ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಶಂಕರಾಚಾರ್ಯ ವಿವಿ

0
39

ಕೊಚ್ಚಿ: ಕೇರಳದ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ(ಎಸ್‌ಎಸ್‌ಯುಎಸ್) ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದು, ವಿವಾದಾತ್ಮಕ ಕಾನೂನಿನ ವಿರುದ್ಧ ದಿಟ್ಟ ಹೆಜ್ಜೆ ಇಟ್ಟ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂಗೀಕರಿಸಿದ ನಿರ್ಣಯವನ್ನು ವಿಶ್ವವಿದ್ಯಾನಿಲಯದ 15 ಸದಸ್ಯರ ಒಕ್ಕೂಟವು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಮಂಡಿಸಿತು. ಮೋದಿ ಸರಕಾರದ ಸಕ್ರಿಯ ಪ್ರಚೋದನೆಯೊಂದಿಗೆ ಕೇಸರಿ ಬೆಂಬಲಿಗರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿದ್ವಾಂಸರ ಮೇಲಿನ ಹಿಂಸಾಚಾರವನ್ನು ಖಂಡಿಸಿದೆ.
‘‘ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ಅಥವಾ ಇತರ ಕ್ಯಾಂಪಸ್‌ಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಆಡಳಿತಾರೂಢ ಬಿಜೆಪಿ ಕ್ರೂರವಾಗಿ ಹಲ್ಲೆ ಮಾಡುವ ಮೂಲಕ ಭಿನ್ನಾಭಿಪ್ರಾಯದ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ. ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ಎಲ್ಲರನ್ನು ದಮನಿಸಲು ಬಿಜೆಪಿ ಸರಕಾರವು ಪೊಲೀಸರು ಮತ್ತು ಗೂಂಡಾಗಳನ್ನು ಬಳಸುತ್ತಿದೆ’’ ಎಂದು ನಿರ್ಣಯದಲ್ಲಿ ಸೇರಿಸಲಾಗಿದೆ.
‘‘ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲಿನ ಭಯಾನಕ ಹಿಂಸಾಚಾರ’’ದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕೆಂದು ವಿಶ್ವವಿದ್ಯಾಲಯವು ಶೈಕ್ಷಣಿಕ ಸಮುದಾಯವನ್ನು ಆಗ್ರಹಿಸಿದೆ.