ಧಿಕ್ಕಾರಿಗಳು ಮಂಡಿಯೂರುವ ಕ್ಷಣ

0
174

-ಕೆ.ವೈ.ಅಬ್ದುಲ್ ಹಮೀದ್, ಕುಕ್ಕಾಜೆ

ಇಂದು ಮುಸ್ಲಿಮ್ ಸಮಾಜ ಸಾಮಾಜಿಕ ಸ್ಥಿತಿಗತಿಯಲ್ಲಿ ಸಮಗ್ರ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ಬದಲಾವಣೆ ಅಗತ್ಯವೆಂದು ಬಯಸುತ್ತದೆ. ಇಸ್ಲಾಮಿನ ಉನ್ನತ ಮಟ್ಟದ ಸಂಸ್ಕೃತಿಯು ಸಾಕಾರಗೊಳ್ಳುವ ಕನಸನ್ನು ಕಾಣುತ್ತಿದೆ. ದೇವನ ಅದ್ಭುತ ಕೊಡುಗೆಯಾಗಿ ಸಮಾಜದಲ್ಲಿ ನೆಲೆಯೂರಲು ಬಯಸುತ್ತಿದೆ. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಜಟಿಲಗೊಳ್ಳುತ್ತಲೆ ಇದೆ.
ಅದೇ ವೇಳೆ ವಿದ್ವಾಂಸರು, ಧಾರ್ಮಿಕ ಪ್ರವಚನಕಾರರು, ಬರಹಗಾರರು ಧರ್ಮದ ಸಂಸ್ಥಾಪನೆಗೆ ಅವಿರತವಾಗಿ ಕೆಲಸಕಾರ್ಯ ನಡೆಸುತ್ತಿದ್ದಾರೆ. ಬಿರುದುಗಳನ್ನು ಹೊತ್ತ ಉಲಮಾಗಳ ದಂಡೇ ಇಲ್ಲಿದೆ. ವೇದಿಕೆಗಳಲ್ಲಿ ಜನರನ್ನು ಮಂತ್ರಮುಗ್ಧ್ದಗೊಳಿಸುವ ಭಾಷಣಗಳು ನಡೆಯುತ್ತಿದ್ದರೂ ಮುಸ್ಲಿಮರಲ್ಲಿ ನಿರೀಕ್ಷಿತ ಮಟ್ಟದ ಯಾವುದೇ ಬದಲಾವಣೆ, ಸಂಸ್ಕರಣೆ ಕಾಣಲಿಲ್ಲ. ಸಾಮಾಜಿಕ ಸುಧಾರಣೆ ನಡೆಯಲಿಲ್ಲ. ಏಕೆ ಹೀಗಾಗುತ್ತಿದೆ.

ಪ್ರವಾದಿ(ಸ) ಕೇವಲ ಇಪ್ಪತ್ತಮೂರು ವರ್ಷಗಳ ಅವಧಿಯಲ್ಲಿ, ಅತ್ಯುನ್ನತ ಮಟ್ಟದ ಹಾಗೂ ಜಗತ್ತಿಗೆ ಮಾದರಿಯಾದ ಸಮಾಜ ನಿರ್ಮಿಸಿಕೊಟ್ಟರು. ಇಂದು ಮೇಲೆ ತಿಳಿಸಿದಂತೆ ಬೇಕಾದಷ್ಟು ಸಂಪನ್ಮೂಲಗಳಿದ್ದರೂ ಪ್ರವಾದಿ(ಸ) ತೋರಿದ ಕ್ರಾಂತಿ ನಡೆಯುತ್ತಿಲ್ಲ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಧರ್ಮ ಸಂಸ್ಥಾಪನೆಗೆ ಇಂದಿನ ನಾಯಕರ ವಿಚಾರ ಶೈಲಿ, ಅವರು ಕೈಗೊಂಡ ಕಾರ್ಯವಿಧಾನ, ಕ್ರಾಂತಿಯ ಅವರ ಸಿದ್ಧಾಂತದಲ್ಲಿ ಏನೋ ದೊಡ್ಡ ಕೊರತೆ ಇದೆ ಎಂಬುದಾಗಿದೆ.
ಸಾಮಾನ್ಯವಾಗಿ ಇಂದು ಧರ್ಮದ ಪ್ರಚಾರ ಜನರಿಗೆ ದೊರೆಯುತ್ತಿರುವುದು ಹೆಚ್ಚಾಗಿ ಧಾರ್ಮಿಕ ಪ್ರವಚನದ ರೂಪದಲ್ಲಿ ಮತ್ತು ತರಗತಿಗಳ ರೂಪದಲ್ಲಾಗಿರುತ್ತದೆ. ಇದು ಸಾಮಾನ್ಯ ಜನರಿಗೆ ಪ್ರವಾದಿ(ಸ)ಯವರನ್ನು ಪರಿಚಯಿಸುವ ಒಂದು ಅವಕಾಶವಾಗಿರುತ್ತದೆ. ಆದರೂ ಇಂತಹ ಕಲಿಕೆಗಳಿಂದ ಪ್ರವಾದಿ(ಸ)ಯವರ ಅಮೋಘ ಸಾಧನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವಲ್ಲಿ ವಿಫಲವಾಗುವುದನ್ನು ಕಾಣಬಹುದು. ಧರ್ಮದ ಮತ್ತು ಇಸ್ಲಾಮಿ ವ್ಯವಸ್ಥೆಯ ಸಂಸ್ಥಾಪನೆ ಪ್ರವಾದಿ(ಸ)ಯವರ ದೌತ್ಯದ ಮೂಲ ಉದ್ದೇಶ ಎಂಬುದನ್ನು ಕಡೆಗಣಿಸಿ ಎಲ್ಲವೂ ದೇವನ ಕೊಡುಗೆಯ ರೂಪದಲ್ಲಿ ಅಚಾನಕಾಗಿ ದೊರಕಿರಬೇಕೆಂದು ಜನರು ತಿಳಿಯುವ ರೂಪದಲ್ಲಿ ಇಂದು ಧರ್ಮ ಪ್ರಚಾರ ನಡೆಯುತ್ತಿದೆ.

ಪ್ರವಾದಿ(ಸ)ಯವರ ದೂರದೃಷ್ಟಿಯ ನಾಯಕತ್ವ, ಉನ್ನತ ಮಟ್ಟದ ರಾಜಕೀಯ ನಡೆಯನ್ನು ಸೂಕ್ತ ರೀತಿಯಲ್ಲಿ ಪರಿಚಯಿಸಲಾಗುತ್ತಿಲ್ಲ. ಮದೀನಾಗೆ ಬರಿಗೈಯ್ಯಲ್ಲಿ ಹಿಜ್ರಾ ಹೋಗಿದ್ದ ಪ್ರವಾದಿ(ಸ) ಅಲ್ಲಿ ಹರಿದು ಹಂಚಿಹೋಗಿರುವ ವಿಭಿನ್ನ ಗೋತ್ರದವರನ್ನು ಕೆಲ ತಿಂಗಳಲ್ಲಿ ಒಂದು ವ್ಯವಸ್ಥೆಯಡಿಯಲ್ಲಿ ತಂದು ನಿಲ್ಲಿಸಿದರು. ಇದಕ್ಕೆ ಪ್ರವಾದಿ(ಸ) ಪಟ್ಟ ಶ್ರಮವೆಷ್ಟಿರಬಹುದು. ಪರಸ್ಪರ ಕಾಳಗದಲ್ಲಿ ನಿರತರಾಗಿದ್ದ ಗೋತ್ರ ವರ್ಗಗಳಲ್ಲಿ ಪರಸ್ಪರ ಸ್ನೇಹ ಸಂಬಂಧಗಳನ್ನು ಕಟ್ಟಿ ಬೆಳೆಸಿ ಸಹೋದರತೆಯನ್ನು ಉಂಟುಮಾಡಲು ಪ್ರವಾದಿ(ಸ)ಯವರು ಅದೆಷ್ಟು ವರ್ಷ ಶ್ರಮಪಟ್ಟಿರಬಹುದು. ಇಂತಹ ಆಶ್ಚರ್ಯಕರ ಬದಲಾವಣೆಯ ಕೆಲಸಗಳಿಗೆ ಪ್ರವಾದಿ(ಸ) ಎಷ್ಟೊಂದು ಅಗಾಧ ಹಿತಾಕಾಂಕ್ಷೆಯಿಂದ ಕೆಲಸ ಮಾಡಿರಬಹುದು. ನೂರರ ಆಜುಬಾಜುಗಳಲ್ಲಿದ್ದ ತನ್ನ ಅನುಯಾಯಿಗಳನ್ನು ತರಬೇತುಗೊಳಿಸಿ ಬಲಿಷ್ಠವಾದ ಒಂದು ಸೇನಾ ತಂಡವನ್ನು ಕಟ್ಟಿ ಬೆಳೆಸಲು ಪ್ರವಾದಿ(ಸ)ರಿಗೆ ಸಾಧ್ಯವಾಯಿತು. ಇಂತಹ ಕಠಿಣ ಕೆಲಸಕ್ಕೆ ಪ್ರವಾದಿ(ಸ) ಎಷ್ಟೊಂದು ನೈಪುಣ್ಯವನ್ನು ತೋರಿರಬಹುದು. ಮಕ್ಕಾದ ಅಗ್ರಗಣ್ಯರೆಂದು ಅರಿಯಲ್ಪಟ್ಟ, ಅರಬಿಗಳು ಗೌರವದಿಂದ ಕಾಣುತ್ತಿದ್ದ ಕುರೈಶ್ ವೀರ ಯೋಧರನ್ನು ಸಂಖ್ಯೆಯಲ್ಲಿ ಅವರಿಗಿಂತ ಎಷ್ಟೋ ಕಡಿಮೆ ಇದ್ದ ಪ್ರವಾದಿ(ಸ) ಸೇನೆ ದಿಟ್ಟವಾಗಿ ಎದುರಿಸಿ ಅನಿರೀಕ್ಷಿತ ಸೋಲಿನ ರುಚಿ ತೋರಿಸಿತು. ಲಭ್ಯ ಸಂಪನ್ಮೂಲಗಳನ್ನು ಬಳಸಿ ಇಂತಹ ಬಲಿಷ್ಠ ಸೇನೆಯನ್ನು ಕಟ್ಟುವಲ್ಲಿ ಪ್ರವಾದಿ(ಸ) ಪಟ್ಟ ಪರಿಶ್ರಮವೆಷ್ಟಿರಬಹುದು. ಸದಾ ಕುತಂತ್ರಗಳಲ್ಲೇ ಮಗ್ನರಾಗಿ ಪ್ರವಾದಿ(ಸ)ಯವರ ವಿರುದ್ಧ ನಿರಂತರ ಒಳಸಂಚನ್ನು ಮಾಡುತ್ತಿದ್ದ ಯಹೂದಿಗಳು, ಕಪಟವಿಶ್ವಾಸಿಗಳನ್ನು ಸೋಲಿಸಲು ಪ್ರವಾದಿ(ಸ) ತೋರಿದ ಜಾಣ್ಮೆ ಎಷ್ಟಿರಬಹುದು.

ಈ ಎಲ್ಲಾ ದೌತ್ಯ ನಿರ್ವಹಣೆಯಲ್ಲಿ ಪ್ರವಾದಿ(ಸ)ಯವರ ರಾಜಕೀಯ ಜಾಣ್ಮೆ, ನೈಪುಣ್ಯತೆ, ಅಗಾಧ ಕಾರ್ಯತಂತ್ರ, ಹೋರಾಟ, ತ್ಯಾಗ, ಯುಕ್ತಿ, ದೂರದರ್ಶಿತ್ವವನ್ನು ಕಾಣಬಹುದಾಗಿದೆ. ಇಂದು ಈ ದೌತ್ಯ ನಿರ್ವಹಣೆಯ ಉತ್ತರಾಧಿಕಾರಿಗಳು ಇಂತಹ ಪರಿಶ್ರಮ ಪಡಲು, ಕಠಿಣ ಸವಾಲುಗಳನ್ನು ಎದುರಿಸಲು, ತ್ಯಾಗ ಸಮರ್ಪಣೆಯ ಮಾದರಿಯಾಗಲು, ಕೆಡುಕಿನ ವಿರುದ್ಧ ಸಂಘರ್ಷಕ್ಕೆ ಇಳಿಯಲು ಧೈರ್ಯ ತೋರುತ್ತಿಲ್ಲ. ಅವರು ಅತ್ಯಂತ ಸುಲಭ ಹಾದಿಯನ್ನು ಆರಿಸಿದ್ದರು. ಶತ್ರುಗಳನ್ನು ಪರಮ ಮಿತ್ರರನ್ನಾಗಿ ಮಾಡುವ ಕುಟಿಲ ತಂತ್ರಗಾರಿಕೆಯನ್ನು ಅವಲಂಬಿಸಿದರು. ಸವಾಲುಗಳ ಮುಂದೆ ಶರಣಾಗತಿ ತೋರಿ ಇಸ್ಲಾಮಿಗೆ ಘನತೆ ತರಲು ಪ್ರಯತ್ನಿಸಿದರು. ಬಹಿರಂಗ ಶತ್ರುವಿನ ಪಾದಪೂಜೆ ನಡೆಸಿ ಹೊಗಳಿಕೆಯ ಮೂಲಕ ಆತನ ಪ್ರೀತಿ ಗಳಿಸಿಕೊಳ್ಳುವ ಹವಣಿಕೆ ತೋರಿದರು. ಅಸಹಾಯಕ ಅನುಯಾಯಿಗಳನ್ನು ನಡು ನೀರಿನಲ್ಲಿ ಬಿಟ್ಟು ಸುರಕ್ಷಿತ ತಾಣದ ಪರೋಕ್ಷ ಹುಡುಕಾಟ ನಡೆಸಿದರು. ಅಂದ ಹಾಗೆ ಇದಾವುದೂ ಅಲ್ಲಾಹನಾಗಲಿ, ಪ್ರವಾದಿಗಳಾಗಲೀ ತೋರಿಸಿ ಕೊಟ್ಟ ಹಾದಿಯಾಗಿರಲಿಲ್ಲ್ಲ. ಆದರೂ ಅವರು ಅದೇ ಹಾದಿಯಲ್ಲಿ ಮುಂದುವರಿಯ ತೊಡಗಿದಾಗ ಜನಸಾಮಾನ್ಯರು ಎಚ್ಚೆತ್ತುಕೊಂಡು ತಮ್ಮ ದಾರಿಯನ್ನು ಹುಡುಕತೊಡಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ.

ಅಲ್ಲಾಹನು ಪವಿತ್ರ ಕುರ್‌ಆನ್‌ನಲ್ಲಿ ಒಂದೆಡೆ ಹೀಗೆ ಹೇಳುತ್ತಿದ್ದಾನೆ:
ಅವರು (ಕಪಟವಿಶ್ವಾಸಿಗಳು) ಸರಿಯಾಗಿ ಆ ಕಡೆಗೂ ಇಲ್ಲ ಈ ಕಡೆಗೂ ಇಲ್ಲವೆಂಬಂತೆ ಅವೆರಡರ (ಸತ್ಯ – ಮಿಥ್ಯಗಳ) ನಡುವೆ ಜೋತಾಡುತ್ತಿರುತ್ತಾರೆ. ಅಲ್ಲಾಹನೇ ದಾರಿಗೆಡಿಸಿ ಬಿಟ್ಟಾತನಿಗಾಗಿ ನೀವು ಯಾವ ದಾರಿಯನ್ನೂ ಕಾಣಲಾರಿರಿ. ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ನಿಮ್ಮ ಪೋಷಕ ಮಿತ್ರರಾಗಿಸಿಕೊಳ್ಳಬೇಡಿರಿ. (4:143,144)
ಸತ್ಯವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ತಮ್ಮ ಪೋಷಕರಾಗಿಸಿಕೊಂಡವರು, ಅವರ (ಧಿಕ್ಕಾರಿಗಳ) ಬಳಿ ಗೌರವವನ್ನು ಹುಡುಕುತ್ತಿದ್ದಾರೆಯೇ? ಗೌರವವಂತೂ ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ (4:139)

ಪ್ರವಾದಿ(ಸ) ತನ್ನ ಅನುಯಾಯಿಗಳನ್ನು ವೈರಾಗ್ಯ ತೋರುವ ಸನ್ಯಾಸಿಗಳನ್ನಾಗಿ ಮಾಡಲಿಲ್ಲ. ಸಾರ್ವಜನಿಕವಾಗಿ ಬೆರೆಯದ ಸೂಫಿಗಳನ್ನಾಗಿಯೂ ಮಾಡಲಿಲ್ಲ. ಕೆಡುಕಿಗೆ ಭಯಪಟ್ಟು ಪಲಾಯನ ಮಾಡುವ ಹೇಡಿಗಳನ್ನಾಗಿಯೂ ಮಾಡಲಿಲ್ಲ. ಪ್ರಭುತ್ವಕ್ಕೆ ಭಯಪಡುವ, ಅಧಿಕಾರದ ಮುಂದೆ ಮಂಡಿಯೂರುವ ವ್ಯಕ್ತಿಯನ್ನಾಗಿ ಮಾಡಲಿಲ್ಲ. ಮುಗ್ಧರಂತೆ ಕಾಣುವ ಅಸಹಾಯಕತೆ ತೋರುವ ಭಕ್ತರನ್ನಾಗಿ ಮಾಡಲಿಲ್ಲ. ಪ್ರವಾದಿಯಿಂದ ತರಬೇತಿ ಹೊಂದಿದವರು ಅಪಾರ ಧೈರ್ಯವುಳ್ಳವರಾದರು. ಎಂತಹ ಭಯಾನಕ ಸನ್ನಿವೇಶದಲ್ಲೂ ಸ್ಥೈರ್ಯವನ್ನು ತೋರುವವರಾದರು. ಸದಾ ಪ್ರಜ್ಞಾವಂತಿಕೆಯನ್ನು ಉಳಿಸಿಕೊಳ್ಳುವವರಾದರು. ಸ್ವಾಭಿಮಾನವನ್ನು ಪ್ರಾಣಕ್ಕಿಂತ ಮಿಗಿಲಾಗಿ ಕಾಣುವವರಾದರು. ಪರಾಕ್ರಮ ಅವರ ಜೀವನದ ಅವಿಭಾಜ್ಯ ಅಂಗವಾಯಿತು. ಕ್ರೀಯಾಶೀಲತೆ ಅವರ ಸ್ವಭಾವವಾಯಿತು. ಬದಲಾವಣೆಯ ಹರಿಕಾರರಾಗಿ ಸಮರ್ಥ ನಾಯಕತ್ವ ನೀಡಬಲ್ಲ ಎಲ್ಲಾ ಗುಣಗಳನ್ನು ಅವರು ಹೊಂದಿದವರಾದರು.

ಈ ರೀತಿಯಲ್ಲಿ ಸಮಾಜವನ್ನು ಬದಲಾಯಿಸುವ ಪ್ರಕ್ರಿಯೆ ನಡೆಯದ ಹೊರತು ಇಸ್ಲಾಮಿಗೆ ಘನತೆಯನ್ನು ತಂದುಕೊಡಲು ಸಾಧ್ಯವಾಗದು. ಒಂದು ಉತ್ತಮ ವ್ಯವಸ್ಥೆ ತನ್ನಿಂತಾನೆ ಅಸ್ತಿತ್ವಕ್ಕೆ ಬರದು. ಸಮಾಜದ ಒಂದು ದೊಡ್ಡ ವಿಭಾಗ ನಿಷ್ಕ್ರಿಯತೆ ತೋರುವಾಗ ಸಣ್ಣದೊಂದು ವರ್ಗ ಸಕ್ರಿಯವಾಗಬೇಕು. ಏಕೆಂದರೆ, ಭ್ರಷ್ಟ ನಾಯಕತ್ವ ನಿರ್ಮಿಸಿದ ಕೊಳಕು ವಾತಾವರಣದಲ್ಲಿ ಸ್ವತಃ ಸತ್ಯವಿಶ್ವಾಸಿಗಳಿಗೂ ಉನ್ನತ ಮಟ್ಟವನ್ನು ಕಾಪಾಡಲು ಸಾಧ್ಯವಾಗದು. ಪರಿವರ್ತನೆಯ ಕೆಲಸಕಾರ್ಯ ವಿಳಂಬವಾದಂತೆ ಅವರ ಘನತೆ ಕುಸಿಯತೊಡಗುತ್ತದೆ. ಸಮಾಜದ ಕ್ರಿಯಾಶೀಲ ಜನರನ್ನು ಆರಿಸಿ ಸಾಕಷ್ಟು ಶಕ್ತಿ ಸಂಪಾದನೆ ಮಾಡಿ ಕೆಡುಕಿನ ವಿರುದ್ಧದ ಸಂಘರ್ಷಕ್ಕೆ ಇಳಿಯಬೇಕು. ಇದರ ಹೊರತಾದ ಎಲ್ಲಾ ಪ್ರಯತ್ನಗಳು ನಿಷ್ಫಲ ಎಂಬುದು ಇತಿಹಾಸ ಸಾಕ್ಷಿ. ಒಂದಂತೂ ಸತ್ಯ, ಜಗತ್ತಿನಲ್ಲಿ ನಡೆದ ಯಾವುದೇ ಕ್ರಾಂತಿ ಸಮಾಜದ ಅಲ್ಪಸಂಖ್ಯಾತರಿಂದಲೆ ನಡೆದಿವೆ. ಈಗ ಕ್ರಾಂತಿ ಅನಿವಾರ್ಯವಾದ ಕಾಲ. ಪ್ರತಿಯೊಬ್ಬರೂ ಸಮಾಜದ ಉಳಿವಿಗೆ ತನ್ನ ಪಾತ್ರ ನಿರ್ವಹಿಸಲೇ ಬೇಕಾಗುತ್ತದೆ.
***