ಧರ್ಮ ಪ್ರಚಾರ

0
120

-ಅರ್ಶದ್ ಮುಹಮ್ಮದ್ ನದ್ವಿ

ನೀವು(ಜನರನ್ನು) ಯುಕ್ತಿಯೊಂದಿಗೆ ಹಾಗೂ ಸದುಪದೇಶದೊಂದಿಗೆ ನಿಮ್ಮ ಒಡೆಯನ ಕಡೆಗೆ ಕರೆಯಿರಿ – ಮತ್ತು ಅತ್ಯುತ್ತಮ ರೀತಿಯಲ್ಲಿ ಅವರೊಡನೆ ವಾದಿಸಿರಿ. ಖಂಡಿತವಾಗಿಯೂ ತನ್ನ ದಾರಿಯಿಂದ ದೂರ ಸರಿದವನು ಯಾರು ಎಂಬುದನ್ನು ನಿಮ್ಮ ಒಡೆಯನು ಬಲ್ಲನು ಮತ್ತು ಸರಿದಾರಿಯಲ್ಲಿರುವವರನ್ನೂ ಅವನು ಬಲ್ಲನು. ಪವಿತ್ರ ಕುರ್‌ಆನ್ : 16:125

ಅಭಿವ್ಯಕ್ತಿ ಸ್ವಾತಂತ್ರ ಮತ್ತು ಆವಿಷ್ಕಾರ ಸ್ವಾತಂತ್ರ ಮಾನವನ ಪ್ರಗತಿಗೆ ಅನಿವಾರ್ಯವಾದ ಕಾರಣ ಸಂವಿಧಾನವು ಅವುಗಳನ್ನು ಪೌರರ ಹಕ್ಕುಗಳೆಂದು ಪರಿಗಣಿಸಿ ಅದಕ್ಕೆ ರಕ್ಷಣೆಯನ್ನು ನೀಡಿದೆ. ಶಿಕ್ಷಣ, ಸ್ವತಂತ್ರ ಚಿಂತನೆ, ಪ್ರಗತಿಪರವಾದ ಸಂಶೋಧನೆಗಳು ಸಾರ್ವತ್ರಿಕವಾದ ಆಧುನಿಕ ಕಾಲದಲ್ಲಿ ಸೌಹಾರ್ದಯುತವಾದ ವಿಚಾರ ವಿನಿಮಯಗಳು, ಸಂವಾದಗಳು ಮತ್ತು ಪುನರ್‌ಚಿಂತನೆಗಳು ಉಂಟಾಗುವುದು ಖಂಡಿತವಾಗಿಯೂ ಅಭಿವೃದ್ಧಿ ಪಥದ ಒಂದು ಜನಸಮುದಾಯಕ್ಕೆ ಶುಭಕರವೆಂದು ಪರಿಗಣಿಸಬೇಕಾಗುತ್ತದೆ.

ವಿಶೇಷತಃ ಮನುಷ್ಯತ್ವ ರಹಿತವೂ ಮಾನವ ವಿರೋಧಿಯೂ ಆದ ಟೊಳ್ಳು ತತ್ವಾದರ್ಶಗಳು ಜನಜೀವನವನ್ನು ಅಸಹನೀಯಗೊಳಿಸಿ ಮಾನವ ಕುಲವನ್ನು ಪ್ರಗತಿಪಥದಿಂದ ಹಿಂದಕ್ಕೆಳೆಯುತ್ತವೆ. ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಧರ್ಮ ಮತ್ತು ಆದರ್ಶವನ್ನು ತಿಳಿಯುವುದು ಮತ್ತು ಸ್ವೀಕರಿಸುವುದು ಧರ್ಮದ ಗೆಲುವೆಂದು ಪರಿಗಣಿಸದೇ ಮಾನವನ ಬದುಕಿನಲ್ಲಿ ಮೌನದಿಂದ ಪರೀಕ್ಷಿಸಬೇಕಾದ ಜೀವನಶೈಲಿಯಾಗಬೇಕು. ಅಂತಹ ವೇಳೆ ಧರ್ಮದ ಕುರಿತಾದ ಸಾಮಾಜಿಕವಾದ ಆಶಂಕೆ ನಿರರ್ಥಕವಾಗುತ್ತದೆ.

ಇಸ್ಲಾಮಿನ ಗುರಿ ಮಾನವರೆಲ್ಲರೂ ಅವರ ಇಹಲೋಕದ ವ್ಯಕ್ತಿ-ಕುಟುಂಬ-ಸಾಮಾಜಿಕ-ರಾಜಕೀಯ ಬದುಕಿನ ಗತಿಯಲ್ಲಿ ಒಳಿತನ್ನು ಕಂಡುಕೊಳ್ಳುವುದು. ಅವೆಲ್ಲವೂ ಒಳಿತು ಮತ್ತು ನ್ಯಾಯದ ನೆಲೆಗಟ್ಟಿನಲ್ಲಿ ನಿಂತಿರುವುದು. ಆ ಮೂಲಕ ಇಹಲೋಕದಲ್ಲಿ ಸುಖ, ನೆಮ್ಮದಿ ಅನುಭವಿಸುವುದು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮರಣಾ ನಂತರ ಲೋಕದಲ್ಲಿ, ದೇವ ನ್ಯಾಯಾಲಯದಲ್ಲಿ ಜೀವನದ ಲೆಕ್ಕಪತ್ರವನ್ನು ಮಂಡಿಸುವಾಗ ನರಕವಾಸಿಗಳಲ್ಲಿ ಸೇರದೆ ಸ್ವರ್ಗ ಪ್ರವೇಶಿಸುವುದು ಎಂಬಿತ್ಯಾದಿ ವಿಚಾರಗಳಾಗಿವೆ.

ಈ ಎಲ್ಲಾ ವಿಚಾರಗಳು ತನ್ನ ಮುಸ್ಲಿಮೇತರ ಸಹೋದರನು ತಿಳಿಯದೇ ಹೋದರೆ ಆತ ಮಹಾ ಅಪಾಯದಲ್ಲಿ ಸಿಲುಕಿ ಬಿಡಲಾರನೇ? ಆ ಕುರಿತು ಮುನ್ನೆಚ್ಚರಿಕೆ ನೀಡುವುದು ಪ್ರವಾದಿಗಳಿಲ್ಲದ ಈ ಜಗತ್ತಿನಲ್ಲಿ ವಿಶ್ವಾಸಿಗಳ ಬಾಧ್ಯತೆಯಲ್ಲವೇ? ಇಹಲೋಕದ ನಷ್ಟಗಳಿಂದ ಮಾನವರನ್ನು ರಕ್ಷಿಸಲು ಪ್ರಯತ್ನಿಸುವುದಕ್ಕಿಂತ ಇದು ಗಂಭೀರವಾದುದಲ್ಲವೇ? ಈ ರೀತಿಯ ಚಿಂತನೆಗಳು ಇಸ್ಲಾಮಿನ ಸಂದೇಶವನ್ನು ಇತರ ಮನುಷ್ಯರಿಗೆ ತಲುಪಿಸಲು ವಿಶ್ವಾಸಿಯನ್ನು ಪ್ರಚೋದಿಸುತ್ತದೆ.

ಸಂದೇಶ ಪ್ರಚಾರದಲ್ಲಿ ಅತ್ಯಂತ ಸತ್ಯಸಂಧತೆ ಮತ್ತು ವೈಜ್ಞಾನಿಕವಾದ ಮಾರ್ಗ ವಿಶ್ವಾಸಿಯ ಸತ್ಯಸಾಕ್ಷ ಜೀವನವಾಗಿರುತ್ತದೆ. ಅದರೊಂದಿಗೆ ಬಹುತ್ವ ಸಮುದಾಯದ ಮಧ್ಯೆ ಮುಸ್ಲಿಮ್ ಸಮೂಹದ ಸತ್ಯ ಮತ್ತು ನ್ಯಾಯದ ಧೋರಣೆಯು ನಿರ್ಣಾಯಕವಾಗುತ್ತದೆ. ಇಹಲೋಕದ ಬದುಕಿನ ಜಂಜಾಟಗಳನ್ನು ಪರಿಹರಿಸಿಕೊಂಡು ಇಸ್ಲಾಮಿನ ವಿಮೋಚನೆಯ ಮೌಲ್ಯಗಳನ್ನೂ, ಸ್ವಭಾವ ಗುಣಗಳನ್ನೂ ಪ್ರಾಯೋಗಿಕಗೊಳಿಸಲು ಪ್ರಸ್ತುತ ಸಮೂಹವು ತಯಾರಾಗಬೇಕು. ಇದು ಮಾತುಗಾರಿಕೆಯ ಪ್ರಚಾರಗಳಿಗಿಂತ ಪ್ರಾಯೋಗಿಕ ಮತ್ತು ಸತ್ಯಸಂಧವಾದ ರೀತಿಯಾಗಿದೆ. ಪ್ರವಾದಿ(ಸ) ಹೇಳಿದರು:

‘‘ಅಲ್ಲಾಹನ ಮೇಲಾಣೆ, ನಿನ್ನ ನೇರ ಮಾರ್ಗದ ಬದುಕಿನ ಕಾರಣದಿಂದ ಇನ್ನೋರ್ವನಿಗೆ ಅಲ್ಲಾಹನು ನೇರ ಮಾರ್ಗವನ್ನು ನೀಡಲು ಕಾರಣವಾಗುವುದು ನಿನಗೆ ಕೆಂಪು ಒಂಟೆ ಲಭಿಸುವುದಕ್ಕಿಂತ ಉತ್ತಮವಾದುದಾಗಿದೆ.’’ (ಅಬೂ ದಾವೂದ್)