ಜನಪರ ಆಂದೋಲನಗಳು ಗೆದ್ದೇ ಗೆಲ್ಲುತ್ತವೆ: ಮುಹಮ್ಮದ್ ಅಲಿ ಜಿನ್ನಾ

0
54

ಸಂದರ್ಶನ : ಪಿ ಎನ್ ಬಿ

ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಈ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲು ಷಡ್ಯಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ. ಇದರ ವಿರುದ್ಧ ತೀವ್ರ ಸ್ವರೂಪದ ಹೋರಾಟಗಳು ನಡೆಯುತ್ತಿರುವಾಗ ಅದನ್ನು ತಡೆಯುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ದೇಶದ ಪ್ರಸಕ್ತ ಸನ್ನಿವೇಶ ಮತ್ತು ಫ್ಯಾಶಿಸಂ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಹೋರಾಟಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾರೊಂದಿಗೆ ಪತ್ರಿಕೆ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.

ಪ್ರಸ್ತುತ: ಸಿಎಎ, ಎನ್‌ಆರ್‌ಸಿ ಇವು ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಪ್ರಯತ್ನದ ಭಾಗವೇ?

ಮುಹಮ್ಮದ್ ಅಲಿ ಜಿನ್ನಾ: ಖಂಡಿತ. ಸಿಎಎ, ಎನ್‌ಆರ್‌ಸಿ ಭಾರತೀಯ ಜನರ ವಿರುದ್ಧದ ದಾಳಿಯಾಗಿದೆ. ಇದು ವಿಶೇಷವಾಗಿ ದಲಿತರು, ಹಿಂದುಳಿದ ವರ್ಗದವರು, ಬಡವರು ಮುಂತಾದ ವರ್ಗಗಳ ಮೇಲಿನ ನೇರ ಆಕ್ರಮಣವಾಗಿದೆ. ಅದರೊಂದಿಗೆ ಮುಸ್ಲಿಮರನ್ನು ಎರಡನೇ ದರ್ಜೆಯ ಪೌರರನ್ನಾಗಿಸುವ ಪ್ರಯತ್ನವೂ ಆಗಿದೆ. ವಾಸ್ತವದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನಷ್ಟೇ ಸರಕಾರ ತರುತ್ತಿಲ್ಲ. ಎನ್‌ಆರ್‌ಸಿಗೆ ಅದು ವೇದಿಕೆಯನ್ನು ಒದಗಿಸುತ್ತದೆ. ಜಾತ್ಯತೀತ ಗಣರಾಜ್ಯವಾದ ಇಂಡಿಯಾದಲ್ಲಿ ಧರ್ಮದ ಹೆಸರಿನಲ್ಲಿ ತರುವ ಮೊತ್ತಮೊದಲ ಕಾನೂನಾಗಿದೆ ಇದು. ಮುಸ್ಲಿಮ್ ಪ್ರಾಬಲ್ಯವಿರುವ ಮೂರು ದೇಶಗಳಿಂದ ದೌರ್ಜನ್ಯಕ್ಕೊಳಗಾದವರಿಗೆ ನಾವು ಪೌರತ್ವವನ್ನು ನೀಡುತ್ತೇವೆಂದು ಹೇಳಿ ಭಾರಿ ಕರುಣಾಳುಗಳಂತೆ ಚಿತ್ರೀಕರಿಸುವ ಪ್ರಯತ್ನ ನಡೆಯುತ್ತಿದೆ. ವಾಸ್ತವದಲ್ಲಿ ಇದು ಮಾನವೀಯ ನೆಲೆಯಲ್ಲಿ ತಂದ ಕಾಯ್ದೆಯಲ್ಲ. ಹಾಗಿದ್ದರೆ ಯಾತಕ್ಕಾಗಿ ಶ್ರೀಲಂಕಾದಲ್ಲಿ ಹಿಂಸೆಯನ್ನು ಅನುಭವಿಸುವ ಜನರನ್ನು ಈ ಕಾಯ್ದೆಯ ಪರಿಧಿಯಿಂದ ಹೊರ ತಳ್ಳಿದೆ? ರೋಹಿಂಗ್ಯನ್ ಜನತೆಗೆ ಯಾತಕ್ಕಾಗಿ ಪೌರತ್ವವನ್ನು ನೀಡುವುದಿಲ್ಲ? ಎನ್‌ಆರ್‌ಸಿಯನ್ನು ತಂದು ಇಂಡಿಯಾದ 130 ಕೋಟಿ ಜನರನ್ನು ತೊಂದರೆಗೊಳಪಡಿಸುತ್ತಿದ್ದಾರೆ. ಇದನ್ನು ಜಾರಿಗೊಳಿಸಲು ಸಾಧ್ಯವೇ ಎಂಬುದರ ಕುರಿತು ಅವರು ಚಿಂತಿಸುವುದಿಲ್ಲ.
ಅಸ್ಸಾಮಿನಲ್ಲಿರುವ ಕೇವಲ 3 ಕೋಟಿ ಜನರ ಮಧ್ಯೆ ಎನ್‌ಆರ್‌ಸಿ ಪ್ರಾಯೋಗಿಕಗೊಳಿಸಲು 1,600 ಕೋಟಿ ರೂಪಾಯಿಗಳನ್ನು ಸರಕಾರ ಖರ್ಚು ಮಾಡಬೇಕಾಗಿ ಬಂತು. 8,500 ಕೋಟಿ ರೂಪಾಯಿಗಳನ್ನು ಜನರು ತಮ್ಮ ಕೈಯಿಂದ ಖರ್ಚು ಮಾಡಿದರು. ಆದಾಗ್ಯೂ, ಈಗಲೂ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಎನ್‌ಆರ್‌ಸಿ ಹೊರಬಂದರೆ ಪಟ್ಟಿಯಲ್ಲಿ ಹೊರಗುಳಿದ ಮುಸ್ಲಿಮರಿಗೆ ಪೌರತ್ವವನ್ನು ನೀಡದೆ ಇತರರಿಗೆ ನೀಡಲಾಗುತ್ತದೆ. ಇದು ನಡೆಯಬಾರದು. ಇಂಡಿಯಾ ಎಂಬ ಆದರ್ಶಕ್ಕೆ ಇದು ಸವಾಲಾಗಿದೆ.

ಪ್ರಸ್ತುತ: ಸಿಎಎ, ಎನ್‌ಆರ್‌ಸಿ ಪ್ರತಿಭಟನೆಯ ಸಂಬಂಧವಾಗಿ ಉತ್ತರ ಪ್ರದೇಶ ಸರಕಾರದ ಕಡೆಯಿಂದ ಉಂಟಾದ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಕಾನೂನಾತ್ಮಕವಾಗಿಯೂ, ಸಂಘಟನಾತ್ಮಕವಾಗಿಯೂ ಯಾವ ಪ್ರಯತ್ನಗಳು ನಡೆದಿದೆ?

ಮುಹಮ್ಮದ್ ಅಲಿ ಜಿನ್ನಾ: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಲಕ್ಷ ಲಕ್ಷ ಜನರು ಒಂದಾಗಿ ಬೀದಿಗಿಳಿದರೂ ಎಲ್ಲೂ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. ಆದರೆ ಬಿಜೆಪಿ ಆಳ್ವಿಕೆ ನಡೆಸುವ ರಾಜ್ಯಗಳಾದ ಉತ್ತರ ಪ್ರದೇಶ, ಕರ್ನಾಟಕ, ಅಸ್ಸಾಂ ಅಂತೆಯೇ ಪೊಲೀಸರ ನಿಯಂತ್ರಣ ಕೇಂದ್ರದ ಕೈಯಲ್ಲಿರುವ ದಿಲ್ಲಿ ಮುಂತಾದೆಡೆ ಮಾತ್ರವೇ ಸಮಸ್ಯೆಗಳು ತಲೆದೋರಿದೆ. ಇದರಲ್ಲಿ ಅತ್ಯಂತ ಹೆಚ್ಚಿನ ಮಾನವ ಹಕ್ಕುಗಳ ಉಲ್ಲಂಘನೆಗಳು ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಮೊದಲು ಸುದ್ದಿಗಳನ್ನು ಹೊರಬರದ ರೀತಿಯಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸಲಾಯಿತು. ಆದರೆ ಸತ್ಯ ಶೋಧನಾ ಸಮಿತಿಗಳು, ದೇಶಾದ್ಯಂತ ಇರುವ ಸಂಘಟನೆಗಳೆಲ್ಲವೂ ಇದೀಗ ಸತ್ಯವನ್ನು ಬಹಿರಂಗಪಡಿಸುತ್ತಿವೆ. ಮಾನವೀಯತೆ ಇಲ್ಲದ ಯೋಗಿ ಸರಕಾರ ಈ ರೀತಿಯ ಕೃತ್ಯಗಳನ್ನು ಮಾಡಿದೆ. ಇದರ ವಿರುದ್ಧ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ರಂಗಕ್ಕಿಳಿದಿದೆ. ಪಾಪ್ಯುಲರ್ ಫ್ರಂಟ್ ಕೂಡಾ ಧೃಡವಾಗಿ ರಂಗಕ್ಕಿಳಿದಿದೆ. ಅಮಾನವೀಯವಾಗಿ ನರಬೇಟೆಯನ್ನು ನಡೆಸಿದ್ದಕ್ಕೆ ಯೋಗಿ ಸರಕಾರ ಖಂಡಿತ ಜವಾಬು ನೀಡಬೇಕಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಕಾನೂನಾತ್ಮಕವಾಗಿಯೂ, ಪ್ರಜಾಸತ್ತಾತ್ಮಕವಾಗಿಯೂ ಹೋರಾಡಲು ನಾವು ತೀರ್ಮಾನಿಸಿದ್ದೇವೆ. ಯುಪಿ ಸರಕಾರದ ಹಿಂಸಾಕೃತ್ಯಕ್ಕೆ ಬಲಿಯಾದವರಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡಲು ಪಾಪ್ಯುಲರ್ ಫ್ರಂಟ್ ತಯಾರಾಗಿದೆ ಎಂದು ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ನೇತಾರರು ಘೋಷಿಸಿದ್ದಾರೆ. ಬಲಿಪಶುಗಳಿಗೆ ಎಲ್ಲಾ ರೀತಿಯ ನೈತಿಕ ಸ್ಥೈರ್ಯ ತುಂಬಲಾಗಿದೆ. ಬೆಂಬಲದ ಭರವಸೆ ನೀಡಲಾಗಿದೆ. ಖಂಡಿತವಾಗಿಯೂ ನ್ಯಾಯವನ್ನು ಪಾಲಿಸಬೇಕಾಗಿದೆ. ಕ್ರೌರ್ಯವನ್ನು ಮೆರೆದ ಯುಪಿ ಪೊಲೀಸ್ ಆಡಳಿತವು ಜವಾಬು ನೀಡುವ ವರೆಗೆ ಜನರು ಒಂದಾಗಿ ನಿಂತು ಹೋರಾಡಬೇಕು. ಅದುವರೆಗೆ ಪಾಪ್ಯುಲರ್ ಫ್ರಂಟ್ ಪ್ರಜಾಸತ್ತಾತ್ಮಕವಾಗಿ ಹೋರಾಟ ರಂಗದಲ್ಲಿ ಇರಲಿದೆ.

ಪ್ರಸ್ತುತ: ಸಿಎಎ, ಎನ್‌ಆರ್‌ಸಿ ಇದರ ವಿರುದ್ಧದ ಹೋರಾಟವು ಗೆಲುವನ್ನು ಕಾಣುವುದೇ?

ಮುಹಮ್ಮದ್ ಅಲಿ ಜಿನ್ನಾ: ದೇಶ ಇದುವರೆಗೆ ಕಾಣದ ಹೋರಾಟವನ್ನು ಸಿಎಎ, ಎನ್‌ಆರ್‌ಸಿಯ ವಿರುದ್ಧ ದೇಶದ ಬೀದಿಗಳಲ್ಲಿ ನಡೆಯುತ್ತಿದೆ. ಜನವಿರೋಧಿ, ಪ್ರಜಾತಂತ್ರ ವಿರೋಧಿ ಕಾನೂನುಗಳ ವಿರುದ್ಧ ಕೋಟ್ಯಂತರ ಜನರು ಇದೀಗ ಬೀದಿಯಲ್ಲಿದ್ದಾರೆ. ವಾಸ್ತವದಲ್ಲಿ ಪ್ರಗತಿಪರ ಮನೋಭಾವದೊಂದಿಗೆ ವಿಚಾರಗಳನ್ನು ಮನನ ಮಾಡುವ ಸರಕಾರವಾಗಿದ್ದಿದ್ದರೆ ಜನರ ಹಿತಾಸಕ್ತಿಯನ್ನು ಗೌರವಿಸಿ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬಹುದಿತ್ತು. ಆದರೆ ದೇಶವನ್ನು ಆಳುತ್ತಿರುವುದು ಫ್ಯಾಶಿಸ್ಟ್ ಸರಕಾರವಾಗಿದೆ. ಫ್ಯಾಶಿಸ್ಟರು ಅಷ್ಟು ಸುಲಭದಲ್ಲಿ ಜನಪರ ಅಗತ್ಯಗಳಿಗೆ ಕಿವಿಗೊಡಲಾರರು. ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಈಗಲಾದರೂ ಎನ್‌ಆರ್‌ಸಿ ವಿಚಾರದಲ್ಲಿ ಹಿಂಜರಿಯಲೇಬೇಕಾಗುತ್ತದೆ. ಭಯವೂ ಅವರನ್ನು ಆವರಿಸಿದೆ ಎಂದು ಇದರಿಂದ ತಿಳಿದುಬರುತ್ತದೆ. ಇದೀಗ ಅವರು ಎನ್‌ಪಿಆರ್ ಮೂಲಕ ಎನ್‌ಆರ್‌ಸಿಯನ್ನು ತರುವ ಪ್ರಯತ್ನದಲ್ಲಿದ್ದಾರೆ.
ಜನರ ಈ ಹೋರಾಟವು ಖಂಡಿತವಾಗಿಯೂ ಯಶಸ್ವಿಯಾಗುವುದು. ಅದರಲ್ಲಿ ನಮಗೆ ಶೇಕಡಾ 100ರಷ್ಟು ವಿಶ್ವಾಸವಿದೆ. ಇತಿಹಾಸವನ್ನು ನಾವು ನೋಡುವುದಾದರೆ ಜನರು ಮತ್ತು ಸರ್ವಾಧಿಕಾರಿಗಳ ಮಧ್ಯೆ ನಡೆದ ಎಲ್ಲಾ ಹೋರಾಟಗಳಲ್ಲಿ ಅಂತಿಮ ವಿಜಯ ಜನರಿಗೆ ಲಭಿಸಿದೆ. ಇಂಡಿಯಾ ಎಂಬ ದೇಶದಲ್ಲೂ ಅಂತಹ ಒಂದು ಇತಿಹಾಸ ಸೃಷ್ಟಿಯಾಗಲಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಪ್ರಸ್ತುತ: ಆರೆಸ್ಸೆಸ್ ಯಾವ ರೀತಿಯಲ್ಲಿ ಈ ವಿಚಾರದಲ್ಲಿ ಭಾಗಿಯಾಗುತ್ತದೆ?

ಮುಹಮ್ಮದ್ ಅಲಿ ಜಿನ್ನಾ: ಇದೀಗ ಬಿಜೆಪಿ ಹೇಳುತ್ತಿರುವ ಎನ್‌ಆರ್‌ಸಿ-ಎನ್‌ಪಿಆರ್ ಇವುಗಳ ಅಡಿಪಾಯವು ಆರೆಸ್ಸೆಸ್‌ನ ವಿಚಾರಧಾರೆಯಾಗಿದೆ. ಅದನ್ನು ತಿಳಿದುಕೊಳ್ಳದಿದ್ದರೆ ಫ್ಯಾಶಿಸ್ಟ್ ನಡೆಸುವ ಹೋರಾಟದಲ್ಲಿ ನಾವು ಸೋಲು ಕಾಣಬೇಕಾದಿತು. ವಾಸ್ತವದಲ್ಲಿ ಆರೆಸ್ಸೆಸ್‌ಗೆ ಎರಡು ಗುರಿಗಳಿವೆ. ಇಂಡಿಯಾದ ವಿವಿಧತೆಯಲ್ಲಿ ಏಕತೆ, ಜಾತ್ಯತೀತತೆ ಎಂಬ ಕಲ್ಪನೆಯೊಂದಿಗೆ ಸೇರಿಕೊಳ್ಳದೇ ಇರುವವರು ಆರೆಸ್ಸೆಸಿಗರು. ಸ್ವಾತಂತ್ರ ಹೋರಾಟದಲ್ಲೂ ಇಂಡಿಯಾದ ಜಾತ್ಯತೀತ ದೇಶವೆಂಬ ಕಲ್ಪನೆಗೆ ಅವರು ಸಹಕರಿಸಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಇಂಡಿಯಾದಲ್ಲಿ ಅವರಿಗೆ ಜೀವಿಸಲು ಆಸಕ್ತಿಯಿಲ್ಲ. ಜಾತ್ಯತೀತ ಮೌಲ್ಯಗಳಿಂದ ಹೊರಬಂದು ಹಿಂದುತ್ವ ರಾಷ್ಟ್ರವನ್ನು ಅವರು ಬಯಸುತ್ತಾರೆ. ಹಿಂದುತ್ವ ದೇಶವೆಂಬುದು ಹಿಂದೂಗಳಿಗೆ ಒಳ್ಳೆಯ ದೇಶವಾಗಿರಬಹುದು ಎಂದು ಭಾವಿಸಬಾರದು. ಆರೆಸ್ಸೆಸ್ ವಿಚಾರಧಾರೆಗಳು, ದೃಷ್ಟಿಕೋನಗಳು ಇರುವ ಒಂದು ದೇಶವಾಗಿ ಇದನ್ನು ಮಾರ್ಪಡಿಸುವುದು ಅವರ ಒಂದನೇ ಗುರಿ. ಎರಡನೇ ವಿಚಾರ ಇಂಡಿಯಾದ ಸಂವಿಧಾನವನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಸಂವಿಧಾನವನ್ನು ಅವರು ಗೌರವಿಸುವುದಿಲ್ಲ. ಅದು ಅವರ ಇತಿಹಾಸವನ್ನು ಶೋಧಿಸಿದರೆ ತಿಳಿದುಬರುತ್ತದೆ. ಇಂಡಿಯನ್ ಸಂವಿಧಾನವನ್ನು ತಿದ್ದಿ ಮನುಸ್ಮತಿಯನ್ನು ತರುವುದು ಆರೆಸ್ಸೆಸ್‌ನ ಗುರಿಯಾಗಿದೆ. ಮನುಸ್ಮತಿಯನ್ನು ಭಾರತೀಯ ಸಂವಿಧಾನವಾಗಿ ತರುವುದು ಅವರ ಉದ್ದೇಶ. ಈ ಉದ್ದೇಶಕ್ಕೆ ಇಂಡಿಯಾದಲ್ಲಿ ಅತ್ಯಂತ ದೊಡ್ಡ ಸವಾಲಾಗಿರುವುದು ಮುಸ್ಲಿಮರು. ಆ ವೇಳೆ ಕಾನೂನಿನ ಮೂಲಕವೇ ಮುಸ್ಲಿಮರನ್ನು ಪೌರತ್ವರಹಿತರನ್ನಾಗಿ, ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾರ್ಪಡಿಸುವುದರ ಮೂಲಕ ಅವರನ್ನು ನಿಶ್ಶಬ್ಧಗೊಳಿಸಲು ಬಯಸುತ್ತಾರೆ. ಮುಸ್ಲಿಮರನ್ನು ಪ್ರಾರಂಭದಲ್ಲಿ ಮೂಲೆಗುಂಪಾಗಿಸಿದರೆ, ನಂತರ ಇತರ ಅಲ್ಪಸಂಖ್ಯಾತರ ಗುಂಪುಗಳನ್ನು ತಮ್ಮ ಹದ್ದಬಸ್ತಿನಲ್ಲಿಡಲು ಸಾಧ್ಯವಾಗಬಹುದು. ನಂತರ ಹಿಂದುತ್ವ ಚಿಂತನೆ ಇಲ್ಲದ ಎಲ್ಲರನ್ನೂ ಬೇಟೆಯಾಡಲು ಸುಲಭವಾಗುವುದು. ಆರೆಸ್ಸೆಸ್‌ನ ಚಿಂತನೆಗಳನ್ನು, ಸಿದ್ಧಾಂತಗಳನ್ನು ಎದುರಿಸದೇ ಇದ್ದರೆ ಅವರು ಹೊಸ ಹೊಸ ಕಾನೂನುಗಳೊಂದಿಗೆ ಇಂಡಿಯನ್ ಜನತೆಗೆ ಅಪಾಯಕಾರಿಯಾಗಿ ರಂಗಕ್ಕಿಳಿಯುವರು. ಅವರ ವಿರುದ್ಧ ಜನಪರವಾದ ಹೋರಾಟ ಮೂಡಿಬರಬೇಕಾಗಿದೆ.

ಭಾರತದ ಸ್ವಾತಂತ್ರ ಹೋರಾಟದಲ್ಲೂ ಆರೆಸ್ಸೆಸ್‌ನ ವಿಚಾರಧಾರೆಗಳು ಹರಿದು ಬಂದಿದ್ದವು. ಆದರೆ ಸ್ವಾತಂತ್ರ ಸಮರ ಸೇನಾನಿಗಳು ಅದನ್ನು ನಿರ್ಲಕ್ಷಿಸಿ ಮೂಲೆಗೆಸೆದು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದು ಹೋರಾಡಿದರು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಎಲ್ಲಾ ಧಾರ್ಮಿಕ ಚಿಂತನೆಗಳನ್ನು ಬದಿಗಿಟ್ಟು ಅವರು ರಂಗಕ್ಕಿಳಿದರು. ಅದರಲ್ಲಿ ಬಹಳಷ್ಟು ದೊಡ್ಡ ಮಾದರಿಯಿದೆ. ಆರೆಸ್ಸೆಸ್‌ಗೆ ಓರ್ವ ಸಾವರ್ಕರ್‌ನ ಹೆಸರಲ್ಲದೆ, ಇನ್ನೊಂದು ಹೆಸರು ಹೇಳಲಾಗದು. ಸಾವರ್ಕರ್‌ನದ್ದಾದರೋ ಮಾಫಿ ಬರೆದು ಕೊಟ್ಟ ಇತಿಹಾಸವಾಗಿದೆ. ಆದ್ದರಿಂದ ಆರೆಸ್ಸೆಸ್‌ನ ಅಂದಿನ ಚಿಂತನೆಗಳನ್ನು ಅಂದಿನ ಕಾಲದ ತಲೆಮಾರುಗಳು ಯಾವ ರೀತಿ ದೂರ ಮಾಡಿದರೋ, ಅದೇ ರೀತಿ ದೂರ ತಳ್ಳದೇ ದೇಶದ ಪ್ರಜಾಪ್ರಭುತ್ವವನ್ನು, ಜಾತ್ಯತೀತತೆಯನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಯಾವುದಾದರು ಒಂದು ವಿಚಾರದಲ್ಲಿ ಮಾತ್ರ ಸೀಮಿತಗೊಂಡ ಹೋರಾಟದಿಂದ ಆರೆಸ್ಸೆಸ್‌ಅನ್ನು ವಿರೋಧಿಸಲು ಮತ್ತು ಪ್ರತಿರೋಧಿಸಲು ಸಾಧ್ಯವಿಲ್ಲ. ಇದನ್ನೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜನರೊಂದಿಗೆ ಹೇಳುತ್ತಿರುವುದು. ಹೊಸ ತಲೆಮಾರು ಫ್ಯಾಶಿಸಂನ ಎಲ್ಲಾ ಆಯಾಮಗಳನ್ನು ತಿಳಿದುಕೊಂಡಿರಬೇಕು. ಆರೆಸ್ಸೆಸ್ ದೇಶಕ್ಕೆ ಎಷ್ಟೊಂದು ಅಪಾಯಕಾರಿ ಎಂಬುವುದರ ಕುರಿತು ಪಾಪ್ಯುಲರ್ ಫ್ರಂಟ್ ಅಭಿಯಾನ ನಡೆಸಲಿದೆ. ಭಾರತೀಯ ಜನತೆಯನ್ನು ಪ್ರಜ್ಞಾವಂತರಾಗಿಸುವ ಐತಿಹಾಸಿಕ ಹೊಣೆಗಾರಿಕೆಯನ್ನು ಪಾಪ್ಯುಲರ್ ಫ್ರಂಟ್ ವಹಿಸಿಕೊಂಡು ಮುಂದುವರಿಯಲಿದೆ.

ಪ್ರಸ್ತುತ: ಸದ್ಯದ ಜನಪರ ಹೋರಾಟ ಹಿಂದುತ್ವ ಪ್ಯಾಶಿಸಂನ ಪ್ರವಾಹವನ್ನು ತಡೆಯುವ ಸಾಮರ್ಥ್ಯ ಹೊಂದಿದೆಯೇ?

ಮುಹಮ್ಮದ್ ಅಲಿ ಜಿನ್ನಾ: ವಾಸ್ತವದಲ್ಲಿ ಫ್ಯಾಶಿಸಂಗೆ ಬಹಳಷ್ಟು ಮುಖವಾಡಗಳು ಇರುತ್ತವೆ. ಅವರು ಈ ಮುಖವಾಡಗಳನ್ನು ಉಪಯೋಗಿಸಿ ಜನರನ್ನು ಮುರ್ಖರನ್ನಾಗಿಸುತ್ತಿದ್ದಾರೆ. ಅವರ ವಿಚಾರ ಚಿಂತನೆಗಳನ್ನು ಮರೆಮಾಚಿ ಅವರ ಅಜೆಂಡಗಳನ್ನು ಪ್ರಾಯೋಗಿಕಗೊಳಿಸಲು ಹಿಂದೂ ಧರ್ಮವನ್ನು ಅವರು ಬಳಸುತ್ತಿದ್ದಾರೆ. ಆದರೆ ಇದೀಗ ದೇಶದಲ್ಲಿ ಉಂಟಾದ ಈ ಚಳುವಳಿ ಮತ್ತು ಪ್ರಜ್ಞೆ ಖಂಡಿತವಾಗಿಯೂ ಹಿಂದುತ್ವ ಶಕ್ತಿಗಳಿಗೆ ಹೊಡೆತವನ್ನು ನೀಡಲಿದೆ. ಆರೆಸ್ಸೆಸ್ ಏನೆಂಬುವುದನ್ನು ಜನಸಮಾನ್ಯರು ತಿಳಿದುಕೊಂಡಿದ್ದಾರೆ. ಇದು ನಿರೀಕ್ಷೆಯನ್ನು ಹುಟ್ಟಿಸುತ್ತದೆ.
ನಾಳೆಯ ಇಂಡಿಯಾ ಎಂಬುವುದು ಯುವಕರು, ವಿದ್ಯಾರ್ಥಿಗಳಾಗಿದ್ದಾರೆ. ಅವರ ಮಧ್ಯೆ ಆರೆಸ್ಸೆಸ್‌ನ ಕುರಿತಾದ ಬಹಳಷ್ಟು ಸ್ಪಷ್ಟವಾದ ದೃಷ್ಟಿಕೋನ ರೂಪುಗೊಳ್ಳುತ್ತಿದೆ. ಅವರ ಮಧ್ಯೆ ಫ್ಯಾಶಿಸ್ಟರಿಗೆ ಸುಲಭದಲ್ಲಿ ಕೆಲಸ ಮಾಡಲು ಸಾಧ್ಯವಾಗಲಾರದು. ಸುಳ್ಳು ಮತ್ತು ಅಪಪ್ರಚಾರ ಮೂಲಕ ಆರೆಸ್ಸೆಸ್ ಕೆಲಸ ಮಾಡುತ್ತಿದೆ. ಹಳ್ಳಿಗಾಡಿನ ತಳಮಟ್ಟದಲ್ಲೂ ಅವರು ಕೇಡರ್ ಸದಸ್ಯರನ್ನು ತಯಾರಿ ಮಾಡಿರುವುದೇ ಅವರ ಶಕ್ತಿ. ಅದರಂತೆ ತಳಮಟ್ಟದಲ್ಲಿ ಇರುವ ಕೆಲಸ ಕಾರ್ಯಗಳು ಜನತಂತ್ರದ ಮೂಲಕ ಮಾಡಿ ಮುಗಿಸಬೇಕು. ಇದು ಫ್ಯಾಶಿಸಂನ ವಿರುದ್ಧ ಸಾರ್ವಜನಿಕ ಹೋರಾಟವನ್ನು ಸಾಧ್ಯವಾಗಿಸುವಂತಹ ತಿರುವು ಆಗಿರುತ್ತದೆ. ಇದೀಗ ನಮ್ಮ ಮುಂದಿರುವ ಈ ವೇಳೆಯನ್ನು ಬಂಡವಾಳವನ್ನಾಗಿಸಿ ಆರೆಸ್ಸೆಸ್ ಅನ್ನು ಮಂಡಿಯೂರಿಸಬೇಕು. ಇದೀಗ ನಡೆಯುತ್ತಿರುವ ಐಕ್ಯವು ಅದಕ್ಕಾಗಿರುವ ಶುಭ ಸೂಚನೆಯಾಗಿದೆ.