ಬೆಂಗಳೂರು: ಡ್ರಾಪ್ ನೀಡುವ ನೆಪದಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ ಎಸ್ ಆರ್ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭಾನುವಾರ ಮುಂಜಾನೆ ಎಚ್ ಎಸ್ ಆರ್ ಲೇಔಟ್ ಪೊಲೀಸ್ ವ್ಯಾಪ್ತಿಯ ಹೊಸೂರು ಸರ್ವಿಸ್ ರಸ್ತೆಯ ಪ್ರತ್ಯೇಕ ಸ್ಥಳದಲ್ಲಿ ಈ ಘಟನೆ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಹೆಬ್ಬಗೋಡಿ ನಿವಾಸಿಯಾಗಿರುವ ಸಂತ್ರಸ್ತೆ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಶನಿವಾರ ತಡರಾತ್ರಿ ಸ್ನೇಹಿತನೊಂದಿಗೆ ಕೋರಮಂಗಲದ ಪಬ್ವೊಂದಕ್ಕೆ ಬಂದಿದ್ದಳು. ವಾಪಸ್ ಹೋಗುವಾಗ ಸ್ನೇಹಿತನ ಕಾರಿನಲ್ಲಿ ತೆರಳಿದ್ದಾಳೆ, ಈ ವೇಳೆ ಕಾರು ಅಪಘಾತವಾಗಿ, ಆಟೋ ಚಾಲಕರೊಂದಿಗೆ ವಾಗ್ವಾದ ನಡೆದಿದೆ. ಗಸ್ತಿನಲ್ಲಿದ್ದ ಹೊಯ್ಸ ಪೊಲೀಸ್ ಸ್ಥಳಕ್ಕೆ ಧಾವಿಸಿದಾಗ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದಾರೆ. ಯುವತಿ ಒಂಟಿಯಾಗಿ ಸ್ಥಳದಿಂದ ನಡೆದುಕೊಂಡೇ ತೆರಳಿದ್ದಳು. ಈ ವೇಳೆ ಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿ ಗಾಡಿ ಹತ್ತಿಸಿಕೊಂಡಿದ್ದಾನೆ. ಯುವತಿ ಮದ್ಯದ ನಶೆಯಲ್ಲಿರೋದನ್ನ ಬಂಡವಾಳ ಮಾಡಿಕೊಂಡ ಕ್ರಿಮಿ, ಬೊಮ್ಮನಹಳ್ಳಿ ಸಮೀಪದ ನಿರ್ಜನವಾದ ಲಾರಿ ನಿಲ್ಲಿಸುವ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕಾಮುಕ ಅತ್ಯಾಚಾರಕ್ಕೆ ಯತ್ನಿಸ್ತಿದ್ದಂತೆ ಯುವತಿ ಮೊಬೈಲ್ನಲ್ಲಿ ಎಮರ್ಜೆನ್ಸಿ SOS ಬಟನ್ ಒತ್ತಿದ್ದಾಳೆ. ತಕ್ಷಣ ಮಾಹಿತಿ ಸ್ನೇಹಿತರಿಗೆ ಹೋಗಿದೆ. ಸ್ಥಳಕ್ಕೆ ದೌಡಾಯಿಸಿದ ಸ್ನೇಹಿತರು ಯುವತಿಯ ಜೀವ ಉಳಿಸಿದ್ದಾರೆ. ಸ್ಥಳದಲ್ಲೆ ಅರೆ ನಗ್ನ ಸ್ಥಿತಿಯಲ್ಲಿದ್ದ ಅಪರಿಚಿತ ಓಡಿ ಹೋಗಿದ್ದ. ಆತನ ಮುಖದ ಮೇಲೆಲ್ಲಾ ಪರಚಿತ ಗಾಯಗಳಾಗಿದ್ವು ಅಂತಾ ಸ್ನೇಹಿತರು ಮಾಹಿತಿ ಕೊಟ್ಟು ದೂರು ದಾಖಲಿಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ವಸ್ಥಗೊಂಡಿದ್ದ ಯುವತಿ ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾಳೆ. ಇನ್ನು ಸಂತ್ರಸ್ತ ಯುವತಿ ಹೊರ ರಾಜ್ಯದವಳಾಗಿದ್ದು, ಬೆಂಗಳೂರಿನಲ್ಲಿ ಕೊನೆ ವರ್ಷದ ಪದವಿ ಓದುತ್ತಿದ್ದಳೆ. ಸದ್ಯ BNS ಕಾಯ್ದೆ 64 ಅಡಿಯಲ್ಲಿ HSR ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿಲಾಗಿದೆ.