ದವೀಂದರ್ ಸಿಂಗ್‌ನನ್ನು ಹರಕೆಯ ಕುರಿ ಮಾಡಲಾಗಿದೆಯೇ?

0
58

-ಸೈಯ್ಯದ್ ಅಲಿ ಮುಜ್ತಬ

ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸಿಖ್ ಅಧಿಕಾರಿ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ದವೀಂದರ್ ಸಿಂಗ್, ಮೂವರು ಉಗ್ರರನ್ನು ಕಾಶ್ಮೀರ ಕಣಿವೆಯಿಂದ ಒಳನುಸುಳಲು ಅವಕಾಶ ಮಾಡಿಕೊಟ್ಟಿದ್ದ ಎಂದು ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಈ ಸುದ್ದಿಗೆ ಅಧಿಕಾರಿಯ ಬಂಧನದ ಹೊರತಾಗಿ ಏನೋ ಆಳವಾದ ಸಂಚು ಇರುವಂತೆ ತೋರುತ್ತದೆ.

ಮಾಧ್ಯಮಗಳ ಕತೆಯನ್ನು ಪುನಃ ಓದುವ; ಪೊಲೀಸ್ ಸಹಾಯಕ ವರಿಷ್ಠಾಧಿಕಾರಿಯಾಗಿರುವ ದವೀಂದರ್ ಸಿಂಗ್‌ನನ್ನು ನಿಷೇಧಿತ ಹಿಜ್ಬುಲ್ ಮುಜಾಹಿದ್ದಿನ್‌ನ ಜಿಲ್ಲಾ ಕಮಾಂಡರ್ ನವೀದ್ ಬಾಬು, ಹೊಸದಾಗಿ ಉಗ್ರ ಸಂಘಟನೆ ಸೇರಿರುವ ಅತಿಫ್ ಮತ್ತು ವಕೀಲ ಇರ್ಫಾನ್ ಮಿರ್ ಜೊತೆ ಬಂಧಿಸಲಾಗಿದೆ. ಈ ನಾಲ್ವರು ದಕ್ಷಿಣ ಕಾಶ್ಮೀರದ ಖಾಝಿಗಂದ್ ಸಮೀಪ ಸಶಸ್ತ್ರ ಹಾಗೂ ಸ್ಫೋಟಕಗಳ ಜೊತೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ.
ಈ ಮಕ್ಕಳ ಕತೆಯನ್ನು ಪ್ರಬುದ್ಧತೆಯಿಲ್ಲದ ಪತ್ರಿಕೆಗಳಲ್ಲಿ ಓದುವಾಗ ಮತ್ತು ದೃಶ್ಯ ಮಾಧ್ಯಮಗಳ ಹೊಸ ನಿರೂಪಕರ ಬಾಯಲ್ಲಿ ಕೇಳಿದಾಗಿ ನಗು ಬರುತ್ತದೆ. ಯಾಕೆಂದರೆ ಈ ಸುದ್ದಿಗೆ ಆ ರೀತಿ ಉಪ್ಪುಖಾರ ಹಾಕಿ ಹೇಳಲಾಗುತ್ತದೆ.

ಸಂಘರ್ಷಪೀಡಿತ ಜಮ್ಮು ಮತ್ತು ಕಾಶ್ಮೀರದ ಓರ್ವ ಅತ್ಯುತ್ತಮ ದರ್ಜೆಯ ಮಧ್ಯಮ ಕ್ರಮಾಂಕದ ಪೊಲೀಸ್ ಅಧಿಕಾರಿ ದಿನಬೆಳಗಾಗುವುದರೊಳಗೆ ಕಳಂಕಿತನಾಗಿ ಕ್ಷುಲ್ಲಕ ರೀತಿಯಲ್ಲಿ ಬಂಧನಕ್ಕೊಳಗಾಗಲು ಹೇಗೆ ಸಾಧ್ಯ?
ಪ್ರಥಮವಾಗಿ ಈ ಸುದ್ದಿಗೆ ವ್ಯಕ್ತವಾಗುವ ಪ್ರತಿಕ್ರಿಯೆಯೆಂದರೆ, ಸಂಘರ್ಷ ವಲಯವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಯಾವುದೋ ಪ್ರಮಾದ ಮತ್ತು ಅದರ ಇಹಪರವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿರುವ ಕಾರಣ ಅದನ್ನು ಮರೆಮಾಚುವ ಉದ್ದೇಶದಿಂದ ಈ ಕತೆಯನ್ನು ಭದ್ರತಾ ಪಡೆ ಹೆಣೆದಿದೆ ಎನ್ನುವುದು.

ಸದ್ಯ ದವೀಂದರ್ ಸಿಂಗ್ ಪ್ರಕರಣ ಮಾಧ್ಯಮಗಳಲ್ಲಿ ಹರಿದಾಡುತ್ತಿರುವು ದರಿಂದ ಈ ಪ್ರಕರಣದ ಆಳಕ್ಕೆ ಹೋಗಿ ನಮ್ಮ ಬುದ್ಧಿಶಕ್ತಿ ಅರಗಿಸಿಕೊಳ್ಳುವಂತಹ ಅಭಿಪ್ರಾಯಕ್ಕೆ ಬರುವುದು ಒಳಿತು.
ಮುಖ್ಯವಾಗಿ, ದವೀಂದರ್ ಸಿಂಗ್ ಬಂಧನ ಪ್ರಕರಣದಲ್ಲಿ ಐದು ವಾದಗಳು ಹರಿದಾಡುತ್ತಿವೆ. ಮೊದಲನೆಯದು, ದವೀಂದರ್ ಸಿಂಗ್‌ಗೆ ಉಗ್ರರ ಜೊತೆ ಸಂಪರ್ಕವಿತ್ತು ಮತ್ತು ರಾಜ್ಯ ಪೊಲೀಸರು ಆತನ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದರು ಮತ್ತು ಆತನನ್ನು ಮೂವರು ಉಗ್ರರ ಜೊತೆ ರೆಡ್ ಹ್ಯಾಂಡಾಗಿ ಬಂಧಿಸಿದ್ದರು.
ಈ ಕತೆಯು ನಮಗೆ ಸಮಾಧಾನ ನೀಡುವ ಬದಲು ಅನೇಕ ಪ್ರಶ್ನೆಗಳನ್ನು ಎತ್ತುವ ಮೂಲಕ ಈ ಪಿತೂರಿಯನ್ನು ಆಳವಾಗಿ ತನಿಖೆ ನಡೆಸಲು ನಮ್ಮನ್ನು ಒತ್ತಾಯಿಸುತ್ತದೆ.

ಕೆಲವೇ ದಿನಗಳ ಹಿಂದೆ ಕಣಿವೆಯ ಪರಿಸ್ಥಿತಿ ಅವಲೋಕಿಸಲು ಶ್ರೀನಗರಕ್ಕೆ ತೆರಳಿದ್ದ ಅಧಿಕಾರಿಗಳನ್ನು ಕೊಂಡೊಯ್ದ ವಿಮಾನದ ಸಮೀಪ ಕಂಡುಬಂದಿದ್ದ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿ ಅದು ಹೇಗೆ ದೇಶವಿರೋಧಿ ಕೃತ್ಯದಲ್ಲಿ ರೆಡ್‌ಹ್ಯಾಂಡಾಗಿ ಸಿಕ್ಕಿಬೀಳಲು ಸಾಧ್ಯ.
ದವೀಂದರ್ ಸಿಂಗ್ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ, ಆತನಿಗೆ ಉಗ್ರರ ಜೊತೆ ಸಂಪರ್ಕವಿತ್ತು ಎನ್ನುವ ವಾದವನ್ನು ಈ ಕತೆ ಮಂಡಿಸಲು ಯತ್ನಿಸುತ್ತದೆ.
ಕಾಶ್ಮೀರದಂತಹ ಸಂಘರ್ಷಪೀಡಿತ ವಲಯದಲ್ಲಿ ಪ್ರತಿ ನಾಗರಿಕ ಚಟುವಟಿಕೆಯ ಮೇಲೂ ಭದ್ರತಾ ಪಡೆಯ ನಿಗಾಯಿರುವಾಗ ಓರ್ವ ಸಮವಸ್ತ್ರ ಧರಿಸಿರುವ ಅಧಿಕಾರಿ ಯಾವುದೇ ಕಣ್ಗಾವಲು ಇಲ್ಲದೆ ಕಾರ್ಯಾಚರಿಸಲು ಅವಕಾಶ ನೀಡಲು ಹೇಗೆ ಸಾಧ್ಯ?
ಖಂಡಿತವಾಗಿಯೂ ಈ ಕಟ್ಟುಕತೆ ಯನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಂಯೋಜಿತ ಹಾಗೂ ತಿರುಚಿದ ಕತೆಗಳಿಗೆ ಉದಾಹರಣೆಯಾಗಿ ನೀಡುವುದು ಸೂಕ್ತ.

ಎರಡನೆ ಕತೆಯ ಪ್ರಕಾರ, ದವೀಂದರ್ ಸಿಂಗ್ ಓರ್ವ ಭ್ರಷ್ಟ ಅಧಿಕಾರಿಯಾಗಿದ್ದು ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದ. ಹಣ ಯಾವ ಮೂಲದಿಂದ ಬರುತ್ತಿದೆ ಎನ್ನುವ ಬಗ್ಗೆ ಚಿಂತಿಸದ ಆತ ಅದಕ್ಕಾಗಿ ಯಾರಿಗೂ ನೆರವು ನೀಡಲು ಸಿದ್ಧನಾಗಿದ್ದ.
ಈ ವಾದ, ದವೀಂದರ್ ಸಿಂಗ್ ಓರ್ವ ಭ್ರಷ್ಟ ಅಧಿಕಾರಿಯಾಗಿದ್ದ ಮತ್ತು ಹಣ ಗಳಿಸಲು ಕಣಿವೆಯಲ್ಲಿ ಸಂಘರ್ಷದ ವಾತಾವರಣವನ್ನು ಬಳಸಿಕೊಂಡಿದ್ದ ಎನ್ನುವುದನ್ನು ಪ್ರತಿಪಾದಿಸುತ್ತದೆ.

ಈ ವಾದವನ್ನು ಬೆಂಬಲಿಸಲು ಮುಂದಿಡಲಾಗಿರುವ ವಿಷಯಗಳ ನೈಜಾಂಶವನ್ನು ಪರಿಶೀಲಿಸಿದಾಗ ಇದೊಂದು ಕಟ್ಟುಕತೆಯೆಂದು ತಿಳಿಯುತ್ತದೆ. ಈ ಉದ್ಯಮಿ ಪೊಲೀಸ್ ಅಧಿಕಾರಿ ವಾದವು ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಎತ್ತುವ ಮೂಲಕ ತಾರ್ಕಿಕ ಪರೀಕ್ಷೆಯಲ್ಲಿ ವಿಫಲವಾಗುತ್ತದೆ; ಇಂತಹ ಓರ್ವ ವಂಚಕ ಹಿನ್ನೆಲೆಯ ಅಧಿಕಾರಿಯನ್ನು ಅಂತಹ ಉನ್ನತ ದರ್ಜೆಯಲ್ಲಿ ಕಾರ್ಯಾಚರಿಸಲು ಅದರಲ್ಲೂ ಒಂದು ಸಂಘರ್ಷಪೀಡಿತ ಪ್ರದೇಶದಲ್ಲಿ ಕಾರ್ಯಾಚರಿಸಲು ಅವಕಾಶ ನೀಡಿದ್ದಾದರೂ ಹೇಗೆ?
ಮೂರನೆ ವಾದವೆಂದರೆ, ದವೀಂದರ್ ಸಿಂಗ್ ಯಾವುದೋ ಗುಪ್ತಚರ ಸಂಸ್ಥೆಗೆ ಕೆಲಸ ಮಾಡುತ್ತಿದ್ದ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ವಿವಿಧ ಗುಪ್ತಚರ ಸಂಸ್ಥೆಗಳ ನಡುವಿನ ಅಂತರ್‌ಸೇವಾ ವೈರತ್ವದ ಬಲಿಪಶುವಾಗಿದ್ದಾನೆ.
ಈ ವಾದ ಒಂದಷ್ಟು ಸಾಧ್ಯತೆಯನ್ನು ಹೊಂದಿದೆ. ಪೊಲೀಸರ ವಿಚಾರಣೆಯ ವೇಳೆ ದವೀಂದರ್ ಸಿಂಗ್ ಏನು ಹೇಳಿದ್ದ ಎನ್ನುವುದನ್ನು ಒಮ್ಮೆ ಗಮನಿಸಿ, ‘ಇದೊಂದು ಆಟ ಮತ್ತು ಈ ಆಟವನ್ನು ಹಾಳುಗೆಡವಬೇಡಿ’.
ಇದರರ್ಥ ಆತ ಯಾವುದೋ ಗುಪ್ತಚರ ಸಂಸ್ಥೆ, ಬಹುಶಃ, ರಹಸ್ಯ ಪೊಲೀಸ್, ಆಡಳಿತಾತ್ಮಕ ಸಂಸ್ಥೆಗಳು, ರಾ, ಐಬಿ ಇತ್ಯಾದಿ. ಅದರ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ದವೀಂದರ್ ಸಿಂಗ್‌ನನ್ನು ಅಪರಾಧಿ ಮಾಡಲಾಗಿದೆ.

ಸಂಘರ್ಷಪೀಡಿತ ಪ್ರದೇಶದಲ್ಲಿ ಇಂತಹ ಪರಿಸ್ಥಿತಿಗಳು ಎದುರಾಗುವುದು ಸಹಜ. ಯಾಕೆಂದರೆ ಇಲ್ಲಿ ಅಧಿಕಾರಿಗಳು ಹೆಚ್ಚಿನ ಪ್ರಶಂಸೆ ಗಳಿಸುವ ಮತ್ತು ಗಮನಿಸಲ್ಪಡುವ ಉದ್ದೇಶದಿಂದ ಪರಸ್ಪರ ಪೂರಕವಾಗಿ ಕೆಲಸ ಮಾಡದೆ ವಿರುದ್ಧವಾಗಿ ಕಾರ್ಯಾಚರಿಸುತ್ತಾರೆ. ಮೊದಲೆರಡು ಕತೆಗಳಿಗೆ ಹೋಲಿಸಿದರೆ ಈ ಕತೆ ಹೆಚ್ಚು ನಂಬಬಹುದಾಗಿದೆ. ಆದರೆ ಇಲ್ಲಿ ಇನ್ನೂ ಎರಡು ವಾದಗಳಿದ್ದು ಅವುಗಳೂ ಇಷ್ಟೇ ಆಸಕ್ತಿದಾಯಕವಾಗಿವೆ.
ನಾಲ್ಕನೆ ವಾದ, ಸರಕಾರ ನಡೆಸುತ್ತಿರುವ ಪರೋಕ್ಷ ಸರಕಾರದ ಕಾರ್ಯಾಚರಣೆಗಳಲ್ಲಿ ದವೀಂದರ್ ಸಿಂಗ್ ದಾಳವಾಗಿದ್ದ. ಪರೋಕ್ಷ ಸರಕಾರವೆಂದರೆ, ತನ್ನ ರಹಸ್ಯ ಸಿದ್ಧಾಂತ ಮತ್ತು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸ್ವತಂತ್ರವಾಗಿ ಕಾರ್ಯವಹಿಸುತ್ತಿರುವ ಅಧಿಕಾರದ ಗುಪ್ತ ಕಾರ್ಯಾಚರಣೆಗಳನ್ನು ನಡೆಸುವ ಸರಕಾರದೊಳಗಿರುವ ರಹಸ್ಯ ಸರಕಾರ.

ರಹಸ್ಯ ಸರಕಾರದ ನಿರ್ವಾಹಕರು ಸಮಾನಾಂತರ ಕಾರ್ಯನಿರ್ವಾಹಕ ರಾಗಿದ್ದು ಸರಕಾರದ ಸಾರ್ವಜನಿಕವಾಗಿ ಘೋಷಿತ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾರ್ಯಾಚರಿಸಬಲ್ಲವರಾಗಿರುತ್ತಾರೆ. ತನ್ನ ಉದ್ದೇಶ ಅಥವಾ ಗುರಿ ಸಾಧನೆಗಾಗಿ ಸರಕಾರ ತನ್ನ ಏಜೆಂಟ್‌ಗಳನ್ನು ಬಳಸಿಕೊಳ್ಳುತ್ತದೆ. ಏಜೆಂಟ್‌ಗಳು ತಮ್ಮ ಉದ್ಯೋಗದ ಭದ್ರತೆ, ಹೆಚ್ಚಿನ ಅಧಿಕಾರ ಮತ್ತು ಅಧಿಪತ್ಯ ಮತ್ತು ಸರಕಾರದಿಂದ ಪ್ರಶಂಸೆ ಹಾಗೂ ಲಾಭ ಪಡೆಯಲು ಇಂತಹ ಕೃತ್ಯಗಳಲ್ಲಿ ತೊಡಗುತ್ತಾರೆ.
ದವೀಂದರ್ ಸಿಂಗ್ ಪ್ರಕರಣದಲ್ಲಿ ಇದ್ದ ರಹಸ್ಯ ಉದ್ದೇಶವೆಂದರೆ, ಸರಕಾರಿ ಯಂತ್ರದ ಮೂಲಕ ಕೆಲವು ಉಗ್ರರನ್ನು ರಾಷ್ಟ್ರ ರಾಜಧಾನಿಗೆ ಕರೆತಂದು ನಂತರ ಗಣರಾಜ್ಯೋತ್ಸವದಂದು ಸರಕಾರ ಉಗ್ರರ ದಾಳಿಯನ್ನು ವಿಫಲಗೊಳಿಸಿದೆ ಎಂದು ಕತೆಕಟ್ಟುವುದು.
ಈ ರಹಸ್ಯ ಸರಕಾರ ಕಾರ್ಯಾಚ ರಣೆಯ ವಾದ ನಿಜವೆಂದು ತೋರುತ್ತಿದ್ದರೆ ಮತ್ತು ಸಮನ್ವಯದ ಕೊರತೆಯಿಂದಾಗಿ ಪ್ರಮಾದ ನಡೆದಿದ್ದು ಅದಕ್ಕಾಗಿ ದವೀಂದರ್ ಸಿಂಗ್‌ನನ್ನು ಬಲಿ ನೀಡಲಾಗಿದೆ.

ಕೊನೆಯ ಕತೆ ಧಾರ್ಮಿಕ ಉಲ್ಲೇಖ ಹೊಂದಿದ್ದು ಅತ್ಯಂತ ಸೂಕ್ಷ್ಮ್ಮವಾಗಿದೆ ಯಾಕೆಂದರೆ ಇದರಿಂದ ಬಹಳಷ್ಟು ಜನರಿಗೆ ಅಸಮಾಧಾನ, ಆಕ್ರೋಶ ಉಂಟಾಗಬಹುದು. ದವೀಂದರ್ ಸಿಂಗ್ ಓರ್ವ ಸಿಖ್, ಆದ್ದರಿಂದ ಆತನನ್ನು ಬಂಧಿಸಲಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ವಿರುದ್ಧ ಕಾಶ್ಮೀರಿ ಜನರ ಪರವಾಗಿ ಸಿಖ್ ಸಮುದಾಯ ನಿಂತಿತ್ತು. ಇದರಿಂದ ಕುಪಿತಗೊಂಡ ಕೇಂದ್ರ ಸರಕಾರ ದವೀಂದರ್ ಸಿಂಗ್‌ನನ್ನು ಬಂಧಿಸುವ ಮೂಲಕ, ಸರಕಾರ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿದರೆ ನಿಮಗೂ ಇದೇ ಶಿಕ್ಷೆ ಕಾದಿದೆ ಎಂದು ಸಿಖ್ ಸಮುದಾಯಕ್ಕೆ ಸಂದೇಶ ನೀಡಿದೆ.
ದವೀಂದರ್ ಸಿಂಗ್ ಕತೆಯಲ್ಲಿ ಸದ್ಯ ಹೊರಬಿದ್ದಿರುವ ಸುದ್ದಿಯೆಂದರೆ, ಸಿಂಗ್ ಹಾಗೂ ಇತರ ಮೂವರು ಶಂಕಿತ ಉಗ್ರರ ವಿರುದ್ಧ ಪ್ರಕರಣವನ್ನು ಪುನರ್ ದಾಖಲಿಸುವಂತೆ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಆದೇಶ ನೀಡಿದೆ ಮತ್ತು ಈಗಾಗಲೇ ತನಿಖೆ ಆರಂಭವಾಗಿದೆ.

ಇಂತಹ ತನಿಖೆಗಳೂ ಈ ಕತೆಯಂತೆಯೇ ಇದ್ದು ಯಾವಾಗಲೂ ಒಂದು ಕಡೆ ವಾಲಿರುತ್ತವೆ ಮತ್ತು ಸಾರ್ವಜನಿಕರಿಗೆ ಸತ್ಯಾಂಶವನ್ನು ತಿಳಿಯುವ ಅವಕಾಶವೇ ದೊರೆಯುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಗುಪ್ತಚರ ಸಂಸ್ಥೆಗಳು ಅಥವಾ ಕೇಂದ್ರ ಸರಕಾರ ಭಾಗಿಯಾಗಿದ್ದಾಗ ಅವುಗಳ ನಿಜಾಂಶ ಬಯಲಾಗುವುದು ಅತಿವಿರಳ. ವಾಸ್ತವದಲ್ಲಿ ದವೀಂದರ್ ಸಿಂಗ್ ಹರಕೆಯ ಕುರಿಯಾಗಿದ್ದು ಯಾರೋ ಮಾಡಿದ ತಪ್ಪಿಗಾಗಿ ಆತನನ್ನು ಜೈಲಿಗಟ್ಟಲಾಗಿದೆ.