ಗೋಪಾಲ್ ಗಂಜ್: ಬಿಹಾರದ ಗೋಪಾಲ್ ಗಂಜ್ ನಲ್ಲಿ ಎಐಎಂಐಎಂ ಮುಖಂಡ ಅಬ್ದುಲ್ ಸಲಾಂ ಅಲಿಯಾಸ್ ಅಸ್ಲಂ ಮುಖಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಗೋಪಾಲಗಂಜ್ ಉಪಚುನಾವಣೆಯಲ್ಲಿ ಅಬ್ದುಲ್ ಸಲಾಂ ಎಐಎಂಐಎಂ ಅಭ್ಯರ್ಥಿಯಾಗಿದ್ದರು. ಜತೆಗೆ ಪಕ್ಷದ ರಾಜ್ಯ ಸಹ ಕಾರ್ಯದರ್ಶಿಯೂ ಆಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಯು ಬಿಹಾರ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
” ಗೋಪಾಲ್ ಗಂಜ್ ಉಪಚುನಾವಣೆಯ ಮಾಜಿ ಅಭ್ಯರ್ಥಿ ಮತ್ತು ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲಾಂ ಅಲಿಯಾಸ್ ಅಸ್ಲಂ ಮುಖಿಯಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ನಾನು ಅಲ್ಲಾಹನನ್ನು ಪ್ರಾರ್ಥಿಸುತ್ತೇನೆ. ಕಳೆದ ವರ್ಷ, ಡಿಸೆಂಬರ್ ನಲ್ಲಿ, ನಮ್ಮ ಸಿವಾನ್ ಜಿಲ್ಲಾ ಅಧ್ಯಕ್ಷ ಆರಿಫ್ ಜಮಾಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ನಿತೀಶ್ ಕುಮಾರ್, ನೀವು ಚೇರ್ ಉಳಿಸುವ ಸ್ಪರ್ಧೆಯನ್ನು ಮುಗಿಸಿದ ನಂತರ, ಕೆಲವು ಕೆಲಸಗಳನ್ನು ಮಾಡಿ. ನಮ್ಮ ನಾಯಕರನ್ನು ಮಾತ್ರ ಏಕೆ ಗುರಿಯಾಗಿಸಲಾಗಿದೆ? ಅವರ ಕುಟುಂಬಗಳಿಗೆ ನ್ಯಾಯ ಸಿಗುತ್ತದೆಯೇ ಎಂದು ಉವೈಸಿ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.