ನ್ಯಾಯ ನೀತಿಯ ಇಸ್ಲಾಮ್

0
95

-ಟಿ.ಕೆ.ಆಟಕ್ಕೋಯ

ಮುಂದಿನ ದಿನಗಳಲ್ಲಿ ಮುಸ್ಲಿಮರು ತಮ್ಮ ನಾಗರಿಕ ಸಂಹಿತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿರೋಧಿಗಳು ಭಯಪಡಿಸುತ್ತಿದ್ದಾರೆ. ಮುಸ್ಲಿಮರು ಅಪಮಾನಕ್ಕೊಳಗಾದ ಈ ಸನ್ನಿವೇಶದಲ್ಲೂ ಪ್ರಗತಿಪರ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಚಾನೆಲ್‌ಗಳು ಅವರ ವಿರುದ್ಧ ಅನುಕಂಪ ಅಥವಾ ಆರ್ದ್ರತೆಯನ್ನು ವ್ಯಕ್ತಪಡಿಸುವುದಿಲ್ಲ ಎಂಬುದು ಸಮಾಜದಲ್ಲಿ ಬೇರುಬಿಟ್ಟ ಫ್ಯಾಶಿಸ್ಟ್ ಕೋಮುವಾದದ ತೀವ್ರತೆಯನ್ನು ತಿಳಿಸುತ್ತದೆ. ಇಸ್ಲಾಮನ್ನು ತೀವ್ರವಾದವೆಂದು, ಮುಸ್ಲಿಮರನ್ನು ಭಯೋತ್ಪಾದಕರೆಂದು ಕರೆದು ಆಕ್ಷೇಪಿಸುವುದರಲ್ಲಿ ಕೋಮುವಾದಿಗಳೊಂದಿಗೆ ಕಮ್ಯೂನಿಸ್ಟರೂ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಓರ್ವ ವಿದ್ವಾಂಸನು ಸಭಿಕರಲ್ಲಿ ಕೇಳಿದರು; ಮುಹಮ್ಮದ್ ಪ್ರವಾದಿಯು ಪ್ರವಾದಿಯಾಗುವುದಕ್ಕೆ ಮುಂಚೆ ಅವರ ಸ್ವಭಾವ, ಗುಣಗಳ ಬಗ್ಗೆ ಜನರು ಕರೆದ ಹೆಸರು ಏನಾಗಿತ್ತು? ಸಭಿಕರು ಏಕ ಸ್ವರದಲ್ಲಿ ಹೇಳಿದರು ಅಲ್ ಅಮೀನ್. ಪ್ರವಾದಿಯಾದ ನಂತರ ಅವರನ್ನು ಕರೆಯಲು ಉಪಯೋಗಿಸಿದ ಹೆಸರುಗಳು ಏನೆಲ್ಲಾ ಎಂಬುದು ವಿದ್ವಾಂಸನ ಮುಂದಿನ ಪ್ರಶ್ನೆ. ಭಾವ ಜೀವಿ, ಹುಚ್ಚ, ಮಾಂತ್ರಿಕ… ಅವರೇ ಉತ್ತರವನ್ನು ಹೇಳಿದರು. ಜೀರ್ಣಗೊಂಡ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದಾಗ ಪ್ರವಾದಿ ಮುಹಮ್ಮದ್(ಸ)ರನ್ನು ಎದುರಾಳಿಗಳು ಕೆಟ್ಟ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು.

ಪ್ರವಾದಿ ಇಬ್ರಾಹೀಮ್‌ರೊಂದಿಗೆ ಸಂವಾದದಲ್ಲಿ ಸೋಲುಂಡ ನಮ್ರೂದ್ ಸತ್ಯವನ್ನು ಒಪ್ಪಿಕೊಳ್ಳಲು ತಯಾರಾಗಲಿಲ್ಲ. ತಕ್ಷಣ ಇಬ್ರಾಹೀಮರನ್ನು ಬೆಂಕಿಯ ಕೆನ್ನಾಲೆಗೆ ಎಸೆಯಲಾಯಿತು. ಪ್ರವಾದಿ ಮೂಸಾರ ಸತ್ಯ ಸಂಧತೆಯನ್ನು ಅರ್ಥ ಮಾಡಿಕೊಂಡ ಫರೋವನ ಸಹಚರರು ತಕ್ಷಣ ಸತ್ಯ ಧರ್ಮವನ್ನು ಸ್ವೀಕರಿಸಿದರು. ಪ್ರವಾದಿ ಮೂಸಾರ ಮೇಲೆ ವಿಶ್ವಾಸವಿಟ್ಟ ಈ ಸತ್ಯಸಂಧರಾದ ವ್ಯಕ್ತಿಗಳ ಕೈ ಕಾಲುಗಳನ್ನು ಛೇದಿಸಿ ಶಿಲುಬೆಗೇರಿಸಿ ಫರೋವಾ ಪ್ರತೀಕಾರ ತೀರಿಸಿದನು.

ಇತಿಹಾಸ ಅಥವಾ ತಿಳುವಳಿಕೆಯನ್ನು ಯಾವುದೇ ಕಾಲದಲ್ಲೂ ಅಧಿಕಾರದಾಹಿಗಳು ಪರಿಗಣಿಸಲೇ ಇಲ್ಲ. ಅಪ್ಪಟ ಸುಳ್ಳು ಪ್ರಚಾರ ಮಾಡಿ ವಸಾಹತುಶಾಹಿಗಳು ಜಗತ್ತನ್ನು ತಮ್ಮೊಂದಿಗೆ ಉಳಿಸಿಕೊಂಡರು. ಕೊಲಂಬಸ್ ರೆಡ್ ಇಂಡಿಯನ್ನರನ್ನು ಕಂಡಾಗ ಗೌರವ ಆತಿಥ್ಯ ತಿಳಿಯುವ, ಉದಾರಮತಿಗಳಾದ, ಸಹೋದರತೆ ಸ್ಥಾಪಿಸಲು ಸಾಧ್ಯವಿರುವ ಗೌರವಾರ್ಹರು ಎಂದೆಲ್ಲಾ ಹೊಗಳಿದನು. ನಂತರ ಊರನ್ನು ಕಬಳಿಸಲು ಪ್ರಯತ್ನಿಸಿದ ಕೊಲಂಬಸ್ ಅಸಹಾಯಕರೂ, ಸ್ನೇಹಶೀಲರೂ, ವಿಶ್ವಾಸಾರ್ಹರೂ ಆದ ರೆಡ್ ಇಂಡಿಯನ್ನರನ್ನು ನರ ಭಕ್ಷಕರೆಂದು ಅಪಪ್ರಚಾರಗೈದನು. 2000ಕ್ಕಿಂತಲೂ ಅಧಿಕ ಭಾಷೆ, 800ಕ್ಕಿಂತಲೂ ಹೆಚ್ಚು ಬುಡಕಟ್ಟು ಗೋತ್ರಗಳಿದ್ದ ಊರ ಜನರನ್ನು ಅಮೇರಿಕನ್ ಖಂಡದಲ್ಲಿ ಕ್ರೈಸ್ತ ಸಂದೇಶವನ್ನು ಪ್ರಚಾರಪಡಿಸಲು ಪ್ರಯತ್ನಿಸಿದ ಬಿಳಿಯರು ಏನು ಮಾಡಿದರು ಎಂಬುದು ಜಗತ್ತಿಗೇ ತಿಳಿದಿದೆ.

ಧಾರ್ಮಿಕ-ಜನಾಂಗೀಯ ಸಹಿಷ್ಣುತೆ, ಶಿಕ್ಷಣ, ಸಾರ್ವಜನಿಕ ಸ್ಥಳಗಳು, ಕವಿತೆ, ಶಿಲ್ಪ ಕಲೆ, ಸಂವಾದಗಳು ಮೊದಲಾದವುಗಳನ್ನು ಪೋತ್ಸಾಹಿಸಿ ಬೆಳೆಸಿದ  ಸಮೂಹವನ್ನು ಆಧುನಿಕರು ಎಂದು ಭಾವಿಸುವುದಾದರೆ ಅದರ ಅತ್ಯುತ್ತಮ ಉದಾಹರಣೆ ಮುಸ್ಲಿಮ್ ಸ್ಪೇನ್ ಎಂದು ಅಕ್ಬರ್ ಎಸ್.ಅಹ್ಮದ್ ಬರೆಯುತ್ತಾರೆ. ಚಾರ್ಲ್ಸ್ ರಾಜ ಕುಮಾರನ ಪ್ರಸ್ತಾವನೆಯನ್ನು ಗಮನಿಸಿ: ‘‘ಸ್ಪೇನ್‌ನಲ್ಲಿ ಓದಲು ಪುಸ್ತಕವನ್ನು ವಿತರಿಸುವ ವೇಳೆ ನಮ್ಮ ಊರಲ್ಲಿ ಆಲ್ಫ್ರೆಡ್ ರಾಜನು ಪಾಕಶಾಸ್ತ್ರದ ಮೂರ್ಖತನವನ್ನು ಪ್ರದರ್ಶಿಸುತ್ತಿದ್ದರು.’’ ಯುರೋಪಿನ ಎಲ್ಲಾ ಗ್ರಂಥಾಲಯಗಳನ್ನು ಸೇರಿಸಿದರೆ ಅಷ್ಟು ಪ್ರಮಾಣದ ಪುಸ್ತಕಗಳು ಕೊರ್ಡೊವಾ ರಾಜರುಗಳ ಕೈವಶದಲ್ಲಿತ್ತು. ಸ್ವತಂತ್ರ ವ್ಯಾಪಾರ, ತೆರೆದ ಗಡಿಗಳು, ಸಂಚಾರಿ ಆಸ್ಪತ್ರೆಗಳು, ಪರ್ಯಾಯ ಔಷಧ (Alternative medicine) ಮೊದಲಾದವುಗಳು ಇಸ್ಲಾಮಿನ ಕೊಡುಗೆಗಳಾಗಿವೆ.

ಆದರೆ, ಇಸ್ಲಾಮಿನ ಮತ್ತು ಮುಸ್ಲಿಮರ ಭೂತ ಅಥವಾ ವರ್ತಮಾನ ಕಾಲವನ್ನು ಅದೇ ರೀತಿ ಪ್ರತಿನಿಧಿಸುವ ಒಂದು ಪ್ರತೀಕ ಇಂದು ಇಸ್ಲಾಮಿನಲ್ಲಿಲ್ಲ. ಸಾಮ್ರಾಜ್ಯಶಾಹಿ ಮತ್ತು ಝಿಯೋನಿಝಂ ಅನ್ನು ಸೋಲಿಸಲು ಬೇಕಾದ ಇಸ್ಲಾಮಿನ ಮತ್ತು ಮುಸ್ಲಿಮರ ಪ್ರಯತ್ನಗಳನ್ನು ಕೆಟ್ಟದಾಗಿ ಬಿಂಬಿಸಲು ಮತ್ತು ಮುಸ್ಲಿಮರನ್ನು ಉಗ್ರಗಾಮಿಗಳೆಂದು, ತೀವ್ರವಾದಿಗಳೆಂದು ಹೇಳಲು ಈ ಗುಂಪು ಪ್ರೇರೇಪಿಸುತ್ತಿದೆ.

ಇಸ್ಲಾಮ್ ರಾಜಕೀಯ ಶಕ್ತಿಯಾಗಿ ಮೇಲೆದ್ದು ಬಂದಾಗಲೂ ಸಂಸ್ಕೃತಿ, ನಾಗರಿಕತೆ ಬೆಳೆದಾಗಲೂ, ಮುಸ್ಲಿಮರಂತೆ ಮುಸ್ಲಿಮೇತರರು ಕೂಡ ಸ್ವತಂತ್ರರಾಗಿ ಸುರಕ್ಷಿತರಾಗಿ ಬಾಳಿ ಬದುಕಿದ್ದರು. ಪ್ರವಾದಿ ಮುಹಮ್ಮದ್(ಸ) ಮುಸ್ಲಿಮೇತರರ ಸುರಕ್ಷೆಯ ಕುರಿತಂತೆ ಈ ರೀತಿ ಹೇಳಿದರು: ‘‘ಭಯಪಡಿರಿ, ಮುಸ್ಲಿಮೇತರ ಪ್ರಜೆಗಳನ್ನು ಯಾರಾದರೂ ಹಿಂಸಿಸಿದರೆ, ಅವರ ಮೇಲೆ ಭಾರವಾದ ಕರಗಳನ್ನು ಹೇರಿದರೆ, ಅವರೊಂದಿಗೆ ಕ್ರೌರ್ಯದಿಂದ ವರ್ತಿಸಿದರೆ, ಹಕ್ಕುಗಳನ್ನು ಕಸಿದುಕೊಂಡರೆ ಅತನ ವಿರುದ್ಧ ಅಂತ್ಯ ದಿನದಂದು ನಾನು ದೂರುಗಾರನಾಗಿರುವೆನು.’’ ಯುದ್ಧ ನಡೆಸಿ ಮುಸ್ಲಿಮೇತರರ ಜೀವ ಮತ್ತು ಸೊತ್ತನ್ನು ಸಂರಕ್ಷಿಸಬೇಕೆಂದು ಹಝ್ರತ್ ಉಮರ್(ರ) ಕರೆ ನೀಡಿದರು. ಝಕಾತ್ ಧರ್ಮಕ್ಕೆ ಸಂಬಂಧಿಸಿದ ಕರ್ಮವಾದುದರಿಂದ ಇಸ್ಲಾಮೀ ರಾಷ್ಟ್ರವು ಮುಸ್ಲಿಮೇತರರ ಮೇಲೆ ಅದನ್ನು ಕಡ್ಡಾಯಗೊಳಿಸಿರಲಿಲ್ಲ. ಝಕಾತ್, ಸೈನಿಕ ಸೇವೆಯಿಂದಲೂ ಅವರಿಗೆ ವಿನಾಯಿತಿ ನೀಡಿ ಮುಸ್ಲಿಮೇತರರ ಮೇಲೆ ಜಿಝಿಯಾವನ್ನು ಹೇರಿದರು. ಸೈನಿಕ ಸೇವೆ ಮುಸ್ಲಿಮೇತರರಿಗೆ ಐಚ್ಛಿಕವಾಗಿತ್ತು. ಮಹಿಳೆಯರು, ಮಕ್ಕಳು, ವೃದ್ಧರು, ನಿತ್ಯ ರೋಗಿಗಳು ಮೊದಲಾದವರು ಜಿಝಿಯಾ ನೀಡುವುದರಿಂದ ಹೊರತಾಗಿದ್ದರು. ಮುಸ್ಲಿಮೇತರರಿಗೆ ಅವರ ನಾಗರಿಕ ಕಾನೂನುಗಳ ಪ್ರಕಾರ ಜೀವಿಸುವ ಸ್ವಾತಂತ್ರವನ್ನು ನೀಡಿದ್ದರು. ಮುಹಮ್ಮದ್(ಸ)ರವರ ಕಾಲದಲ್ಲಿ ಯಹೂದ್ಯರ ಪ್ರಕರಣಗಳಲ್ಲಿ ಯಹೂದ್ಯ ರಬ್ಬಿಗಳೊಂದಿಗೆ ತೌರಾತ್‌ನಲ್ಲಿರುವ ನಿಯಮಗಳನ್ನು ತಿಳಿದ ಬಳಿಕವೇ ತೀರ್ಪನ್ನು ನೀಡಲಾಗುತ್ತಿತ್ತು.

ಹಝ್ರತ್ ಉಮರ್(ರ) ಬೆತ್ಲಹೇಮ್ ಚರ್ಚ್‌ನಲ್ಲಿ ಅನಿರೀಕ್ಷಿತಾಗಿ ಒಮ್ಮೆ ನಮಾಝ್ ಮಾಡಬೇಕಾಗಿ ಬಂತು. ಆದರೆ ನಮಾಝ್‌ನ ನಂತರ ಹಝ್ರತ್ ಉಮರ್(ರ) ಅಧಿಕಾರಿಗಳಿಗೆ ಒಂದು ಕರಾರನ್ನು ಬರೆದು ಕೊಟ್ಟರು. ಬೆತ್ಲಹೇಮ್‌ಚರ್ಚ್‌ನಲ್ಲಿ ಒಬ್ಬನಿಗಿಂತ ಹೆಚ್ಚು ಮುಸ್ಲಿಮರು ಒಂದೇ ಬಾರಿಗೆ ಪ್ರವೇಶಿಸಬಾರದು ಎಂಬುದಾಗಿತ್ತು ಕರಾರು. ಅಧಿಕಾರ ಕೈಯಲ್ಲಿರುವ ವೇಳೆಯೂ, ಅಧಿಕಾರ ಇಲ್ಲದ ವೇಳೆಯೂ ಎಲ್ಲಾ ಗುಂಪಿನ ಮುಸ್ಲಿಮರು ಇತರ ಸಮುದಾಯಗಳೊಂದಿಗೆ ಕರುಣೆ ಮತ್ತು ಪ್ರೀತಿಯನ್ನು ತೋರಿದರು. ವಾಸ್ತವದಲ್ಲಿ ಇಸ್ಲಾಮಿನ ಮೇಲೆ ತೀವ್ರವಾದದ ಮುದ್ರೆಯೊತ್ತುವ ಮಂದಿ ಶಾಂತಿ, ನೆಮ್ಮದಿಯನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದ್ದಾರೆ.