ಎನ್‌ಆರ್‌ಸಿ ಜಾರಿ – ಶಂಕಿತ ಪೌರರ ಸೃಷ್ಟಿ

0
161

ಅಸ್ಸಾಂ ಎನ್‌ಆರ್‌ಸಿಯ ಅಂತಿಮ ಹಂತದಲ್ಲಿ ದೇಶವ್ಯಾಪಿ ಎನ್‌ಆರ್‌ಸಿ ನಡೆಯಲಿದೆ ಎಂದು ಕೊಲ್ಕತ್ತಾದಲ್ಲಿ ಅಮಿತ್ ಷಾ ಘೋಷಿಸಿದರು. 1959ರ ಪೌರತ್ವ ಕಾಯ್ದೆ (Citizenship Act)ಯಲ್ಲಿ ವಾಜಪೇಯಿ ಸರಕಾರವು ಎನ್‌ಆರ್‌ಸಿಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ತಂದಿತ್ತು. ಆ ಪ್ರಕಾರ, ಭಾರತೀಯ ಪೌರರ ನೋಂದಣಿಯನ್ನು ಕಡ್ಡಾಯಗೊಳಿಸಲಾಯಿತು ಮತ್ತು ಎಲ್ಲಾ ಪೌರರಿಗೂ ರಾಷ್ಟ್ರೀಯ ಪೌರತ್ವ ಕಾರ್ಡ್‌ನ್ನು ನೀಡಬೇಕೆಂದು ತೀರ್ಮಾನಿಸಲಾಯಿತು. ಇದು ಅನಧಿಕೃತ ವಲಸಿಗರನ್ನು ಗುರುತಿಸಬೇಕಾಗಿ ಎಂದು ಹೇಳಲಾಯಿತು. ಯೋಜಿತ ಕ್ರಮವನ್ನು ಜಾರಿಗೊಳಿಸುವ ಅಂಗವಾಗಿ ವಾಜಪೇಯಿ ಕಾಲದಲ್ಲಿ ಈ ಕಾಯ್ದೆಯನ್ನು ತರಲಾಗಿತ್ತು. 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕತ್ವದಲ್ಲಿ ಒಂದು ವೇಳೆ ಎನ್‌ಡಿಎ ಅಧಿಕಾರವನ್ನು ಗಳಿಸುತ್ತಿದ್ದರೆ, ಮುಂದಿನ ಯೋಜನೆಗಳು 15 ವರ್ಷಗಳ ಹಿಂದೆೆಯೇ ಜಾರಿಗೆ ಬರುತ್ತಿತ್ತು ಎಂಬುದನ್ನು ನಾವು ತಿಳಿಯಬೇಕು.

ಈ ಕಾಯ್ದೆಯಲ್ಲಿ ಹೇಳುವಂತೆ, ದೇಶದ ಪೌರರ ನೋಂದಣಿಯನ್ನು ತಯಾರಿಗೊಳಿಸಿ ಅವರಿಗೆ ಗುರುತುಚೀಟಿಯನ್ನು ನೀಡುವುದು ಮತ್ತು ಅನಧಿಕೃತ ವಲಸಿಗರನ್ನು ಗುರುತಿಸುವುದು. ಪ್ರಸ್ತುತ ಕಾಯ್ದೆಯು ಸದನದಲ್ಲಿ ಅಂಗೀಕೃತಗೊಂಡರೆ ನಂತರ ಮುಂದಿನ ಹಂತ ಅದನ್ನು ಜಾರಿಗೊಳಿಸಬಹುದಾಗಿದೆ. ಅದಕ್ಕೆ ಅಗತ್ಯವಿರುವ ಕಾನೂನು ಮತ್ತು ರೀತಿ ನೀತಿಗಳನ್ನು ರೂಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಪೌರತ್ವ ಕಾಯ್ದೆಯು ಪಾಸಾದ ತಕ್ಷಣ 2003ರಲ್ಲೇ ಅದಕ್ಕಿರುವ ಕಾನೂನನ್ನು ತಯಾರಿಗೊಳಿಸಲಾಗಿತ್ತು. ಅದನ್ನು ಪುನಃ ಸದನದಲ್ಲಿ ಅಂಗೀಕರಿಸಬೇಕೆಂದಿಲ್ಲ. ಪೌರತ್ವ (Registration of Citizens & issue of National ID card rule)2003 ಎಂಬುದು ಈ ಕಾನೂನಿನ ಹೆಸರು. ಇದೇ ಕಾನೂನಿನ ಭಾಗವಾಗಿಯೇ ಎನ್‌ಆರ್‌ಸಿ ಬರುತ್ತದೆ.

2014ರಿಂದ ಇಲ್ಲಿಯ ವರೆಗೆ ಎನ್‌ಆರ್‌ಸಿಯ ವಿಚಾರ ಚರ್ಚಿಸಲೇ ಇಲ್ಲ ಎಂದು ಹೊಸದಿಲ್ಲಿಯಲ್ಲಿ ನರೇಂದ್ರ ಮೋದಿ ಭಾಷಣವೊದರಲ್ಲಿ ಹೇಳಿದರು. ಅಸ್ಸಾಂನಲ್ಲಿ ಸುಪ್ರೀಂ ಕೋರ್ಟ್ ಅದೇಶದ ಕಾರಣದಿಂದ ನಡೆಯಿತು. ಅದರ ಹೊರತಾಗಿ ಎಲ್ಲೂ ನಡೆದಿಲ್ಲ. ಬಿಜೆಪಿ ಇದರ ಬಗ್ಗೆ ಎಲ್ಲೂ ಚರ್ಚಿಸಿಲ್ಲ ಎಂದು ಹೇಳಲಾಗುತ್ತದೆ. ಪ್ರಧಾನ ಮಂತ್ರಿ ಮಾತ್ರವಲ್ಲ, ಗೃಹ ಸಚಿವ ಅಮಿತ್ ಷಾ ಮತ್ತಿತರ ಮಂತ್ರಿಗಳೂ ಹಲವು ವೇದಿಕೆಗಳಲ್ಲಿ ಎನ್‌ಆರ್‌ಸಿ ವಿಚಾರವಾಗಿ ಮಾತನಾಡಿದ್ದಾರೆ. 2019ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಆರ್‌ಸಿ ವಿಚಾರ ಪ್ರಸ್ತಾಪಿಸಲಾಗಿದೆ. ಅನಧಿಕೃತ ವಲಸಿಗರ ಸಮಸ್ಯೆಯಿಂದಾಗಿ ಸಾಂಸ್ಕೃತಿಕ ಮತ್ತು ಭಾಷಿಕ ಅಸ್ಮಿತೆಯ ವಿಚಾರದಲ್ಲಿ ಭಾರೀ ಬದಲಾವಣೆಗಳಾಗುತ್ತಿರುವ ಕಾರಣ ಎನ್‌ಆರ್‌ಸಿಯನ್ನು ಹಂತ ಹಂತವಾಗಿ ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲಾಗುವುದು ಎಂದು ಪ್ರಣಾಳಿಕೆ ಹೇಳುತ್ತದೆ. 2024ರ ಮಹಾ ಚುನಾವಣೆಗೆ ಮೊದಲು ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೊಳಿಸುತ್ತೇವೆಂದು 2019 ನವೆಂಬರ್ 20ರಂದು ಅಮಿತ್ ಷಾ ಘೋಷಿಸಿದ್ದಾರೆ. ಜಾಖರ್ಂಡ್‌ನ 2ನೇ ಹಂತದ ಚುನಾವಣಾ ಪ್ರಚಾರದಲ್ಲೂ ಅಮಿತ್ ಷಾ ರಾಷ್ಟ್ರವ್ಯಾಪಿಯಾಗಿ ಎನ್‌ಆರ್‌ಸಿ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. ಎನ್‌ಆರ್‌ಪಿ, ಎನ್‌ಆರ್‌ಸಿಯ ಮೊದಲ ಹಂತವೆಂದು ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಸ್ಪಷ್ಟವಾಗಿದೆ. 2017-18ರ ವರದಿಗಳಲ್ಲೂ (ಪುಟ 268) 2018-19ರ ವರದಿಯಲ್ಲೂ (ಚಾಪ್ಟರ್ 15, ಪುಟ 273) ಇದನ್ನು ನೋಡಬಹುದಾಗಿದೆ.

ಅಂತೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸುವ ಸಂಘೀ ವಿಚಾರಧಾರೆಗಳನ್ನು ದೇಶದಲ್ಲಿ ಹರಡಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಬಹಳ ಕುತಂತ್ರದಿಂದ ಈ ಯೋಜನೆಯನ್ನು ಹೆಣೆಯಲಾಗಿದ್ದು, ಇದೀಗ ಹಠಕ್ಕೆಬಿದ್ದು ಅದನ್ನು ಜಾರಿಗೊಳಿಸಲು ಬಿಜೆಪಿ ಸರಕಾರ ಯತ್ನಿಸುತ್ತಿದೆ. ವರ್ಣಾಶ್ರಮದ ಜೀವವಿರೋಧಿ ಕಾನೂನುಗಳನ್ನು ಸದ್ದಿಲ್ಲದೆ ಜಾರಿಗೊಳಿಸುವ ನಿಟ್ಟಿನಲ್ಲಿ, ಅಂಬೇಡ್ಕರ್ ವಿರಚಿತ ಸಂವಿಧಾನದ ಜಾಗದಲ್ಲಿ ಮನುಸ್ಕೃತಿಯನ್ನು ದೇಶದ ಲೋಕಸಭೆ, ರಾಜ್ಯಸಭೆಗಳನ್ನು ಫ್ಯಾಶಿಸ್ಟ್ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಆ ಮೂಲಕ ದೇಶದ ಕೋಟ್ಯಂತರ ಪೌರರನ್ನು ಶಂಕಿತರನ್ನಾಗಿ ಮಾಡುವುದು ಮತ್ತು ದೇಶರಹಿತರನ್ನಾಗಿಸಿ ಗುಲಾಮಗಿರಿಗೆ ತಳ್ಳುವುದ ಇವರ ದುಷ್ಟ ಯೋಜನೆಯಾಗಿದೆ. ಆದರೆ ಈಗಾಗಲೇ ದೇಶದ ಜನತೆ ಬೀದಿಗಿಳಿದು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಮರಳಿ ಪಡೆಯಲು ಪ್ರತಿಜ್ಞಾಬದ್ಧರಾಗಿದ್ದಾರೆ. ಬಿಜೆಪಿ ಆರೆಸ್ಸೆಸ್‌ನ ಮುಂದಿನ ದಿನಗಳು ಅಷ್ಟೊಂದು ಶುಭಕರವಾಗಿರಲು ಸಾಧ್ಯವಿಲ್ಲ.