ಬಾಂಬರ್ ಆದಿತ್ಯ ರಾವ್ ಭಯೋತ್ಪಾದಕನಲ್ಲವೇ?!

0
49

-ಎ.ಎಂ.ಝೈದ್

ಬಾಂಬ್ ಅಳವಡಿಸಿದವ ಭಯೋತ್ಪಾದಕ – ಇದು ಭಯೋತ್ಪಾದನೆ ಕುರಿತಂತೆ ಇರುವ ಸಾಮಾನ್ಯ ವ್ಯಾಖ್ಯಾನ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಅಳವಡಿಸಿದವನು ಜನರ ಭಾವನೆಯಲ್ಲಿ ಆತ ಭಯೋತ್ಪಾದಕನೇ ಆಗಿದ್ದಾನೆ. ಜನವರಿ 20ರಂದು ವಿಮಾನ ನಿಲ್ದಾಣದ ಆವರಣದಲ್ಲಿ ಬಾಂಬ್ ಪತ್ತೆಯಾಯಿತು. ಇದರಿಂದಾಗಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಕೂಡಲೇ ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ನಿಷ್ಕ್ರಿಯಗೊಳಿಸಿ ನಾಶಗೊಳಿಸಿದರು. ಎಂದಿನಂತೆ ಆ ಭಯೋತ್ಪಾದಕ ಕೃತ್ಯವನ್ನು ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಪ್ರಕಟಿಸಲಾಯಿತು. ಕನ್ನಡದ ಪತ್ರಿಕೆಯೊಂದು ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ಗೆ ನಡೆಸಿದ ಪ್ರತೀಕಾರ ಎಂಬ ರೀತಿಯಲ್ಲಿ ‘ಪೌರತ್ವಕ್ಕೆ ಪ್ರತೀಕಾರ’ ಎಂಬ ತಲೆಬರಹ ಪ್ರಕಟಿಸಿತು. ಅಂದರೆ ಮುಸ್ಲಿಮರನ್ನು ಕಟಕಟೆಯಲ್ಲಿ ತಂದು ನಿಲ್ಲಿಸುವುದು ಈ ಪತ್ರಿಕೆಯ ಉದ್ದೇಶವಾಗಿತ್ತು.

ಸಂಘಪರಿವಾರದ ಕರಪತ್ರ ‘ಕದ್ರಿ ದೇವಳ ಗುರಿ’ ಎಂದು ಸಾರ್ವಜನಿಕವಾಗಿ ನಗೆಪಾಟಲಿಗೀಡಾಯಿತು. ಮತ್ತೊಂದು ಪತ್ರಿಕೆ, ಪತ್ತೆಯಾದ 10 ಕೆ.ಜಿ.ತೂಕದ ಸುಧಾರಿತ ಸ್ಫೋಟಕ ವಸ್ತು ರಾಜ್ಯದ ಇತಿಹಾಸದಲ್ಲೇ ಪತ್ತೆಯಾದ ಸಜೀವ ಬಾಂಬ್ ಎಂದು ಪ್ರಕಟಿಸಿತ್ತು. ಮರುದಿನ ಅದು ‘ಇಸ್ಲಾಮ್ ಉಗ್ರರ ಕೈವಾಡವಿಲ್ಲ’, ‘ಆರ್‌ಡಿಎಕ್ಸ್ ಅಥವಾ ಅಮೋನಿಯಂ ನೈಟ್ರೇಟ್ ಬದಲು ಪಟಾಕಿ ಸ್ಫೋಟಕ ಬಳಕೆ. ಹೀಗಾಗಿ ದುಷ್ಕರ್ಮಿ ಉದ್ದೇಶ ಸ್ಫೋಟವಲ್ಲ, ಭಯದ ವಾತಾವರಣ ಸೃಷ್ಟಿ ಎಂಬ ಶಂಕೆ’ ಎಂದು ಬರೆಯಿತು. ಕನ್ನಡ ಪ್ರಭ ಪತ್ರಿಕೆ ಇಸ್ಲಾಮನ್ನು ಬಲವಂತವಾಗಿ ಹಾಗೂ ಯೋಜಿತವಾಗಿ ಈ ಪ್ರಕರಣದಲ್ಲಿ ಎಳೆದು ತಂದಿತು. ಟಿವಿ ಚಾನೆಲ್‌ವೊಂದು ಮೊದಲ ದಿನ ‘ಮಂಗಳೂರಿನಲ್ಲಿ ಸಿಕ್ಕಿದ್ದು ಅತಿದೊಡ್ಡ ಬಾಂಬ್’ ಎಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿತು. ಮಾರನೆ ದಿನ ಅದು ‘ಮಂಗಳೂರಲ್ಲಿ ಸಿಕ್ಕಿದ್ದು ಕಚ್ಚಾ ಬಾಂಬ್’ ಎಂದು ಯೂ ಟರ್ನ್ ಹೊಡೆಯಿತು. ನಮ್ಮಲ್ಲೇ ಮೊದಲು ಎಂದು ಸುದ್ದಿ ಬಿತ್ತರಿಸಿದವರು ಕೂಡ ಕೊನೆಯದಾಗಿ ತೀವ್ರ ನಿರಾಶರಾದಂತೆ ಕಂಡು ಬಂದರು. ಬಾಂಬ್ ಪತ್ತೆಯಾದ ದಿನ ಬಾಂಬ್‌ನ ತೀವ್ರತೆ ಹೆಚ್ಚಿತ್ತು. ಯಾಕೆಂದರೆ ಅದು ಮುಸ್ಲಿಮರ ಕೃತ್ಯವಾಗಿದ್ದಿರಬಹುದು ಎಂಬುದು ಮಾಧ್ಯಮಗಳ ಅಂದಾಜು ಆಗಿತ್ತು. ಆದರೆ ಆದಿತ್ಯ ರಾವ್ ಎಂಬ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಬಾಂಬ್‌ನ ತೀವ್ರತೆ ಕಡಿಮೆಯಾಗುತ್ತಾ ಹೋಯಿತು. ಅಂದರೆ ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಇಲ್ಲಿನ ಮಾಧ್ಯಮಗಳು ಯಾವ ರೀತಿಯಲ್ಲಿ ವಿಭಿನ್ನ ದೃಷ್ಟಿಕೋನಗಳಲ್ಲಿ ನೋಡುತ್ತದೆ ಎಂಬುವುದಕ್ಕೆ ಈ ಪ್ರಕರಣ ಒಂದು ಉದಾಹರಣೆಯಾಗಿದೆ. ಮಾಧ್ಯಮಗಳ ಈ ವಿಕೃತ ಚಾಳಿಯು ರೇಜಿಗೆ ಹುಟ್ಟಿಸುವಂಥದ್ದಾಗಿದೆ.

ಮಾಧ್ಯಮಗಳ ಈ ‘ಸ್ಫೋಟಕ’ ಸುದ್ದಿಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ‘ಮಂಗಳೂರು ಬಾಂಬ್ ಪ್ರಕರಣದಲ್ಲಿ ಶರಣಾಗತಿಯಾಗಿರುವ ಶಂಕಿತನ ಹೆಸರು ಆದಿತ್ಯ ರಾವ್. ಒಂದು ವೇಳೆ ಆತ ಮುಸ್ಲಿಮನಾಗಿದ್ದರೆ ಆಡಳಿತಾರೂಢ ಪಕ್ಷದ ನಾಯಕರ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು ಎಂಬುದನ್ನು ನೀವೇ ಊಹಿಸಿಕೊಳ್ಳಿ.’ ‘ಒಂದು ವೇಳೆ ಆದಿತ್ಯ ರಾವ್ ಬದಲಿಗೆ ಖಾನ್, ಸಿಖ್, ಕುರೇಷಿ ಆಗಿದ್ದರೆ ಆತನನ್ನು ಈಗಾಗಲೇ ಲಷ್ಕರ್-ಎ-ತೋಯ್ಬ, ಐಸಿಸ್, ಕೆಲವು ಮುಜಾಹಿದೀನ್ ಮತ್ತಿತರರೊಂದಿಗೆ ಜೋಡಿಸಲಾಗುತ್ತಿತ್ತು. ಭಾರತೀಯ ಮಾಧ್ಯಮ, ಇದು ಭಯೋತ್ಪಾದನಾ ಕೃತ್ಯವಲ್ಲವೇ?’, ಆದಿತ್ಯ ರಾವ್ ಒಬ್ಬ ಖಿನ್ನತೆಗೊಳಗಾದ ಮೆಕ್ಯಾನಿಕಲ್ ಎಂಜಿನಿಯರ್, ಬೇರೆಯವರೆಲ್ಲರೂ ಭಯಂಕರ ಭಯೋತ್ಪಾದಕರು’ ಮೊದಲಾದ ಪೋಸ್ಟ್‌ಗಳ ಮಾಧ್ಯಮಗಳ ಪಕ್ಷಪಾತ ಮತ್ತು ಪೂರ್ವಾಗ್ರಹಪೀಡಿತ ಮನೋಸ್ಥಿತಿಯನ್ನು ಟ್ವಿಟ್ಟರ್ ಬಳಕೆದಾರರು ತೆರೆದಿಟ್ಟರು.

ಇದೀಗ ಆದಿತ್ಯ ರಾವ್ ಕುರಿತು ವರದಿಯಾಗುತ್ತಿರುವ ಸುದ್ದಿಗಳು ಕುತೂಹಲಕಾರಿಯಾಗಿದೆ. ‘‘ಆದಿತ್ಯ ರಾವ್‌ನೊಂದಿಗೆ ಕಳೆದ ಎರಡು ವರ್ಷಗಳಿಂದ ಕುಟುಂಬದ ಸಂಪರ್ಕವಿಲ್ಲ. ಆದರೆ ಈ ಮೊದಲು ಆತನನ್ನು ಸರಿದಾರಿಗೆ ತರಲು ಹಲವು ಬಾರಿ ಯತ್ನಿಸಿದ್ದೆವು. ಆದಿತ್ಯ ರಾವ್‌ನನ್ನು ಸಂಪೂರ್ಣವಾಗಿ ಕುಟುಂಬದಿಂದ ಕೈಬಿಟ್ಟಿದ್ದೇವೆ. ಚಿಕ್ಕಂದಿನಿಂದಲೂ ಆತನೊಂದಿಗೆ ಸಂಪರ್ಕ ಕಡಿಮೆ ಇದೆ. ಕಳೆದ ಮೂರು ವರ್ಷಗಳಿಂದ ಆತನ ಮುಖವನ್ನೇ ನೋಡಿಲ್ಲ. ಇಂಜಿನಿಯರಿಂಗ್ ಹಾಗೂ ಎಂಬಿಎ ಶಿಕ್ಷಣ ಪಡೆದಿದ್ದಾನೆ. ಇದರ ಹೊರತಾಗಿ ಆತನ ವೈಯಕ್ತಿಕ ಮಾಹಿತಿ ನನಗಿಲ್ಲ’’ ಎಂದು ಆದಿತ್ಯ ರಾವ್‌ನ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಆದಿತ್ಯ ರಾವ್‌ನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲಾಗುತ್ತಿದ್ದೆಯಾದರೂ, ಆತನ ಕುರಿತು ಲಭ್ಯವಾಗುತ್ತಿರುವ ಮಾಹಿತಿಗಳು ಆತನ ಮಾನಸಿಕ ಅಸ್ವಸ್ಥನಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸುತ್ತಿದೆ. ಆದಿತ್ಯ ರಾವ್ ಕೆಲಸಕ್ಕಿದ್ದ ಮಂಗಳೂರಿನ ಹೊಟೇಲ್‌ನಲ್ಲಿ ಹೊಟೇಲ್ ಕೆಲಸಕ್ಕಾಗಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಆತನ ವೈಯಕ್ತಿಕ ಕಾರ್ಯಗಳಿಗಾಗಿ ಇದನ್ನು ಬಳಸುವುದಾಗಿ ಕೇಳಿಕೊಂಡಿದ್ದರೂ, ಅದಕ್ಕೆ ಹೊಟೇಲ್ ಅವಕಾಶ ನೀಡಿರಲಿಲ್ಲ. ಹಾಗಿದ್ದರೂ ಆತ ಇಂಟರ್‌ನೆಟ್ ಬಳಸುತ್ತಿರುವುದು ಕಂಡು ಬಂದಿತ್ತು. ಜೊತೆಗೆ ತಾನು ತರಿಸಿಕೊಳ್ಳುತ್ತಿದ್ದ ವಸ್ತುಗಳ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸುತ್ತಿದ್ದ ಆತ, ಇತರರಿಗೆ ಅದರ ಮಾಹಿತಿಯನ್ನೂ ಬಿಟ್ಟುಕೊಡುತ್ತಿರಲಿಲ್ಲ. ಆತನ ಚಲನವಲವೇ ನಿಗೂಢವಾಗಿತ್ತು ಎಂದು ಹೇಳಲಾಗಿದೆ. ಆತನಲ್ಲಿ ಯೂ ಟೂಬ್ ನೋಡಿ ಬಾಂಬ್ ತಯಾರಿಸುವ ಪ್ರಾವೀಣ್ಯತೆ ಇದೆ. ವ್ಯವಸ್ಥಿತವಾಗಿ ವಿಮಾನ ನಿಲ್ದಾಣದೊಳಗೆ ಬಾಂಬ್ ಸಾಗಿಸುವ ಬುದ್ಧಿಮತ್ತೆ ಇದೆ. ಆದರೂ ಆತನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸುತ್ತಿರುವುದು ಯಾಕೆಂದು ಬಲ್ಲವರೇ ಹೇಳಬೇಕಾಗಿದೆ.

‘ಆದಿತ್ಯ ರಾವ್ ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿದ್ದಾನೆ. ಶಂಕಿತ ಉಗ್ರನು ಬಳಕೆ ಮಾಡಿರುವುದು ತಾಂತ್ರಿಕವಾಗಿ ಸುಧಾರಿತ ಸ್ಫೋಟಕವಾಗಿದೆ. ಇಂಟರ್‌ನೆಟ್‌ನಲ್ಲಿ ಮಾಹಿತಿ ಪಡೆದು ಸ್ಫೋಟಕ ಜೋಡನೆ ಮಾಡಿದ್ದಾಗಿ ಸ್ವಇಚ್ಛಾ ಹೇಳಿಕೆ ನೀಡಿದ್ದಾನೆ’ ಎಂದು ನಾಲ್ಕು ದಿನಗಳ ಬಳಿಕ ಮಂಗಳೂರು ನಗರ ಕಮಿಷನರ್ ಡಾ.ಹರ್ಷ ಪಿ.ಎಸ್. ಮಾಹಿತಿ ನೀಡಿದ್ದಾರೆ. ‘ಬಾಂಬ್ ಮಾತ್ರವಲ್ಲ, ಬಾಂಬ್ ಇಟ್ಟ ಭಯೋತ್ಪಾದಕ ಶಕ್ತಿಗಳನ್ನೂ ಸಂಪೂರ್ಣವಾಗಿ ನಿಷ್ಕ್ರಿಯ ಮಾಡುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಾಂಬ್ ಪತ್ತೆಯಾದ ದಿನ ಹೇಳಿಕೆ ನೀಡಿದ್ದರು. ಆದರೆ ಪೊಲೀಸರ ತನಿಖೆಗೂ ಮೊದಲೇ, ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂಬ ಹೇಳಿಕೆಯನ್ನು ಅವರು ನೀಡಿದರು. ಜವಾಬ್ದಾರಿಯುತ ಸ್ಥಾನದಲ್ಲಿ ಸಚಿವರೊಬ್ಬರು ಭಯೋತ್ಪಾದಕನ ಪರವಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದಾದರೆ, ಆರೋಪಿಯ ಹಿಂದಿರುವ ಕಾಣದ ಕೈಗಳನ್ನು ತನಿಖೆಯ ಮೂಲಕ ಬಹಿರಂಗಪಡಿಸದೇ ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕವಾಗಿ ಮೂಡುತ್ತಿದೆ.

ಮಾಧ್ಯಮಗಳು ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಇದು ಮೊದಲೇನಲ್ಲ. ಈ ಬಾರಿ ಸಿಸಿಟಿವಿ ದೃಶ್ಯಾವಳಿಯಲ್ಲಿ ಆದಿತ್ಯ ರಾವ್ ಮುಖ ಸ್ಪಷ್ಟವಾಗಿ ಗೋಚರಿಸಿತ್ತು. ಬಹುಶಃ ಇದು ಮಾಧ್ಯಮಗಳ ಮತ್ತಷ್ಟು ಬ್ರೇಕಿಂಗ್ ನ್ಯೂಸ್‌ಗಳಿಗೆ ಬಹುದೊಡ್ಡ ತಡೆಯಾಯಿತು ಅನ್ನಬಹುದು. ಆದಿತ್ಯ ರಾವ್ ಬಂಧನವಾಗದೇ ಇರುತ್ತಿದ್ದರೆ, ಬಹುಶಃ ಇಷ್ಟೊತ್ತಿಗಾಗಲೇ ಹಲವು ಅಮಾಯಕ ಜೀವನದೊಂದಿಗೆ ಚೆಲ್ಲಾಟವಾಡುವ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿತ್ತು.

ಮಾಧ್ಯಮಗಳು ಮತ್ತು ಪೊಲೀಸರು ಮುಸ್ಲಿಮರನ್ನು ಸಂಪೂರ್ಣವಾಗಿ ರಾಕ್ಷಸೀಕರಿಸಿದ ಚಿತ್ರಣಗಳು ಹಿಂದೆ ನಡೆದ ಹಲವು ಘಟನೆಗಳಲ್ಲಿ ಕಾಣಬಹುದಾಗಿದೆ. 2008ರ ಮೇ ತಿಂಗಳಲ್ಲಿ ಹುಬ್ಬಳ್ಳಿಯ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದ ತಕ್ಷಣ ನಮ್ಮ ಪೊಲೀಸರು, ಗುಪ್ತಚರ, ಮಾಧ್ಯಮಗಳ ಲಷ್ಕರ್-ಎ-ತೋಯ್ಬ, ಸಿಮಿ, ಇಂಡಿಯನ್ ಮುಜಾಹಿದೀನ್ ಹೆಸರಿನ ಪೂರ್ವ ನಿರ್ಧರಿತ ಸ್ಕ್ರಿಪ್ಟ್‌ನ್ನು ಹರಿಯಬಿಟ್ಟಿದ್ದರು. ಸ್ಫೋಟದಲ್ಲಿ ಈ ನಿಷೇಧಿತ ಸಂಘಟನೆಗಳು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್, ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಇನ್ನು ಹಸಿದ ತೋಳಗಳಂತಿದ್ದ ನ್ಯೂಸ್ ಚಾನೆಲ್‌ಗಳು ಚಿತ್ರ-ವಿಚಿತ್ರ ವರದಿಗಳನ್ನು ಪ್ರಸಾರ ಮಾಡಿದ್ದವು. ಈ ಎಲ್ಲಾ ಹೈಡ್ರಾಮಾದ ಬಳಿಕ ಅಂತಿಮವಾಗಿ ಸತ್ಯ ಹೊರಬಿದ್ದಿತ್ತು. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ನ ಬಂಟ ನಾಗರಾಜ ಜಂಬಗಿ ಮತ್ತು ಆತನ ಸಹಚರರನ್ನು ಬಂಧಿಸುವುದರೊಂದಿಗೆ ಪ್ರಕರಣವು ಬೇರೆಯೇ ತಿರುವು ಪಡೆದಿತ್ತು. ಪ್ರಕರಣಕ್ಕೆ ಹಿಂದುತ್ವ ಆಯಾಮವನ್ನು ತಪ್ಪಿಸಲು ಇದೊಂದು ರೌಡಿಗಳ ಕೃತ್ಯ ಎಂದು ಬಣ್ಣಿಸಲಾಗಿತ್ತು. ನಂತರದಲ್ಲಿ, ಹುಬ್ಬಳ್ಳಿ ಸ್ಫೋಟ ಪ್ರಕರಣ ಭಯೋತ್ಪಾದಕ ದಾಳಿಯಲ್ಲ ಎಂಬ ವರದಿಯನ್ನು ಪತ್ರಿಕೆಗಳು ಪ್ರಕಟಿಸಿದವು. ಯಾವುದೇ ಬಾಂಬ್ ಸ್ಫೋಟವು ಭಯೋತ್ಪಾದಕ ಕೃತ್ಯವಾಗಬೇಕಾದರೆ ಅದಕ್ಕಿರಬೇಕಾದ ಮಾನದಂಡವೇನು? ಹಿಂದುತ್ವದ ಶಕ್ತಿಗಳು ಅಥವಾ ರೌಡಿಗಳು ಸ್ಫೋಟ ನಡೆಸಿದರೆ ಅದನ್ನು ಭಯೋತ್ಪಾದಕ ಕೃತ್ಯವೆಂದು ವ್ಯಾಖ್ಯಾನಿಸಬಾರದೇ? ನಂತರ ಆರೋಪಿ ಮುತಾಲಿಕ್ ಸಹಚರ ನಾಗರಾಜ ಜಂಬಗಿ ಜೈಲಿನೊಳಗೆಡೆಯೇ ನಿಗೂಢವಾಗಿ ಹತ್ಯೆಯಾಗುವುದರೊಂದಿಗೆ ಈ ಪ್ರಕರಣವು ಹಳ್ಳಹಿಡಿಯಿತು. ಆದರೆ ಸ್ಫೋಟದ ನಡೆದಾಕ್ಷಣ ಮತ್ತು ನಂತರ ಆರೋಪಿಗಳ ಬಂಧನದ ವೇಳೆ ಮಾಧ್ಯಮ ಮತ್ತು ಪೊಲೀಸರ ನಡೆಗಳು ಇಲ್ಲಿ ಗಮನಾರ್ಹವಾಗಿದೆ.

ಹೈದರಾಬಾದ್ ಮಕ್ಕಾ ಮಸ್ಜಿದ್ ಸ್ಫೋಟ, ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ, ಮಾಲೇಗಾಂವ್‌ನಲ್ಲಿ ನಡೆದ ಎರಡು ಸ್ಫೋಟಗಳು ಮತ್ತು ಮಡ್ಗಾಂವ್ ಸ್ಫೋಟ ಈ ಎಲ್ಲಾ ಸಂದರ್ಭಗಳಲ್ಲಿಯೂ ಮಾಧ್ಯಮಗಳು ಭಯೋತ್ಪಾದನೆಯ ಆರೋಪ ಹೊರಿಸಿ ಮುಸ್ಲಿಮ್ ಸಮುದಾಯದ ತೇಜೋವಧೆ ನಡೆಸುವ ಕೃತ್ಯದಲ್ಲಿ ತೊಡಗಿದ್ದವು. ಹೈದರಾಬಾದ್‌ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ಆರೋಪಿಗಳ ಪೈಕಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಮತೀವುರ್ರಹ್ಮಾನ್ ಸಿದ್ದೀಕಿಯೂ ಒಬ್ಬನಾಗಿದ್ದ. ಇವರ ಬಂಧನದ ವೇಳೆ ರಾಜ್ಯದ ಮುಖ್ಯವಾಹಿನಿ ಮಾಧ್ಯಮಗಳು, ಕಲ್ಪಿತ ಸುದ್ದಿಯನ್ನು ಪುಂಖಾನುಪುಂಖವಾಗಿ ಹರಿಯಬಿಟ್ಟರು. ಮಾಧ್ಯಮಗಳಲ್ಲಿ ವಿಶೇಷವಾಗಿ ಟಿವಿ ಚಾನೆಲ್‌ಗಳಲ್ಲಿ ವರ್ಣರಂಜಿತವಾದ ಸುದ್ದಿಗಳು ಪ್ರಸಾರವಾಗಿದ್ದವು. ಮತೀವುರ್ರಹ್ಮಾನ್ ಕೆಲಸ ಮಾಡುತ್ತಿದ್ದ ಪತ್ರಿಕೆ ಕೂಡ ಆತನನ್ನು ಶಂಕಿತ ಭಯೋತ್ಪಾದಕ ಎಂದೇ ಬರೆದಿತ್ತು. ಆದರೆ ಕೊನೆಗೆ ಮತೀವುರ್ರಹ್ಮಾನ್ ಸಿದ್ದೀಕಿಗೆ ಎನ್‌ಐಎ ಕ್ಲೀನ್‌ಚಿಟ್ ನೀಡಿತು. ಆದರೆ ಸಿದ್ದೀಕಿಯನ್ನು ಭಯೋತ್ಪಾದಕನೆಂದು ಜರೆದ ಅದೇ ಮಾಧ್ಯಮಗಳು ಆತನ ಬಿಡುಗಡೆಯಾಗುವಾಗ ಸಿಂಗಲ್ ಕಾಲಂ ಸುದ್ದಿಗೂ ಪ್ರಾಮುಖ್ಯತೆ ನೀಡಲಿಲ್ಲ. ಇಲ್ಲಿ ನಾವು ಪೊಲೀಸ್ ಮತ್ತು ಮಾಧ್ಯಮಗಳ ಪೂರ್ವಾಗ್ರಪೀಡಿತ ಮನೋಸ್ಥಿಯನ್ನು ಅರ್ಥಮಾಡಿಕೊಳ್ಳಬಹುದು.

ಹವಾಲಾ ಹಣದ ವಹಿವಾಟು ನಡೆಸಿದ್ದಾಳೆಂಬ ಆರೋಪದಲ್ಲಿ ಬಂಧಿತರಾಗಿದ್ದ ಮಂಗಳೂರಿನ ಆಯೇಷ ಮತ್ತು ಝುಬೈರ್ ದಂಪತಿಯನ್ನು ಮಾಧ್ಯಮಗಳು ಭಯೋತ್ಪಾದಕರಾಗಿ ಚಿತ್ರಿಸಿದವು. ‘ಪಾಟ್ನಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಂಗಳೂರಿನ ಆಯೇಷಾ’ ಮತ್ತಿತರ ಶೀರ್ಷಿಕೆಯಡಿ ಕರಾಳಿಯ ಕೆಲವು ಪ್ರಮುಖ ಪತ್ರಿಕೆಗಳು ಎಂದಿನಂತೆ ಒಂದು ವರ್ಗದ ಹಿತಾಸಕ್ತಿಯ ಕರಪತ್ರಗಳಾಗಿ ಕಾರ್ಯನಿರ್ವಹಿಸಿದವು. ಇತ್ತ ಪೊಲೀಸರು ಆಯಿಷಾಳನ್ನು ಬಂಧಿಸಿರುವುದು ಭಯೋತ್ಪಾದನಾ ಕೃತ್ಯಗಳಿಗಲ್ಲ, ಬದಲಾಗಿ ಕಾನೂನುಬಾಹಿರ ಹವಾಲಾ ಹಣದ ವ್ಯವಹಾರದಲ್ಲಿ ತೊಡಗಿದ್ದಾಳೆಂಬ ಆರೋಪದಡಿಯಲ್ಲಿ ಎಂದರೂ ಮಾಧ್ಯಮಗಳು ಮಾತ್ರ ತಮ್ಮ ವರಾತವನ್ನು ಮುಂದುವರಿಸುತ್ತಾ ಕಪೋಲಕಲ್ಪಿತ ವರದಿಯನ್ನು ಪ್ರಕಟಿಸಿದವು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಪಾಟ್ನಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಪಾಕಿಸ್ತಾನಿ ಸಂಘಟನೆಯೊಂದಿಗೆ ವ್ಯವಹಾರ ನಡೆಸುತ್ತಿದ್ದ ಪವನ್, ವಿಕಾಸ್, ಗಣೇಶ್ ಪ್ರಸಾದ್, ಗೋಪಾಲ್ ಗೋಯಲ್‌ನನ್ನು ಬಂಧಿಸಿದ್ದ ಮಾಹಿತಿಯನ್ನು ಪೊಲೀಸರೇ ಬಹಿರಂಗಪಡಿಸಿದ್ದರು. ಬಂಧಿತರು ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್‌ಐನ ಸಂಪರ್ಕದಲ್ಲಿದ್ದರು ಮತ್ತು ಅವರಿಗೆ ಪಾಕಿಸ್ತಾನದಿಂದ ದೊಡ್ಡ ಮೊತ್ತದ ಹಣವನ್ನು ಕಳುಹಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದರು. ಆದರೆ ಸ್ಫೋಟದಲ್ಲಿ ಹಿಂದುತ್ವವಾದಿಗಳ ಕೈವಾಡ ಬಯಲಾಗುತ್ತಿದ್ದಂತೆಯೇ ಮಾಧ್ಯಮಗಳ ಪಾಕಿಸ್ತಾನ ವ್ಯಾಮೋಹ ಕಡಿಮೆಯಾಗಿತ್ತು. ಪಾಟ್ನಾದ ಸ್ಫೋಟದ ವೇಳೆ ಇಂಡಿಯನ್ ಮುಜಾಹಿದೀನ್ ಹೆಸರಿನೊಂದಿಗೆ ಮುಸ್ಲಿಮರ ತೇಜೋವಧೆ ನಡೆಸಿದ ಮಾಧ್ಯಮಗಳು ನೈಜ ಆರೋಪಿಗಳ ಬಂಧನದ ಬಳಿಕ ಸಾರ್ವಜನಿಕವಾಗಿ ಬೆತ್ತಲಾಗಿದ್ದವು.

ಈ ಹಿಂದೆ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ದೇವೇಂದರ್ ಸಿಂಗ್ ಜಡೇಜಾ ಎಂಬ ಯುವಕ ಕುಕ್ಕರ್ ಬಾಂಬ್ ತಯಾರಿಸಿದ್ದ. ಈ ಸಂಬಂಧ ಪೊಲೀಸರು ಆತನ ಬೆನ್ನು ಬಿದ್ದಾಗ ಆತ ಕೂಡಲೇ, ‘‘ತನ್ನನ್ನು ಜನರು ಗುರುತಿಸುವಂತಾಗಲೂ ಮತ್ತು ಮಾಧ್ಯಮಗಳಲ್ಲಿ ತನ್ನ ಹೆಸರು ರಾರಾಜಿಸುವಂತಾಗಲು ಈ ಕೃತ್ಯ ಎಸಗಿದೆ’’ ಎಂದು ಹೇಳಿಕೆ ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕೆಯೊಂದು ನೀಡಿದ ಶೀರ್ಷಿಕೆ ಆಘಾತಕಾರಿಯಾದದ್ದು. ಅದು ‘ಕುಕ್ಕರ್ ಬಾಂಬ್ ತಯಾರಿಸಿದಾತ ಇಸ್ಲಾಮಿನ ಬಗ್ಗೆ ತಿಳುವಳಿಕೆಯುಳ್ಳವ’ ಎಂದು ಪ್ರಕಟಿಸಿತ್ತು. ಇದೀಗ ಆದಿತ್ಯ ರಾವ್ ಪ್ರಕರಣದಲ್ಲೂ ಬಹಳಷ್ಟು ನಿಗೂಢತೆಗಳು ಕಂಡು ಬರುತ್ತಿವೆ. ಪೊಲೀಸ್ ಕಮಿಷನರ್ ಒಂದು ರೀತಿಯ ಹೇಳಿಕೆ ನೀಡುತ್ತಿದ್ದರೆ, ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯದ ಗೃಹ ಸಚಿವರು ತನಿಖೆಗೂ ಮೊದಲು ಶಂಕಿತ ಭಯೋತ್ಪಾದಕನಿಗೆ ಮಾನಸಿಕ ಅಸ್ವಸ್ಥನ ಸರ್ಟಿಫಿಕೇಟ್ ನೀಡಿದ್ದಾರೆ. ಭಯೋತ್ಪಾದನೆಯ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟವನು ಮುಸ್ಲಿಮನಾದರೆ ಕೊನೆಗಾಲದ ವರೆಗೂ ಶಾಶ್ವತ ಶಂಕಿತರಾಗಿಯೇ ಬದುಕಬೇಕಾಗುತ್ತದೆ. ಆದರೆ ಹಿಂದುತ್ವದ ಆಶ್ರಯ ಹೊಂದಿರುವ ವ್ಯಕ್ತಿಗಳ ಭಯೋತ್ಪಾದನೆಯ ಕಳಂಕವನ್ನು ತೊಡೆದುಹಾಕಲು ಮಾಧ್ಯಮ ಮತ್ತು ವ್ಯವಸ್ಥೆಯು ಎಂತಹ ಕಸರತ್ತಿಗೂ ಸೈ ಎಂದು ಹೇಳುತ್ತವೆ.

ಅಂದ ಹಾಗೆ ಮಂಗಳೂರಿಗೂ ಉಗ್ರರ ನಂಟು ಇಲ್ಲವೆಂದೇನಲ್ಲ. 2009ರಲ್ಲಿ ಗೋವಾದ ಮಡ್ಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೊದಲಿಗೆ ಮುಸ್ಲಿಮರನ್ನು ದೇಶದ್ರೋಹಿ ಮತ್ತು ಹಿಂದೂ ವಿರೋಧಿಗಳೆಂದು ಬಿಂಬಿಸಲಾಯಿತಾದರೂ, ಆ ನಂತರ ಸಂಘಪರಿವಾರದ ಕಾರ್ಯಕರ್ತರ ಕೈವಾಡ ಬೆಳಕಿಗೆ ಬಂತು. ಸನಾತನ ಸಂಸ್ಥೆಯ ಕಾರ್ಯಕರ್ತರು ಈ ಸ್ಫೋಟದಲ್ಲಿ ಭಾಗಿಯಾಗಿದ್ದು, ಪ್ರಕರಣದ ರೂವಾರಿ ಪುತ್ತೂರಿನ ಜಯ ಪ್ರಕಾಶ್ ಎಂಬವನ ಶೋಧಕ್ಕಾಗಿ ಎನ್‌ಐಎ ಬಲೆ ಬೀಸಿತ್ತು. ಪುತ್ತೂರಿಗೆ ಭೇಟಿ ನೀಡಿದ್ದ ಎನ್‌ಐಎ ಪುತ್ತೂರು ಪರಿಸರದಲ್ಲಿ ಶೋಧ ಕಾರ್ಯ ನಡೆಸಿತ್ತು. ಆದರೆ ಇದುವರೆಗೂ ಜಯ ಪ್ರಕಾಶ್‌ನ ಸುಳಿವು ದೊರಕಿಲ್ಲ. ನಾಡಿನ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹತ್ಯೆಯಲ್ಲೂ ಸಂಘಪರಿವಾರದ ಕಾರ್ಯಕರ್ತರ ಹೆಸರು ಕೇಳಿ ಬಂದಿದೆ. ಇದರ ಜಾಲ ದಕ್ಷಿಣ ಕನ್ನಡ ಜಿಲ್ಲೆಯ ವರೆಗೂ ಹಬ್ಬಿರುವುದು ಮಾತ್ರವಲ್ಲ, ಹಂತಕರು ಇಲ್ಲಿನ ತೋಟವೊಂದರಲ್ಲಿ ತರಬೇತಿ ಪಡೆದಿದ್ದರೆಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದರು.
ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದ ಗಿರೀಶ್ ಮಟ್ಟಣ್ಣವರ್ ವಿಧಾನಸೌಧಕ್ಕೆ ಬಾಂಬಿಟ್ಟು ಸುದ್ದಿಯಾಗಿದ್ದ. ನಂತರ ಆ ವ್ಯಕ್ತಿ ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನವನ್ನು ಅಲಂಕರಿಸಿದ. ದೇಶವನ್ನೇ ಅಲುಗಾಡಿಸಿದ ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಗಂಭೀರ ಆರೋಪ ಹೊತ್ತಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಇದೀಗ ಸಂಸತ್ತಿನ ಭಾಗವಾಗಿದ್ದಾಳೆ. ಇವರೆಲ್ಲರೂ ಬಿಜೆಪಿಯ ಕೃಪಾಶೀರ್ವಾದದಿಂದ ಅಂತಹ ಹುದ್ದೆಗೇರಿದರು ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಇಂಥದ್ದರಲ್ಲಿ ರಾಜ್ಯದ ಗೃಹ ಸಚಿವರು ಶಂಕಿತ ಭಯೋತ್ಪಾದಕ ಕುರಿತು ಮೃದು ಧೋರಣೆ ತಾಳಿರುವುದು ಸಹಜ ಸಂಶಯವನ್ನು ಹುಟ್ಟು ಹಾಕುತ್ತಿದೆ. ಮಂಗಳೂರು ಘಟನೆಯ ಆರೋಪಿ ಮುಸ್ಲಿಮನೆಂದು ಕಲ್ಪಿಸಿದ್ದ ಮಾಧ್ಯಮಗಳು ಆರೋಪವನ್ನು ಇಡೀ ಸಮುದಾಯದ ಮೇಲೆ ಹೊರಿಸಲು ತುದಿಗಾಲಲ್ಲಿ ನಿಂತಿದ್ದವು. ಆದರೆ ಆದಿಲ್ ಬದಲಿಗೆ ಆದಿತ್ಯ ರಾವ್ ಗೋಚರಿಸಿದಾಗ ಏಕ ವ್ಯಕ್ತಿಯ ಕೃತ್ಯ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅದರರ್ಥ ಘಟನೆಯನ್ನು ಮತ್ತೊಂದು ಸಮುದಾಯದ ಮೇಲೆ ಹೊರಿಸಬೇಕೆಂಬ ವಾದವಲ್ಲ. ಈಗಾಗಲೇ ಪೊಲೀಸ್ ಕಮಿಷನರ್ ಹೇಳಿರುವಂತೆ ಆತ ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಾಗಿದ್ದಾನೆ. ಈ ನಿಟ್ಟಿನಲ್ಲಿ ಆತನಿಗೆ ಸಹಕರಿಸಿದ ಹಾಗೂ ಪ್ರಚೋದಿಸಿ ಮತ್ತು ಆತನ ಹಿಂದಿರುವ ಕಾಣದ ಕೈಗಳನ್ನು ಬಹಿರಂಗಪಡಿಸುವುದು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ತನಿಖೆ ಸಾಗಿದರೆ ಘಟನೆಯ ಪಿತೂರಿಯನ್ನು ಬಹಿರಂಗಪಡಿಸಬಹುದು.