2018ರಲ್ಲಿ ರೈತರಿಗಿಂತ ಹೆಚ್ಚು ನಿರುದ್ಯೋಗಿಗಳ ಆತ್ಮಹತ್ಯೆ!

0
47

ಹೊಸದಿಲ್ಲಿ: ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ(ಎನ್‌ಸಿಆರ್‌ಬಿ) ದತ್ತಾಂಶದ ಪ್ರಕಾರ, 2018ರಲ್ಲಿ ಒಟ್ಟು 26,085 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರತಿದಿನ ಸರಾಸರಿ 35 ಮಂದಿ ನಿರುದ್ಯೋಗಿಗಳು ಮತ್ತು 36 ಮಂದಿ ಸ್ವಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳ ಸಂಖ್ಯೆ(12,936) ಸ್ವಉದ್ಯೋಗಿಗಳಿಗಿಂತ(13,149) ಸ್ವಲ್ಪ ಕಡಿಮೆ ಇದೆ. ಈ ಎರಡೂ ವಿಭಾಗಗಳು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, 2018ರಲ್ಲಿ ಒಟ್ಟು 10,349 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಟ್ಟಾರೆಯಾಗಿ, 2018ರಲ್ಲಿ ದೇಶದಲ್ಲಿ 1,34,516 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 2017ಕ್ಕೆ ಹೋಲಿಸಿದರೆ ಶೇ. 3.6ರಷ್ಟು ಹೆಚ್ಚಾಗಿದೆ. ‘‘2018ರಲ್ಲಿ 42,391 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ 22,937 ಮಂದಿ ಗೃಹಿಣಿಯರಾಗಿದ್ದಾರೆ’’ಎಂದು ಎನ್‌ಸಿಆರ್‌ಬಿ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ(17,972) ಗರಿಷ್ಠ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ತಮಿಳುನಾಡಿನಲ್ಲಿ 13,896, ಪಶ್ಚಿಮ ಬಂಗಾಳದಲ್ಲಿ 13,255, ಮಧ್ಯಪ್ರದೇಶದಲ್ಲಿ 11,775 ಮತ್ತು ಕರ್ನಾಟಕದಲ್ಲಿ 11,561 ಪ್ರಕರಣಗಳು ವರದಿಯಾಗಿವೆ.