ಸಂವಿಧಾನ ಪರ-ವಿರೋಧಿಗಳ ಸಂಘರ್ಷ

0
107

ಪೌರತ್ವ ಕಾಯ್ದೆ ವಿರುದ್ಧ ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಕಳೆದ ಎರಡೂವರೆ ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಯು ದೇಶಕ್ಕೆ ಮಾದರಿಯಾಗಿದೆ. ಅಲ್ಲಿನ ಮಹಿಳೆಯರು ತಮ್ಮ ಮನೆಗಳನ್ನು ತ್ಯಾಗ ಮಾಡಿದರು. ಕಠಿಣ ಚಳಿಯನ್ನೂ ಸಹಿಸಿಕೊಂಡರು. ಐನೂರು ರೂಪಾಯಿ ಮತ್ತು ಬಿರಿಯಾನಿಯ ಆರೋಪವನ್ನೂ ಹೊತ್ತುಕೊಂಡರು. ಗೋಡ್ಸೆ ಮಾದರಿಯ ಗುಂಡೇಟನ್ನೂ ಎದುರಿಸಿದರು. ಈ ಮಧ್ಯೆ ಶಾಹೀನ್ ಬಾಗ್‌ನ ಶಾಂತಿಯುತ ಪ್ರತಿಭಟನೆಯು ಬಹಳಷ್ಟು ಜನಪ್ರಿಯವಾಗಿದೆ ಮತ್ತು ದೇಶಾದ್ಯಂತ ಶಾಹೀನ್ ಬಾಗ್‌ಗಳು ಹುಟ್ಟಿಕೊಳ್ಳುತ್ತಿವೆ. ಮಹಿಳೆಯರೇ ನೇತೃತ್ವ ವಹಿಸಿರುವ, ಜಗತ್ತಿನ ಗಮನ ಸೆಳೆದಿರುವ ಮತ್ತು ಸಂಪೂರ್ಣ ಶಾಂತಿಯುತವಾಗಿರುವ ಶಾಹೀನ್ ಬಾಗ್ ಆಂದೋಲವು ದೇಶದ ಬಹುತ್ವದ ಪರಂಪರೆಯನ್ನು ಜಗತ್ತಿಗೇ ಸಾರಿ ಸಾರಿ ಹೇಳುತ್ತಿದೆ. ಈ ಆಂದೋಲನವು ಜಾತ್ಯತೀತ, ಸಂವಿಧಾನ ಪರವಾದ ಮನಸ್ಸುಗಳಲ್ಲಿ ಚೈತನ್ಯವನ್ನು ತುಂಬಿದೆ. ಆದರೆ ಅದೇ ವೇಳೆ ಕೋಮುವಾದಿ ಕ್ಷುದ್ರ ಮನಸ್ಸುಗಳಲ್ಲಿ ಅಸಹನೆಯನ್ನೂ ಸೃಷ್ಟಿಸುವಂತೆ ಮಾಡಿದೆ.

ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಈ ದಿಟ್ಟ ಹೋರಾಟವನ್ನು ದಮನಿಸಲು ಆಡಳಿತ ವರ್ಗವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿವೆ. ಪ್ರತಿಭಟನಾ ವಿರೋಧಿ ಶಕ್ತಿಗಳು ಶಾಹೀನ್ ಬಾಗ್‌ನಲ್ಲಿ ಹಲವು ವಿಧದಲ್ಲಿ ವಾತಾವರಣ ಕೆಡಿಸಲು ಮತ್ತು ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರು. ಆದರೆ ಎಲ್ಲಾ ರೀತಿಯ ಕುತಂತ್ರಗಳು, ಬಲ ಪ್ರಯೋಗಗಳು ವಿಫಲವಾಗುತ್ತಲೇ ಇವೆ. ಇದೀಗ ಈಶಾನ್ಯ ದಿಲ್ಲಿಯಲ್ಲಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ತೀವ್ರ ಹಿಂಸಾಚಾರ ನಡೆದಿದೆ. ಈಗಾಗಲೇ ಇದಕ್ಕೆ 22 ಮಂದಿ ಬಲಿಯಾಗಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವು ಕಡೆ ಕರ್ಫ್ಯೂ ಹೇರಲಾಗಿದೆ.

ಘಟನೆ ನಡೆಯುವ ಮೂರು ದಿನಗಳ ಹಿಂದೆಯಷ್ಟೇ ಬಿಜೆಪಿ ನಾಯಕರ ಕಪಿಲ್ ಮಿಶ್ರಾ ಹಿಂಸಾಚಾರದ ಸುಳಿವನ್ನು ನೀಡಿದ್ದ. ‘‘ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಹೋಗುವವರೆಗೆ ಕಾಯುತ್ತೇವೆ. ಆ ಬಳಿಕವೂ ಪ್ರತಿಭಟನೆ ನಡೆಸಿದರೆ, ನಡೆಯುವ ಅನಾಹುತಕ್ಕೆ ನಾವು ಹೊಣೆಯಲ್ಲ ಮತ್ತು ನಂತರ ನಾವು ಪೊಲೀಸರ ಮಾತನ್ನೂ ಕೇಳುವುದಿಲ್ಲ’’ ಎಂದು ಸ್ಪಷ್ಟವಾಗಿ ಹೇಳಿದ್ದ. ನಂತರ ಸಿಎಎ ಪರ ಪ್ರತಿಭಟನೆ ಎಂದು ಹೇಳುತ್ತಾ ಶಸ್ತ್ರಸಜ್ಜಿತರಾಗಿ ಬೀದಿಗಿಳಿದ ಸಂಘಪರಿವಾರದ ಗೂಂಡಾಗಳು ಆತನ ಸೂಚನೆಯನ್ನು ಶಿರಸಾ ಪಾಲಿಸಿದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾದರೂ ಎಫ್‌ಐಆರ್‌ನಲ್ಲಿ ಕಪಿಲ್ ಮಿಶ್ರಾನ ಹೆಸರು ಇರಲಿಲ್ಲ. ಆದರೆ ಇದೀಗ ಆತನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ಆದೇಶಿಸಿದೆ ಮತ್ತು ಕೇಸು ದಾಖಲಿಸಲು ವಿಳಂಬಿಸಿದಕ್ಕೆ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿದೆ. ಮುಸ್ಲಿಮರ ಮನೆ, ಅಂಗಡಿ, ವಾಹನಗಳನ್ನು ಗುರಿಯಾಗಿಸಿಕೊಂಡು, ಜೈ ಶ್ರೀ ರಾಮ್ ಘೋಷಣೆಯನ್ನು ಕೂಗಿಕೊಂಡು ರಕ್ತದಾಹಿಗಳು ರೌದ್ರಾವತಾರ ಮೆರೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಮಸಿ ಬಳಿಯಲು ನಡೆಸುತ್ತಿರುವ ಪ್ರಯತ್ನಗಳನ್ನು ಇಂಚು ಇಂಚಾಗಿ ಬಹಿರಂಗಪಡಿಸುತ್ತಿವೆ.

ದೇಶದ ರಾಜಧಾನಿ ದಿಲ್ಲಿಯಲ್ಲಿ ಏನೇ ಸಂಭವಿಸಿದರೂ ಅದು ಜಾಗತಿಕವಾಗಿ ಸುದ್ದಿಯಾಗುತ್ತದೆ. ಜೊತೆಗೆ ದೇಶದ ವರ್ಚಸ್ಸಿಗೂ ಧಕ್ಕೆ ಉಂಟು ಮಾಡುತ್ತದೆ. ಆದರೆ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಮೋದಿಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ತಡವಾಗಿ ಪ್ರಕ್ರಿಕ್ರಿಯೆ ನೀಡಿದರು. ಪೊಲೀಸ್ ಇಲಾಖೆಯ ನಿಯಂತ್ರಣ ಸ್ವತಃ ಕೇಂದ್ರದ ಬಳಿಯಿದ್ದರೂ, ಹಿಂಸಾಚಾರ ತಡೆಯುವ ಯಾವುದೇ ಕ್ರಮ ಕಂಡು ಬರಲಿಲ್ಲ. ಬಹುಶಃ ಸಂಘಪರಿವಾರದ ಗೂಂಡಾಗಳನ್ನು ಛೂ ಬಿಡುವ ಮೂಲಕ ಪ್ರತಿಭಟನೆಯ ಕಾವನ್ನು ಕಡಿಮೆ ಮಾಡಲು ಕೇಂದ್ರ ಸರಕಾರವು ಇಂತಹ ಹತಾಶೆಯ ಕ್ರಮಕ್ಕೆ ಮುಂದಾಗಿದೆಯೇ ಎಂಬ ಸಹಜ ಅನುಮಾನವನ್ನು ಹುಟ್ಟಿಸುತ್ತಿದೆ.
ಮೂಲದಲ್ಲಿ ಪೌರತ್ವ ಕಾಯ್ದೆಯನ್ನು ರೂಪಿಸಿರುವುದೇ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವುದಕ್ಕಾಗಿ. ಆದರೆ ಪೌರತ್ವ ಕಾಯ್ದೆಯ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳು ಸಂವಿಧಾನದ ಮೌಲ್ಯಗಳನ್ನು ಗಟ್ಟಿಗೊಳಿಸಿದವು. ಎಲ್ಲೆಡೆ ಸಂವಿಧಾನದ ಪೀಠಿಕೆ, ರಾಷ್ಟ್ರಗೀತೆ ಮೊಳಗಿತ್ತು ಹಾಗೂ ರಾಷ್ಟ್ರಧ್ವಜವೇ ರಾರಾಜಿಸಿತೇ ವಿನಃ ಈ ಹೋರಾಟ ಎಲ್ಲೂ ಒಂದು ನಿರ್ದಿಷ್ಟ ಧರ್ಮವನ್ನಾಗಲೀ, ಸಮುದಾಯವನ್ನಾಗಲೀ ಪ್ರತಿನಿಧಿಸಲಿಲ್ಲ. ಆರೆಸ್ಸೆಸ್ ನಿಯಂತ್ರಿತ ಕೇಂದ್ರದ ಬಿಜೆಪಿ ಸರಕಾರವು ಹಿಂದುತ್ವದ ಅಜೆಂಡಾವನ್ನು ದೇಶದ ನಾಗರಿಕರ ಹೇರಲು ಯತ್ನಿಸುತ್ತಿರುವಾಗ ನಾಗರಿಕರು ಸಂವಿಧಾನದ ಛತ್ರಿಯಡಿ ಒಂದಾಗಿ ಅದಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ. ಇದು ಸಂವಿಧಾನ ಪರ-ವಿರೋಧಿಗಳ ಸಂಘರ್ಷವಾಗಿದೆ ಎಂಬ ವಿಚಾರ ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಸನ್ನಿವೇಶಗಳಿಂದ ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಾಗರಿಕರು ಮತ್ತಷ್ಟು ಕ್ರಿಯಾಶೀಲರಾಗಿ ಕೈಜೋಡಿಸಬೇಕಾಗಿದೆ.