ವಂಚಕರ ವಿರುದ್ಧ ಕುರ್‌ಆನ್

0
167

ವಂಚಕ ನಮ್ಮವನಲ್ಲ ಎಂಬ ಪ್ರವಾದಿ ಮುಹಮ್ಮದ್(ಸ)ಯವರ ಮಾತು ಪ್ರಖ್ಯಾತವಾದುದು. ಧರ್ಮ, ಚಳುವಳಿ, ಹೋರಾಟ-ಆಂದೋಲನಗಳು ಪರಾಭವಗೊಳ್ಳಲು, ಪ್ರತ್ಯಕ್ಷ ಶತ್ರುಗಳ ಪಿತೂರಿ ಯೋಜನೆಗಳು ಮತ್ತು ಬಾಹ್ಯ ಆಕ್ರಮಣಗಳಿಗಿಂತ ಹೆಚ್ಚಾಗಿ ತಮ್ಮವರೇ ಆದ ಜನರ ಮೋಸ, ವಂಚನೆ ಮತ್ತು ಪಿತೂರಿಗಳಿಂದ ಸಾಧ್ಯವಾಗಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಹಿಜ್ರಾ 9ನೇ ವರ್ಷದ ರಜಬ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ)ಯವರ ನಾಯಕತ್ವದಲ್ಲಿ ಮುಸ್ಲಿಮರು ಮತ್ತು ಹರ್ಕ್ಯುಲಸ್‌ನ ನಾಯಕನ ಕೆಳಗೆ ರೋಮನ್ನರು ಪರಸ್ಪರ ಮುಖಾಮುಖಿಯಾದರು. ಅದು ಬೇಸಿಗೆ ಕಾಲದ ಕೊಯ್ಲಿನ ಸಂದರ್ಭದಲ್ಲಾಗಿತ್ತು. ತಬೂಕಿನ ಯುದ್ಧ ಭೂಮಿಗೆ ತಲುಪಲು ಮುಸ್ಲಿಮರಿಗೆ ದೀರ್ಘ ಪ್ರಯಾಣ ಮಾಡಬೇಕಾಗಿ ಬಂತು. ತಬೂಕ್ ಯುದ್ಧದ ಸಂಬಂಧವಾಗಿ ವಿವಿಧ ನಿಲುವುಗಳನ್ನು ತಾಳಿದವರ ಕುರಿತು ಕುರ್‌ಆನ್‌ನ ತೌಬಾ ಅಧ್ಯಾಯದಲ್ಲಿ ಪರಾಮರ್ಶೆ ಇದೆ. ಯುದ್ಧವು ಮುಂದೆ ಬಂದು ಎರಗಿದಾಗ ಅದರಲ್ಲಿ ಭಾಗವಹಿಸುವವರು ಪ್ರವಾದಿ(ಸ)ವರ್ಯರ ಸನ್ನಿಧಿಗೆ ದೌಡಾಯಿಸಿ ಬಂದ ನಿಷ್ಕಳಂಕರು, ಕಡು ಬಡವರ ಕುರಿತಾದ ವಿವರಣೆಯನ್ನು ಕುರ್‌ಆನ್ ನೀಡುತ್ತದೆ. ಅನ್ಯಾಯದ ವಿರುದ್ಧ ಯುದ್ಧವನ್ನು ಮಾಡಲು ಅವರು ಮನಃಪೂರ್ವಕವಾಗಿ ಆಗ್ರಹಿಸಿದರು. ಸಮರ ಭೂಮಿಯಲ್ಲಿ ತಮ್ಮನ್ನು ಸೇರಿಸಬೇಕೆಂದು ಅವರು ಪ್ರವಾದಿ(ಸ)ವರ್ಯರೊಂದಿಗೆ ಆಗ್ರಹಿಸುತ್ತಲೇ ಇದ್ದರು. ಆದರೆ ಅವರಿಗೆ ಪ್ರಯಾಣಕ್ಕೆ ಅಗತ್ಯವಿದ್ದ ಸಾಮಗ್ರಿಗಳನ್ನು ತಯಾರುಗೊಳಿಸಲು ಸಾಧ್ಯವಾಗಲಿಲ್ಲ. ಪ್ರವಾದಿ(ಸ)ವರ್ಯರು ಅವರನ್ನು ಮರಳಿ ಕಳುಹಿಸಲು ನಿರ್ಬಂಧಿತರಾದರು. ಯುದ್ಧ ಭೂಮಿಯಲ್ಲಿ ಸೇರಿಕೊಳ್ಳಲು ಸಾಧ್ಯವಾಗದ ಅವರು ಕಣ್ಣೀರಿನೊಂದಿಗೆ ರಣರಂಗದಿಂದ ಮರಳಿದರು.

ಆದರೆ ಅದರಲ್ಲಿ ಕೆಲವರು ತಬೂಕಿನ ಕಡೆಗೆ ಹೊರಡಲು ತಯಾರಿರಲಿಲ್ಲ. ಸಿಲುಕುವುದು ಬೇಡವೆಂದು ಬಗೆದು ಜದ್ದುಬ್‌ನ್ ಖೈಸ್ ದೂರ ನಿಂತರು. ಅಬ್ದುಲ್ಲಾಹ್ ಬಿನ್ ಉಬಯ್ಯ ಮತ್ತು ಆತನ ಅನುಯಾಯಿಗಳು ಯುದ್ಧ ಭೂಮಿಯಿಂದ ಹಿಂಜರಿದರು. ಅವರ ಕಾಪಟ್ಯದ ವಂಚನೆ ಮತ್ತು ಕುತಂತ್ರದ ಕುರಿತು ಕುರ್‌ಆನ್ ವಿವರಿಸುತ್ತದೆ. ಅಕ್ಷಮ್ಯವಾದ ಪಾತಕವನ್ನು ಅವರು ಮಾಡಿದ್ದರು. ಅವರು ಶಾಪ, ಕೋಪ, ಬಹಿಷ್ಕಾರ ಮತ್ತು ದಿಗ್ಬಂಧನಕ್ಕೆ ಗುರಿಯಾದವರೆಂದು ಕುರ್‌ಆನ್ ಹೇಳಿತು. ಇನ್ನೊಂದು ಸಂದರ್ಭದಲ್ಲಿ ಯುದ್ಧಕ್ಕೆ ತಯಾರಾಗಿ ಬಂದಾಗಲೂ ಅವರನ್ನು ಸ್ವೀಕರಿಸಬಾರದೆಂದೂ, ಅವರನ್ನು ಕ್ಷಮಿಸಬಾರದೆಂದೂ, ಅವರ ಮೇಲೆ ನಮಾಝ್ ಮಾಡಬಾರದೆಂದೂ ಅಲ್ಲಾಹನು ಪ್ರವಾದಿ(ಸ)ವರ್ಯರಿಗೆ ಆಜ್ಞಾಪಿಸಿದನು. ಪ್ರವಾದಿ(ಸ) ಸಾವಿರಾರು ಮಂದಿ ಬರುವ ತನ್ನ ಸಚ್ಚಾರಿತ್ರವಂತರಾದ ಅನುಯಾಯಿಗಳೊಂದಿಗೆ ತಬೂಕಿಗೆ ತೆರಳಿದರು. ಆದರೆ ಯುದ್ಧ ನಡೆಯಲಿಲ್ಲ. ಜೆರುಸಲೇಂ ಗವರ್ನರ್ ಜಾನ್, ಪ್ರವಾದಿ(ಸ)ವರ್ಯರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡನು. ಪ್ರವಾದಿ(ಸ) ವಿಜಯಿಯಾಗಿ ಮದೀನಾಗೆ ಮರಳಿದರು.

ಇತಿಹಾಸದಲ್ಲಿ ವಂಚಕರು, ಮೋಸಗಾರರು ಪ್ರತ್ಯಕ್ಷಗೊಂಡ ಘಟನೆಗಳು ಬಹಳಷ್ಟಿವೆ. ಏಸುವಿನ 12 ಶಿಷ್ಯರಲ್ಲಿ ಓರ್ವನಾಗಿದ್ದನು ಜೂದಾಸ್. 30 ಬೆಳ್ಳಿ ನಾಣ್ಯಗಳಿಗಾಗಿ ಜೂದಾಸ್, ಏಸುವನ್ನು ಶತ್ರುಗಳಿಗೆ ತೋರಿಸಿಕೊಟ್ಟನು. ಈ ಘಟನೆಯು ವಂಚನೆಯ ಮೋಸದ ಇತಿಹಾಸದಲ್ಲಿ ಅತ್ಯಂತ ದೂಷಣೆಗೊಳಗಾದ ವಿಚಾರವಾಗಿದೆ.
ಬಂಗಾಳದ ಭಗೀರತಿ ತೀರದಲ್ಲಿ ನಡೆದ ಪ್ಲಾಸೀ ಕದನವು ಇಂಡಿಯಾದ ಇತಿಹಾಸದ ಅತ್ಯಂತ ನಿರ್ಣಾಯಕ ಘಟನೆಯಾಗಿತ್ತು. ಇಂಡಿಯಾದ ವರ್ತಮಾನವನ್ನೇ ಆ ಘಟನೆಯು ಪ್ರಭಾವಿಸಿತು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. 1757ರ ಜೂನ್ 23 ರಂದು ಸಿರಾಜ್-ಉದ್-ದೌಲನ ಸೈನ್ಯ ಮತ್ತು ರಾಬರ್ಟ್ ಕ್ಲೈವ್ ನೇತೃತ್ವದ ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯದ ಮಧ್ಯೆ ಘರ್ಷಣೆ ಉಂಟಾಯಿತು. ಪ್ಲಾಸೀ ಕದನವು ಕೆಲವೊಂದು ಗಂಟೆಗಳಿಗಷ್ಟೇ ಮುಂದುವರೆಯಿತು. ಸಿರಾಜ್-ಉದ್-ದೌಲ ಪರಾಜಿತಗೊಂಡನು. ತನ್ನ ಭ್ರಷ್ಟಾಚಾರಿಯಾದ ಸೈನಿಕ ಜನರಲ್ ಮೀರ್ ಜಾಫರ್ ಬ್ರಿಟಿಷರನ್ನು ಬೆಂಬಲಿಸಿದ ಕಾರಣ ಸಿರಾಜ್-ಉದ್-ದೌಲ ಪರಾಜಿತಗೊಂಡನು. ಇಂಡಿಯಾ ಉಪ ಭೂಖಂಡದ ದೊಡ್ಡ ಭೂಭಾಗವನ್ನು ಬ್ರಿಟಿಷ್ ಕೈವಶಪಡಿಸಿಕೊಂಡಿತು. ಈ ರೀತಿ ಇಂಡಿಯಾ, ಬ್ರಿಟಿಷ್ ಇಂಡಿಯಾ ಮತ್ತು ಇಂಡಿಯನ್ ಇಂಡಿಯಾ ಆಗಿ ಮಾರ್ಪಟ್ಟಿತು. ಓರ್ವ ಭಾರತೀಯನ ವಂಚನೆಯಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಇಂಡಿಯಾದಲ್ಲಿ ಬೆಂಬಲ ಮತ್ತು ಗೆಲುವು ಗಳಿಸಿಕೊಳ್ಳಲು ಸಾಧ್ಯವಾಯಿತು. ಟಿಪ್ಪು ಸುಲ್ತಾನನ ಇತಿಹಾಸವು ನಮ್ಮ ಮುಂದಿದೆ. ನಿಜಾಮನೊಂದಿಗೂ, ಮರಾಠರೊಂದಿಗೂ ಮೈತ್ರಿಯನ್ನು ನಡೆಸಿ ಟಿಪ್ಪು, ಗವರ್ನರ್ ಜನರಲ್ ಲಾರ್ಡ್ ಕಾರ್ನ್‌ವಾಲೀಸ್‌ನನ್ನು ಎದುರಿಸಿದನು. 1799ರ ಮೇ ತಿಂಗಳಲ್ಲಿ ಶ್ರೀರಂಗಪಟ್ಟಣದ ಮೇಲೆ ಇಂಗ್ಲಿಷ್ ಸೈನ್ಯವು ದಂಡೆತ್ತಿದ್ದು, ಇಂಗ್ಲಿಷ್ ಸೈನ್ಯದ ಕೊನೆಯ ಆಕ್ರಮಣವಾಗಿತ್ತು. ಟಿಪ್ಪು ಸುಲ್ತಾನ್‌ನೊಂದಿಗಿದ್ದ ದಿವಾನ್ ಮೀರ್ ಸಾದಿಕ್ ಇಂಗ್ಲೀಷರೊಂದಿಗೆ ಹಲವು ಒಪ್ಪಂದವನ್ನು ಮಾಡಿದನು. ಮೀರ್ ಸಾದಿಕ್‌ನ ಕಿಂಕರರ ಒತ್ತಾಸೆಯೊಂದಿಗೆ ಟಿಪ್ಪುವಿನ ಕೋಟೆಯೊಳಗಡೆ ಬ್ರಿಟಿಷ್ ಸೈನ್ಯವು ಪ್ರವೇಶಿಸಲು ಸಾಧ್ಯವಾಯಿತು. ಈ ರೀತಿ ವಂಚಕರ ಪಿತೂರಿಯ ಅನುಭವಗಳು ಇಂಡಿಯಾ ಇತಿಹಾಸದ ಉದ್ದಗಲಕ್ಕೆ ಕಾಣಬಹುದು.

ಭಾರತೀಯ ಜನತೆ ಇಂದು ರಣರಂಗದಲ್ಲಿದ್ದಾರೆ. ಆಳುವ ವರ್ಗದ ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ತಲ್ಲೀನರಾಗಿದ್ದಾರೆ. ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದ ಭಾರತೀಯರ ದೊಡ್ಡ ವರ್ಗವು ಧರ್ಮ, ಸಮುದಾಯದ ಕಾರಣದಿಂದ ಮತ್ತೊಂದು ಪಲಾಯನವನ್ನು ನಾವು ನೋಡಬೇಕಾಗಿ ಬರುವುದೇ ಎಂಬ ಆಶಂಕೆ ಅವರನ್ನು ಇದೀಗ ಹೋರಾಟದ ಕಡೆಗೆ ತಳ್ಳಿದೆ. ಆದರೆ ಈ ಹೋರಾಟವನ್ನು ದಾರಿ ತಪ್ಪಿಸಲು ವಂಚಕರು ಯೋಜನೆಗಳನ್ನು ಹೆಣೆಯಬಲ್ಲರು ಎಂದು ನಾವು ಅರಿತುಕೊಳ್ಳಬೇಕು. ಧಾರ್ಮಿಕ ಸಮೂಹಗಳ ಮಧ್ಯೆ ಬಿರುಕನ್ನು ಸೃಷ್ಟಿಸಿ, ದೇಶದ ಸ್ವಾತಂತ್ರ ಸಮರ ಕಾಲದಲ್ಲಿ ಬ್ರಿಟಿಷರು ಮಾಡಿದ ಅದೇ ತಂತ್ರಗಳನ್ನು ನಡೆಸುವ ಜನರ ಗುಂಪು ಇಲ್ಲಿದೆೆ. ಮುಸ್ಲಿಮ್ ಸಮಾಜವು ಇನ್ನಷ್ಟು ಜಾಗರೂಕತೆಯನ್ನು ವಹಿಸಬೇಕಾದ ಅಗತ್ಯವಿದೆ. ಏಕತೆಯ ಸಾಧ್ಯತೆಗಳು ಉಂಟಾಗುವ ವಾತಾವರಣವಿದೆ. ಆದರೆ ರಾಜಕೀಯ ಲಾಭಕ್ಕಾಗಿ ಮತ್ತು ಸಂಘಟನಾ ಪಕ್ಷಪಾತದ ಹೆಸರಿನಲ್ಲಿ ಈ ಸಾಧ್ಯತೆಯನ್ನು ಒಡೆದು ಹಾಕಲು ಮುಂದಾಗುವವರನ್ನು ಬಹಿಷ್ಕರಿಸಲು ಸಮುದಾಯವು ಧೈರ್ಯವನ್ನು ತೋರಬೇಕು. ಜದ್ದುಬ್‌ನ್ ಖೈಸ್ ಮತ್ತು ಅಬ್ದುಲ್ಲಾಹ್ ಬಿನ್ ಉಬಯ್ಯ ಮುಂತಾದ ವಂಚಕರು ಪುನರ್ಜನ್ಮವೆತ್ತುವಾಗ ನಖಶಿಖಾಂತ ಅವರನ್ನು ಬಹಿಷ್ಕರಿಸಲು ಕುರ್‌ಆನ್‌ಅನ್ನು ನಾವು ಅವಲಂಬಿಸಬೇಕು. ಇದು ಮುಸ್ಲಿಮ್ ಸಮುದಾಯದ ಜವಾಬ್ದಾರಿಯೂ ಆಗಿದೆ.
***