ ಬಿಟ್ಟು ಇಳಿಯದಿರಲು ನಿರ್ಧರಿಸಿದ್ದಾರೆ. ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಅಶೋಕ್ ಅವರೆಲ್ಲಾ ಸದ್ಯಕ್ಕೆ ಪರಿವಾರದ ಪಾಲಿಗೆ ಸವಕಲು ನಾಣ್ಯವಾಗಿರುವುದು ಗುಟ್ಟಾಗಿ ಉಳಿದಿಲ್ಲ. ಹಾಗೊಮ್ಮೆ ಯಡಿಯೂರಪ್ಪ ಅವರನ್ನು ಅವಧಿಗೆ ಮುಂಚೆಯೇ ಪದಚ್ಯುತಿಗೊಳಿಸುವ ಯತ್ನಕ್ಕೆ ಕೈ ಹಾಕಿದರೆ ಯಡಿಯೂರಪ್ಪತನ್ನ ಪರ್ಯಾಯ ನಾಯಕನನ್ನಾಗಿ ತಮ್ಮ ಮಗ ವಿಜಯೇಂದ್ರನಿಗೆ ಅಯಕಟ್ಟಿನ ಜಾಗವನ್ನೇ ಕೊಡಬೇಕೆಂಬ ಷರತ್ತು ವಿಧಿಸಿದರೂ ಆಶ್ಚರ್ಯವಿಲ್ಲ.
ರಾಜಕೀಯ ಒಳಧಗೆ ಸ್ಫೋಟಗೊಳ್ಳಲು ಕಾಲಕ್ಕಾಗಿ ಕಾಯುತ್ತಿದೆ.