ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶ

0
46

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಪ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶವನ್ನು ಜನವರಿ 15ರಂದು ಹಮ್ಮಿಕೊಳ್ಳಲಾಗಿತ್ತು. ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಕಾರರು ಕೈಯಲ್ಲಿ ರಾಷ್ಟ್ರ ಧ್ವಜ ಮತ್ತು ಕ್ಷಣಕ್ಷಣಕ್ಕೂ ಆಝಾದ್‌ನ ಧ್ವನಿ ಮೊಳಗಿಸಿ ಗಮನ ಸೆಳೆದರು.
ವಿಶ್ರಾಂತ ಐಎಎಸ್ ಅಧಿಕಾರಿ ವಿ ದಿ ಪೀಪಲ್ ಆಫ್ ಇಂಡಿಯಾ ಪ್ರತಿನಿಧಿ ಹರ್ಷ ಮಂದರ್ ಮಾತನಾಡಿ, ಭಾರತೀಯರಾದ ನಮ್ಮನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸಿದಂತೆಯೇ ನಾವು ಒಟ್ಟಾಗುತ್ತೇವೆ. ದ್ವೇಷದ ರಾಜಕೀಯ ನಮಗೆ ಬೇಕಾಗಿಲ್ಲ. ರಾಮ ಮಂದಿರ ಆಯಿತು, ಕಾಶ್ಮೀರ ಆಯಿತು, ಈಗ ಹಿಂದೂಸ್ಥಾನವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಆಯುಧವಾಗಿ ನಮ್ಮನ್ನು ಆಳುವವರು ಜಾರಿಗೆ ತರಲು ಈ ಕಾನೂನಿನ ಮೂಲಕ ಮುಂದಾಗಿದ್ದಾರೆ. ಅದು ಈಗ ಎಲ್ಲರಿಗೂ ಅರಿವಾಗಿದೆ. ನಮ್ಮ ಸಂವಿಧಾನ ಹೇಳುವಂತೆ ಎಲ್ಲರಿಗೂ ಜೀವಿಸುವ ಹಕ್ಕಿದೆ. ಸಂವಿಧಾನ ಅಭಿವ್ಯಕ್ತ್ತಿ ಸ್ವಾತಂತ್ರದ ಜೊತೆಗೆ ನಮ್ಮ ಇಚ್ಚೆಯ ಧರ್ಮವನ್ನು ಅನುಸರಿಸುವ ಸ್ವತಂತ್ರವನ್ನು ಕೂಡ ನೀಡಿದೆ. ಈ ಹೋರಾಟ ಕೇವಲ ಎರಡು ಕಾನೂನುಗಳ ವಿರುದ್ಧ ಅಲ್ಲ, 100 ವರ್ಷಗಳ ಹಿಂದೆಯೇ ಈ ಹೋರಾಟ ಆರಂಭವಾಗಿದೆ. ಸರ್ಕಾರ ನನ್ನಲ್ಲಿ ಧರ್ಮದ ಆಧಾರದಲ್ಲಿ ಗುರುತಿಸಲು ದಾಖಲೆ ಕೇಳಿದರೆ ತೊರಿಸದೇ ನಾನು ಕೂಡ ಸಹೋದರರ ಜೊತೆ ಬಂಧನ ಕೇಂದ್ರಕ್ಕೆ ಹೋಗುವೆ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುವ ಬದಲು ಆರೆಸ್ಸೆಸ್ ಆಡಳಿತ ನಡೆಸುತ್ತಿದೆ ಎಂದು ಎಲ್ಲರಿಗೂ ಮನವರಿಕೆಯಾಗಿದೆ. ಆರೆಸ್ಸೆಸ್ ಎಂಬುದು ಜನರನ್ನು ಭಯಭೀತಗೊಳಿಸಿ ದೇಶವನ್ನು ಸುಟ್ಟು ಹಾಕುವ ಒಂದು ಸಂಘಟನೆಯಾಗಿದೆ. ಅವರ 70 ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಅವರು ಕೋಮುದಳ್ಳುರಿ ಸೃಷ್ಟಿಸಿ ದೇಶವನ್ನು ಹೊತ್ತಿ ಉರಿಸಿದರು ಮತ್ತು ಬಾಂಬ್ ಸ್ಫೋಟ ನಡೆಸಿ ಭಯೋತ್ಪಾದನೆ ಉಂಟು ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದನದ ಹೆಸರಿನಲ್ಲಿ ಮುಸ್ಲಿಮರು ಮತ್ತು ದಲಿತರ ಗುಂಪುಹತ್ಯೆ ನಡೆಸಲಾಯಿತು. ಇವೆಲ್ಲವುಗಳ ಬಳಿಕ ಇದೀಗ ಹೊಸತಾದ ಒಂದು ಭೀತಿಯ ರಾಜಕಾರಣ ಶುರುವಾಗಿದೆ. ಈ ಭೀತಿಯ ಹೆಸರೇ ಪೌರತ್ವ ತಿದ್ದುಪಡಿ ಕಾಯ್ದೆ. ಜನರನ್ನು ಭೀತಿಗೊಳಪಡಿಸಿ ಮತ್ತು ಹಿಂದು-ಮುಸ್ಲಿಮರನ್ನು ಇಬ್ಭಾಗ ಮಾಡಿ ಅಧಿಕಾರಕ್ಕೇರುವುದು ಬಿಜೆಪಿಯ ರಾಜಕೀಯವಾಗಿದೆ. ಈ ರಾಜಕೀಯವು ನಮ್ಮ ದೇಶವನ್ನು ನಾಶ ಮಾಡಿಬಿಟ್ಟಿದೆ ಎಂದು ಹೇಳಿದರು.
ಇದೀಗ ನಾಗರಿಕರು ತಮ್ಮ ಪೌರತ್ವದ ಕುರಿತು ಆತಂಕಿತರಾಗಿದ್ದು, ಆದ ಕಾರಣದಿಂದಲೇ ಜನರು ಇವತ್ತು ಬೀದಿಗೆ ಇಳಿಯಬೇಕಾಯಿತು. ನಾವು ಯಾವ ಕಾರಣಕ್ಕೂ ದಾಖಲೆಪತ್ರವನ್ನು ಕೊಡುವುದಿಲ್ಲ ಏನು ಮಾಡುತ್ತೀರಿ ನೋಡೋಣ. ನಮ್ಮ ದೇಶದ ಯುವ ಜನರು, ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಈ ಕಾಯ್ದೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರತಿಭಟನೆಯಲ್ಲಿ ಈ ವರೆಗೆ 28 ಮಂದಿ ಹುತಾತ್ಮರಾಗಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರು ಕೈ, ಕಣ್ಣು ಕಳೆದುಕೊಂಡಿದ್ದಾರೆ. ಮಂಗಳೂರುವೊಂದರಲ್ಲೇ ಸುಮಾರು 7 ಮಂದಿಯ ಹೊಟ್ಟೆಯಲ್ಲಿ ಗುಂಡುಗಳಿವೆ. ಮೊನ್ನೆ ಬಿಜೆಪಿ ಬಜರಂಗದಳದವರು ಪ್ರತಿಭಟನೆ ಮಾಡಿದ್ದರೆ ನೀವು ಫೈರಿಂಗ್ ಮಾಡುತ್ತಿದ್ದಿರಾ? ಮುಸ್ಲಿಮರ ಪ್ರಾಣ ಅಷ್ಟೊಂದು ಕ್ಷುಲ್ಲಕ ಎಂದು ಭಾವಿಸಿದ್ದೀರಾ? ಮುಸ್ಲಿಮರ ಪ್ರಾಣಕ್ಕೆ ಬೆಲೆ ಇದೆ ಎಂದು ನಾವು ತೋರಿಸಿಕೊಡಲಿದ್ದೇವೆ. ಮಂಗಳೂರು ಗೋಲಿಬಾರ್‌ನಲ್ಲಿ ಇಬ್ಬರು ಅಮಾಯಕರ ಜೀವವನ್ನು ಬಲಿ ಪಡೆದ ಪೊಲೀಸ್ ಅಧಿಕಾರಿಗಳ ವಿರುದ್ಧ ನಾವು ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಶಾಕಿಬ್ ಹೇಳಿದರು.
ಪ್ರತಿಭಟನಾ ಸಮಾವೇಶದಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್‌ಮತ್ತು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್ ಮಹಮ್ಮದ್ ಮಸೂದ್, ವಿ ದಿ ಪೀಪಲ್ ಆಫ್ ಇಂಡಿಯಾದ ಸದಸ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುಲ್‌ರಶೀದ್, ಕರ್ನಾಟಕ ಸಮಸ್ತ ಮುಶಾವರದ ರಾಜ್ಯ ಕಾರ್ಯದರ್ಶಿ ಯು.ಕೆ ಅಬ್ದುಲ್ ಅಝೀಝ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಎಸ್‌ಕೆಎಸ್‌ಎಂನ ಎಂ.ಜಿ. ಮುಹಮ್ಮದ್, ಜಮಾತೇ ಇಸ್ಲಾಮಿ ಕಾರ್ಯದರ್ಶಿ ಮುಹಮ್ಮದ್ ಕುಂಞ, ಯೆನೆಪೊಯ ವಿವಿ ಕುಲಪತಿ ವೈ. ಅಬ್ದುಲ್ಲ ಕುಂಞ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ತುಂಬೆ, ಕಣಚೂರು ಮೋನು, ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಹರೀಶ್ ಕುಮಾರ್, ಐವನ್ ಡಿಸೋಜ, ಬಿ.ಇಬ್ರಾಹೀಂ, ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಮುಹಮ್ಮದ್ ಹನೀಫ್, ಜಿ.ಎ.ಬಾವಾ, ಯು.ಟಿ. ಖಾದರ್ ಮತ್ತಿತರರು ಉಪಸ್ಥಿತರಿದ್ದರು.