ಹುಣಸೂರು: ಕಳಪೆ ಕಾಮಗಾರಿಯ ಕುರಿತು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಶ್ನಿಸಿದ್ದಕ್ಕೆ ಅಧ್ಯಕ್ಷೆಯ ಗಂಡ ಸದಸ್ಯರೊಬ್ಬರ ಜೊತೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಜಾಬಗೆರೆಯಲ್ಲಿ ನಡೆದಿದೆ.
ತಾಲೂಕಿನ ಶಂಕರೇಗೌಡನಕೊಪ್ಪಲು ನಿವಾಸಿ, ಜಾಬಗೆರೆ ಗ್ರಾ.ಪಂ. ಉಪಾಧ್ಯಕ್ಷೆ ಜಯಮ್ಮ ಹಲ್ಲೆಗೊಳಗಾದವರು. ಹಲ್ಲೆಯಿಂದ ಅವರ ಭುಜದ ಮೂಳೆ ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾಬಗೆರೆ ಪಂಚಾಯತ್ ಕಟ್ಟಡದ ಮೇಲಂತಸ್ತಿನ ಕಟ್ಟದ ಕಾಮಗಾರಿಯನ್ನು ಉಪಾಧ್ಯಕ್ಷೆ ಜಯಮ್ಮ ಪರಿಶೀಲಿಸಿ ಕೆಲಸ ಸರಿಯಾಗಿ ಮಾಡುತ್ತಿಲ್ಲ, ಕಳಪೆ ಕಾಮಗಾರಿ ನಡೆಸುತ್ತಿದ್ದೀರಿ, ಪಂಚಾಯತ್ ಕಟ್ಟಡವೇ ಹೀಗಾದರೆ ಹೇಗೆಂದು ಪ್ರಶ್ನಿಸಿದ್ದಾರೆ. ಕೆಲಸ ಸ್ಥಗಿತಗೊಳಿಸಿ, ಇಲ್ಲದಿದ್ದಲ್ಲಿ ನಿಮ್ಮಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ಪಿಡಿಒಗೆ ಹೇಳಿದ್ದಾರೆ. ಆ ವೇಳೆ ಪಂಚಾಯತ್ ಕಚೇರಿಯಯಲ್ಲೆ ಕುಳಿತಿದ್ದ ಗ್ರಾ.ಪಂ.ಅಧ್ಯಕ್ಷೆ ಮಂಜುಳಮ್ಮರ ಪತಿ ಹಾಗೂ ಸದಸ್ಯ ತಿಮ್ಮನಾಯ್ಕ ಹೊರ ಬಂದು, ನೀನ್ಯಾರು ಕೇಳೋಕೆ, ಇಲ್ಲಿ ನಮ್ಮದೆ ದರ್ಬಾರ್, ನನ್ನ ಹೆಂಡತಿಯೇ ಅಧ್ಯಕ್ಷೆ ಎಂದು ಕೇವಲವಾಗಿ ಮಾತನಾಡಿದ್ದಾರೆ. ಈ ವೇಳೆ ಉಪಾಧ್ಯಕ್ಷೆ ಜಯಮ್ಮರ ಮೇಲೆ ದೈಹಿಕವಾಗಿಯೂ ಹಲ್ಲೆ ನಡೆಸಿದ ತಿಮ್ಮನಾಯಕ ದೂಡಿದ ವೇಳೆ ಕೆಳಕ್ಕೆ ಬಿದ್ದ ಜಯಮ್ಮರ ಎಡ ಭುಜದ ಮೂಳೆ ಮುರಿದು ತೀವ್ರ ಪೆಟ್ಟಾಗಿದೆ.
ಜಯಮ್ಮ ನೋವಿನಿಂದ ಕೂಗಿಕೊಂಡಾಗ ಗ್ರಾ.ಪಂ.ಬಳಿಯಲ್ಲೇ ಇದ್ದ ಅವರ ಪುತ್ರ ನಾಗೇಂದ್ರನಾಯ್ಕ ತಾಯಿಯನ್ನು ಕರೆತಂದು ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿದ್ದಾರೆ.ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.