ಭಾರತದ ಬಾಬರಿ

0
536

2019ರ ಮಹಾ ಚುನಾವಣೆಗೆ ಬಾಬರಿ ಸಂಪೂರ್ಣ ಸಜ್ಜಾದಂತಿದೆ. 1992ರ ಡಿಸೆಂಬರ್ 6ರಂದು ಬಾಬರಿ ಮಸ್ಜಿದನ್ನು ಸಂಘಪರಿವಾರ ಫ್ಯಾಷಿಸ್ಟ್ ಶಕ್ತಿಗಳು ಧ್ವಂಸಗೊಳಿಸಿದಾಗ ಭಾರತೀಯತೆಯನ್ನು ಪ್ರತಿಪಾದಿಸುವ ಚಿಂತಕರು ಪ್ರತಿಕ್ರಿಯಿಸಿದ್ದು; ‘‘ಧ್ವಂಸಗೊಂಡದ್ದು ಬಾಬರಿ ಮಸ್ಜಿದ್ ಮಾತ್ರವಲ್ಲ, ಈ ದೇಶದ ಸಂವಿಧಾನವಾಗಿದೆ’’ ಎಂದಾಗಿತ್ತು. ಈ ಮಾತು ಇಂದು ವಾಸ್ತವ ರೂಪಕ್ಕಿಳಿದಿದೆ. ಬಾಬರಿ ಮಸ್ಜಿದ್‌ಗೆ ಸಂಬಂಧಿಸಿದ ಅಂತಿಮ ತೀರ್ಪು ಇನ್ನೇನು ಸಂವಿಧಾನವನ್ನು ಪ್ರತಿನಿಧಿಸುವ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಸಂಘಪರಿವಾರವು ಅದಕ್ಕೂ ಸಡ್ಡು ಹೊಡೆದು ಕಾನೂನು ಕೈಗೆತ್ತಿಕೊಂಡಿದೆ. ಈಗಾಗಲೇ ವಿಶ್ವಹಿಂದೂ ಪರಿಷತ್, ಆರೆಸ್ಸೆಸ್ ಮತ್ತಿತರ ಮತೀಯ ಫ್ಯಾಷಿಸ್ಟ್ ಶಕ್ತಿಗಳು ವಿವಾದಿತ ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡು ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದೆ. ಸಾವಿರಾರು ಮುಸ್ಲಿಮರು ಈಗಾಗಲೇ ನಗರವನ್ನು ತೊರೆದಿದ್ದಾರೆ.

ನಮ್ಮ ದೇಶದಲ್ಲಿ ಬಾಬರಿಯ ಇತಿಹಾಸವು ಚರ್ಚೆಯಾದುದಕ್ಕಿಂತಲೂ ಹೆಚ್ಚು ಚರ್ಚೆಯಾದದ್ದು ಆ ಬಳಿಕದ ವಿವಾದವಾಗಿದೆ. ಭಾರತದ ಜಾತ್ಯತೀತ ಪರಂಪರೆ, ವೌಲ್ಯದ ಸಂಕೇತದಂತೆ ನೆಲೆಗೊಂಡಿದ್ದ ಬಾಬರಿ ಮಸ್ಜಿದನ್ನು ಹೊಡೆದುರುಳಿಸಿದ್ದು ಈ ದೇಶದ ಮತೀಯ ಸೌಹಾರ್ದವನ್ನು ಒಡೆಯುವುದಕ್ಕಾಗಿ. ಇಂತಹ ಒಳಸಂಚಿನ ಭಾಗವಾಗಿ ದೇಶದಲ್ಲಿ ರಾಮ-ರಹೀಮನ ನಡುವಿನ ಹೊಸತೊಂದು ರಾಜಕೀಯಕ್ಕೆ ಬಿಜೆಪಿ ನಾಂದಿ ಹಾಡಿತು. ಈ ರಾಜಕೀಯವು ದೇಶದ ಜನತೆಯನ್ನು ಬೀದಿಗೆ ತಳ್ಳುತ್ತದೆ ಮತ್ತು ದೇಶವನ್ನು ದುರ್ಬಲಗೊಳಿಸುತ್ತದೆ ಎಂಬುದಕ್ಕೆ ಕಳೆದ ನಾಲ್ಕೂವರೆ ವರ್ಷಗಳ ಬಿಜೆಪಿಯ ಆಡಳಿತವೇ ಸಾಕ್ಷಿ. ಹೀಗಾಗಿ ಭಾರತದ ಬಾಬರಿಯ ಮರುನಿರ್ಮಾಣ ಎಂದರೆ ಸಾಮಾಜಿಕ ನ್ಯಾಯದ ಪುನರ್‌ಸ್ಥಾಪನೆ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ.

ಬಾಬರಿಯನ್ನು ಕಳೆದುಕೊಂಡವರು ಇನ್ನೂ ನ್ಯಾಯದ ತೀರ್ಪನ್ನು ತದೇಕಚಿತ್ತದಿಂದ ಎದುರು ನೋಡುತ್ತಿದ್ದಾರೆ. ಈ ದೇಶದ ಸಂವಿಧಾನ, ಕಾನೂನಿನ ಮೇಲೆ ನಂಬಿಕೆ ಇರಿಸಿ ಕಾಲು ಶತಮಾನದಿಂದ ಕಾಯುತ್ತಿರುವ ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವು ಈಗಲೂ ಅಯೋಧ್ಯೆಯ ಬದಲು ನ್ಯಾಯ ಮಂದಿರದ ಮುಂದೆ ನಿಂತುಕೊಂಡಿದೆ. ಕಾನೂನು ಉಲ್ಲಂಘಿಸಿ ಮಸೀದಿ ಧ್ವಂಸಗೈದವರು ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಸವಾಲೆಸೆಯುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ವ್ಯತಿರಿಕ್ತವಾದ ನಿರಂಕುಶಾಡಳಿತದ ಸ್ಪಷ್ಟ ಲಕ್ಷಣ. ಇಂತಹ ಶಕ್ತಿಗಳು ಅಯೋಧ್ಯೆಯ ಬಳಿ ಜಮಾಯಿಸುವ ವರೆಗೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳದೇ ಇರುವುದು ಸರ್ವಾಧಿಕಾರದ ಸೂಚನೆ. ಹೀಗಾಗಿ ಬಾಬರಿ ವಿಚಾರಕ್ಕೆ ಸಂಬಂಧಿಸಿದ ಪ್ರತಿಯೊಂದು ಬೆಳವಣಿಗೆ ಹಾಗೂ ನಿತ್ಯದ ವಿದ್ಯಮಾನಗಳನ್ನು ‘ಭಾರತೀಯತೆ’ ಎಂಬ ರಾಷ್ಟ್ರೀಯತೆಯ ದಷ್ಟಿಯಲ್ಲಿ ಚರ್ಚಿಸಬೇಕೇ ಹೊರತು ಧಾರ್ಮಿಕ ದಷ್ಟಿಕೋನದಿಂದ ಅಲ್ಲ.

ಬಾಬರಿಯೊಂದಿಗೆ ಇಲ್ಲಿನ ಪ್ರಜಾತಂತ್ರ ವ್ಯವಸ್ಥೆಗೆ ಉಂಟಾಗಿರುವ ಹಾನಿಗೆ ಪರಿಹಾರ ಒದಗಿಸುವುದೆಂದರೆ ಅದು ಕೇವಲ ಮಸ್ಜಿದ್‌ನ ನಿರ್ಮಾಣ ಮಾತ್ರವಲ್ಲ. ಈಗಾಗಲೇ ಬಾಬರಿ ಮಸ್ಜಿದ್ ಧ್ವಂಸಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಲಿಬರ್ಹಾನ್ ಆಯೋಗವು ಹೆಸರಿಸಿರುವ ಯಾವುದೇ ಆರೋಪಿಗೂ ಶಿಕ್ಷೆಯಾಗಿಲ್ಲ. ಧ್ವಂಸದೊಂದಿಗೆ ರಾಷ್ಟ್ರವ್ಯಾಪಿ ಹಬ್ಬಿದ ಕೋಮುದಳ್ಳುರಿಗೆ ಅದೆಷ್ಟೋ ಪ್ರಾಣಗಳು ಬಲಿಯಾಗಿವೆ. ರಕ್ತದೋಕುಳಿಯ ಮೂಲಕ ರಾಜಕೀಯ ಅಧಿಕಾರದ ಮೊದಲ ಮೆಟ್ಟಿಲು ಏರಿದ್ದ ಸಂಘಪರಿವಾರ ಇದೀಗ ಅದೇ ಅಧಿಕಾರವನ್ನು ಉಳಿಸಿಕೊಳ್ಳಲು ಜನರ ಬಲಿಯನ್ನು ಕೇಳುತ್ತಿದೆ. ನ್ಯಾಯ ಮಂದಿರದ ಮೇಲೆ ವಿಶ್ವಾಸವಿಡದ ಇವರು ದೇಶ ಕಟ್ಟಲು ಹೊರಟಿರುವುದು ಗೋಳ್ವಾಳ್ಕರ್ ರಾಷ್ಟ್ರೀಯತೆಯ ಆಧಾರದಲ್ಲಿ. ಈ ರಾಷ್ಟ್ರೀಯತೆಯಡಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳು ಬಲಿಪ್ರಾಣಿಯಂತೆ ಪರಿಗಣಿಸಲ್ಪಡುತ್ತಾರೆ. ಸದ್ಯ ನಡೆಯುತ್ತಿರುವ ಮತದಾನದ ಹಕ್ಕನ್ನು ನಿರಾಕರಿಸುವ ಪ್ರಕ್ರಿಯೆಯು ಬಾಬರಿ ಧ್ವಂಸದ ಮುಂದುವರಿದ ಭಾಗ ಎಂಬುದನ್ನು ಪ್ರತಿಯೊಬ್ಬರೂ ವಿವೇಚಿಸಬೇಕು. 1992ರಲ್ಲಿ ಸಾಂಕೇತಿಕವಾಗಿ ಮುಸ್ಲಿಮರ ಐತಿಹಾಸಿಕ ಅಸ್ಮಿತೆಯನ್ನು ನಿರ್ನಾಮಗೊಳಿಸಿದ ಶಕ್ತಿಗಳೇ ಇಂದು ಮುಸ್ಲಿಮರು ಭಾರತೀಯ ಪ್ರಜೆಗಳೆಂಬ ಅಸ್ಮಿತೆಯನ್ನು ನಿರ್ನಾಮಗೊಳಿಸಲು ಹೊರಟಿದ್ದಾರೆ ಎಂಬ ವಾಸ್ತವವನ್ನು ಅರಿಯಲೇಬೇಕಾದ ಸಂದರ್ಭವಿದು.