ಬಿಜೆಪಿಯನ್ನು ಗುಡಿಸಿ ಹಾಕಿದ ಜನಾದೇಶ

0
120

ಆಮ್ ಆದ್ಮಿ ಪಕ್ಷ ಪ್ರಚಂಡ ಬಹುಮತದೊಂದಿಗೆ ಮರಳಿ ಸರಕಾರ ರಚಿಸಲು ದಾಪುಗಾಲಿಕ್ಕುತ್ತಿದೆ. ಕೇಜ್ರೀವಾಲ್ ಸತತ ಮೂರನೇ ಬಾರಿಗೆ ದಿಲ್ಲಿಯ ಮುಖ್ಯಮಂತ್ರಿಯಾಗಲಿದ್ದಾರೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೂ ಅಧಿಕಾರದ ಬಾಗಿಲಿನಿಂದ ಬಹಳಷ್ಟು ದೂರದಲ್ಲಿದೆ. ಮುದಿ ಪಕ್ಷ ಕಾಂಗ್ರೆಸ್ ವಿಳಾಸ ಕಳೆದುಕೊಂಡಿದೆ. ಆಮ್ ಆದ್ಮಿ ಪಕ್ಷ 70ರಲ್ಲಿ 62 ಸೀಟುಗಳು, ಬಿಜೆಪಿ ಕೇವಲ 8 ಸೀಟುಗಳನ್ನು ಪಡೆದುಕೊಂಡಿದೆ. ಕಳೆದ 8 ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಲ್ಲಿಯ ಎಲ್ಲಾ 7 ಸೀಟುಗಳಲ್ಲಿ ಗೆಲುವು ದಾಖಲಿಸಿತ್ತು. ಹೀಗಿದ್ದರೂ ವಿಧಾನ ಸಭಾ ಚುನಾವಣೆಯಲ್ಲಿ ಆಪ್ ಪಕ್ಷವು ಗೆಲುವು ದಾಖಲಿಸಿರುವುದು ಬಿಜೆಪಿಯನ್ನು ಜನತೆ ತಿರಸ್ಕರಿಸುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದೆ.

ಬಿಜೆಪಿ ಚುನಾವಣೆಯಲ್ಲಿ ರಾಷ್ಟ್ರೀಯ ಭದ್ರತೆ, ಸಿಎಎ ಮತ್ತು ಇತರ ವಿಚಾರಗಳಲ್ಲಿ ಕೇಂದ್ರೀಕರಿಸಿದ್ದರೆ, ಆಮ್ ಆದ್ಮಿ ಪಕ್ಷವು ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು, ಶಿಕ್ಷಣ ಮತ್ತು ಅಭಿವೃದ್ಧಿಯನ್ನು ತನ್ನ ಚುನಾವಣಾ ವಿಚಾರಗಳನ್ನಾಗಿ ಮಾಡಿಕೊಂಡಿತ್ತು. 2014ರಿಂದ 2020ರ ವರೆಗಿನ ನಡುವಿನ 6 ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ ಮೋದಿ ಅಥವಾ ಬಿಜೆಪಿ ಅಲೆ ಕಳೆಗುಂದುತ್ತಾ ಬರುತ್ತಿರುವುದು ಸ್ಪಷ್ಟವಾಗುತ್ತಿದೆ. ರಾಜಕೀಯ ನಕಾಶೆಯನ್ನು ಗಮನಿಸಿದರೆ ಬಿಜೆಪಿ ಯಾವ ರೀತಿಯ ದೈನೇಸಿ ಸ್ಥಿತಿಗೆ ತಲುಪುತ್ತಿದೆ ಎಂಬ ವಿಚಾರ ಮನದಟ್ಟಾಗುತ್ತದೆ. 2018ರಲ್ಲಿ ನಡೆದ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ್ ಚುನಾವಣೆಯಲ್ಲಿ ಸೋಲು ಕಾಣುವುದರೊಂದಿಗೆ ಮತ್ತು 2019ರಲ್ಲಿ ಬಿಜೆಪಿಯು ಮಹಾರಾಷ್ಟ್ರವನ್ನೂ ಕಳೆದುಕೊಂಡಿತು. ನಂತರ ಅದು ಹರ್ಯಾಣವನ್ನು ಬಹಳ ಪ್ರಯಾಸದಿಂದ ಉಳಿಸಿಕೊಂಡಿದೆ. 2019ರ ಕೊನೆಯಲ್ಲಿ ನಡೆದ ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಮುಖಭಂಗಕ್ಕೀಡಾದ ಬಳಿಕ ಇದೀಗ ದಿಲ್ಲಿಯಲ್ಲಿ ಅದು ಹೀನಾಯವಾಗಿ ಸೋತಿದೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಸೋಲಿಗೆ ಅದರ ಜೀವ ವಿರೋಧಿ ಮತ್ತು ಜನವಿರೋಧಿ ನೀತಿಗಳೇ ಪ್ರಮುಖ ಕಾರಣವಾಗಿದ್ದವು.

ಈ ಬಾರಿಯ ದಿಲ್ಲಿ ಚುನಾವಣೆಯಲ್ಲಿ ಕೋಮು ಧ್ರುವೀಕರಣಕ್ಕೆ ಬಿಜೆಪಿ ಆಹೋರಾತ್ರಿ ಶ್ರಮಿಸಿತ್ತು. ಸಿಎಎ ವಿರುದ್ಧ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಬಿಜೆಪಿ ನಾಯಕರು ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದರು. ‘ಶಾಹೀನ್ ಬಾಗ್‌ನ ಜನರು ಮನೆಗೆ ನುಗ್ಗಿ ನಿಮ್ಮ ಮನೆಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆಸುವರು’, ‘ಭಯೋತ್ಪಾದಕರಿಗೆ ಬಿರಿಯಾನಿ ಉಣಿಸುವ ಬದಲು ಬುಲೆಟ್ ತಿನ್ನಿಸಬೇಕಾಗಿದೆ’, ‘ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ’, ‘ಅರವಿಂದ್ ಕೇಜ್ರೀವಾಲ್ ಭಯೋತ್ಪಾದಕ’ ಇಂತಹ ಹೇಸಿಗೆ ಹುಟ್ಟಿಸುವ ಹಲವು ಹೇಳಿಕೆಗಳನ್ನು ಬಿಜೆಪಿ ನಾಯಕರು ಬಹಿರಂಗವಾಗಿ ನೀಡಿ ಕೋಮು ಸಾಮರಸ್ಯ ಕದಡಲು ಪ್ರಯತ್ನಿಸಿದ್ದರು. ತತ್ಪರಿಣಾಮವಾಗಿ ಗಾಂಧಿಯನ್ನು ಕೊಂದ ಜನವರಿ 30ರಂದು ನವ ಗೋಡ್ಸೆಯೊಬ್ಬನು ಅವತರಿಸಿ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡು ಕೂಡ ಹಾರಿಸಿದ್ದ. ಹಿಂದು ಮತಗಳನ್ನು ಧ್ರುವೀಕರಣಗೊಳಿಸಲು ಅದು ಜೈ ಶ್ರೀರಾಮ್‌ನಂತಹ ಹೇಳಿಕೆಗಳ ಮೊರೆ ಹೋಗಿತ್ತಾದರೂ, ದಿಲ್ಲಿಯ ಜನತೆ ಬಿಜೆಪಿಯ ಕುಟಿಲತೆಯನ್ನು ಬಹುತೇಕ ಅರ್ಥಮಾಡಿಕೊಂಡಿದ್ದರು. ಆ ಕಾರಣದಿಂದಲೇ ದಿಲ್ಲಿ ಜನತೆಯ ಸಹಬಾಳ್ವೆ-ಸಾಮರಸ್ಯದ ಸಂದೇಶದ ಮುಂದೆ ಕೋಮುವಾದಿ ಹಿಂದುತ್ವದ ಅಲೆ ನಿಸ್ತೇಜವಾಯಿತು. ದ್ವೇಷ ಮತ್ತು ವಿಭಜನೆಯ ಅಭಿಯಾನದ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ದುರ್ಬಲಗೊಳಿಸುವ ಬಿಜೆಪಿ-ಪರಿವಾರದ ಅಜೆಂಡಾವನ್ನು ವಿಫಲಗೊಳಿಸಲು ಇಂತಹ ಜನಾದೇಶಗಳು ಶುಭ ನಿರೀಕ್ಷೆಯನ್ನು ಮೂಡಿಸುತ್ತಿದೆ.

ಈ ದೇಶದ ನಾಗರಿಕರಿಗೆ ಮುಖ್ಯವಾಗಿ ಬೇಕಾಗಿರುವುದು ಏನು ಎಂಬುದನ್ನು ದಿಲ್ಲಿ ಚುನಾವಣಾ ಫಲಿತಾಂಶವು ಸಾಬೀತುಪಡಿಸಿದೆ. ಜನರ ಮೂಲಭೂತ ಅಗತ್ಯಗಳಿಗೆ ಬದಲಾಗಿ ಪ್ರಚೋದನಾಕಾರಿ ಭಾಷಣಗಳ ಮೂಲಕ ಹಿಂದುತ್ವ ನಂಜನ್ನು ಉಣಬಡಿಸುತ್ತಿದ್ದ ಮೋದಿ-ಶಾ ನೇತೃತ್ವದ ಬಿಜೆಪಿಗೆ ಕೊನೆಗೂ ದಿಲ್ಲಿಯ ಜನತೆ ತಕ್ಕ ಉತ್ತರವನ್ನು ನೀಡಿದ್ದಾರೆ. ದಿಲ್ಲಿಯಲ್ಲಿ ಜನತೆ ಗೆದ್ದಿದ್ದಾರೆ ಮತ್ತು ದ್ವೇಷದ ವಕ್ತಾರರು ಸೋತು ಹೋಗಿದ್ದಾರೆ.