ವಯನಾಡು: ಲೋಕಸಭಾ ಚುನಾವಣಾ ಕಣದಲ್ಲಿ ಘಟಾನುಘಟಿ ನಾಯಕರ ಕ್ಷೇತ್ರಗಳ ಹಣಾಹಣಿ ಕೂತುಹಲ ಮೂಡಿಸಿದೆ. ಕೇರಳದ ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಇರುವ ವ್ಯಕ್ತಿಯನ್ನು ಕಣಕ್ಕಿಳಿಸಿದೆ. ಈ ಅಂಶ ಕಾಂಗ್ರೆಸ್ಸಿಗರಿಗೆ ದೊಡ್ಡ ಅಸ್ತ್ರ ಆಗುತ್ತಿದೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳಿವೆ.
ಚುನಾವಣಾ ನಿಯಮಗಳು, ಚುನಾವಣಾ ಆಯೋಗದ ಆದೇಶದ ಪ್ರಕಾರ ಲೋಕಸಭಾ ಅಭ್ಯರ್ಥಿಗಳು ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇದ್ದರು ಅದರ ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಅಭ್ಯರ್ಥಿಗಳ ವಿರುದ್ಧದ ಪ್ರಕರಣಗಳ ವಿವರಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ ಹಾಗಾಗಿ ಸುರೇಂದ್ರನ್ ಅವರು ಇತ್ತೀಚೆಗೆ ತಮ್ಮ ಪ್ರಕರಣಗಳ ವಿವರಗಳನ್ನು ಪಕ್ಷದ ಮುಖವಾಣಿಯಲ್ಲಿ ಮೂರು ಪೂರ್ಣ ಪುಟಗಳಲ್ಲಿ ಪ್ರಕಟಿಸಿದ್ದಾರೆ.
ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್ 1ರಂದು ಕೊನೆಯ 7ನೇ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.