ಸಿಎಎಗೆ ಬೆಂಬಲ ನೀಡಲು ದಲಿತ ನಾಯಕರ ಮೇಲೆ ಬಿಜೆಪಿ ಒತ್ತಡ: ಪುನಿಯಾ

0
40

ಹೊಸದಿಲ್ಲಿ: ‘‘ಸಿಎಎಗೆ ಬೆಂಬಲ ನೀಡುವಂತೆ ಕೇಂದ್ರ ಬಿಜೆಪಿ ಸರಕಾರ ದಲಿತ ನಾಯಕರ ಮೇಲೆ ಒತ್ತಡ ಹೇರುತ್ತಿದೆ’’ ಎಂದು ಕಾಂಗ್ರೆಸ್ ಸಂಸದ ಮತ್ತು ದಲಿತ ಮುಖಂಡ ಪಿ.ಎಲ್.ಪುನಿಯಾ ಆರೋಪಿಸಿದ್ದಾರೆ. ಮಾತ್ರವಲ್ಲದೆ, ಪೌರತ್ವ ವಿಷಯದಲ್ಲಿ ಮೋದಿ ಸರಕಾರವನ್ನು ಬೆಂಬಲಿಸಿದ್ದಕ್ಕಾಗಿ ಮಾಯಾವತಿಯ ಬಿಎಸ್ಪಿಯಂತಹ ದಲಿತ ಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಆಲ್ ಇಂಡಿಯಾ ಖ್ವಾಮಿ ತಂಝೀಮ್ ಮತ್ತು ದಲಿತ್-ಮುಸ್ಲಿಮ್ ಅಧಿಕಾರ್ ಮಂಚ್ ಇತ್ತೀಚೆಗೆ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ನೀಡಲು ಮತ್ತು ಧಾರ್ಮಿಕವಾಗಿ ತಾರತಮ್ಯದ ಪೌರತ್ವ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಸಿಎಎ ದೇಶದಲ್ಲಿ ಧಾರ್ಮಿಕ ವಿಭಜನೆಯನ್ನು ಉಂಟುಮಾಡುವ ಮೋದಿ ಸರಕಾರದ ಯೋಜಿತ ಪಿತೂರಿ ಎಂದು ಮಾಜಿ ಕೇಂದ್ರ ಸಚಿವ ತಾರಿಕ್ ಅನ್ವರ್ ಹೇಳಿದ್ದಾರೆ.
‘‘ಈ ವಿಭಜಕ ಕಾನೂನಿನ ವಿರುದ್ಧ ಇಡೀ ದೇಶವು ಸಿಡಿದೆದ್ದಿದ್ದು, ಸಮಾಜದ ಪ್ರತಿಯೊಂದು ವರ್ಗವೂ ಬೀದಿಗಿಳಿದಿದೆ. ತಮ್ಮ ಮನೆಗಳಿಂದ ವಿರಳವಾಗಿ ಹೊರಬರುವ ಮುಸ್ಲಿಮ್ ಮಹಿಳೆಯರೂ ಕೂಡಾ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆದರೆ ಸರಕಾರವು ಅವರ ಮಾತನ್ನು ಕೇಳಲು ಇನ್ನೂ ಸಿದ್ಧವಾಗಿಲ್ಲ’’ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿದ ಉಭಯ ನಾಯಕರು ಹಿಂಸಾತ್ಮಕ ಘಟನೆಗಳ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸಿದರೆ ಉಂಟಾಗುವ ಭೀಕರ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ ಅವರು, ಈ ದೇಶದಲ್ಲಿ 30 ಕೋಟಿ ಜನರು ಭೂಹೀನರಾಗಿದ್ದಾರೆ ಮತ್ತು ಬಡತನ ರೇಖೆಗಿಂತ ಕೆಳಗಿದ್ದಾರೆ ಹಾಗೂ ದೇಶದ ಸುಮಾರು ಶೇ. 40ರಷ್ಟು ಜನರು ಅನಕ್ಷರಸ್ಥರಾಗಿದ್ದಾರೆ. ಇವರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳನ್ನು ಎಲ್ಲಿಂದ ತರುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಸರಕಾರವು ದೇಶದ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ದೇಶದ ಹಿತಾಸಕ್ತಿಗೆ ಒಳಪಡದ ಕಾರಣ ವಿವಾದಾತ್ಮಕ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.