ಭಾಷಣ ಪೂರ್ತಿ ಓದಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ

Prasthutha|

ಚೆನ್ನೈ: ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಪೂರ್ತಿಯಾಗಿ ಓದಲು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ ಘಟನೆಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

- Advertisement -

ರಾಜ್ಯಪಾಲ ರವಿ ಅವರು ರಾಷ್ಟ್ರಗೀತೆಯನ್ನು ತಮ್ಮ ಭಾಷಣದ ಆರಂಭಕ್ಕೂ ಮೊದಲು ಹಾಗೂ ಭಾಷಣದ ಕೊನೆಯಲ್ಲಿ ನುಡಿಸಬೇಕು ಎಂದು ಹೇಳಿದ್ದರು. ಆದರೆ, ತಮಿಳುನಾಡಿನಲ್ಲಿ ರಾಜ್ಯಪಾಲರ ಭಾಷಣಕ್ಕೂ ಮೊದಲು ತಮಿಳುನಾಡು ರಾಜ್ಯದ ಗೀತೆಯನ್ನು ನುಡಿಸಲಾಗುತ್ತದೆ, ಭಾಷಣದ ನಂತರದಲ್ಲಿ ರಾಷ್ಟ್ರಗೀತೆ ನುಡಿಸಲಾಗುತ್ತದೆ ಎಂದು ಸ್ಪೀಕರ್ ಕೆ. ಅಪ್ಪಾವು ಹೇಳಿದರು.

ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆಯು ಸತತ ಎರಡನೆಯ ವರ್ಷವೂ ವಿವಾದಕ್ಕೆ ಸಾಕ್ಷಿಯಾಗಿದೆ. ರವಿ ಅವರು ಹಿಂದಿನ ವರ್ಷ ಕೂಡ ತಮಗೆ ನೀಡಿದ್ದ ಭಾಷಣದ ಪ್ರತಿಯಲ್ಲಿನ ಕೆಲವು ಸಾಲುಗಳನ್ನು ಓದಿರಲಿಲ್ಲ. ಅಲ್ಲದೆ, ತಾವಾಗಿಯೇ ಒಂದಿಷ್ಟು ಮಾತುಗಳನ್ನು ಹೇಳಿದ್ದರು. ನಂತರ ತಮಿಳುನಾಡು ವಿಧಾನಸಭೆಯು ನಿರ್ಣಯವೊಂದನ್ನು ಕೈಗೊಂಡು, ಭಾಷಣದ ಮೂಲ ಪ್ರತಿಯಲ್ಲಿ ಇರುವ ಮಾತುಗಳನ್ನು ಮಾತ್ರ ಕಡತಕ್ಕೆ ಸೇರಿಸಿತ್ತು.

- Advertisement -

ಸೋಮವಾರ ರವಿ ಅವರು, 46 ಪುಟಗಳ ಭಾಷಣದ ಪ್ರತಿಯಲ್ಲಿನ ಮೊದಲ ಪುಟವನ್ನು ಮಾತ್ರ ಓದಿದರು. ಸದನದಲ್ಲಿ ಅಪ್ಪಾವು ಅವರು ಕೆಲವು ಮಾತುಗಳನ್ನು ಆಡಿದ ನಂತರದಲ್ಲಿ ರವಿ ಅವರು ಸದನದಿಂದ ಹೊರನಡೆದರು. ಸಂಪ್ರದಾಯದಂತೆ ಭಾಷಣವನ್ನು ಕಡತಕ್ಕೆ ಸೇರಿಸುವ ಕುರಿತು ನಿರ್ಣಯ ಅಂಗೀಕರಿಸಿದ ನಂತರದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ ಎಂದು ಅಪ್ಪಾವು ಅವರು ಹೇಳುತ್ತಿದ್ದರೂ ರವಿ ಅವರು ನಿಲ್ಲಲಿಲ್ಲ. 

ತಮಿಳುನಾಡಿನ ರಾಜ್ಯಪಾಲ ರವಿ ಅವರು ಓದಲು ನಿರಾಕರಿಸಿದ ಭಾಗದಲ್ಲಿ, ಜಿಎಸ್‌ಟಿಗೆ ಸಂಬಂಧಿಸಿದ ಕೆಲವು ಮಾತುಗಳು ಇದ್ದವು. ಜಿಎಸ್‌ಟಿ ಪರಿಹಾರ ವ್ಯವಸ್ಥೆಯನ್ನು 2022ರಲ್ಲಿ ಕೊನೆಗೊಳಿಸುವ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹20 ಸಾವಿರ ಕೋಟಿ ನಷ್ಟ ಉಂಟುಮಾಡಿದೆ ಎಂಬ ಮಾತು ಅದರಲ್ಲಿ ಇತ್ತು. ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಗೆ ತರುವುದಿಲ್ಲ ಎಂಬ ಮಾತು ಕೂಡ ಭಾಷಣದ ಪ್ರತಿಯಲ್ಲಿ ಇತ್ತು.

ರಾಜ್ಯಪಾಲರು ಕೇಂದ್ರಸರಕಾರದ ಏಜೆಂಟ್‌ನಂತೆ ಕಾರ್ಯಾಚರಿಸುವುದು ಆಯಾ ರಾಜ್ಯಕ್ಕೆ, ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ ಎಂದು ಸಾರದವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.



Join Whatsapp