ಶಾಹೀನ್ ಬಾಗ್‌ನ ವೀರಾಂಗನೆಯರು

0
43

-ಸಿದ್ದೀಖ್ ಕಾಪ್ಪನ್

ಉತ್ತರ ಭಾರತದ ಕೊರೆಯುವ ಚಳಿಯನ್ನು ಲೆಕ್ಕಿಸದೆ ದಿಲ್ಲಿಯ ಮಹಿಳೆಯರು ಮತ್ತು ಮಕ್ಕಳು ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ದಿಲ್ಲಿಯಲ್ಲಿ ಬೆಳಗ್ಗೆ ಆರುವರೆ ಗಂಟೆಗೆ ಪ್ರಭಾತ ವೇಳೆಯ ನಮಾಝ್ನ ಸಮಯವಾಗುತ್ತದೆ. ನಮಾಝ್ ಮುಗಿಸಿ, ಮುನ್ನಾ ದಿನ ಹೊದ್ದಿದ್ದ ಹೊದಿಕೆಯನ್ನು ದೇಹಕ್ಕೆ ಸುತ್ತಿಕೊಂಡು ಇಲ್ಲಿಂದ ಪ್ರತಿಭಟನಾ ನಾಯಕಿಯರು ರಣರಂಗಕ್ಕಿಳಿಯುತ್ತಾರೆ. ಮೈ ಕೊರೆಯುವ ಚಳಿಯಲ್ಲಿ ಮನೆಬಿಟ್ಟು ಬರಲು ಉದಾಸೀನತೆ ತೋರುವ ಇತರರೊಂದಿಗೆ ಪರ್ವೀನಾ ಖಾತೂನ್ ಹೀಗೆನ್ನುತ್ತಾರೆ: ‘‘ಈಗ ಎಚ್ಚರಗೊಳ್ಳದಿದ್ದರೆ, ಡಿಟೆನ್ಷನ್ ಕ್ಯಾಂಪ್‌ನಲ್ಲಿ ಅವರು ತಟ್ಟಿ ಎಚ್ಚರಿಸುವಾಗ ಗಾಬರಿಬಿದ್ದು ಎಚ್ಚರಗೊಳ್ಳಬೇಕಾದೀತು.’’

ಪೌರತ್ವ ತಿದ್ದುಪಡಿ ಕಾಯ್ದೆ ಹಿಂದೆಗೆಯುವ ತನಕ ನಾವಿಲ್ಲಿ ಇರುತ್ತೇವೆ ಎಂದು ಶಾಹೀನ್ ಬಾಗ್‌ನ ಮಹಿಳಾ ಪ್ರತಿಭಟನೆಗೆ ನೇತೃತ್ವ ನೀಡುತ್ತಿರುವ ಶಾಹೀನ್ ಕೌಸರ್ ಹೇಳುತ್ತಾರೆ.
ಪೌರತ್ವಕ್ಕೆ ಸಂಬಂಧಿಸಿದ ಕೇಸ್ ಸುಪ್ರೀಂ ಕೋಟ್‌ನಲ್ಲಿ ಜನವರಿ 22ಕ್ಕೆ ವಿಚಾರಣೆಗೆ ಬರಲಿದ್ದು, ಆ ವರೆಗೆ ಪ್ರತಿಭಟನೆ ಕೊನೆಗೊಳಿಸುವುದಿಲ್ಲ ಎಂದು ಅಡುಗೆ ಮನೆಯಿಂದ ಪ್ರತಿಭಟನಾ ರಂಗಕ್ಕೆ ಧುಮುಕಿದ ಹೆಚ್ಚಿನ ಮಹಿಳೆಯರು ಏಕಕಂಠದಲ್ಲಿ ಸ್ಪಷ್ಟಪಡಿಸುತ್ತಾರೆ. ಆಝಾದಿ ಘೋಷಣೆಗಳಿಂದ ತುಂಬಿ ಹೋಗಿರುವ ಧರಣಿ ಚಪ್ಪರದಲ್ಲಿ ಅರ್ಧರಾತ್ರಿ ಕಳೆದರೂ ಉತ್ತರ ಭಾರತದ ಕಠಿಣ ಚಳಿಯಲ್ಲಿಯೂ ಧರಣಿಗೆ ಕಾವು ನೀಡುವುದರಲ್ಲಿ 80ರ ಹರೆಯದ ವೃದ್ಧೆಯರು ಮತ್ತು ಶಿಶುಗಳು ಕೂಡಾ ಅವರದೇ ಆದ ಪಾತ್ರ ವಹಿಸುತ್ತಿದ್ದಾರೆ. ಡಿಸೆಂಬರ್ 12ಕ್ಕೆ ಪೌರತ್ವ ತಿದ್ದುಪಡಿ ಮಸೂದೆ, ಕಾಯ್ದೆಯಾಗಿ ಪರಿವರ್ತನೆಯಾದಾಗಲೇ ಪ್ರಾರಂಭವಾದ ಪ್ರತಿಭಟನೆಗೆ ದಿಲ್ಲಿಯನ್ನು ನೋಯ್ಡದೊಂದಿಗೆ ಜೋಡಿಸುವ ಸರಿತಾ ವಿಹಾರ್ ರಸ್ತೆಯನ್ನು ಸಂಪೂರ್ಣವಾಗಿ ತಡೆಯುತ್ತಾ ಇಲ್ಲಿಯ ತಾಯಂದಿರು ರಸ್ತೆಗಿಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಪ್ರತಿಭಟಿಸಿದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸರು ಕ್ರೂರವಾಗಿ ಮರ್ದಿಸಿದ ಡಿಸೆಂಬರ್ 15ರ ಮರುದಿನವೇ ಪ್ರಾದೇಶಿಕ ಮಹಿಳೆಯರು ಶಾಹೀನ್ ಬಾಗ್‌ನ ಪ್ರಮುಖ ರಸ್ತೆಯನ್ನು ವಶಪಡಿಸಿದರು.

ಶಾಹೀನ್ ಬಾಗ್‌ನ ಮಹಿಳೆಯರು ಯಾಕೆ?
ಈ ಪ್ರಶ್ನೆಗೆ ಉತ್ತರ ಬಹಳ ಸರಳ. ಬಹುಶಃ ದೇಶದ ಇತರ ಯಾವುದೇ ಪ್ರದೇಶದ ಮಹಿಳೆಯರಿಗಿಂತಲೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಿರುಪಕಾರಿಯಾಗಿರುವ ಪೌರತ್ವ ನೋಂದಣಿಯ ಭೀಕರತೆಯನ್ನು ಅತ್ಯಧಿಕವಾಗಿ ಅರ್ಥೈಸಿದವರು ಇಲ್ಲಿಯ ತಾಯಂದಿರು ಮತ್ತು ಮಹಿಳೆಯರು ಎಂದು ಹೇಳಬಹುದು. ನೋಂದಣಿಯ ಹಾಗೂ ಕಾಯ್ದೆಯ ಬಲಿಪಶುಗಳಾದ ಪೌರತ್ವ ಮತ್ತು ಮನುಷ್ಯತ್ವ ಲಭಿಸದೆ ಭಾರತದ ನೆರೆ ದೇಶವಾದ ಮ್ಯಾನ್ಮಾರ್‌ನಿಂದ ಹೊರದಬ್ಬಲ್ಪಟ್ಟ ರೊಹಿಂಗ್ಯನ್ ಜನತೆಗೆ ಅಭಯ ನೀಡಿರುವುದು ಇದೇ ಶಾಹೀನ್ ಬಾಗ್‌ನ ಕಾಳಿಂದಿ ಕುಂಜ್ ಎಂಬ ಪ್ರದೇಶದಲ್ಲಿ. ಹುಟ್ಟಿದ ಮಣ್ಣಿನಿಂದ ಹೊರದಬ್ಬಲ್ಪಟ್ಟ ಮಹಿಳೆಯರ, ಮಕ್ಕಳ, ವೃದ್ದರ ದಯನೀಯ ಮುಖ ನೋಡುತ್ತಲೇ ಇಲ್ಲಿ ಪ್ರತಿದಿನ ಬೆಳಗಾಗುತ್ತದೆ. ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ಸಮೀಪದ ಪ್ರದೇಶವಾದ ಶಾಹೀನ್ ಬಾಗ್, ಬಾಟ್ಲಾಹೌಸ್, ಝಾಕೀರ್ ನಗರ್ ಮುಂತಾದ ಈ ಪ್ರದೇಶಗಳು ದಿಲ್ಲಿಯ ಎಜ್ಯುಕೇಷನ್ ಹಬ್ ಎಂದೇ ಗುರುತಿಸಲ್ಪಡುತ್ತದೆ. ಇಲ್ಲಿನ ಮಹಿಳೆಯರು ಶೈಕ್ಷಣಿಕವಾಗಿ ಬಹಳ ಮುಂದಿದ್ದಾರೆ.

ಬೃಹತ್ ಬೆಂಬಲ:
ಸಂಪೂರ್ಣವಾಗಿ ಮಹಿಳಾ ನೇತೃತ್ವವಿರುವ ಧರಣಿ ಎಂಬ ವಿಶೇಷತೆ ಶಾಹೀನ್‌ಬಾಗ್‌ನ ಈ ಧರಣಿಗಿದೆ. ದೇಶದ ರಾಜಧಾನಿಯ ವಿವಿಧ ವಿಶ್ವವಿದ್ಯಾನಿಲಯಗಳಿಂದ ಪ್ಲ್ಲೆಕಾರ್ಡುಗಳನ್ನು ಹೊತ್ತು ತಲುಪುವ ವಿದ್ಯಾರ್ಥಿಗಳು ಮತ್ತು ದೇಶದ ವಿವಿಧ ರಾಜ್ಯಗಳಿಂದ ಬರುವ ಜನಸಾಮಾನ್ಯರು ಅವರದೇ ಆದ ಭಾಷೆಗಳಲ್ಲಿ ಮತ್ತು ಶೈಲಿಗಳಲ್ಲಿ ಘೋಷಣೆಗಳನ್ನು ಕೂಗಿ ಧರಣಿಗೆ ಫಸಲೊದಗಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ತೃಣಮೂಲದ ಎಂಪಿಗಳೂ ಸೇರಿದ ಒಂದು ತಂಡವನ್ನು ಮಮತಾ ಬ್ಯಾನರ್ಜಿ ಬೆಂಬಲಾರ್ಥ ಇತ್ತೀಚೆಗೆ ಪ್ರತಿಭಟನಾ ಚಪ್ಪರಕ್ಕೆ ಕಳುಹಿಸಿದ್ದರು.

ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಲು, ಪಾರ್ಲಿಮೆಂಟನ್ನು ಸುತ್ತುವರಿಯಲು, ಪಾರ್ಲಿಮೆಂಟ್ ಮಾರ್ಚ್ ನಡೆಸಲು ಎಂದು ದೇಶದ ವಿವಿಧ ಭಾಗಗಳಿಂದ ತಲುಪುವ ಪ್ರತಿಭಟನಕಾರರಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಲು ಎಂದು ಔಪಚಾರಿಕವಾಗಿ ಮೀಸಲಿರಿಸಿದ ಜಂತರ್ ಮಂತರ್ ರೋಡ್ 500 ಮೀಟರ್ ಹೊರಗಡೆ ದೇಶದ ರಾಜಧಾನಿಯಲ್ಲಿ ಸರಕಾರದ ಅನುಮತಿಯಿಲ್ಲದೇ ಸಾರ್ವಜನಿಕ ರಸ್ತೆಯನ್ನು ವಶಪಡಿಸಿ ಒಂದು ಪ್ರತಿಭಟನೆ ನಡೆಯುತ್ತಿರುವುದು ಬಹುಶಃ ಇದು ಮೊದಲ ಬಾರಿ ಆಗಿರಬಹುದು. ಶಾಹೀನ್ ಬಾಗ್ ಪ್ರತಿಭಟನೆಯ ಮೊದಲ ದಿನಗಳಲ್ಲಿ ಪ್ರತಿಭಟನಕಾರರಿಗೆ ಉಚಿತವಾಗಿ ಆಹಾರ ವಿತರಿಸಲಾಗುತ್ತಿತ್ತು.

ಇದು ಪ್ರತಿಭಟನೆ ಇನ್ನಷ್ಟು ವ್ಯಾಪಿಸಲು ಕಾರಣವಾಗಬಹುದೆಂದು ಮನಗಂಡ ದಿಲ್ಲಿ ಪೊಲೀಸರು ತಕ್ಷಣ ಅದನ್ನು ತಡೆದುಬಿಟ್ಟರು. ಅದೇ ವೇಳೆ ಪ್ರತಿಭಟನಾ ಚಪ್ಪರದ ಬಳಿ ಉಚಿತವಾಗಿ ಮೆಡಿಕಲ್ ಕ್ಯಾಂಪ್ ಮತ್ತು ಇತರ ಲಘು ಉಪಹಾರ ಈಗಲೂ ವಿತರಿಸಲಾಗುತ್ತಿದೆ. ರಾತ್ರಿ ಬಹಳ ತಡವಾಗಿಯೂ ಸಣ್ಣ ಸಣ್ಣ ತಂಡವಾಗಿ ಆಝಾದಿ ಘೋಷಣೆಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನಾ ಚಪ್ಪರಕ್ಕೆ ತಲುಪುತ್ತಿದ್ದಾರೆ. ಕಳೆದ ರವಿವಾರ ದಿಲ್ಲಿ ಪೊಲೀಸರು ಬಲವಂತವಾಗಿ ಪ್ರತಿಭಟನೆ ಕೊನೆಗೊಳಿಸಲು ಪ್ರಯತ್ನಿಸಿದ್ದರು. ಆದರೆ ಸರಕಾರ ಪ್ರತಿರೋಧ ತೋರ್ಪಡಿಸಿದ ಕಾರಣ ಪೊಲೀಸರು ಮರಳಿ ಹೋದರು. ಕಳೆದ ಎರಡು ವಾರಗಳಿಂದ ನೂರರಷ್ಟು ಅಂಗಡಿಗಳು ಮುಚ್ಚಿವೆ. ವ್ಯಾಪಾರಿಗಳ ನಿರಂತರ ಒತ್ತಡದಿಂದ ಪ್ರತಿಭಟನಕಾರರನ್ನು ರಸ್ತೆಯಿಂದ ತೆರವುಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮುಚ್ಚಲ್ಪಟ್ಟ ಹೆಚ್ಚಿನ ಅಂಗಡಿಗಳು ದೇಶದ ಪ್ರಮುಖ ಕಂಪೆನಿಗಳ ಔಟ್ಲೆಟ್‌ಗಳಾಗಿವೆ. ಆದ್ದರಿಂದಲೇ ಯಾವ ಸಂದರ್ಭದಲ್ಲೂ ಪೊಲೀಸರ ಬಲಪ್ರಯೋಗ ನಡೆಯಬಹುದೆಂಬ ಆತಂಕ ಮುಂದುವರಿದಿದೆ.

ಮಹಿಳೆಯರನ್ನು ಮತ್ತು ಮಕ್ಕಳನ್ನು ಒಳಗೊಂಡ ಪ್ರತಿಭಟನಕಾರರನ್ನು ಚದುರಿಸುವುದು ಪ್ರತಿಕೂಲವಾಗಿ ಪರಿಣಮಿಸಬಹುದಾದರಿಂದ ದಿಲ್ಲಿ ಪೊಲೀಸರು ಬಹಳ ಎಚ್ಚರಿಕೆಯಿಂದ ಇದನ್ನು ನಿಯಂತ್ರಿಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ಫೋಟೋ ಮತ್ತು ರಾಷ್ಟ್ರ ಧ್ವಜ ಚಪ್ಪರದಲ್ಲಿ ಎಲ್ಲಾ ಕಡೆ ಕಾಣಬಹುದು ಎಂದು ಈ ಮಹಿಳೆಯರು ಹೇಳುತ್ತಾರೆ. ತಮ್ಮ ಐದಾರು ತಲೆಮಾರುಗಳ ತಂದೆ ತಾಯಂದಿರ ಹೆಸರುಗಳನ್ನು ಬಹಿರಂಗಪಡಿಸಲು ಮೋದಿ-ಅಮಿತ್ ಶಾಗೆ ಸವಾಲೆಸೆಯುತ್ತಿದ್ದಾರೆ. ತನ್ನ ಸ್ವಂತ ಪದವಿ ಪ್ರಮಾಣ ಪತ್ರವನ್ನು ತೋರಿಸಲು ಸಾಧ್ಯವಾಗದ ಪ್ರಧಾನ ಮಂತ್ರಿಗೆ ತನ್ನ ಎಷ್ಟು ಪೂರ್ವ ಪಿತಾಮಹರ ಹೆಸರುಗಳನ್ನು ಹೇಳಲು ಸಾಧ್ಯವಿದೆ ಎಂದವರು ಪ್ರಶ್ನಿಸುತ್ತಾರೆ.

ದೃಢವಾದ ನಿಲುವು:
‘‘ಒಂಬತ್ತು ತಿಂಗಳು ಹತ್ತು ದಿವಸ ಗರ್ಭ ಹೊತ್ತು ಹಾಲುಣಿಸಿದ ಓರ್ವ ತಾಯಿಯಾದ್ದರಿಂದಲೇ ದೆಹಲಿಯ ಕಠಿಣ ಚಳಿಯಲ್ಲೂ ಎನ್‌ಆರ್‌ಸಿಗೆ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸುತ್ತಿರುವುದು’’ ಎಂದು ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರುದ್ಧ ರಸ್ತೆಗಿಳಿದ ಶಾಹೀನ್ ಬಾಗ್‌ನ ಮಹಿಳೆಯರ ಪೈಕಿ ಅತ್ಯಂತ ಹಿರಿಯರಾದ 90 ವರ್ಷದ ಅಸ್ಮಾ ಖಾತೂನ್ ಹೇಳುತ್ತಾರೆ.
ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಾಗ ಅಸ್ಮಾ ಖಾತೂನ್‌ರನ್ನು ಪ್ರತಿಭಟನಾ ಚಪ್ಪರದಲ್ಲಿ ಗುರುತಿಸಲಾಯಿತು. ಪ್ರಾರಂಭದಿಂದಲೇ ಅಸ್ಮಾ ಖಾತೂನ್ ಮುಂಪಕ್ತಿಯಲ್ಲೇ ಇದ್ದರು. ಪ್ರತಿಭಟನೆ ಬಗ್ಗೆ ವಿಚಾರಿಸಿದರೆ ಅಸ್ಮಾ ಮಾತಿಗಿಳಿಯುತ್ತಾರೆ. ಈ ವೃದ್ಧಾಪ್ಯದಲ್ಲಿ ನೀವು ಯಾಕೆ ಪ್ರತಿಭಟನೆಗಿಳಿದಿದ್ದೀರಿ ಎಂದು ಪ್ರಶ್ನಿಸಿದರೆ ಅದನ್ನು ಮೋದಿ ಮತ್ತು ಅಮಿತ್ ಶಾ ರೊಂದಿಗೆ ಕೇಳಿ ಎಂದು ಅಸ್ಮಾ ಆಕ್ರೋಶ ವ್ಯಕ್ತಪಡಿಸುತ್ತಾ ಉತ್ತರಿಸುತ್ತಾರೆ.

ಅವರು ನಮ್ಮೊಂದಿಗೆ ಕಾಗದ ಪತ್ರ ಕೇಳುತ್ತಿದ್ದಾರೆ, ನಿರಂತರ ಮನೆಗೆ ಬರುತ್ತಾರೆ, ತನ್ನ ಏಳು ಪೂರ್ವ ಪಿತಾಮಹರ ಹೆಸರು ಲೀಲಾಜಾಲವಾಗಿ ಎಣಿಸಿ ಹೇಳುವ ಅಸ್ಮಾ ಖಾತೂನ್ ಇದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಪೂರ್ವಿಕರ ಹೆಸರು ಹೇಳಲು ಸಾಧ್ಯವೇ ಎಂದು ಸವಾಲು ಹಾಕುತ್ತಾರೆ. ಪೌರತ್ವ ಸಾಬೀತುಪಡಿಸಲು ನಾನು ಯಾವುದೇ ದಾಖಲೆಗಳನ್ನು ಹಾಜರುಪಡಿಸುವುದಿಲ್ಲ ಎಂದು ಸ್ಥಿರವಾದ ಉತ್ತರವನ್ನು ಅವರು ನೀಡುತ್ತಾರೆ.
ಸಿಎಎ ಮತ್ತು ಎನ್‌ಆರ್‌ಸಿಗೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿವಿಯ ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸ್ ಕ್ರೂರವಾಗಿ ಮರ್ದಿಸಿದ ಡಿಸೆಂಬರ್ 15ರ ಮರುದಿನ ಆ ಪ್ರದೇಶದ ಮಹಿಳೆಯರು ಶಾಹೀನ್ ಬಾಗ್ ನ ಪ್ರಮುಖ ರಸ್ತೆಯನ್ನು ವಶಪಡಿಸಿ ಪ್ರತಿಭಟನೆ ಪ್ರಾರಂಭಿಸಿದರು. ದಿಲ್ಲಿಯಲ್ಲಿ ಕಳೆದ 118 ವರ್ಷಗಳಲ್ಲಿ ಅತ್ಯಂತ ಕಠಿಣ ಚಳಿ ದಾಖಲಾದ 2ನೇ ಡಿಸೆಂಬರಿನಲ್ಲಿ ಅಸ್ಮಾ ಖಾತೂನ್ ಮತ್ತು 82 ವರ್ಷದ ಬಿಲ್ಕೀಸ್ ಸಿಎಎ ವಿರುದ್ಧ ತಮ್ಮ ಮೊಮ್ಮಕ್ಕಳೊಂದಿಗೆ ಪ್ರತಿಭಟನೆಗಿಳಿದರು. ಸಿಎಎಯ ಅಪಾಯದ ಬಗ್ಗೆ ಈರ್ವರಿಗೂ ಸ್ಪಷ್ಟವಾದ ಅರಿವು ಇದೆ. ತಮ್ಮ ಪ್ರತಿಭಟನೆಗೆ ಒಂದು ತಿಂಗಳು ಪೂರ್ತಿಯಾಗುತ್ತಿದ್ದರೂ ಸರಕಾರ ಚರ್ಚೆಗೆ ಸನ್ನದ್ದವಾಗದ್ದಕ್ಕೆ ಆತಂಕವನ್ನು ಬಿಲ್ಕೀಸ್ ಹಂಚಿಕೊಂಡರು. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳನ್ನು ಗ್ರಂಥಾಲಯ ದಲ್ಲೂ ಹಾಸ್ಟೆಲ್‌ನಲ್ಲೂ ಪೊಲೀಸರು ದೌರ್ಜನ್ಯವೆಸಗಿದರು. ಇಲ್ಲಿ ಪೊಲೀಸರು ಆಕ್ರಮಣಕಾರಿಗಳಂತೆ ವರ್ತಿಸಿದರು ಎಂದು ಚಪ್ಪರದಲ್ಲಿನ 75 ವರ್ಷದ ಸರ್ವರಿ ಹೇಳುತ್ತಾರೆ. ಪ್ರಧಾನಮಂತ್ರಿ ಮತ್ತು ಗೃಹಮಂತ್ರಿ ನಿರಂತರ ಸುಳ್ಳು ಹೇಳುತ್ತಿದ್ದಾರೆಂದೂ ಇವರು ಆರೋಪಿಸಿದರು. ಬಾಬರಿ ಮಸ್ಜಿದ್ ಮತ್ತು ತ್ರಿವಳಿ ತಲಾಖ್ ವಿಷಯದಲ್ಲಿಯೂ ಕೂಡಾ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ ಎನ್ನುವ ಇವರು, ನೋಟು ನಿಷೇಧವೂ ಸೇರಿದಂತೆ ದೇಶದ ಪ್ರಸ್ತುತ ವಿಷಯಗಳ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಕಠಿಣ ಚಳಿಗೆ ರಸ್ತೆಗಿಳಿದು ಪ್ರತಿಭಟಿಸುವ ನಮಗೆ ಯಾವುದೇ ತೊಂದರೆ ಇಲ್ಲವೆಂದು ಅವರು ಏಕ ಕಂಠದಲ್ಲಿ ಹೇಳುತ್ತಾರೆ.

ಮತ್ತೊಂದು ಆಂದೋಲನ:
ಮಹಾ ಆಂದೋಲನ ಎಂಬ ಹೆಸರಿನಲ್ಲಿ ದೇಶದ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಹಾಗೂ ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆದ 1857ರ ಪ್ರಥಮ ಸ್ವಾತಂತ್ರ ಸಂಗ್ರಾಮವನ್ನು ನಡೆಸಿದ ನಂತರದ ತಲೆಮಾರು ತಮ್ಮ ಪೂರ್ವಿಕರ ಹೋರಾಟದ ಶೌರ್ಯವನ್ನು ಒಂದಿಷ್ಟು ಸೋರಿ ಹೋಗದಂತೆ ಬೀದಿಯಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿ ಹಚ್ಚಿದರು.
1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ನಾಯಕಿಯರಾಗಿದ್ದ ಬೇಗಂ ಹಝ್ರತ್ ಮಹಲ್, ರಾಣಿ ಲಕ್ಷ್ಮೀಬಾಯಿ ಅವರ ವಾರೀಸುದಾರರು ಇಂದು, ಶಾಹೀನ್ ಬಾಗ್‌ನಲ್ಲಿ ಗೆಲುವನ್ನು ಪಡೆಯುವವರೆಗೆ ಹೋರಾಟ ಇಲ್ಲದಿದ್ದರೆ ಜನಿಸಿದ ಮಣ್ಣಿನಲ್ಲಿ ಬೀದಿಯ ಮಧ್ಯೆ ವೀರಮರಣ ಎಂಬ ಘೋಷಣೆಯೊಂದಿಗೆ ಹೋರಾಟಕ್ಕೆ ಇಳಿದಿದ್ದಾರೆ. ಪೌರತ್ವದ ವಿಚಾರದಲ್ಲಿ ಕೇಂದ್ರ ಸರಕಾರ ಒಂದಿಂಚು ಹಿಂದಕ್ಕೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾರವರ ಮಾತಿನೊಂದಿಗೆ ಹೋರಾಟದಿಂದ ನಾವು ಒಂದು ಮಿಲಿ ಮೀಟರ್ ಕೂಡ ಹಿಂದಕ್ಕೆ ಸರಿಯಲಾರೆವು ಎಂದು ಆತ ನಿರೀಕ್ಷಿಸಿರದ ಮಾತಾಗಿತ್ತು. ಮೊದಲ ದಿನದಿಂದ ಹೋರಾಟದಲ್ಲಿರುವ ದುಲ್ಖರ್ ನೈನ್ ಈ ರೀತಿ ಪ್ರತಿಕ್ರಿಯಿಸಿದರು. ಇದು ದೃಢತೆಯ ಪ್ರತಿಭಟನೆಯಲ್ಲಿ ಸೇರಿದ ಪ್ರತಿಯೊಬ್ಬರ ಮುಖದಲ್ಲೂ ಕಾಣುತ್ತಿದೆ.