ಬೆಂಗಳೂರು: ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಪುಟ್ಟಣ್ಣ ಭರ್ಜರಿ ಜಯಗಳಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ‘ಇಂದು ಕರ್ನಾಟಕ ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ದಿನ. ಬಿಜೆಪಿ, ಜೆಡಿಎಸ್ನವರು ಒಟ್ಟಾಗಿ ಒಬ್ಬ ಅಭ್ಯರ್ಥಿ ಮಾಡಿ ಓರ್ವನನ್ನ ಕಣಕ್ಕಿಳಿಸಿದ್ದರು. ಆದರೆ, ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪರಿಷತ್ ಉಪ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯಕ್ಕೆ ದಿಕ್ಸೂಚಿಯಾಗಿದೆ ಎಂದರು.
ಶಿಕ್ಷಕರು ಬಹಳ ವಿದ್ಯಾವಂತರಿದ್ದಾರೆ, ನಮ್ಮ ಪುಟ್ಟಣ್ಣ ಅವರನ್ನ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೆನೆ. ಇನ್ನು ಈ ಬಾರಿ ಗೆಲ್ಲುವ ಮೂಲಕ ಪುಟ್ಟಣ್ಣ ಅವರು ಐದನೇ ಬಾರಿ ಆಯ್ಕೆಯಾಗಿದ್ದಾರೆ. ಅವರು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದಾರೆ.