ಮೋದಿಯ ಘೋಷಣೆಗಳು ಕಾಗದದ ಹೂವಿನಂತೆ: ಚಿದಂಬರಂ

Prasthutha|

ಚೆನ್ನೈ:ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳಲ್ಲಿ ಕೈಗೊಳ್ಳುವುದಾಗಿ 5.9 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೇವಲ 15 ದಿನಗಳಿಂದೀಚೆಗೆ ಘೋಷಿಸಿದ್ದಾರೆ. ಆದರೆ ಇವುಗಳಿಗೆ ಕೇಂದ್ರ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆಯೇ ಎಂದು ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.ಈ ಘೋಷಣೆಗಳು ಕಾಗದದ ಹೂವಿನಂತೆ ಎಂದು ಅವರು ಬಣ್ಣಿಸಿದ್ದಾರೆ.

- Advertisement -

ಪಕ್ಷದ ಪ್ರಧಾನ ಕಚೇರಿ ಸತ್ಯಮೂರ್ತಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಚಿದಂಬರಂ, ಫೆಬ್ರುವರಿ 22ರಿಂದ ಮಾರ್ಚ್‌ 7ರ ವರೆಗೆ ಪ್ರಧಾನಿ ಅವರು ತಮಿಳುನಾಡಿಗೆ ₹ 17,300 ಕೋಟಿ ಸೇರಿದಂತೆ ದೇಶದಾದ್ಯಂತ ₹ 5.9 ಲಕ್ಷ ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ನನಗೆ ತಿಳಿದಿರುವಂತೆ ಈ ಯೋಜನೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಿಲ್ಲ. ಈ ಘೋಷಣೆಗಳು ಕಾಗದದ ಮಲ್ಲಿಗೆ ಹೂವಿನಂತೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆ ಚುನಾವಣೆಗೂ ಮುನ್ನ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಚುನಾವಣಾ ಪ್ರಣಾಳಿಕೆಗೆ ಸೇರಿಸಲಾಗುವುದು ಎಂದೂ ಇದೇ ವೇಳೆ ಚಿದಂಬರಂ ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್‌ ಪಕ್ಷವನ್ನೊಳಗೊಂಡ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಉದ್ಯೋಗ ಭರ್ತಿ, ಡಿಪ್ಲೊಮಾ ಮತ್ತು ಪದವೀಧರರಿಗೆ ತಾವು ಉತ್ತೀರ್ಣರಾದ ಮೊದಲ ವರ್ಷದಲ್ಲಿ ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ಕನಿಷ್ಠ ಒಂದು ವರ್ಷ ಅಪ್ರೆಂಟಿಸ್‌ಷಿಪ್‌ಗೆ ಅವಕಾಶ, ಪ್ರಶ್ನೆ ಪತ್ರಿಕೆ ತಡೆಗೆ ಕಠಿಣ ಕ್ರಮ, ಗಿಗ್‌ ಕಾರ್ಮಿಕರಿಗೆ ಭದ್ರತೆ ಹಾಗೂ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವ ಯುವಕರಿಗೆ ಹಣಕಾಸು ನೆರವು ನೀಡುವುದಾಗಿ ರಾಹುಲ್‌ ಘೋಷಿಸಿದ್ದರು ಎಂದು ಚಿದಂಬರಂ ತಿಳಿಸಿದ್ದಾರೆ.



Join Whatsapp