ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಯಾವ ಸಮಸ್ಯೆಯೂ ಇಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ಕಾಂಗ್ರೆಸ್ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ಕಾಂಗ್ರೆಸ್ ನವರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಜನ ತಿರಸ್ಕಾರ ಮಾಡಿದಾಗ ನಮ್ಮ ಮನೆ ಬಾಗಿಲಿಗೆ ಬಂದ್ದಿದ್ದು ನೀವು. ಈಗ ಬನ್ನಿ ಕಾಂಗ್ರೆಸ್ ಗೆ ಅಂತ ಡಿ.ಕೆ.ಶಿವಕುಮಾರ್ ಕರೆಯುತ್ತಿದ್ದಾರೆ. ಕಾಂಗ್ರೆಸ್ ಜತೆ ಸರ್ಕಾರ ಮಾಡಿದಾಗ ಪಕ್ಷ ನಾಶಕ್ಕೆ ಹೊರಟಿದ್ದರು. ನಮ್ಮ ಶಾಸಕರಿಗೆ ಬ್ರೈನ್ ವಾಶ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡರು. ಹಂತ ಹಂತವಾಗಿ ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡಿದ್ರಿ. ಯಾವ ರೀತಿ ನಮ್ಮ ಶಕ್ತಿ ಕುಂದಿಸಲು ಯತ್ನಿಸಿದ್ದೀರಿ ಎಂದು ಗೊತ್ತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದರು.
ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಕೋಲಾರ ಅಭ್ಯರ್ಥಿಗೆ ಸಂಬಂಧಿಸಿದ ವಿಷಯ ಶೀಘ್ರ ಇತ್ಯರ್ಥವಾಗಲಿದೆ.ಮಂಡ್ಯದ ಜೆಡಿಎಸ್ ಕಾರ್ಯಕರ್ತರಿಗೆ ನಿರಾಸೆಯಾಗದಂತಹ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದರು.