ಸಂವಿಧಾನದ ರಕ್ಷಣೆಗೆ ಚಳವಳಿ ಪ್ರಾರಂಭಿಸಲು ಮುಂದಾದ ವಿವಿಧ ಸಂಘಟನೆಗಳ ನಾಯಕರು

0
43

ಹೊಸದಿಲ್ಲಿ: 2020 ಜನವರಿ 13ರಂದು ನವದೆಹಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಗುಂಪುಗಳಿಗೆ ಸೇರಿದ ನಾಯಕರ ಸಮಾಲೋಚನಾ ಸಭೆಯಲ್ಲಿ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ನಡೆಯುತ್ತಿರುವ ಆಂದೋಲದ ಸ್ಥಿತಿಗತಿಯ ಕುರಿತು ಚರ್ಚಿಸಲಾಗಿದೆ ಮತ್ತು ಭಾರತೀಯ ಸಂವಿಧಾನದಲ್ಲಿ ರೂಪಿಸಲಾಗಿರುವ ಪೌರತ್ವದ ಮೂಲಭೂತ ಹಕ್ಕಿಗಾಗಿ ಜನರ ಪ್ರತಿಭಟನೆಯನ್ನು ಬೆಂಬಲಿಸಲು ಮತ್ತು ಬಲಪಡಿಸಲು ಸಂವಿಧಾನ ಸುರಕ್ಷಾ ಆಂದೋಲನ(ಸಂವಿಧಾನದ ರಕ್ಷಣೆಗಾಗಿ ಚಳವಳಿ)ವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ವಾಲಿ ರಹ್ಮಾನ್, ನಾವು ನಿರ್ಣಾಯಕ ಹಂತವನ್ನು ದಾಟುತ್ತಿದ್ದು, ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ಮತ್ತು ಗುಂಪುಗಳು ಮುಂದೆ ಬಂದು ನಮ್ಮ ರಾಷ್ಟ್ರ ಮತ್ತು ಅದರ ಸಾಂವಿಧಾನಿಕ ಮೌಲ್ಯಗಳನ್ನು ಉಳಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಬೇಕೆಂದು ಹೇಳಿದ್ದಾರೆ.
ಬಲಪಂಥೀಯ ಫ್ಯಾಶಿಸ್ಟ್ ಶಕ್ತಿಗಳನ್ನು ಹೊರತುಪಡಿಸಿ, ಭಿನ್ನಾಭಿಪ್ರಾಯಗಳು ಮತ್ತು ವೈವಿಧ್ಯತೆಗಳನ್ನು ಲೆಕ್ಕಿಸದೆ ಸಮಾಜದ ಎಲ್ಲಾ ವರ್ಗದವರು ಪಾಲ್ಗೊಳ್ಳುತ್ತಿರುವ ಪ್ರಸ್ತುತ ಪ್ರತಿಭಟನೆಗಳಲ್ಲಿ ಇಡೀ ರಾಷ್ಟ್ರದ ಆತ್ಮಸಾಕ್ಷಿಯು ಪ್ರತಿಫಲಿಸುತ್ತದೆ ಎಂದು ಸಭೆಯು ತಿಳಿಸಿದೆ. ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳು ಮತ್ತು ಪಟ್ಟಣಗಳು ಹಾಗೂ ದೂರದ ಹಳ್ಳಿಗಳಲ್ಲಿನ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಸಭೆಯು ಶ್ಲಾಘಿಸಿದೆ. ಬಿಜೆಪಿ ಸರಕಾರದ ಜನವಿರೋಧಿ ಕಾನೂನುಗಳನ್ನು ಸೋಲಿಸುವ ವರೆಗೂ ಪ್ರಸ್ತುತ ಪ್ರತಿಭಟನೆಗಳನ್ನು ಮತ್ತಷ್ಟು ಸಂಘಟಿಸುವ ಮತ್ತು ವಿಸ್ತರಿಸುವ ವಿವಿಧ ಮಾರ್ಗಗಳು ಮತ್ತು ವಿಧಾನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ಜನರ ಆಂದೋಲನವನ್ನು ಸಂಘಟಿಸಲು ಮತ್ತು ಬಲಪಡಿಸಲು, ಲೋಕಶಾಸನ್ ಆಂದೋಲನ ಅಧ್ಯಕ್ಷ ನ್ಯಾಯಮೂರ್ತಿ ಬಿ.ಜಿ.ಕೋಲ್ಸೆ ಪಾಟೀಲ್, ಬಿಎಎಂಸಿಇಎಫ್ ಅಧ್ಯಕ್ಷ ವಾಮನ್ ಮೆಶ್ರಮ್, ಇಸ್ಲಾಮಿಕ್ ವಿದ್ವಾಂಸ ಮೌಲಾನ ಕೆ.ಆರ್.ಸಜ್ಜ್ಜಾದ್ ನೂಮಾನಿ, ಎಸ್‌ಡಿಪಿಐ ಅಧ್ಯಕ್ಷ ಎಂ.ಕೆ.ಫೈಝಿ, ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್, ದೆಹಲಿಯ ಕ್ರೈಸ್ತ ಪಾದ್ರಿ ಎಫ್‌ಆರ್ ಸುಸಾಯಿ ಸೆಬಾಸ್ಟಿಯನ್, ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮೌಲಾನ ಉಬೈದುಲ್ಲಾ ಅಝ್ಮಿ, ಮುಸ್ಲಿಮ್ ವಿಮೆನ್ ಅಸೋಸಿಯೇಷನ್‌ನ ಸ್ಥಾಪಕಿ ಡಾ.ಅಸ್ಮಾ ಝೆಹೆರಾ, ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಅಧ್ಯಕ್ಷ ಡಾ.ಮೈಕೆಲ್ ವಿಲಿಯಂ ಮತ್ತು ಇಂಡಿಯನ್ ಸೋಶಿಯಲ್ ಇನ್ಸ್‌ಟಿಟ್ಯೂಟ್‌ನ ಮಾಜಿ ನಿರ್ದೇಶಕ ಎಫ್‌ಆರ್ ಡೆನ್‌ಝಿಲ್ ಫೆರ್ನಾಂಡೀಸ್‌ರವರ ಒಕ್ಕೂಟವನ್ನು ರಚಿಸಲಾಗಿದೆ.
ಇದರ ಜೊತೆಗೆ ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ರಾಜ್ ರತನ್ ಅಂಬೇಡ್ಕರ್ ಮತ್ತು ಎಸ್‌ಡಿಪಿಐಯ ಮುಹಮ್ಮದ್ ಶಾಫಿಯವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಯಿತು. ಆಂದೋಲನದಲ್ಲಿ ಮಹಿಳೆಯರ ಪಾತ್ರವನ್ನು ಸಂಘಟಿಸಲು ಯಾಸ್ಮೀನ್ ಫಾರೂಕಿ, ಡಾ. ಅಸ್ಮಾ ಝೆಹ್ರಾ ಮತ್ತು ಮೆಹರುನ್ನೀಸಾ ಖಾನ್‌ರವರನ್ನೊಳಗೊಂಡ ಮೂರು ಸದಸ್ಯರ ತಂಡವನ್ನು ನಿಯೋಜಿಸಲಾಯಿತು.
ಎಫ್‌ಆರ್ ಅಜೀತ್ ಪ್ಯಾಟ್ರಿಕ್, ಎನ್‌ಸಿಎಚ್‌ಆರ್‌ಒ ಕಾರ್ಯದರ್ಶಿ ಅಡ್ವಕೇಟ್ ಎ.ಮುಹಮ್ಮದ್ ಯೂಸುಫ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ, ಯುಪಿ ಮಾಜಿ ಸಂಸದ ಮತ್ತು ಮಾಜಿ ಸಚಿವ ಲಾಲ್ಮನಿ ಪ್ರಸಾದ್, ಅಂಬೇಡ್ಕರ್ ಸಮಾಜ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಭಾಯ್ ತೇಜ್ ಸಿಂಗ್, ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಇ.ಎಂ.ಅಬ್ದುಲ್ ರಹ್ಮಾನ್, ಸಯೀದ್ ಸರ್ವಾರ್ ಚಿಸ್ತಿ, ಜಮಾಅತ್-ಇ-ಇಸ್ಲಾಮಿ ಹಿಂದ್‌ನ ಕೇಂದ್ರ ಸಲಹಾ ಮಂಡಳಿಯ ಸದಸ್ಯ ಮುಜ್‌ತಬಾ ಫಾರೂಕ್, ಆರ್‌ಜೆಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಭಾನು ಪ್ರತಾಪ್ ಸಿಂಗ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಾ.ತಸ್ಲೀಮ್ ಅಹ್ಮದ್ ರೆಹಮಾನಿ ಮತ್ತು ಯುಪಿ ಮಾಜಿ ಶಾಸಕ ಅಬ್ದುಸ್ಸಲಾಂ ಸಭೆಯಲ್ಲಿ ಉಪಸ್ಥಿತರಿದ್ದರು.