ನವದೆಹಲಿ: ವಿಶ್ವದ ಗಮನಸೆಳೆದಿರುವ 18ನೇ ಲೋಕಸಭೆ ಚುನಾವಣೆಯ 542 ಕ್ಷೇತ್ರಗಳ ಮತ ಎಣಿಕೆ ಇಂದು ಭಾರೀ ಬಿಗಿ ಭದ್ರತೆಯಲ್ಲಿ ನಡೆಯಲಿದ್ದು, ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಯಾರಿಗೆ ಎಂಬುದು ತೀರ್ಮಾನವಾಗಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ನಡೆದು, ಮತದಾರ ಗ್ಯಾರಂಟಿಗೆ ಒತ್ತಿದ್ದಾನೋ ಎಂಬುದು ಬಹಿರಂಗವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದ ಬಳಿಕ ಇವಿಎಂಗಳ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆ ನಂತರ ಫಲಿತಾಂಶದ ಚಿತ್ರಣ ಹೊರಬೀಳಲಿದ್ದು, ಬಹುತೇಕ ಸಂಜೆಯೊಳಗೆ ಜನಾದೇಶ ಯಾರಿಗೆ ಎಂಬುದು ಸ್ಪಷ್ಟವಾಗಲಿದೆ.
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಿಜೆಪಿ 3ನೇ ಬಾರಿಗೆ ಹ್ಯಾಟ್ರಿಕ್ ಜಯ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.
ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತಗಟ್ಟೆ ಸಮೀಕ್ಷೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ಕಳೆದ 2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಕರ್ನಾಟಕ ಕಾಂಗ್ರೆಸ್, ರಾಜ್ಯದಲ್ಲಿ ನಿರೀಕ್ಷೆ ಹೆಚ್ಚು ಇಟ್ಟುಕೊಂಡಿದೆ.
ಕರ್ನಾಟಕದಲ್ಲಿ 1999ರಿಂದ ದಾಟದ ಎರಡಂಕಿಯನ್ನು ಈಸಲ ದಾಟುತ್ತೇವೆ, ಈ ಬಾರಿ 20 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆಯುತ್ತೇವೆ ಎಂಬ ನಿರೀಕ್ಷೆಯನ್ನು ಕೈ ನಸಯಕರು ಹೊಂದಿದ್ದಾರೆ.
ಭಾರತದ ಏಳು ಹಂತಗಳ ಚುನಾವಣೆ ಇತಿಹಾಸದ ಅತಿದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆಯಾಗಿದೆ. ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನವಾಗಿತ್ತು. ಈ ಬಾರಿ ಲೋಕಸಭೆಗೆ 642 ಮಿಲಿಯನ್ ಮತದಾರರಿಂದ ವಿಶ್ವದಾಖಲೆಯ ಹಕ್ಕು ಚಲಾವಣೆಯಾಗಿದೆ ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.
ಮತದಾನದ ಶೇಕಡಾವಾರು ದಾಖಲು ಹೀಗಿದೆ:
ಏಪ್ರಿಲ್ 19: 66.1%
ಏಪ್ರಿಲ್ 26: 66.7%
ಮೇ 7: 61.0%
ಮೇ 13: 67.3%
ಮೇ 20: 60.5%
ಮೇ 25: 63.4%
ಜೂನ್ 1: 62%
ದೇಶದ ಜತೆಗೆ ಆಂಧ್ರ ಮತ್ತು ಒಡಿಶಾ ವಿಧಾನ ಸಭಾ ಚುನಾವಣೆ ಫಲಿತಾಂಶವೂ ಇಂದು ಹೊರಬೀಳಲಿದೆ. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿತ್ತು.